ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿಂದ ನೇರಪ್ರಸಾರವಾಗುತ್ತಿರುವ ಕಾರ್ಯಕ್ರಮವನ್ನು ವೀಕ್ಷಿಸಲು ದೇವಸ್ಥಾನಕ್ಕೆ ತೆರಳಿದ್ದ ಹಲವಾರು ಬಿಜೆಪಿ ನಾಯಕರಿಗೆ ಹರಿಯಾಣ ರೈತರು ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಸುಮಾರು ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ಬಿಜೆಪಿ ನಾಯಕರಿಗೆ ಘೇರಾವ್ ಹಾಕಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಪ್ರತಿಭಟನಾಕಾರರು ನಿರ್ದಿಷ್ಟವಾಗಿ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಮನೀಶ್ ಗ್ರೋವರ್ ಅವರ ನಡೆಯನ್ನು ಖಂಡಿಸಿದರು. ಮನೀಶ್ ಅವರು ರೈತರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ರೈತರು ಆರೋಪಿಸಿದರು.

ಮಾಜಿ ಸಚಿವರು ಕ್ಷಮೆಯಾಚಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮತ್ತು ಇತರೆ ಪಕ್ಷದ ಸದಸ್ಯರು ಸುಮಾರು ಎಂಟು ಗಂಟೆಗಳ ಕಾಲ ದೇವಸ್ಥಾನದಲ್ಲಿ ಸಿಲುಕಿಕೊಳ್ಳಬೇಕಾಯಿತು.
ಅಂತಿಮವಾಗಿ, ಗ್ರೋವರ್ ಅವರು ಕೈ ಮಡಕಿ ರೈತರಲ್ಲಿ ಕ್ಷಮೆಯಾಚಿಸಿದರು. ನಂತರ ದೇವಸ್ಥಾನಕ್ಕೆ ಕೆಲವರು ತೆರಳಲು ಅನುಮತಿ ನೀಡಲಾಯಿತು ಎಂದು ರೈತರು ತಿಳಿಸಿದ್ದಾರೆ.
ಗುರಗಾಂವ್‌ನಿಂದ 78 ಕಿಮೀ ದೂರದಲ್ಲಿರುವ ರೋಹ್ಟಕ್ ಜಿಲ್ಲೆಯ ಕಿಲೋಯ್ ಗ್ರಾಮದ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದರು. ಇಬ್ಬರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ದೆಹಲಿ-ಹಿಸಾರ್ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಹೊತ್ತು ಬಂದ್ ಮಾಡಲಾಗಿತ್ತು.
ಇದನ್ನೂ ಓದಿರಿ: ಜಾತಿ ತಾರತಮ್ಯ ಆರೋಪ: ದಲಿತ ವಿದ್ಯಾರ್ಥಿನಿಗೆ 10 ವರ್ಷ ಕಳೆದರೂ ಸಿಗದ ಪಿಎಚ್‌ಡಿ ಪದವಿ – ಉಪವಾಸ ಸತ್ಯಾಗ್ರಹ
ಮತ್ತೊಂದು ಘಟನೆ
ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ಅವರು ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಧರ್ಮಶಾಲಾ ಉದ್ಘಾಟಿಸಲು ತೆರಳಿದಾಗ ರೈತರು ಕಪ್ಪು ಭಾವುಟ ತೋರಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಮತ್ತು ರೈತರ ನಡುವಿನ ಗಲಾಟೆಯಲ್ಲಿ ಜುಂಗ್ರಾ ಅವರ ಕಾರಿನ ಗಾಜು ಒಡೆದುಹೋಯಿತು.
ರೈತ ಚಳವಳಿಯನ್ನು ತಡೆಯಲು ಬಿಜೆಪಿ ನಾಯಕರು ಮೊದಲಿನಿಂದಲೂ ಯತ್ನಿಸುತ್ತಿದ್ದಾರೆ. ಸ್ವತಃ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರು, ರೈತರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡುವಂತೆ ಪ್ರಚೋದಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು.
ಖಟ್ಟರ್ ಹೇಳಿಕೆಯ ಬೆನ್ನಲ್ಲೇ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಗೆ ದೇಶ ಸಾಕ್ಷಿಯಾಗಿತ್ತು. ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಹಿಂತಿರುಗುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶೀಶ್ ಮಿಶ್ರನಿದ್ದ ಕಾರು ಹರಿದು ರೈತರನ್ನು ಕೊಲ್ಲಲಾಯಿತು.
ಇದನ್ನೂ ಓದಿರಿ: ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ


