Homeಮುಖಪುಟ25 ವರ್ಷಗಳ ಹಿಂದಿನ ಲಾಕಪ್‌ ಡೆತ್‌ ಪ್ರಕರಣ ಮರು ತನಿಖೆಗೆ ಕೋರ್ಟ್ ಆದೇಶ

25 ವರ್ಷಗಳ ಹಿಂದಿನ ಲಾಕಪ್‌ ಡೆತ್‌ ಪ್ರಕರಣ ಮರು ತನಿಖೆಗೆ ಕೋರ್ಟ್ ಆದೇಶ

ಪತಿಯನ್ನು ಕೊಂದವರಿಗೆ ಶಿಕ್ಷೆಯಾಗಲೇಬೇಕು ಎಂದು 25 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ ಜಮೀಲಾ ಬೇಗಂ

- Advertisement -
- Advertisement -

ಶ್ರೀನಗರ: 25 ವರ್ಷಗಳ ಹಿಂದೆ ಘಟಿಸಿದ ಲಾಕಪ್‌ ಡೆತ್‌ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಖಾನ್ಯಾರ್‌ನ ಮಿಸ್ಕಿನ್ ಬಾಗ್‌ನ ಜಮೀಲಾ ಬೇಗಂ ಅವರು ತನ್ನ ಪತಿಯನ್ನು ಕೊಂದವರಿಗೆ ಶಿಕ್ಷೆಯಾಗಲೇಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.

“ನನ್ನ ಪತಿಯ ದೇಹವನ್ನು ನಮಗೆ ಅಂತ್ಯಸಂಸ್ಕಾರಕ್ಕೆ ಹಸ್ತಾಂತರಿಸಿದ ಬಳಿಕ, ನನ್ನ ಚಿಕ್ಕ ಮಕ್ಕಳು ತಂದೆಯ ಶವವನ್ನು ನೋಡಿದರು. ಘುಸುಲ್ (ಅಂತ್ಯ ಸಂಸ್ಕಾರದ ಮೊದಲು ಶವವನ್ನು ತೊಳೆಯುವ ಇಸ್ಲಾಮಿಕ್ ಆಚರಣೆ) ನಡೆಸಿದಾಗ, ನನ್ನ ಪತಿಗೆ ನ್ಯಾಯ ಸಿಗುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಅವರ ದೇಹದ ಮುಂದೆ ಪ್ರತಿಜ್ಞೆ ಮಾಡಿದ್ದೇನೆ” ಎನ್ನುತ್ತಾರೆ ಜಮೀಲಾ.

1996ರ ಮೇ 31ರಿಂದ ಜೂನ್ 1ರ ಅವಧಿಯಲ್ಲಿ ಜಮೀಲಾ ಅವರ ಪತಿ ಮುಹಮ್ಮದ್ ರಂಜಾನ್ ಅವರನ್ನು ಪೊಲೀಸರು ಕೊಂದರು ಎಂದು ಆರೋಪಿಸಲಾಗಿದೆ. ರಂಜಾನ್‌‌ ಅವರನ್ನು ಉಗ್ರಗಾಮಿ ಎಂದು ಆರೋಪಿಸಲಾಗಿದೆ. ಮಿಸ್ಕಿನ್ ಬಾಗ್‌ನ ಅಡಗುತಾಣದಲ್ಲಿ ಅಡಗಿದ್ದ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ರಂಜಾನ್ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು.

ತಮ್ಮ ಪ್ರೀತಿಪಾತ್ರರು ಕೊಲ್ಲಲ್ಪಟ್ಟಾಗ ಹೆಚ್ಚಿನ ಕಾಶ್ಮೀರಿಗಳು ಪ್ರತೀಕಾರದ ಭಯದಿಂದ ಮೌನವಾಗಿರುತ್ತಾರೆ. ಆದರೆ ಜಮೀಲಾ ಮತ್ತೆ ಹೋರಾಡಲು ನಿರ್ಧರಿಸಿದರು ಎಂದು ದಿ ವೈರ್‌ ವರದಿ ಮಾಡಿದೆ.

“ನನ್ನ ಪತಿಗೆ ನ್ಯಾಯ ದೊರಕಿಸಿಕೊಡಲು ಎಲ್ಲ ಬಾಗಿಲುಗಳನ್ನು ತಟ್ಟಿದೆ. ಫಾರೂಕ್ ಅಬ್ದುಲ್ಲಾ, ಮುಫ್ತಿ ಮುಹಮ್ಮದ್ ಸಯೀದ್ ಮತ್ತು ಅಲಿ ಮುಹಮ್ಮದ್ ಸಾಗರ್ ಅವರಂತಹ ರಾಜಕಾರಣಿಗಳನ್ನು ನಾನು ಭೇಟಿ ಮಾಡಿದ್ದೇನೆ. ಪ್ರಕರಣದ ತನಿಖೆಗೆ, ನನ್ನ ಪತಿ ಹತ್ಯೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕೆಂದು ಹಲವಾರು ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಅವರು ಯಾವುದೇ ಕ್ರಮ ಜರುಗಿಸಲಿಲ್ಲ” ಎನ್ನುತ್ತಾರೆ ಜಮೀಲಾ ಬೇಗಂ.

