Homeಅಂಕಣಗಳುರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

- Advertisement -
- Advertisement -

ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಬಗ್ಗೆ ತಾವು ಓದಿದ ಇಂಗ್ಲಿಷ್ ಪುಸ್ತಕವನ್ನು ಆಧರಿಸಿ ಹಲವು ಟೀಕೆಗಳನ್ನು ಮಾಡಿದ್ದರು. ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಉಪಚುನಾವಣೆಗಳಲ್ಲಿ ಲಾಭಗಳಿಸಲು ಕುಮಾರಸ್ವಾಮಿಯವರು ಈ ನಿಲುವು ತಳೆದಿದ್ದಾರೆ ಎಂಬ ಟೀಕೆಗಳಿಂದ ಶುರುವಾಗಿ, ಕಾಂಗ್ರೆಸ್ ನಾಯಕರು ತಾವೇ ಅಧಿಕೃತ ಆರ್‌ಎಸ್‌ಎಸ್ ವಿರೋಧಿಗಳು ಎಂದು ಹೇಳುವ ಹಾಗೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಬೆಂಬಲಿಗರು ಕುಮಾರಸ್ವಾಮಿಯವರ ಮತ್ತು ಇತರ ಆರ್‌ಎಸ್‌ಎಸ್ ವಿರೋಧಿಗಳ ತೇಜೋವಧೆಗೆ ನಡೆಸಿದ ಹಲವು ಟ್ರಾಲ್‌ಗಳವರೆಗೆ, ಹತ್ತಾರು ರೀತಿಯ ಪ್ರತಿಕ್ರಿಯೆಗಳು ದಾಖಲಾದವು. (ಕುಮಾರಸ್ವಾಮಿಯವರ ಆರ್ ಎಸ್ ಎಸ್ ವಿರೋಧಿಗಳ ಹೇಳಿಕೆಗಳು ಉಪಚುನಾವಣೆಗಳಲ್ಲಿ ಜೆಡಿಎಸ್ ಗೆ ಫಲ ಕೊಟ್ಟಿಲ್ಲ, ಅದರ ಲಾಭ ಕಾಂಗ್ರೆಸ್ ಪಡೆಯಿತೇ ಎಂಬಂತಹ ಚರ್ಚೆಗಳು ಈಗ ಪ್ರಾರಂಭವಾಗಿವೆ. ಮುಂದೆ ಕೂಡ ಕುಮಾರಸ್ವಾಮಿಯವರು ತಮ್ಮ ವಿರೋಧವನ್ನು ಮುಂದುವರೆಸಲಿದ್ದಾರೆಯೇ ಎಂಬ ಚರ್ಚೆ ಕೂಡ – ಆ ಮಾತು ಬೇರೆ). ಇವೆಲ್ಲಾ ತೋರಿಸಿದ್ದೇನೆಂದರೆ 1925ರ ವಿಜಯದಶಮಿಯಂದು ಹೆಡ್ಗೇವಾರ್ ಸ್ಥಾಪಿಸಿದ ಈ ಸಂಸ್ಥೆ ಎಷ್ಟು ಹೆಮ್ಮರವಾಗಿ ಬೆಳೆದಿದೆ ಮತ್ತು ಅದು ಹೇಗೆ ಈ ದೇಶದ ಹಲವು ವಲಯಗಳಲ್ಲಿ ತೂರಿಕೊಂಡು ತನ್ನ ಚಿಂತನೆಗಳಿಂದ ಅತಿಕ್ರಮಿಸಿದೆ ಎನ್ನುವುದನ್ನು.

ಕೆಲವು ವಾರಗಳ ಹಿಂದೆ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ ಅವರು ಒಕ್ಕೂಟ ಸರ್ಕಾರದ ಗೃಹಮಂತ್ರಿ ಬಿಜೆಪಿಯ ಅಮಿತ್ ಷಾ ಅವರನ್ನು ಭೇಟಿಯಾಗಿದ್ದರು. ಅಂದು ಮಾಧ್ಯಮಗಳಿಗೆ ಬಿಡುಗಡೆಯಾದ ಅವರಿಬ್ಬರೂ ಭೇಟಿಯಾದ ಸಂದರ್ಭದ ಫೋಟೋದ ಹಿಂಬದಿಯಲ್ಲಿ ರಾರಾಜಿಸುತ್ತಿದ್ದುದು ಸಾವರ್ಕರ್ ಚಿತ್ರ! ಬಿಜೆಪಿ ಪಕ್ಷ ಸಂಕೇತಗಳನ್ನು ಬಳಸಿಕೊಳ್ಳುವ ಅವಕಾಶದಿಂದ ಯಾವತ್ತೂ ವಂಚಿತವಾಗುವುದಿಲ್ಲ. ಕಾಂಗ್ರೆಸ್
ರಾಜಕಾರಣಿಯೊಬ್ಬ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಇಟ್ಟ ಈ ಹೆಜ್ಜೆ ಇಂದಿನ ಹಲವು ಅವಕಾಶವಾದಿ ಕಾಂಗ್ರೆಸ್ ನಾಯಕರಿಗೆ ಸಂಕೇತದಂತಿದೆ. (ಈಗ ಹೊಸ ಪಕ್ಷವೊಂದನ್ನು ಸ್ಥಾಪಿಸಿರುವ ಅಮರಿಂದರ್ ಸಿಂಗ್, ಬಿಜೆಪಿ ಜೊತೆಗೆ ಸಖ್ಯ ಬೆಳೆಸಲು ಕೂಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ).

ಸಂಘಪರಿವಾರದ ಪ್ರತಿಪಾದನೆಗಳನ್ನು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದಿದ್ದ ಅಮರಿಂದರ್ ಸಿಂಗ್ ಅವರ ನಡೆನುಡಿಗಳು ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ದಿನ ಕಾಣದಾಗಿತ್ತೇ? ಸೇನೆಯ ಜೀಪ್‌ಗೆ ನಾಗರಿಕನೊಬ್ಬನನ್ನು ಕಟ್ಟಿ ಶೀಲ್ಡ್ ಆಗಿ ಬಳಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದ ಅಮರಿಂದರ್ ಸಿಂಗ್ ಅವರ ಸೈದ್ಧಾಂತಿಕತೆ ಏನಾಗಿತ್ತು
ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಬೇಡವಾಗಿತ್ತೇ? ಇಂದು ಕಾಂಗ್ರೆಸ್ ಅಧ್ಯಕ್ಷಗಾದಿಯಲ್ಲಿ ಕುಳಿತು, ಬಿಟ್ಟು, ಮತ್ತೆ ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯವರು ಆರ್‌ಎಸ್‌ಎಸ್ ಸಿದ್ಧಾಂತವನ್ನು ಸಾರ್ವಜನಿಕವಾಗಿ ವಿರೋಧಿಸುತ್ತಾರಾದರೂ, ಅದೇ ನಿಟ್ಟಿನಲ್ಲಿ, ದೊಡ್ಡಮಟ್ಟದಲ್ಲಿ ತಮ್ಮ ಪಕ್ಷದ ಮುಖಂಡರೂ-ಕಾರ್ಯಕರ್ತರೂ ಕೂಡ ಜಾಗೃತವಾಗುವಂತೆ ಕ್ರಮ ತೆಗೆದುಕೊಳ್ಳುವುದಕ್ಕೆ ಇರುವ ಅಡ್ಡಿಗಳೇನು? ಅಧಿಕಾರದ ಸುಖದಲ್ಲಿ ದೀರ್ಘಕಾಲದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಉಪೇಕ್ಷಿಸಿದ್ದಕ್ಕೆ ಕಾಂಗ್ರೆಸ್ ಪಕ್ಷ ಅದರ ಫಲವನ್ನು ಇಂದು ನೋಡುತ್ತಿದೆ. ಇದು ಜೆಡಿಎಸ್ ಮುಖಂಡರಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಇಲ್ಲಿ ಹೇಳಬೇಕಿಲ್ಲ ಅಲ್ಲವೇ?

