Homeಮುಖಪುಟಗೆಳತಿ ಗೇಲ್ ಓಮ್ವೆಟ್‌‍ರ ಸವಿನೆನಪಿನಲ್ಲಿ; ಭಾಗ-1

ಗೆಳತಿ ಗೇಲ್ ಓಮ್ವೆಟ್‌‍ರ ಸವಿನೆನಪಿನಲ್ಲಿ; ಭಾಗ-1

- Advertisement -
- Advertisement -

(2021ರ ಸೆಪ್ಟೆಂಬರ್ 8ರಂದು ಮಹಿಳಾ ಮುನ್ನಡೆಯು ನಡೆಸಿದ ‘ಗೇಲ್ ಓಮ್ವೆಟ್‌‍ಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಂದು ನಾಗಮಣಿ ರಾವ್ ಅವರು ಆಡಿದ ಮಾತುಗಳ ಬರಹ ರೂಪವಿದು. ನಾಗಮಣಿ ರಾವ್ ಅವರೇ ತಿಳಿಸಿದಂತೆ, ಗೇಲ್ ಅವರ 80ನೇ ಹುಟ್ಟಿದ ದಿನದಂದು ಅವರ ಕುರಿತು ಬರೆದ ಲೇಖನ, ಮಾನಸಿ (ನಾಗಮಣಿ ಅವರ ಮಗಳು) ತನ್ನ ಫೇಸ್ ಬುಕ್ ಗೋಡೆಯ ಮೇಲೆ ಗೈಲ್ ಕಾಕು ಬಗ್ಗೆ ಬರೆದದ್ದು ಮತ್ತು ಭರತ್, ಜಾಯ್, ಪ್ರಾಚಿ ಅವರೊಂದಿಗೆ ನಡೆದ ಸಂಭಾಷಣೆ ಆಧಾರಿತ ಲೇಖನದ ಮುಖ್ಯಾಂಶಗಳನ್ನು ನಾಗಮಣಿ ಅವರು ಕಾರ್ಯಕ್ರಮದಂದು ಮಾತನಾಡಿದ್ದರು. ಇದು ಅದೇ ಲೇಖನದ ಅನುವಾದ)

ಗೇಲ್ ಅವರ ಹಿನ್ನೆಲೆ: ಸ್ಕ್ಯಾಂಡಿನೇವಿಯಾ ಮೂಲದ ಅಮೆರಿಕನ್ ದಂಪತಿಗೆ ಮಿನಿಯಪೊಲಿಸ್‌ನಲ್ಲಿ ಜನಿಸಿದವರು ಗೇಲ್. ಗೇಲ್ ಅವರ ಅಜ್ಜ, ಅಗಸ್ಟ್ ಓಮ್ವೆಟ್‌‍ ಅವರು ಮಿನ್ನೆಸೊಟಾದ ಟೂ ಹಾರ್ಬರ್ಸ್‌ನಲ್ಲಿ
ಡೆಮಾಕ್ರಟಿಕ್-ಫ಼ಾರ್ಮರ್-ಲೇಬರ್ ಪಾರ್ಟಿಯಲ್ಲಿದ್ದರು. ಮಿನ್ನೆಸೊಟಾದ ಶಾಸಕರಾಗಿ ಎರಡು ಬಾರಿ ಚುನಾಯಿತರಾಗಿದ್ದರಲ್ಲದೆ, ಮಿನ್ನೆಸೊಟಾದ ಮೇಯರ್ ಆಗಿಯೂ ಕೂಡ ಅವರು ಸೇವೆ ಸಲ್ಲಿಸಿದರು.

ಗೇಲ್ ಅವರ ತಾಯಿ ಗೃಹಿಣಿ. ತಂದೆ ವಕೀಲರು. ನೇಟಿವ್ ಅಮೆರಿಕನ್ನರ ಸಂಪನ್ಮೂಲದ ಹಕ್ಕುಗಳಿಗಾಗಿ ವಾದ ಮಂಡಿಸಿದವರು. ಅಮೆರಿಕಾದಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಗೇಲ್, ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು. ವಿಶ್ವವಿದ್ಯಾಲಯದಲ್ಲಿದ್ದಾಗ ಯುದ್ಧಗಳ ವಿರುದ್ಧವಾಗಿ ಮತ್ತು ವಾಕ್-ಸ್ವಾತಂತ್ರ್ಯ ಆಂದೋಲನ, ನಾಗರಿಕ ಹಕ್ಕುಗಳು ಅದರಲ್ಲೂ ಬ್ಲಾಕ್ ಪ್ಯಾಂಥರ್ ಪಾರ್ಟಿಗೆ ಬೆಂಬಲವಾಗಿ ಮತ್ತು ಮಹಿಳಾ ಚಳಿವಳಿಗಳಿಗೆ ಬೆಂಬಲವಾಗಿ ಅನೇಕ ಸಮಾಜೋ-ರಾಜಕೀಯ ಹೋರಾಟಗಳಲ್ಲಿ ಪಾಲ್ಗೊಂಡರು.

