ಉತ್ತರ ಕನ್ನಡದಲ್ಲಿ ಕ್ಯಾಸಿನೋ (ನದಿಯಲ್ಲಿರುವ ಬೃಹತ್ ಬೋಟಲ್ಲಿ ನಡೆಯುವ ಜೂಜು-ಮೋಜು) ಶುರು ಮಾಡುವ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆಗೆ ಜಿಲ್ಲೆಯಲ್ಲಿ ವಿರೋಧದ ಅಲೆಯೆದ್ದಿದೆ. ಕಾರವಾರ, ಅಂಕೋಲಾ, ಯಲ್ಲಾಪುರ, ಮುಂಡಗೋಡಿನವರು ಗೋವಾಕ್ಕೆ ಹೋಗಿ ಕ್ಯಾಸಿನೋ ಆಡಿ ಬರುತ್ತಾರೆ. ಇಲ್ಲಿ ಕ್ಯಾಸಿನೋ ಆರಂಭಿಸಿದರೆ ಸಂಸ್ಕೃತಿ ಹಾಳಾಗುತ್ತದೆ, ಹಾಗೆ-ಹೀಗೆ ಎಂದು ಆಕ್ಷೇಪ ವ್ಯಕ್ತ ಪಡಿಸಲಾಗುತ್ತದೆ. ಇಂಥ ದ್ವಂದ್ವವೆ ಉತ್ತರ ಕನ್ನಡದ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನಡೆಗೆ ಕಾರಣ. ಗೋವಾ ಸರಕಾರಕ್ಕೆ ಕ್ಯಾಸಿನೋದಿಂದ ಪ್ರತಿ ವರ್ಷ 696 ಕೋಟಿ ರೂ ಆದಾಯ ಬರುತ್ತಿದೆ. 3000 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದೆ ಎಂದು ಸಚಿವ ಹೆಬ್ಬಾರ್ ಹೇಳಿಕೆ ನೀಡಿದ್ದರು.
ಜಿಲ್ಲೆ ಜನರು ಇಂಥ ಇಬ್ಬಂದಿತನ ಬಿಟ್ಟು ಸಹಕರಿಸದರೆ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಸಾಧಿಸಬಹುದು. ಪ್ರವಾಸೋದ್ಯಮ ಮಂತ್ರಿಯನ್ನು ಜಿಲ್ಲೆಗೆ ಕರೆತಂದು ಕ್ಯಾಸಿನೋ ಸೆರಿದಂತೆ ಬೇರೆ-ಬೇರೆ ಪ್ರವಾಸೋದ್ಯಮ ಉತ್ತೇಜನದ ಕುರಿತು ಚರ್ಚಿಸಲಾಗುತ್ತದೆ. ಗೋವಾ ಅಭಿವೃದ್ದಿಗೆ ದೊಡ್ಡ ಕೊಡುಗೆ ಕೊಟ್ಟಿರುವ ಕ್ಯಾಸಿನೋ ನಮ್ಮ ಜಿಲ್ಲೆಗೇಕೆ ತರಬಾರದು? ಹಿಂದೆ ದೇಶಪಾಂಡೆ ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ಕ್ಯಾಸಿನೋ ತರಲಾಗುತ್ತದೆಯೆಂದಾಗ ಬಿಜೆಪಿ ವಿರೋಧಿಸಿರಬಹುದು. ಈಗಲೂ ಪ್ರತಿರೋಧ ವ್ಯಕ್ತ ಪಡಿಸಬೇಕೆಂದೇನೂ ಇಲ್ಲವಲ್ಲ. ಮನಸ್ಥಿತಿ ಕಾಲ ಕಾಲಕ್ಕೆ ಬದಲಾಗುತ್ತದೆ ಎಂದು ಹೆಬ್ಬಾರ್ ಹೇಳಿದ್ದರು.
ಮಂತ್ರಿ ಹೆಬ್ಬಾರರ ರಾಜ್ಯೋತ್ಸವ ಭಾಷಣದ ಪ್ರಮುಖ ಅಂಶವಾಗಿದ್ದ ಕ್ಯಾಸಿನೋ ಆಧರಿತ ಪ್ರವಾಸೋದ್ಯಮ ಯೋಜನೆಯ ಹೇಳಿಕೆ ಬಂದ ನಂತರ ಇದು ಬಿಜೆಪಿಗರ ದ್ವಂದ್ವ-ಇಬ್ಬಂದಿತನದ ಎಂಬ ಟೀಕೆ ಕೇಳಿ ಬರಲಾರಂಭಿಸದೆ. ಪ್ರವಾಸೋದ್ಯಮಕ್ಕೆ ಸಾತ್ವಿಕವಾದ ಹಲವು ಸಾಧ್ಯತೆಯಿರುವಾಗ ಗೋವಾ ಸಂಸ್ಕೃತಿಯ ಪ್ರವಾಸೋದ್ಯಮ ತಂದರೆ ಅದು ಜಿಲ್ಲೆಗೆ ಕಳಂಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಚಿವ ಹೆಬ್ಬಾರರ ವೈಯಕ್ತಿಕ ಅಭಿಪ್ರಾಯವೋ? ಬಿಜೆಪಿ ನೀತಿಯೋ? ಎಂಬ ಪ್ರಶ್ನೆ ಎದ್ದಿದೆ.
ಗೋವಾ ಮಾದರಿಯ ಕ್ಯಾಸಿನೋ ಪ್ರವಾಸೋದ್ಯಮ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್, “ಸಚಿವರು ಅರಣ್ಯ ಸಾಗುವಳಿದಾರರ ಸಂಕಷ್ಟ ಮತ್ತಿತರ ಜ್ವಲಂತ ಸಮಸ್ಯೆ ಕಡೆಗಣಿಸಿ ಕ್ಯಾಸಿನೋದಂಥ ಜೂಜಿನ ಬಗ್ಗೆ ತಲೆ ಕೆಡಿಸಿಕೊಳ್ಳಲಾಗುತ್ತಿದ್ದಾರೆ. ಇದು ಉತ್ತರ ಕನ್ನಡ ಜಿಲ್ಲೆಯ ಜನರ ಮನೋಭಾವ, ಅಭಿಪ್ರಾಯಕ್ಕೆ ವಿರುದ್ದವಾದುದು ಎಂದಿದ್ದಾರೆ. ಕ್ಯಾಸಿನೋದಿಂದ ಉತ್ತರ ಕನ್ನಡದ ಭಾಗ್ಯದ ಬಾಗಿಲೇನೂ ತೆರೆಯುವುದಿಲ್ಲ; ಗೋವಾದ ಮೋಜಿನ ಸಂಸ್ಕೃತಿಗೆ ಅವಕಾಶ ಕೊಟ್ಟಂತಾಗುತ್ತದಷ್ಟೇ; ಕ್ಯಾಸಿನೋ ಜೂಜಾಟದ ಮೂಲಕ ಜಿಲ್ಲೆಯ ಸಂಸ್ಕೃತಿ-ಸಂಸ್ಕಾರಕ್ಕೆ ಅಪಚಾರವೆಸಗಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾರ್ಮಿಕರಿಗೆ ಕೋವಿಡ್ ಲಸಿಕೆ ನೆಪದಲ್ಲಿ 312 ಕೋಟಿ ದುರ್ಬಳಕೆ: ಹರೀಶ್ ನಾಯ್ಕ್ ಆರೋಪ


