ಚುನಾವಣೆಯಲ್ಲಿ ಮತದಾರರು ಬಿಜೆಪಿ ಸೋಲಿಸಿದರೆ ಪೆಟ್ರೋಲ್ –ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂಧನ ದರ ಇಳಿಕೆಯ ಬಗ್ಗೆ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಯುಪಿಎ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 125 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 65 ರೂಪಾಯಿಗಳಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 82 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂಪಾಯಿಗೆ ಇಳಿಸಿದ್ದು ಮಹಾನ್ ಸಾಧನೆ. ಚುನಾವಣೆಯಲ್ಲಿ ಮತದಾರರು ಬಿಜೆಪಿ ಸೋಲಿಸಿದರೆ ಪೆಟ್ರೋಲ್ –ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 12 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆ: ಯಾರ್ಯಾರು, ಎಷ್ಟೆಷ್ಟು?
“ಇದು ಪ್ರಧಾನಿಗಳು ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ. ಅಡುಗೆ ಅನಿಲ ಬೆಲೆ ಸಾವಿರ ರೂಪಾಯಿ ತಲುಪಿದೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಏರುತ್ತಲೇ ಇದೆ. ಈ ಬೆಲೆಗಳು ಕೂಡಾ ಇಳಿಯಬೇಕಾದರೆ ಬಿಜೆಪಿಯನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು
ಸೋಲಿಸುತ್ತಲೇ ಇರಬೇಕು” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
“ಸದ್ಯದಲ್ಲಿಯೇ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ಹಾಗೂ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ನರೇಂದ್ರ ಮೋದಿ ಅವರು ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ನಡೆಸಬೇಕು” ಎಂದು ಅವರು ರಾಜ್ಯದ ಜನತೆಯಲ್ಲಿ ವಿನಂತಿಸಿದ್ದಾರೆ.
ಕಳೆದೊಂದು ವರ್ಷದಿಂದ ಹೆಚ್ಚಳವಾಗುತ್ತಲೆ ಇದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ. ಒಕ್ಕೂಟ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಶುಂಕವನ್ನು ಪ್ರತಿ ಲೀಟರ್ ಮೇಲೆ 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ. ಇದರ ಬೆನ್ನಲ್ಲೆ ಬಿಜೆಪಿ ಆಡಳಿತದ 10 ರಾಜ್ಯಗಳು ಮತ್ತು ಇತರ ಎರಡು ರಾಜ್ಯಗಳು ಸಹ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿವೆ.
ಇತ್ತೀಚೆಗೆ ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ತುಸು ಮಟ್ಟಿನ ಹಿನ್ನಡೆಯನ್ನು ಅನುಭವಿಸಿತ್ತು. ಈ ಹಿನ್ನಲೆ ಮತ್ತು ಮುಂಬರುವ ವರ್ಷಗಳಲ್ಲಿ ಉತ್ತರ ಪ್ರದೇಶ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆಯ ದೃಷ್ಟಿಯಿಂದ ಇಂಧನ ದರಗಳು ಇಳಿಕೆಯಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಇದನ್ನೂ ಓದಿ: ಉಪಚುನಾವಣೆ ಸೋಲಿನಿಂದಾಗಿ ಕೇಂದ್ರವು ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತಗೊಳಿಸಿದೆ: ಪಿ ಚಿದಂಬರಂ