22 ವರ್ಷದವಳಿದ್ದಾಗ 1963ರಲ್ಲಿ ಮೊಟ್ಟ ಮೊದಲಿಗೆ ಭಾರತಕ್ಕೆ ಗೇಲ್ ಭೇಟಿ. ‘ಫುಲ್‌ಬ್ರೈಟ್ ಸ್ಕಾಲರ್’ ಆಗಿ ಬಂದು ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಟ್ಯೂಟರ್ ಆಗಿ ಕೆಲಸ ಮಾಡಿದಾಗ ಅವರಿಗೆ ಗ್ರಾಮೀಣ ಭಾರತದ ಪರಿಚಯವಾದದ್ದು. ಮುಂದೆ ಭಾರತದ ಜಾತಿ ವಿರೋಧಿ ಆಂದೋಲನಗಳ ಬಗ್ಗೆ ಸ್ನಾತಕೋತ್ತರ ಅಭ್ಯಾಸ ಮಾಡಲೆಂದು ಅವರು ಭಾರತದಲ್ಲಿ ನೆಲೆಸಿದರಲ್ಲದೆ, ಮರಾಠಿ ಭಾಷೆಯನ್ನು ಮಾತಾಡಲು, ಓದಲು, ಬರೆಯಲು ಸಹ ಕಲಿತರು.

ಗೇಲ್ ಅವರ ‘ಕಲ್ಚರಲ್ ರಿವೋಲ್ಟ್ ಇನ್ ವೆಸ್ಟರ್ನ್ ಇಂಡಿಯಾ ಎಂಡ್ ನಾನ್ ಬ್ರಾಹ್ಮಿನ್ ಮೂವ್ಮೆಂಟ್ ಇನ್ ಮಹಾರಾಷ್ಟ್ರ’ ಪ್ರಮುಖವಾಗಿ ಜ್ಯೋತಿರಾವ್ ಫುಲೆ ಮತ್ತು ಅವರ ಸತ್ಯಶೋಧಕ ಸಮಾಜದ ಮೇಲೆ ಕೇಂದ್ರೀಕರಿಸಿದೆ. ಇಂದಿಗೂ ಈ ಡಾಕ್ಟೋರಲ್ ಥೀಸಿಸ್, ಹಕ್ಕುಗಳ ಪ್ರತಿಪಾದನೆಯ ವಿಚಾರದಲ್ಲಿ ಹಾಗೂ ಸಾಂಸ್ಕೃತಿಕ ಮೇಲು ಕೀಳುಗಳನ್ನು ತೊಡೆದುಹಾಕುವ ವಿಚಾರದಲ್ಲಿಯೂ ಕೂಡ ಭಾರತದಲ್ಲಿ ನಡೆದ ಜಾತಿ-ವಿರೋಧಿ ಆಂದೋಲನಗಳ ಬಹುಮುಖ್ಯ ವಿಶ್ಲೇಷಕ ಕೃತಿಯೆನಿಸುತ್ತದೆ. ಈ ಕೆಲಸಕ್ಕಾಗಿ ಇಲ್ಲಿನ ಅವರ ವಾಸ್ತವ್ಯ ಅವರನ್ನು ಗ್ರಾಮೀಣ ಭಾರತದಲ್ಲಿ ಗಟ್ಟಿಯಾಗಿ ಉಳಿಸಿಕೊಂಡಿತು.

