ಶೀಘ್ರದಲ್ಲೇ ಅಮರೀಂದರ್ ಸಿಂಗ್‌ ಹೊಸ ಪಕ್ಷ: ರೈತ ಹೋರಾಟ ಬಗೆಹರಿದರೆ ಬಿಜೆಪಿ ಜೊತೆ ಮೈತ್ರಿ!

ಪಂಜಾಬ್ ಕಾಂಗ್ರೆಸ್‌ನಲ್ಲಾದ ಬಿರುಕುಗಳಿಂದ ಕಳೆದ ತಿಂಗಳು ಪಂಜಾಬ್​ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಕಾಂಗ್ರೆಸ್‌ಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್‌ ರಾಜೀನಾಮೆ ನೀಡಿದ್ದರು. ಈಗ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಹೊಸ ಪಕ್ಷ ಸ್ಥಾಪಿಸುವುದರೊಂದಿಗೆ, “ರೈತರ ಹೋರಾಟ ಬಗೆಹರಿದರೆ, 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ತಾನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತನಾಗಿದ್ದೇನೆ” ಎಂದು ಅಮರಿಂದರ್‌ ಸಿಂಗ್ ಘೋಷಿಸಿದ್ದಾರೆ.

ಅಮರೀಂದರ್​ ಸಿಂಗ್ ಅವರ ರಾಜಕೀಯ ಸಲಹೆಗಾರ ರವೀನ್ ತುಕ್ರಾಲ್ ಟ್ವೀಟ್ ಮಾಡುವ ಮೂಲಕ ಹೊಸ ಸ್ಥಾಪನೆಯನ್ನು ಖಚಿತಪಡಿಸಿದ್ದು, “ಪಂಜಾಬ್ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಶೀಘ್ರದಲ್ಲೇ ಘೋಷಿಸುತ್ತೇನೆ” ಎಂದು ತಿಳಿಸಿದ್ದಾರೆ.

 ಇದನ್ನೂ ಓದಿ: ಕಾಂಗ್ರೆಸ್ ಬಿಡುತ್ತೇನೆ..ಆದರೆ ಬಿಜೆಪಿ ಸೇರುವುದಿಲ್ಲ-ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್

ಮತ್ತೊಂದು ಟ್ವೀಟ್​ನಲ್ಲಿ, “2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ರೈತರ ಹಿತದೃಷ್ಟಿಯಿಂದ ರೈತರ ಹೋರಾಟ ಬಗೆಹರಿಸಿದರೆ ಬಿಜೆಪಿ ಪಕ್ಷದ ಜೊತೆ ಸೀಟು ಹೊಂದಾಣಿಗೆ ಮಾಡುವ ಭರವಸೆ ಇದೆ. ಬಂಡಾಯ ಅಕಾಲಿ ಗುಂಪುಗಳು, ವಿಶೇಷವಾಗಿ ದಿಂಡಸ ಮತ್ತು ಬ್ರಹ್ಮಪುರ ಬಣಗಳಂತಹ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಯನ್ನೂ ನಾವು ಎದುರು ನೋಡುತ್ತಿದ್ದೇವೆ” ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

ಈ ಹಿಂದೆ ಬಿಜೆಪಿ ಸೇರುವಬಗ್ಗೆ ಮಾತನಾಡಿದ್ದ ಅಮರಿಂದರ್‌ ಸಿಂಗ್,  ಬಿಜೆಪಿಗೆ ಸೇರುವ ವದಂತಿಗಳನ್ನು ತಳ್ಳಿ ಹಾಕಿದ್ದರು. ಬಿಜೆಪಿ ಪಕ್ಷಕ್ಕೆ ಸೇರುವುದಿಲ್ಲ. ಆದರೆ ಖಂಡಿತವಾಗಿಯೂ ಕಾಂಗ್ರೆಸ್ ತೊರೆಯುತ್ತೆನೆ ಎಂದಿದ್ದರು.

ರಾಜೀನಾಮೆ ಬಗ್ಗೆ ಸಲ್ಲಿಕೆ ಬಗ್ಗೆ ಮಾತನಾಡಿದ್ದ ಅಮರಿಂದರ್‌ ಸಿಂಗ್ “ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಬೆಳಿಗ್ಗೆ 10.30 ಕ್ಕೆ ನೀವು ರಾಜೀನಾಮೆ ನೀಡುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ನಾನು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಸಂಜೆ 4 ಗಂಟೆಗೆ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರವೂ ನಿಮಗೆ ನನ್ನ ವಿಶ್ವಾಸಾರ್ಹತೆಯ ಬಗ್ಗೆ ನಿಮಗೆ ಅನುಮಾನವಿದ್ದರೆ, ನನ್ನ ಬಗ್ಗೆ ನಂಬಿಕೆ ಇಲ್ಲದಿದ್ದರೆ, ನಾನು ಪಕ್ಷದಲ್ಲಿ ಉಳಿಯುವುದರ ಅರ್ಥವೇನು..? ಎಂದು ಅಸಮಾಧಾನ ಹೊರಹಾಕಿದ್ದರು.

ಪಂಜಾಬ್‌ ಕಾಂಗ್ರೆಸ್‌ ಪಕ್ಷದೊಳಗೆ ನಡೆಯುತ್ತಿದ್ದ ಆಂತರಿಕ ಕಚ್ಚಾಟದಿಂದಾಗಿ ಸೆ.18 ರಂದು ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೆಪ್ಟಂಬರ್ 29 ರಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು. ಈ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಅಮಿತ್‌ ಶಾ ಅವರನ್ನು ಭೇಟಿಯಾದ ಪಂಜಾಬ್ ಮಾಜಿ ಸಿಎಂ ಅಮರಿಂದರ್‌ ಸಿಂಗ್‌!

LEAVE A REPLY

Please enter your comment!
Please enter your name here