ಇನ್ನು ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳಲಾಗುತ್ತಿರುವ ವಿಷಯಗಳನ್ನು ನೋಡಿ. ಕೇಸರಿ ಧಿರಿಸು ಧರಿಸಿದ ಪೊಲೀಸ್ ಪಡೆ, ಶಸ್ತ್ರಾಸ್ತ್ರಗಳನ್ನೂ ಝಳಪಿಸಿದ ಸಂಘಪರಿವಾರದ ಸದಸ್ಯರು, ಇದಕ್ಕೂ ಕೆಲವು ದಿನಗಳ ಹಿಂದೆ ಸಾವರ್ಕರ್ ಕ್ಷಮಾಪಣೆಗೆ ಗಾಂಧಿಯವರ ಸಲಹೆಯೇ ಕಾರಣವಾಗಿತ್ತು ಎಂದು ತಿರುಚಿದ ಇತಿಹಾಸವನ್ನು ಒಕ್ಕೂಟ ಸರ್ಕಾರದ ರಕ್ಷಣಾ ಸಚಿವ ರಕ್ಷಣಾ ಸಚಿವರು ಪ್ರತಿಪಾದಿಸಿದ್ದು; ಇಷ್ಟು ದಿನ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದನ್ನೇ ಒಪ್ಪದಿದ್ದ ಸಂಘಪರಿವಾರದ ಮುಖಂಡರು ಈಗ ಹೊಸ ತಿರುವು ನೀಡಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಸಾವರ್ಕರ್ ಬಗ್ಗೆ ಈ ದೇಶದ ಪ್ರಜ್ಞಾವಂತ ಸಮುದಾಯ ಜಾರಿಯಲ್ಲಿಟ್ಟಿರುವ ವಿರೋಧವನ್ನು ಅವರು ಗಂಭೀರವಾಗಿ ಪರಿಗಣಿಸಿರುವುದು, ಸುಳ್ಳಿಗೆ ಸವಾಲಾದ ದಿಟದ ಗೆಲುವೆನ್ನಬಹುದೇ? ಇದು ಒಂದು ಮಟ್ಟಕ್ಕೆ ನಿಜವಾದರೂ, ಚರಿತ್ರೆಯ ಪಾಠ ಇಂತಹ ಸಲೀಸು ಉತ್ತರಗಳಿಗೆ ಅವಕಾಶ ನೀಡುವುದಿಲ್ಲ.