ಭರತ್ ಅವರು ಗೇಲ್‌ರನ್ನು ಎಪ್ಪತ್ತರ ದಶಕದ ಆರಂಭದಲ್ಲಿ ಭೇಟಿಯಾದರು. ಅದಕ್ಕೂ ಮೊದಲೇ ಭರತ್ ಅವರ ತಾಯಿ, ಇಂದುಮತಿ ಮಹಾರಾಷ್ಟ್ರದಲ್ಲಿ ಮಹಿಳಾ ಚಳಿವಳಿಗಳ ಕುರಿತು ಮಾಡುತ್ತಿದ್ದ ಅಧ್ಯಯನದ ಸಂಬಂಧ ಅವರನ್ನು ಭೇಟಿಯಾಗಿದ್ದರು. ಸ್ವತಃ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಇಂದೂತಾಯಿ ಇನ್ನೂ ತಮ್ಮ ಹೋರಾಟಗಳನ್ನು ಮುಂದುವರೆಸಿಯೇ ಇದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭರತ್ ಭೂಗತರಾಗಿದ್ದಾಗಲೇ ಗೇಲ್‌ರನ್ನು ಮದುವೆಯಾದರು. ಲಾಲ್ ನಿಶಾನ್ ಪಾರ್ಟಿಯ ಕಾ.ಭೋಸ್ಲೆ ಮತ್ತು ಲೀಲಾತಾಯಿ ಭೋಸ್ಲೆ ಗೇಲ್‌ಳ ತಾಯ್ತಂದೆ ಎಂದು ಸಹಿ ನೀಡಿದರು. ಆ ಸಮಯದಲ್ಲಿ ಗೇಲ್ ಲಾಲ್ ನಿಶಾನ್ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದಲ್ಲದೆ ಯುವಕ ಕ್ರಾಂತಿ ದಳ ಮತ್ತು ಮಾಗೋವಾ ಪತ್ರಿಕೆಯೊಂದಿಗೂ ಗುರುತಿಸಿಕೊಡಿದ್ದರು.

ಭರತ್ ಮತ್ತು ಗೇಲ್‌ರು 1980ರಲ್ಲಿ ಮಾರ್ಕ್ಸಿಸ್ಟ್ ಸಂಘಟನೆಯ ವಿಚಾರಧಾರೆಗಿಂತ ಮುಂದೆಹೋಗಿ ಪರ್ಯಾಯವನ್ನು ಹುಡುಕುವ ‘ಶ್ರಮಿಕ್ ಮುಕ್ತಿ ದಳ’ ಎಂಬ ಇನ್ನೊಂದು ಎಡಪಂಥೀಯ ಸಂಘಟನೆಯನ್ನು ಹುಟ್ಟುಹಾಕಿದರು. 1983ರಲ್ಲಿ ಗೇಲ್ ಅವರಿಗೆ ಭಾರತೀಯ ಪೌರತ್ವ ದೊರಕಿತು.

ಇದೇ ವೇಳೆಯಲ್ಲಿ ಈ ಲೇಖಕಿ (ನಾಗಮಣಿ ರಾವ್) ಮತ್ತು ಅವರ ಮಿತ್ರ ಜಾಯ್ ಇಬ್ಬರೂ ಸಾಂಗ್ಲಿ ಜಿಲ್ಲೆಯ ಹಳ್ಳಿಗಳಲ್ಲಿ ಗ್ರಾಮೀಣ ಶೌಚಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದರು. ಹಾಗೆ ಗೇಲ್ ಅವರ ಮತ್ತು ಅವರ ಬಳಗದ ಭೇಟಿಯೂ ಆಯಿತು.

ಒಬ್ಬ ಬರಹಗಾರ್ತಿ ಮತ್ತು ಚಿಂತಕಿ ಗೇಲ್

ಗೇಲ್ ಒಬ್ಬ ಪ್ರಖರ ಬರಹಗಾರ್ತಿಯಾಗಿದ್ದರು. ಅವರ ಬರಹಗಳು ಯಾವಾಗಲೂ ಸಾಮಾಜಿಕ ಚಿಂತನೆ ಮತ್ತು ಸಾಮಾಜಿಕ ಹೋರಾಟಗಳಿಂದಲೇ ಆರಂಭವಾಗುತ್ತಿತ್ತು. ಮಾರ್ಕ್ಸಿಸಂನ ತಳಹದಿಯ ಮೇಲೆ, ಮಹಿಳಾಪರ ಚಿಂತನೆಗಳು, ಜಾತಿವಿನಾಶದ ಗಾಢ ನಂಬಿಕೆಗಳು, ಸಮತೆ ಮತ್ತು ಸಮಾನತೆಗಳ ಸಮಾಜ ರಚನೆಯ ಆಶಯದಿಂದ ಕೂಡಿದ ಅವರ ಬರಹಗಳು ಯಾವಾಗಲೂ ವಿಶಿಷ್ಟ. ಅಮೆರಿಕಾದಲ್ಲಿ ಮಹಿಳಾ ವಿಮೋಚನೆಯಿಂದ ಹಿಡಿದು ಮಾರ್ಕ್ಸ್ ವಿಚಾರಧಾರೆಯ ವಿಮರ್ಶಕಿಯಾಗಿ, ಇತ್ತ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದುದರ ತೀವ್ರ ಪ್ರಭಾವ ಅವರ ಬರವಣಿಗೆಯ ಮೇಲೆ ಇತ್ತು.

ರಾಜಕೀಯ ಕೆಲಸಗಳ ಅನುಭವದಿಂದ ಗಳಿಸಿದ ಗಾಢವಾದ ಪಾಂಡಿತ್ಯದ ಕಾರಣಕ್ಕಾಗಿ ಒಬ್ಬ ಭಾಷಣಕಾರಳಾಗಿಯೂ, ಯುವಜನತೆಗೆ ಮಾರ್ಗದರ್ಶಕಿಯಾಗಿಯೂ ಎಲ್ಲಾ ವರ್ಗಗಳ ಸಂಘಟನಾಕಾರರು ಮತ್ತು ತಜ್ಞರ ಗುಂಪುಗಳಲ್ಲಿ ಗೇಲ್ ಬಹು ಬೇಡಿಕೆಯ ವ್ಯಕ್ತಿಯಾಗಿದ್ದರು. ಅದರಲ್ಲೂ ದಲಿತ ಬಹುಜನರ ಸಂಘಟನೆಯಲ್ಲಿ ಆರಾಧ್ಯ ವ್ಯಕ್ತಿಯಾಗಿದ್ದರು.

ಸ್ವಂತ ರಚನೆ, ಇನ್ನೊಬ್ಬ ಲೇಖಕರೊಂದಿಗೆ ಪುಸ್ತಕ ಬರೆದದ್ದು, ಉನ್ನತ ಮಟ್ಟದ ಜರ್ನಲ್‌ಗಳಲ್ಲಿ ಪಾಂಡಿತ್ಯಪೂರ್ಣ ಬರಹಗಳು, ಪೇಪರ್ ಪ್ರೆಸೆಂಟೇಶನ್, ಪುಸ್ತಕಗಳ ಸಂಪಾದನೆ, ಲೇಖನಗಳನ್ನು ಜನಪ್ರಿಯ ಪತ್ರಿಕೆಗಳಲ್ಲಿ ಬರೆದದ್ದು- ಹೀಗೆ ಗೇಲ್ ಅವರು ಎಲ್ಲಾ ರೀತಿಯ ಬರವಣಿಗೆಗಳಲ್ಲೂ ಕೈಯಾಡಿಸಿದ್ದಾರೆ. ನಿಜ ಹೇಳಬೇಕೆಂದರೆ ನನಗೆ ಪ್ರೆಸೆಂಟೇಶನ್ ಮಾಡಬೇಕಿದ್ದಾಗ ಮತ್ತು ನನ್ನ ಪಿಎಚ್.ಡಿ ಕೆಲಸಕ್ಕಾಗಿ ಓದಿಕೊಂಡಿದ್ದು ಬಿಟ್ಟರೆ ಅವರ ಎಲ್ಲ ಬಗೆಯ ಬರಹಗಳನ್ನು ಹೆಚ್ಚು ಓದಿದವಳಲ್ಲ ನಾನು.

ಅನುಭವಗಳಿಂದ ಪಕ್ವವಾಗುತ್ತ, ಪ್ರಕಟಗೊಳ್ಳುತ್ತ ಹೋದ ಗೇಲ್ ಅವರ ಸಂಕೀರ್ಣ ಚಿಂತನೆಗಳನ್ನು ನಿಜವಾಗಿ
ಅರ್ಥಮಾಡಿಕೊಳ್ಳಬೇಕಾದರೆ ಅವರ ಬರಹಗಳನ್ನು ಕುಳಿತು ಗಂಭೀರವಾಗಿ ಓದಬೇಕು. ಗೇಲ್ ಎಂದೂ ಬರೆಯಬೇಕೆಂದು, ಸಂಘಟಕರ ಮಧ್ಯೆ ತನ್ನನ್ನು ಎತ್ತಿ ತೋರಿಸಿಕೊಳ್ಳಬೇಕೆಂದು ಬರೆದುದಲ್ಲ, ಬದಲಿಗೆ ತನ್ನ ಹೃದಯಕ್ಕೆ ತಟ್ಟಿದ್ದನ್ನು ದಾಖಲಿಸಬೇಕೆನಿಸಿದ್ದನ್ನು ಬರೆಯುತ್ತ ಹೋದರು. ಅವರು ಚರ್ಚೆಗೆ ಅಲ್ಲಿ ವಿರುದ್ಧ ಅಭಿಪ್ರಾಯಗಳು ಬಂದರೂ-ಸದಾ ಸಿದ್ಧವಾಗಿರುತ್ತಿದ್ದರು. ಅವರು ಬದುಕಿದ್ದಾಗ ಎಷ್ಟೋ ವಿಷಯಗಳನ್ನು ಅವರೊಂದಿಗೆ ಚರ್ಚಿಸಲು ಸಾಧ್ಯವಾಗಲಿಲ್ಲ ಎಂದು ಈಗ ನನಗಷ್ಟೇ ಅಲ್ಲ, ಇನ್ನೂ ಅನೇಕ ಸಂಗಾತಿಗಳಿಗೆ ಅನಿಸುತ್ತಿದೆ. ನನಗೆ ತುಂಬ ಇಷ್ಟವಾಗುವ ಅವರ ಮೂರು ಮುಖ್ಯ ಕೃತಿಗಳು:

