ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಖೈಬರ್ ಪಾಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಮೂಲಭೂತವಾದಿ ಮುಸ್ಲಿಮರಿಂದ ಧ್ವಂಸಗೊಂಡಿದ್ದ ಶತಮಾನಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್‌ರವರು ನೂತನ ದೇವಾಲಯಗಳ ಉದ್ಘಾಟನೆ ನೆರವೇರಿಸಿದ್ದಾರೆ.
2020ರ ಡಿಸೆಂಬರ್ 30 ರಂದು ಶ್ರೀ ಪರಮ್ ಹನ್ಸ್ ಮಹಾರಾಜ್ ದೇವಾಲಯವನ್ನು ಜಮೈತ್ ಉಲೆಮಾ ಎ ಇಸ್ಲಾಂ ಫಜ್ಲ್ ಮೂಲಭೂತವಾದಿ ಪಕ್ಷದ ಸದಸ್ಯರ ನೇತೃತ್ವದಲ್ಲಿ ಗುಂಪೊಂದು ಧ್ವಂಸಗೊಳಿಸಿ, ಬೆಂಕಿ ಹಚ್ಚಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪಾಕಿಸ್ತಾನ ಪೊಲೀಸರು 350 ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದು 55ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ದಾಳಿಯ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಪ್ರಕರಣದ ವಿಚಾರಣೆ ನಡೆಸಿದ್ದರು. ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಅವರು ಎರಡು ವಾರಗಳ ಅವಧಿಯಲ್ಲಿ ದೇವಾಲಯ ಪುನರ್‌ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಾಂತೀಯ ಸರ್ಕಾರಕ್ಕೆ ಆದೇಶಿಸಿದ್ದರು. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತಂದಿದ್ದು ದಾಳಿಕೋರರಿಂದಲೇ ದೇವಾಲಯ ನಿರ್ಮಾಣದ ಹಣ ವಸೂಲಿ ಮಾಡಬೇಕೆಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು.
ಸೋಮವಾರ ನಡೆದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ರವರು ಭಾಗವಹಿಸಿದ್ದರು. ದೀಪಾವಳಿ ಹಬ್ಬದೊಂದಿಗೆ ಅದ್ದೂರಿಯಾಗಿ ದೇವಾಲಯದಲ್ಲಿ ಪೂಜೆಗಳು ಜರುಗಿವೆ. ಪಾಕಿಸ್ತಾನದಲ್ಲಿರುವ ಹಿಂದೂ ಧರ್ಮೀಯರೊಂದಿಗೆ ಐಕ್ಯಮತ್ಯ ಘೋಷಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, “ಪಾಕಿಸ್ತಾನದ ಸುಪ್ರೀಂ ಕೋರ್ಟ್ ಯಾವಾಗಲೂ ಅಲ್ಪಸಂಖ್ಯಾತರರ ಹಕ್ಕುಗಳನ್ನು ರಕ್ಷಿಸುವ ಕ್ರಮಗಳನ್ನು ಕೈಗೊಂಡಿದೆ. ಮುಂದೆಯೂ ಅದನ್ನು ಕಾಪಾಡಲಿದೆ. ನಮ್ಮ ಸಂವಿಧಾನದ ಪ್ರಕಾರ ಹಿಂದೂಗಳು ಇತರ ಧರ್ಮೀಯರು ಹೊಂದಿರುವ ಎಲ್ಲಾ ಧಾರ್ಮಿಕ ಹಕ್ಕುಗಳನ್ನು ಹೊಂದಿದ್ದಾರೆ” ಎಂದಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಮತ್ತೊಬ್ಬರ ಧಾರ್ಮಿಕ ಹಕ್ಕುಗಳ ಮೇಲೆ ದಾಳಿ ನಡೆಸುವ ಅಧಿಕಾರ ಯಾರಿಗೂ ಇಲ್ಲ. ಸುಪ್ರೀಂ ಕೋರ್ಟ್ ಎಲ್ಲಾ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪಾಕಿಸ್ತಾನ್ ಹಿಂದೂ ಕೌನ್ಸಿಲ್ ಮತ್ತು ಹಿಂದೂ ಸಮುದಾಯದ ಭಕ್ತಾದಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಪೇಟ ತೊಡಿಸಿ, ಡಿಜಿಟಲ್ ಕುರಾನ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.
ಸರ್ಕಾರವು ಹಾನಿಗೊಳಗಾದ ದೇವಾಲಯ ಮತ್ತು ಸಮಾಧಿಯನ್ನು ಆದಷ್ಟು ಕಡಿಮೆ ಸಮಯದಲ್ಲಿ ಪುನರ್ ನಿರ್ಮಿಸುವುದಾಗಿ ಭರವಸೆ ನೀಡುತ್ತೇವೆ. ಪ್ರಾಂತ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಲಾಗುವುದು ಎಂದು ಖೈಬರ್ ಪಾಖ್ತುನ್‌ಟ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಇರುಳಿಗರ ನೋವಿಗೆ ಕೊನೆ ಯಾವಾಗ? ವ್ಯಕ್ತಿ ಸಾವಿನ ಬಳಿಕ ಸ್ಥಳಕ್ಕೆ ಅಧಿಕಾರಿಗಳು ದೌಡು



ಇದೊಂದು ಆಶಾದಾಯಕ ಬೆಳವಣಿಗೆ.