ಆರ್‌ಎಸ್‌ಎಸ್ ಸ್ಥಾಪನೆಯಾದಾಗ ಸಾವರ್ಕರ್‌ರಿಂದ ಅದು ಸ್ಫ್ಪೂರ್ತಿ ಪಡೆದಿತ್ತಾದರೂ, ಆರ್‌ಎಸ್‌ಎಸ್ ರಾಜಕೀಯವಾಗಿ ರೂಪುಗೊಂಡಿಲ್ಲ ಎಂದು ಸಾವರ್ಕರ್, ಭಾರತದ ರಾಜಕೀಯದಲ್ಲಿ ಆ ಸಂಸ್ಥೆಯ ಪಾತ್ರವನ್ನು ತಳ್ಳಿಹಾಕಲು ಪ್ರಯತ್ನಿಸಿದ್ದರು. ಗಾಂಧಿ ಹತ್ಯೆಯಾದ ನಂತರ ಆರ್‌ಎಸ್‌ಎಸ್, ಸಾವರ್ಕರ್ ಅವರ ಹಿಂದೂ ಮಹಾಸಭಾದಿಂದ ಅಂತರ ಕಾಪಾಡಿಕೊಳ್ಳಲು ಶ್ರಮಿಸಿತ್ತು. ಗೋಡ್ಸೆ ತನ್ನ ಸದಸ್ಯನೇ ಅಲ್ಲ ಎಂದು ಪ್ರತಿಪಾದಿಸುತ್ತಾ ಬಂದಿತ್ತು. ಇವೆಲ್ಲಾ ತೋರಿಸಿಕೊಡುವುದೇನೆಂದರೆ ಅಗತ್ಯ ಬಿದ್ದಾಗ ಆರ್‌ಎಸ್‌ಎಸ್ ಯಾರನ್ನು ಬೇಕಾದರು ತನ್ನವನನ್ನಾಗಿಸಿಕೊಳ್ಳುತ್ತದೆ, ಬೇಡವಾದಾಗ ಕಳಚಿ ಬಿಸಾಕುತ್ತದೆ. ಇಂದು ಆರ್‌ಎಸ್‌ಎಸ್ ತನ್ನನ್ನು ಸಂಸ್ಥಾಪಿಸಿದ ಹೆಡ್ಗೇವಾರ್, ಅವರ ನಂತರ ಅದನ್ನು ವಿಸ್ತರಿಸಿದ ಗೋಲ್ವಾಲ್ಕರ್‌ಗಿಂತ, ಸಾವರ್ಕರ್‌ನನ್ನು ದೊಡ್ಡದಾಗಿ ಪ್ರಚಾರ ಮಾಡಲು ಮುಂದಾಗಿವೆ. ಹಿಂದುತ್ವವನ್ನು ಮುನ್ನುಗ್ಗಿಸಲು, ಅನ್ಯ ಧರ್ಮಗಳ ದ್ವೇಷವನ್ನು ಹರಡಲು ಅವರಿಗೆ ಇಂದು ಸಾವರ್ಕರ್ ಅಸ್ತ್ರವಾಗಿ ಸಿಕ್ಕಿದ್ದಾರೆ. ಮುಂದೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಶರಣಾಗತಿಯಾಗಿದ್ದ ವಿಚಾರ ಹೆಚ್ಚು ಪ್ರಚಾರಪಡೆದರೆ ಅವರ ಬಳಿ ಮತ್ತೊಬ್ಬ ಐಕಾನ್ ಸಿದ್ಧನಿರುತ್ತಾನೆ. ಅಲ್ಲದೆ, ಬಹಿರಂಗದಲ್ಲಿ, ಗೋಡ್ಸೆ ತಮಗೆ ಸಂಬಂಧ ಇಲ್ಲ ಎಂಬಂತೆ ತೋರಿಸಿಕೊಳ್ಳುವ ಆದರೆ ಆಂತರ್ಯದಲ್ಲಿ ಅವನನ್ನು ಪೂಜಿಸುವ ಮತ್ತು ಆತನಿಗೆ ಗುಡಿ ಕಟ್ಟಲು ಶ್ರಮಿಸುವ ರಾಜಕೀಯ ಮುಖಂಡರನ್ನು ಪೋಷಿಸುವ ಹುನ್ನಾರದಂತೆ ಸಾವರ್ಕರ್ ಕೂಡ ಹಲವು ರೂಪಗಳನ್ನು ಎತ್ತಬಹುದು.

ಮಹಾರಾಷ್ಟ್ರದ ಮೂಲೆಯೊಂದರಲ್ಲಿ ಅತಿ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಒಂದು ಸಂಸ್ಥೆ ಇಂದು ದೇಶದ ನಾಲ್ಕೂ ದಿಕ್ಕುಗಳಲ್ಲಿ ತನ್ನ ಹಸ್ತಗಳನ್ನು ಚಾಚಲು ಸಾಧ್ಯವಾಗಿಸಿಕೊಂಡಿದೆ. ಅನ್ಯ ಧರ್ಮಗಳ ಬಗ್ಗೆ ದ್ವೇಷ, ಹಿಂದೂ ರಾಷ್ಟ್ರೀಯತೆ, ಸರ್ವಾಧಿಕಾರಿ ಧೋರಣೆಯ ಅಧಿಕಾರ ಸ್ಥಾಪಿಸುವಲ್ಲಿ ಪಾತ್ರ ಹೀಗೆ ಈ ದೇಶಕ್ಕೆ ಮಾರಕವಾಗಬಲ್ಲ ಚಿಂತನೆಯನ್ನು ಬಹಳ ಪರಿಣಾಮಕಾರಿಯಾಗಿ ಹರಡಿದೆ. ಇದಕ್ಕಾಗಿ ಆಟ-ವ್ಯಾಯಾಮಗಳಂತಹ ಸಣ್ಣ ಸಂಗತಿಗಳಿಂದ ಪ್ರಾರಂಭಿಸಿ, ಮಾಧ್ಯಮ ಅಧಿಕಾರಶಾಹಿ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಜನರನ್ನು ಕೂರಿಸುವವರೆಗೆ ಅದರ ತಂತ್ರಗಾರಿಕೆ ಫಲಿಸಿದೆ. ಈ ನೂರು ವರ್ಷಗಳ ಈ ತಯ್ಯಾರಿಯನ್ನು ರಾಜಕೀಯ ಪಕ್ಷಗಳ ಕೆಲವು ಮುಖಂಡರು ತಮ್ಮ ಅವಕಾಶಕ್ಕಾಗಿ ಟೀಕಿಸದಾಗ ಸರಿ ಹೋಗುವುದೆಂದು ಭ್ರಮಿಸುವುದು ಸರಿಯಾದ ದಾರಿಯಾಗಲಾರದು.

