Homeಮುಖಪುಟಸ್ವಾತಂತ್ರ್ಯ ಹೋರಾಟಗಾರರಿಗೆ ನಟಿ ಕಂಗನಾ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

ಸ್ವಾತಂತ್ರ್ಯ ಹೋರಾಟಗಾರರಿಗೆ ನಟಿ ಕಂಗನಾ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಬಂದ ಕುರಿತು ವಿವಾದಿತ ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದೇಶದ ಅತ್ಯುನ್ನತ ಪ್ರಶಸ್ತಿ ಪಡೆದು ಎರಡು ದಿನಗಳಲ್ಲೇ ಇಂತಹ ಹೇಳಿಎ ನೀಡುವ ಮೂಲಕ ದೇಶದ ಸ್ವತಂತ್ರಕ್ಕಾಗಿ ಬಲಿದಾನ ಮಾಡಿದವರನ್ನು ಅವಮಾನಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ. ದೇಶಕ್ಕೆ ಅಪಮಾನ ಮಾಡಿದ ನಟಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಬೇಕು ಎಂದು #कंगना_पद्मश्री_वापस_करो, #कंगना_देश_से_माफी_मांगो #कंगना_रनौत_देशद्रोही_है ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟರ್‌ ಟ್ರೆಂಡ್ ಮಾಡಲಾಗುತ್ತಿದೆ.

ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “1947 ರಲ್ಲಿ ಸಿಕ್ಕಿದ್ದು ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು.

ಇದನ್ನೂ ಓದಿ: ದೇಶದ ಸ್ವಾತಂತ್ಯ್ರದ ಕುರಿತು ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ವಿರುದ್ದ ದೂರು ದಾಖಲು

ನಟಿ ಕಂಗನಾ ರಣಾವತ್ ಸ್ವತಂತ್ರ ಬಂದಿದ್ದು 2014ರ ನಂತರ ಎಂಬ ಹೇಳಿಕೆ ಸಾವಿರಾರು ಮಂದಿ ಹೋರಾಟಗಾರರಿಗೆ ಮಾಡಿದ ಅವಮಾನವಲ್ಲವೇ…? ಇದು ರಾಜಕೀಯವನ್ನು ಬದಿಗೊತ್ತಿ ಚರ್ಚೆಸಬೇಕಾದ ವಿಷಯ…ದೇಶದ ಗೌರವ ಉಳಿಸಲು ಮೊದಲು ಈಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಿರಿ ಎಂದು ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.

ಜೆಎನ್‌ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗೆ: “ಕಂಗನಾ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳಿದ್ದು 2014ರ ಆನಂತರ ಬಲಪಂಥೀಯರು ಬರೆಯಬಯಸಿದ ಮತ್ತು ಬರೆಯುತ್ತಿರುವ ಇತಿಹಾಸದ ಒಂದು ಸಣ್ಣ ಭಾಗ ಅಷ್ಟೇ. ಸರಕಾರದ ಜೊತೆ ಕೈಜೋಡಿಸಿರುವ ನಕಲಿ ಇತಿಹಾಸಕಾರರು ಈಗಾಗಲೇ ‘ ನಮ್ಮಲ್ಲಿ ಜಾತಿ ಪದ್ಧತಿ ಮೊದಲು ಇರಲಿಲ್ಲ, ಮುಸ್ಲಿಮರು ಬಂದಮೇಲೆ ಅದು ಹುಟ್ಟಿಕೊಂಡಿತು’,’ ಕುರುಕ್ಷೇತ್ರ ಯುದ್ಧದಲ್ಲಿ ಕ್ಷಿಪಣಿಗಳ ಬಳಕೆಯಾಗಿತ್ತು’ ಎಂಬಿತ್ಯಾದಿ ವಿವರಗಳಿರುವ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗೆಯ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸರಕಾರವೇ ‘ ನಿಜವಾದ ಚರಿತ್ರೆ’ ಬರೆಯಲು ಸಮಿತಿ ನೇಮಕ ಮಾಡಿದೆ. ಸುಳ್ಳು ಇತಿಹಾಸದ ಪ್ರಚಾರಕ್ಕೆ ನೂರಾರು ಗುಂಪುಗಳು ಕೆಲಸಮಾಡುತ್ತಿವೆ. ಕಂಗನಾ ಹೇಳಿಕೆಗೆ ಸರಕಾರವಾಗಲೀ ಬಲಪಂಥೀಯ ಇತಿಹಾಸಕಾರರಾಗಲೀ, ಐಸಿಎಚ್ಆರ್ ( ಭಾರತೀಯ ಇತಿಹಾಸ ಸಂಸ್ಥೆ) . ಮೊದಲಾದ ಸಂಸ್ಥೆಗಳು ಪ್ರತಿಕ್ರಿಯಿಸಿಲ್ಲ ಎಂಬುದನ್ನು ಗಮನಿಸಿ. ಕಂಗನಾ ಹೇಳಿಕೆಗೆ ಸಭೆಯಲ್ಲಿ ಬಿದ್ದ ಚಪ್ಪಾಳೆ ಬೌದ್ಧಿಕ ಅಧ:ಪತನದ ಸಂಕೇತವೇ ಸರಿ” ಎಂದಿದ್ದಾರೆ.

ಇನ್ನು ನಟಿ ಕಂಗನಾರ ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ ಎಂಬ ದೇಶದ್ರೋಹ ಹೇಳಿಕೆ ಹಿನ್ನೆಲೆ ಆಕೆಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಇತ್ತೀಚೆಗೆ ಕಂಗನಾ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ದೇಶದ ಕಾನೂನು, ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಇಂತಹ ವ್ಯಕ್ತಿ ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಬರೆದಿದ್ದಾರೆ.

ನಟಿ ಕಂಗನಾ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವ್ಯಂಗ್ಯಚಿತ್ರಗಳು, ಮೀಮ್‌ಗಳು ಹರಿದಾಡುತ್ತಿವೆ.


ಇದನ್ನೂ ಓದಿ: ’ಭಿಕ್ಷೆ ಬೇಡಿದವರಿಗೆ ಕ್ಷಮೆ ಸಿಕ್ಕಿದೆ..ಕೆಚ್ಚೆದೆಯಿಂದ ಹೋರಾಡಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ: ಕಂಗನಾಗೆ ಕಾಂಗ್ರೆಸ್ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...