ಈ ಬಂದೀಖಾನೆಯನ್ನು ನಾವು ಮುರಿಯುತ್ತೇವೆ: ಗೇಲ್ ಅವರ ಮೊದಲ ಕೃತಿ. ಮಹಾರಾಷ್ಟ್ರದಲ್ಲಿ ಬೆಳೆಯುತ್ತಿದ್ದ ಮಹಿಳಾ ಚಳಿವಳಿಯನ್ನು-ಅಲ್ಲಿನ ಹೋರಾಟಗಳು, ಕಾರ್ಯಕ್ರಮಗಳನ್ನು ಒಬ್ಬ ಸಂಘಟನಾಕಾರಳ ದೃಷ್ಟಿಯಿಂದ ನೋಡಿ, ಅನುಭವಗಳ ಆಧಾರದ ಮೇಲೆ ಬರೆದದ್ದು. ಮಹಿಳಾಪರ ಹೋರಾಟಗಳ ಬಗ್ಗೆ ಬರೆಯುತ್ತ ಗೇಲ್ ಅವರು ಸಂಭಾಷಣೆ ಮತ್ತು ಭಾಗವಹಿಸಿದವರ ಅನಿಸಿಕೆಗಳನ್ನು ಜೋಡಿಸಿ ಹೆಣೆಯುವುದರ ಮೂಲಕ ಆ ವಿಚಾರಗಳು ಪ್ರಸ್ತುತ ದಿನಗಳಲ್ಲಿ ಹೇಗೆ ಮುಖ್ಯವಾಗುತ್ತವೆಂದು ವಿಶ್ಲೇಷಿಸುತ್ತಾರೆ. ಮಹಿಳಾಪರ ಅಧ್ಯಯನ ಮತ್ತು ದಾಖಲೆಗಳನ್ನು ಜೆಂಡರ್ ಲೆನ್ಸ್‌ನಿಂದ ನೋಡುವ ವಿಚಾರವನ್ನು ನಮಗೆ ಕಲಿಸುತ್ತಾರೆ. ಈ ಪುಸ್ತಕವು ಸಂಘಟನಾಕಾರರು ಮತ್ತು ತಜ್ಞರೆಲ್ಲರ ಮೇಲೆಯೂ ಪ್ರೇರಣಾತ್ಮಕ ಪರಿಣಾಮ ಬೀರಿದೆ.

ಅಂಬೇಡ್ಕರ್ ಅವರ ಕ್ರಾಂತಿಯನ್ನು ಕಟ್ಟುತ್ತಾ (ಬಿಲ್ಡಿಂಗ್ ದಿ ಅಂಬೇಡ್ಕರ್ ರೆವೊಲ್ಯೂಶನ್) ಪುಸ್ತಕವು ಬಾಬಾಸಾಹೇಬ್ ಅಂಬೇಡ್ಕರ್ ಆರಂಭಿಸಿದ ಆಂದೋಲನದ ಬಗ್ಗೆ ಮಾತನಾಡುತ್ತದೆ. ಅದೇ ಸಮಯದಲ್ಲಿ ಕೊಂಕಣ ಪ್ರದೇಶದಲ್ಲಿ ಸಂಭಾಜಿ ತುಕಾರಾಮ್ ಗಾಯಕವಾಡ್, ಗೋಪಾಲಬಾಬಾ ವಾಲಂಗ್ಕರ್, ಮಡ್ಕೆ ಬುವಾರಂತಹ ಮರೆತುಹೋದ ಹೋರಾಟಗಾರರ ಮೇಲೆ ಗೇಲ್ ಬೆಳಕು ಚೆಲ್ಲುತ್ತಾರೆ. ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ಮುಂದಿರಿಸುವಾಗ ಗೇಲ್ ಅವರು ಘಟನಾವಳಿಗಳಿಗೆ ಆ ಪ್ರದೇಶದ, ಅಲ್ಲಿನ ಸ್ಥಳೀಯ ರಾಜಕೀಯದ ಸಾಮಾಜಿಕ ಇತಿಹಾಸದ ಜೀವ ತುಂಬುತ್ತಾರೆ. ಇದು ಅವರ ಬರಹಗಳನ್ನು ಹೆಚ್ಚು ವಿಶ್ಲೇಷಣಾತ್ಮಕವಾಗಿಸುವುದರ ಜೊತೆಗೆ ಸುಲಭವಾಗಿ ಅರ್ಥವಾಗುವಂತೆ ಮಾಡುತ್ತದೆ. ಉದಾಹರಣೆಗೆ ಸಂಭಾಜಿ ತುಕಾರಾಂ ಗಾಯಕವಾಡ್ ಬಗ್ಗೆ ಬರೆಯುವಾಗ, ಸಂಭಾಜಿ ಎಂದರೆ ಬ್ರಾಹ್ಮಣೇತರ ಆಂದೋಲನದ ಕ್ರಾಂತಿಕಾರಿ, ಬ್ರಾಹ್ಮಣ್ಯವನ್ನು ವಿರೋಧಿಸಿದ ಶಿವಾಜಿಯ ಪುತ್ರ ಸಂಭಾಜಿ ಮತ್ತು ತುಕಾರಾಂ ಎಂದರೆ ವಾರ್ಕರಿ ಆಂದೋಲನದ ಭಕ್ತಿ ಪಂಥದ ತುಕಾರಾಮನನ್ನು ನೆನೆಸಿ ಆ ಮೂಲಕ ರಾಜಕೀಯ, ಧಾರ್ಮಿಕ ಕ್ರಾಂತಿಕಾರಿಗಳೊಂದಿಗೆ ಆ ದಲಿತ ಹೋರಾಟಗಾರರನ್ನು ಹೋಲಿಸುತ್ತಾ ಆ ಹಿನ್ನೆಲೆಯೊಂದಿಗೆ ನೋಡುವುದನ್ನು ಕಲಿಸುತ್ತಾರೆ.

