ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಹೋದರಿ ಮಾಳವಿಕಾ ಸೂದ್ ಸ್ಪರ್ಧಿಸಲಿದ್ದಾರೆ ಎಂದು ನಟ ಸೋನು ಸೂದ್ ಭಾನುವಾರ ಘೋಷಿಸಿದ್ದಾರೆ.
ಪಂಜಾಬ್‌ನ ಮೊಗಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ಪಕ್ಷಗಳು ಟಿಕೆಟ್ ನೀಡಲು ಮುಂದಾಗಿವೆ. ಆದರೆ ಇನ್ನೂ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸೋನು ಸೂದ್ ಅವರು ಮಾಡಿದ್ದ ಸೇವೆ, ಸಾಮಾಜಿಕ ಕಾರ್ಯಗಳಿಗೆ ದೇಶಾದ್ಯಂತದ ಜನಸಾಮಾನ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.
ಸೋನು ಸೂದ್ ಅವರ ಕೆಲಸಗಳನ್ನು ರಾಜಕಾರಣಿಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಗೌರವಿಸಿದ್ದವು. ಈ ಕುರಿತು ಯಾವಾಗಲೂ ಮಾತನಾಡುತ್ತಿದ್ದ ಅವರು, ತಮ್ಮ ಸಾಮಾಜಿಕ ಕಾರ್ಯಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು.
ಇತ್ತೀಚೆಗಷ್ಟೆ ಸೋನು ಸೂದ್ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದರು.
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದ ನಟ ಸೋನು ಸೂದ್ ಅವರನ್ನು, ಶಾಲಾ ವಿದ್ಯಾರ್ಥಿಗಳ ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿದ್ದರು.
ಕೇಜ್ರಿವಾಲ್ ಅವರೊಂದಿಗಿನ ಭೇಟಿಯು ಬಹುಶಃ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ರಾಜಕೀಯ ಪಾದಾರ್ಪಣೆಯ ವದಂತಿಗಳನ್ನು ಹುಟ್ಟುಹಾಕಿತ್ತು.
‘ರಾಜಕೀಯದ ಬಗ್ಗೆ ಚರ್ಚಿಸಲಾಗಿಲ್ಲ. ಸದ್ಯಕ್ಕೆ ನಾನು ಯಾವುದೇ ರಾಜಕೀಯವನ್ನು ಚರ್ಚಿಸಿಲ್ಲ’ ಎಂದು ಸೋನು ಸೂದ್ ಆ ಸಮಯದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ 48 ವರ್ಷದ ನಟನ ಜನೋಪಕಾರವು ಅವರಿಗೆ ‘ವಲಸಿಗರ ಉದ್ದಾರಕ’ (ಮೆಸ್ಸಿಹ್ ಆಫ್ ಮೈಗ್ರೇಂಟ್ಸ್ಸ್) ಎಂಬ ಬಿರುದ್ದನ್ನು ಕೊಟ್ಟಿತ್ತು.
ಲಾಕ್‌ಡೌನ್ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ ಹಾಗೂ ಅಸಹಾಯಕರಾಗಿರುವ ನೂರಾರು ವಲಸಿಗರನ್ನು ಅವರ ಸ್ವಂತ ರಾಜ್ಯಕ್ಕೆ ಕರೆದೊಯ್ಯಲು ಸ್ವತಃ ಸೋನು ಸೂದ್ ಅವರೆ ಬಸ್, ರೈಲು ಮತ್ತು ವಿಮಾನಗಳ ವ್ಯವಸ್ಥೆ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಎರಡನೇ ಅಲೆಯ ಸಮಯದಲ್ಲಿ, ಅವರು ಕೋವಿಡ್ ರೋಗಿಗಳಿಗೆ ಆಕ್ಸಿಜೆನ್ ಸಿಲೆಂಡರ್‌ಗಳನ್ನು ಒದಗಿಸಿದ್ದರು. ಒಟ್ಟಾರೆಯಾಗಿ ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಸೋನು ಸೂದ್ ಮಾಡಿ ಜನಮನ್ನಣೆ ಗಳಿಸಿದ್ದರು.
ಕಳೆದ ಸೆಪ್ಟಂಬರ್ ತಿಂಗಳನಲ್ಲಿ ಮುಂಬೈನಲ್ಲಿರುವ ಸೂನು ಸೂದ್ ಅವರ ನಿವಾಸ ಹಾಗೂ ಲಕ್ನೋದಲ್ಲಿನ ಸೋನು ಸೂದ್ ಅವರ ಹಲವು ಸಂಸ್ಥೆಗಳ ಮೇಲೆ ಐಟಿ ಕಾರ್ಯಾಚರಣೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂನು ಸೂದ್, “ನೀವು ಯಾವಾಗಲೂ ನಿಮ್ಮ ಕಡೆಯ ಕತೆ ಹೇಳಬೇಕಾಗಿಲ್ಲ. ಅದಕ್ಕೊಂದು ಸಮಯ ಬರುತ್ತದೆ. ನನ್ನ ಫೌಂಡೇಷನ್‌ನ ಪ್ರತಿ ರೂಪಾಯಿಯು ಅಮೂಲ್ಯವಾದ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಲು ತನ್ನ ಸರದಿಗಾಗಿ ಕಾಯುತ್ತಿದೆ. ಕಾಲವೇ ಉತ್ತರಿಸುತ್ತದೆ” ಎಂದಿದ್ದರು.
‘ನಾನು 2 ಬಾರಿ ರಾಜ್ಯಸಭಾ ಸ್ಥಾನ ತಿರಸ್ಕರಿಸಿದ್ದೇನೆ, ರಾಜಕೀಯಕ್ಕೆ ಸೇರಲು ಮಾನಸಿಕವಾಗಿ ಸಿದ್ಧವಾಗಿಲ್ಲ ಎಂದು ಎನ್‌ಡಿಟಿವಿ ನಡೆಸಿದ ಸಂದರ್ಭದಲ್ಲಿ ಅವರು ತಿಳಿಸಿದ್ದರು.
ಈಗ ಅವರ ಸಹೋದರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದನ್ನು ರಾಜಕೀಯ ಪಕ್ಷಗಳು ಮತ್ತು ಜನಸಾಮಾನ್ಯರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: ’ನಾನು 2 ಬಾರಿ ರಾಜ್ಯಸಭಾ ಸ್ಥಾನ ತಿರಸ್ಕರಿಸಿದ್ದೇನೆ’- ನಟ ಸೋನು ಸೂದ್