ಜಮೀಲಾ ಬೇಗಂ (PC: The Wire)

ಇದನ್ನೂ ಓದಿರಿ: ಯುಪಿ ವಿಧಾನಸಭೆ ಚುನಾವಣೆ ಗೆಲುವು 2024ರ ಲೋಕಸಭೆಗೆ ದಾರಿ: ಅಮಿತ್‌ ಶಾ

2006ರಲ್ಲಿ ಪ್ರಕರಣ ರೀ ಓಪನ್‌ ಆಯಿತು. ಆದರೆ ಪೊಲೀಸರು ರಚಿಸಿದ್ದ ವಿಶೇಷ ತನಿಖಾ ತಂಡ (SIT) ಪ್ರಕರಣವನ್ನು ತನಿಖೆ ಮಾಡಲು ಏನನ್ನೂ ಮಾಡಲಿಲ್ಲ. ಜಮೀಲಾ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದರು. ಮಾನವ ಹಕ್ಕುಗಳ ಆಯೋಗದ ಶಿಫಾರಸುಗಳನ್ನು ಆಗಿನ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಾರಿಗೊಳಿಸಲಿಲ್ಲ.

ಆದರೆ ಜಮೀಲಾ ಛಲವನ್ನು ಬಿಟ್ಟುಕೊಡಲಿಲ್ಲ. ಈಗ ಅಕ್ಟೋಬರ್ 28, 2021ರಂದು, ಕಾಶ್ಮೀರ ಕಣಿವೆಯ ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆಗೆ ಪೊಲೀಸ್ ಉಪ ಅಧೀಕ್ಷಕ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ಕೋರ್ಟ್‌ ಸೂಚಿಸಿದೆ.

“ಜವಾಬ್ದಾರಿಯುತ ದೃಷಿಯಲ್ಲಿ ಪ್ರಕರಣವನ್ನು ತನಿಖಾ ಏಜೆನ್ಸಿ ನೋಡದಿರುವುದು ದುರಾದೃಷ್ಟಕರ” ಎಂದು ಕೋರ್ಟ್ ವಿಷಾದಿಸಿದೆ.

ಸಿಐಡಿ ಮಾಡಿದ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪರಿಶೀಲನೆ ವರದಿಗಳು ಪೊಲೀಸರ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ. ಮೃತದೇಹದಲ್ಲಿ ಚಿತ್ರಹಿಂಸೆಯ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತದೆ. ಸಿಐಡಿ ವರದಿಯು ವಿಧ್ವಂಸಕ ಚಟುವಟಿಕೆಗಳಲ್ಲಿ ವ್ಯಕ್ತಿಯು ಭಾಗಿಯಾಗಿಲ್ಲ ಎಂದು ಹೇಳುತ್ತದೆ.

ಶ್ರೀನಗರದ ಎರಡನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯವು ತನ್ನ ಆದೇಶದಲ್ಲಿ, “ಪ್ರಕರಣದ ತನಿಖೆಗಾಗಿ ಪೊಲೀಸ್ ಉಪ ಅಧೀಕ್ಷಕ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು” ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕರಿಗೆ (ಎಸ್‌ಎಸ್‌ಪಿ) ನಿರ್ದೇಶಿಸಿದೆ.

ರಂಜಾನ್ ಸಾವಿನ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೈನಾವರಿ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಮತ್ತು ಠಾಣಾಧಿಕಾರಿ ಮತ್ತು ಇತರ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಎಸ್‌ಎಸ್‌ಪಿಗೆ ನಿರ್ದೇಶನ ನೀಡಿದೆ.

2006ರಲ್ಲಿ ಪ್ರಕರಣ ರೀ ಓಪನ್‌ ಆದ ನಂತರ ಪ್ರಕರಣದ ತನಿಖೆಗಾಗಿ ರಚಿಸಲಾದ ಎಸ್‌ಐಟಿಯ ಪಾತ್ರವನ್ನೂ ತನಿಖೆ ಮಾಡಲು ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ಸಂತ್ರಸ್ತೆಯನ್ನು ಪ್ರತಿನಿಧಿಸುವ ವಕೀಲ ತಬ್ಬಸುಮ್ ರಸೂಲ್ ‘ದಿ ವೈರ್‌’ಗೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ವಡೋದರಾ: ಮಾಂಸಾಹಾರವನ್ನು ಬೀದಿಯಲ್ಲಿ ಪ್ರದರ್ಶಿಸದಂತೆ ಸೂಚನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...