ಬೇಗಂಪುರಾವನ್ನು ಹುಡುಕುತ್ತಾ (ಸೀಕಿಂಗ್ ಬೇಗಂಪುರ):

ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಿದ್ದಾಗ ಉತ್ತರದಲ್ಲೂ ಮತ್ತು ದಕ್ಷಿಣದಲ್ಲೂ ಸಹ ಜಾತಿ ವಿರುದ್ಧ ಕೆಲಸ ಮಾಡಿದ ಸಂತರ ಜೊತೆ ಬಂದ ಸಾಂಗತ್ಯದ ಅತಿ ಸಮೃದ್ಧ ಅನುಭವವನ್ನು ಈ ಪುಸ್ತಕದಲ್ಲಿ ಗೇಲ್ ದಾಖಲಿಸಿದ್ದಾರೆ. ಐದು ಶತಮಾನಗಳಿಂದ ಹಿಡಿದು ಬ್ರಿಟಿಷರ ವಸಾಹತುಶಾಹಿ ದಿನಗಳವರೆಗಿನ ಕಾಲಮಾನವನ್ನು ಅದು ದಾಖಲಿಸುತ್ತದೆ. ಈ ಪುಸ್ತಕದಲ್ಲಿ ಅವರು ಮಹಾರಾಷ್ಟ್ರದ ಗಡಿಯನ್ನೂ ಮೀರಿ ಹೆಜ್ಜೆಯಿರಿಸಿದ್ದಾರೆ. ರಾಮರಾಜ್ಯವೆಂಬ ಹೆಸರಿನಲ್ಲಿ ಜಾತಿತಾರತಮ್ಯವನ್ನೂ ಪ್ರಶ್ನಿಸದ, ಲಿಂಗ ತಾರತಮ್ಯವನ್ನೂ ಪ್ರಶ್ನಿಸದ ಅಸಮಾನತೆ ತುಂಬಿದ ಬ್ರಾಹ್ಮಣರ ಮತ್ತು ಗಾಂಧಿವಾದದ ಹಳೆಕಾಲದ ಹಳ್ಳಿಗಳ ವೈಭವೀಕರಣವನ್ನಿಲ್ಲಿ ಪ್ರಶ್ನಿಸಿದ್ದಾರೆ. ಕ್ರಾಂತಿಕಾರಿ ಸಂತ ರವಿದಾಸ ಅವರ ಕಲ್ಪನೆಯ ’ಬೇ-ಗಂ-ಪುರ’- ಹೆಸರಿನಲ್ಲೇ ಇರುವ ದುಃಖವಿಲ್ಲದ ಊರಿನಲ್ಲಿ ಜಾತಿಭೇಧವಿಲ್ಲ. ಆಧುನಿಕತೆಯಿದೆ, ದೇವಸ್ಥಾನಗಳ ಹೆಸರೇ ಇಲ್ಲ, ಭೂಮಿಯ ಮೇಲೆ ತೆರಿಗೆಯಿಲ್ಲದ, ದೌರ್ಜನ್ಯವಿಲ್ಲದ, ಮೇಲು ಕೀಳು ಇಲ್ಲದ, ಎಲ್ಲರೂ ಸಮಾನರಾಗಿ ಇರುವಂಥ ಶಹರ.