ಈ ಸಂಘ ಪರಿವಾರ ರಾಜಕೀಯವಾಗಿ ತನ್ನ ಹಿಡಿತವನ್ನು ಸಾಧಿಸಲು ಸಾಧ್ಯವಾಗಿರುವುದು ಸಾಂಸ್ಕೃತಿಕವಾಗಿ ಒಂದು ವಿಶಾಲ ತಳಹದಿಯಲ್ಲಿ ತನ್ನ ವಿಷಪೂರಿತ ಸಿದ್ಧಾಂತದ ಬಗ್ಗೆ ಜನರನ್ನು ಒಪ್ಪಿಸಲು ಸಾಧ್ಯವಾಗಿರುವುದರಿಂದಲೇ. ರಾಜಕೀಯ ಮುಖಂಡರ ಮಾತುಗಳು ಮಾಧ್ಯಮಗಳನ್ನು ಪ್ರಚೋದಿಸಲು ಶಕ್ತವಾಗಬಹುದಷ್ಟೇ. ಆದರೆ ಇಂತಹ ಸಂದರ್ಭವನ್ನು ಉಪಯೋಗಿಸಿಕೊಂಡು, ಸಾಂಸ್ಕೃತಿಕವಾಗಿ ಜನಸಾಮಾನ್ಯರ ದಿನನಿತ್ಯದಲ್ಲಿ ವಿಷಪೂರಿತ ಸಿದ್ಧಾಂತ ಹಾಸುಹೊಕ್ಕಾಗಿರುವುದನ್ನು ತೊಡೆದುಹಾಕಲು ಪ್ರಜ್ಞಾವಂತ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ.

ಅಮರಿಂದರ್ ಸಿಂಗ್

ಆರ್‌ಎಸ್‌ಎಸ್ ಉಳಿಸಿಕೊಂಡಿರುವ ಜಾತೀಯತೆಯ ಬಗ್ಗೆ, ಸಂಘಪರಿವಾರ ಇಂದಿಗೂ ತರಬಯಸುವ ವರ್ಣವ್ಯವಸ್ಥೆಯ ಬಗ್ಗೆ, ಅವರು ಹೇರಬೇಕೆನ್ನುವ ಆಹಾರ ಸಂಸ್ಕೃತಿಯ ಬಗ್ಗೆ, ಮತೀಯ ರಾಷ್ಟ್ರೀಯತೆಯ ಅಪಾಯಗಳ ಬಗ್ಗೆ, ಸಹ ನಾಗರಿಕರನ್ನು ಅನ್ಯರನ್ನಾಗಿಸಿದರೆ ಒದಗುವ ಅಪಾಯಗಳ ಬಗ್ಗೆ, ಅವರ ಇಡಿಯ ಅಜೆಂಡಾದ ಬಗ್ಗೆ ನಾವು ಮತ್ತೆ ಮತ್ತೆ ಕಥೆಗಳನ್ನು ಹೇಳಬೇಕಿದೆ.