ರವಿದಾಸ ಅವರು ತಾನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ, ತನ್ನ ಗೆಳೆಯರೊಂದಿಗೆ ಶಹರದ ಎಲ್ಲಾ ಗಲ್ಲಿ ಗಲ್ಲಿಗಳಲ್ಲಿ ಯಾವುದೆ ಅಡ್ಡಿ ಆತಂಕವಿಲ್ಲದೆ ಅಡ್ಡಾಡುವುದನ್ನು ಒಂದು ಹಾಡಿನ ಮೂಲಕ ಹೇಳುತ್ತಾರೆ. ದಲಿತರ ನೆರಳು ಕೂಡ ಅಸ್ಪೃಶ್ಯವೆನಿಸಿದಂಥ ದಿನಗಳಲ್ಲಿ ಇಂತಹ ಕಲ್ಪನೆ ಯಾವುದೇ ದಲಿತರ ಕನಸೇ ಆಗಿದೆ. ಹಿಂದಿನ ಕಾಲದ ಕ್ರಾಂತಿಕಾರ ಸಂತರ ಕಲ್ಪನೆಗಳು ಮತ್ತು ಜ್ಯೋತಿಬಾ ಫುಲೆ, ಪಂಡಿತ ರಮಾಬಾಯಿ, ಪೆರಿಯಾರ್ ರಾಮಸ್ವಾಮಿ ಮತ್ತು ಅಂಬೇಡ್ಕರ್‌ರಂತಹ ವಸಾಹತು ಕಾಲದ ಕ್ರಾಂತಿಕಾರರ ವಿಚಾರಗಳನ್ನವರು ಇಲ್ಲಿ ಸಮೀಕರಿಸುತ್ತಾರೆ. ಹಿಂದಿನ ಕಾಲದಲ್ಲಿ ಆ ಕ್ರಾಂತಿಕಾರಿ ಸಂತರು ಎತ್ತಿದ್ದ ತಾರತಮ್ಯದ ವಿಚಾರಗಳು, ಇಂದಿನ ಆಧುನಿಕ ಕಾಲದಲ್ಲಿಯೂ ಅಭಿವೃದ್ಧಿಯ ಹೆಸರಿನಲ್ಲಿ ಮತ್ತೊಮ್ಮೆ ಮೇಲಕ್ಕೆದ್ದಿರುವುದು ಮತ್ತು ಅದು ಸಬ್‌ಆಲ್ಟ್ರನ್ ಜನರಿಂದ ಪ್ರತಿರೋಧಕ್ಕೆ ಅವಕಾಶ ಕಲ್ಪಿಸುತ್ತ, ನಮಗೂ ಸಹ ದುಃಖವಿಲ್ಲದ ಶಹರದ ಸಲುವಾಗಿ ಇಂದು ನಡೆಯುತ್ತಿರುವ ಹೋರಾಟಗಳಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತದೆ.

ಮಹಿಳಾ ಅಧ್ಯಯನ, ಇತಿಹಾಸ ಮತ್ತು ಸಾಮಾಜಿಕ ವಿಭಾಗಗಳಲ್ಲಿಯೂ ಅಧ್ಯಯನಕ್ಕೆ ಬರುವುದಕ್ಕೂ ಮೊದಲೇ ವರ್ಗ, ಜಾತಿ ಮತ್ತು ಪಿತೃ ಪ್ರಧಾನತೆಗಳು ಸಮಾಜೋ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವುದರ ತಿಳಿವಳಿಕೆಯು ಗೇಲ್ ಬರವಣಿಗೆಯಲ್ಲಿ ಬಂದಿವೆ. ಅವರ ಪುಸ್ತಕಗಳನ್ನು ಓದಿದಾಗ ಇನ್ನೂ ಹೆಚ್ಚಿನ ಓದಿನ ಮಾಹಿತಿ, ತಾನು ಆ ಮಾಹಿತಿಯನ್ನು ಪಡೆದಿರುವುದು ಎಲ್ಲಿಂದ ಮತ್ತು ಓದುಗರು ಎಲ್ಲಿಂದ ಪಡೆಯಬಹುದೆಂಬುದರ ಪಟ್ಟಿಯನ್ನೂ ಸಹ ಅವರು ಕೊಟ್ಟಿರುತ್ತಾರೆ.