ಆರ್‌ಎಸ್‌ಎಸ್ ನಲ್ಲಿ ದೀರ್ಘಕಾಲ ಇದ್ದು ಹೊರಬಂದ ಭನ್ವಾರ್ ಮೇಘವಾನ್ಷಿ ಅವರು ಬರೆದ ’ಐ ಕುಡ್ ನಾಟ್ ಬಿ ಹಿಂದೂ – ದ ಸ್ಟೋರಿ ಆಫ್ ದಲಿತ್ ಇನ ಆರ್‌ಎಸ್‌ಎಸ್’ ಪುಸ್ತಕದ ಒಂದು ಅಧ್ಯಾಯ ’ಫ್ರಂ ಸಂಘಿ ಟು ರೆಬೆಲ್’ನ ಈ ಭಾಗದ ಮಾತುಗಳಿಂದ ಈ ಬರಹವನ್ನು ಮುಗಿಸಬಹುದು: “ಈ ಹೋರಾಟ ನನ್ನ ಸಮುದಾಯಕ್ಕೋಸ್ಕರವಾಗಿತ್ತು, ಆದರೆ ನಾನು ಏಕಾಂಗಿಯಾಗಿ ಹೋರಾಡಬೇಕಾಗಿದೆ ಅನಿಸುತ್ತಿತ್ತು. ನಾನು ಬರೆದೆ, ಮಾತಾಡಿದೆ, ಜನರನ್ನು ಸಂಪರ್ಕಿಸಿದೆ, ಪ್ರಕಟಿಸಿದೆ, ನನ್ನ ಕಥೆ ಚಾಲ್ತಿಯಲ್ಲಿರುವಂತೆ ನೋಡಿಕೊಂಡೆ, ಈ ನನ್ನ ಶ್ರಮದಿಂದ ಏನೂ ಹೊರಹೊಮ್ಮಲಿಲ್ಲವಾದರೂ, ಕನಿಷ್ಟ ನಾನು ಹೋರಾಡುತ್ತಿದ್ದೇನೆ ಎಂದೆನಿಸುತ್ತಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ನನಗೆ ಸಿಕ್ಕಿದ್ದು ಸಲಹೆ, ಮತ್ತು ಹಲವು ಬಾರಿ ವೈರತ್ವ ಹಾಗೂ ಬೆದರಿಕೆಗಳು, ಆದರೆ ನನ್ನ ಈ ಹೋರಾಟ ಮುಂದುವರೆಯಲಿದೆ ಎಂಬುದು ನನಗೆ ಸ್ಪಷ್ಟವಿತ್ತು ಹಾಗೂ ಆರ್‌ಎಸ್‌ಎಸ್‌ಗೆ ಇನ್ನೆಂದಿಗೂ ಹಿಂದಿರುಗುವುದಿಲ್ಲವೆಂಬುದೂ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತಾ ಹೋಯಿತು. ನನ್ನಂತಹ ದಲಿತ ಸ್ವಯಂಸೇವಕನ ಪ್ರಶ್ನೆಗಳಿಗೆ ಸಂಘಪರಿವಾರದಿಂದ ಯಾವುದೇ ಉತ್ತರಗಳಿರಲಿಲ್ಲ, ಅಲ್ಲದೆ ಸಂಘಕ್ಕೆ ಪ್ರಶ್ನಿಸಲು ಇತರ ದಲಿತ ಸ್ವಯಂಸೇವಕರ ಬಳಿ ಪ್ರಶ್ನೆಗಳಿರಲಿಲ್ಲ ಎಂಬುದು ಎಂತಹ ವೈಚಿತ್ರ್ಯ”.


ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

ಇದನ್ನೂ ಓದಿ: ಗಾಂಧಿ ಸಲಹೆ ಮೇರೆಗೆ ಸಾವರ್ಕರ್ ಕ್ಷಮಾಪತ್ರ ಬರೆದದ್ದು ಎಂಬ ರಕ್ಷಣಾ ಸಚಿವರ ಹೇಳಿಕೆಯ ಸತ್ಯಾಸತ್ಯತೆ

ಇದನ್ನೂ ಓದಿ: ಶೀಘ್ರದಲ್ಲೇ ಅಮರೀಂದರ್ ಸಿಂಗ್‌ ಹೊಸ ಪಕ್ಷ: ರೈತ ಹೋರಾಟ ಬಗೆಹರಿದರೆ ಬಿಜೆಪಿ ಜೊತೆ ಮೈತ್ರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...