ಕೆಲವರು ಗೇಲ್ ಬರೆದಿರುವುದನ್ನು ಅಪಾರ್ಥ ಮಾಡಿಕೊಂಡಿದ್ದೂ ಇದೆ. ಅವುಗಳಲ್ಲಿ ನರ್ಮದಾ ನದಿಗೆ ಕಟ್ಟಲಾದ ಸರ್ದಾರ ಸರೋವರ ಡ್ಯಾಮಿನ ಬಗ್ಗೆ ಅವರು ಬರೆದಿದ್ದನ್ನು ಅವರು ಡ್ಯಾಮಿನ ಪರ ಇದ್ದಾರೆಂದು ಕಲ್ಪಿಸಿದ್ದು ಇದೆ. ಅಣೆಕಟ್ಟಿನ ಎತ್ತರವನ್ನು ಕಡಿಮೆ ಮಾಡಲೇಬೇಕು, ಹಾಗೆಯೇ ಬರದ ಕಾರಣದಿಂದಾಗಿ ಬಹಳಷ್ಟು ಜನರು ಶಹರಗಳಿಗೆ ವಲಸೆ ಹೋಗುತ್ತಿರುವ ವಿಚಾರವನ್ನೂ ಅಲ್ಲಗಳೆಯಲಾಗದು ಎಂಬುದು ಅವರ ವಾದವಾಗಿತ್ತು. ಬರಪೀಡಿತ ಪ್ರದೇಶದ ಜನರಿಗೂ ನೀರಿನ ಹಕ್ಕಿದೆ, ಅವರು ಅದನ್ನು ಪಡೆಯಬೇಕೆಂದು ಅವರು ಬರೆಯುತ್ತಿದ್ದರು. ಹೀಗಾಗಿ ಗೇಲ್ ಅವರು ಹಾಗೂ ಅವರು ಭಾಗವಾಗಿದ್ದ ‘ಶ್ರಮಿಕ ಮುಕ್ತಿ ದಲ್’ ಸಂಘಟನೆಯು ಕೆ.ಆರ್.ದಾತ್ಯೆ, ಕೆಜೆ ಜಾಯ್ ಮತ್ತು ಸುಹಾಸ್ ಪರಾಂಜಪೆಯವರ ಜೊತೆಗೆ ‘ಒಂದು ಎತ್ತರದವರೆಗೆ ಅಣೆಕಟ್ಟನ್ನು ಕಟ್ಟಿ ಅಲ್ಲಿಗೇ ನಿಲ್ಲಿಸಬೇಕು, ಆ ಮೂಲಕ 75% ಮುಳುಗಡೆಯನ್ನು ತಡೆಯಬೇಕಲ್ಲದೆ ಬರಪೀಡಿತ ಪ್ರದೇಶಕ್ಕೆ ನೀರನ್ನೂ ಕೊಡಬೇಕು’ ಎಂಬ ಬೇಡಿಕೆಯೊಂದಿಗೆ ನಿಂತಿದ್ದರು. ತಮ್ಮ ಈ ಯೋಜನೆಯ ಬಗ್ಗೆ ಹೇಳಲು ಅವಿನಾಶ್ ಕದಂ ಮತ್ತು ಭರತ್ ಅವರನ್ನು ಈ ಪಂಗಡವು ಗುಜರಾತಿಗೂ ಕಳಿಸಿತ್ತು. ಬರಪೀಡಿತ ಜನರ ಮತ್ತು ಅಣೆಕಟ್ಟಿನಿಂದ ನಿರಾಶ್ರಿತರಾದ ಜನರ ಹಿತಾಸಕ್ತಿಗಳನ್ನು ಸಮತೆಯ ಆಧಾರದ ಮೇಲೆ ಸಂಯೋಜಿಸಿ ಪರ್ಯಾಯವನ್ನು ಕಂಡುಹಿಡಿಯುವುದು ಅವರ ತತ್ವವಾಗಿತ್ತು. ಇವರ ವಿಚಾರಗಳನ್ನು ಒಪ್ಪಿಕೊಂಡರೂ ಸಹ ನರ್ಮದಾ ಬಚಾವೋ ಆಂದೋಲನವು ತಮ್ಮ, ‘ಅಣೆಕಟ್ಟುಗಳೇ ಬೇಡ’ ಎನ್ನುವ ಘೋಷಣೆಯಿಂದ ಹಿಂದೆ ಸರಿಯಲಿಲ್ಲ.

ಮೂಲ: ನಾಗಮಣಿ ರಾವ್
ಕನ್ನಡಕ್ಕೆ: ಶಾರದಾ ಗೋಪಾಲ


ಇದನ್ನೂ ಓದಿ: ಭಾರತದ ನಿಜ ಸುಧಾರಣಾವಾದ ಪರಂಪರೆಯನ್ನು ಗುರುತಿಸಲು ಕಾರಣವಾದ ಗೇಲ್ ಆಮ್‌ವೆಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...