(ಇದು ಹೊಸ ಬರಹದಲ್ಲಿದೆ, ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)
ನಿಜದ ಪ್ರಜಾಪ್ರಬುತ್ವ ಎಂಬುದು ನಿದಾನ ಪ್ರಕ್ರಿಯೆ. ಅದು ಎಡವುತ್ತದೆ, ತೆವಳುತ್ತದೆ, ಕುಂಟುತ್ತದೆ. ನೇರವಾಗಿ ಸಾಗುವುದು ಪ್ರಜಾಪ್ರಬುತ್ವ ಎನಿಸಿಕೊಳ್ಳುವುದಿಲ್ಲ.
ಪ್ರಜಾಪ್ರಬುತ್ವ ಸಮಾಜದಲ್ಲಿ (ಅದು ತನ್ನ ಮೌಲ್ಯ ಕಳೆದುಕೊಂಡಿದ್ದರೂ ಸಹ) ಒಂದು ಹೋರಾಟ ಮತ್ತೊಂದು ಹೋರಾಟಕ್ಕೆ ಇದು ಮಗದೊಂದಕ್ಕೆ ಸ್ಪೂರ್ತಿಯಾಗುತ್ತಾ ಹೋಗುತ್ತದೆ. ಇದು ಪ್ರಜಾಪ್ರಬುತ್ವದ ಅಡಿಪಾಯವನ್ನು ಶಿಥಿಲಗೊಳಿಸದಂತೆ ಕಾಪಾಡುತ್ತದೆ.
ಇತ್ತೀಚಿನ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಕೃಶಿ ಬಿಕ್ಕಟ್ಟಿಗೆ ಕಾರಣವಾದ ರಾಜ್ಯ ಸರಕಾರದ ನೀತಿಗಳ ವಿರುದ್ದ ರೂಪುಗೊಂಡ aikss (all india kisan sangharsh samiti) ಸಂಘಟನೆ.
ಮಾರ್ಚ್ 2018ರಲ್ಲಿ ಭೂರಹಿತ ಕೂಲಿ ಕಾರ್ಮಿಕರ ಹೋರಾಟ ಸಂಘಟಿಸಿದ್ದ aikssನ ಸಾವಿರಾರು ಕೂಲಿ ಕಾರ್ಮಿಕರು ನಾಸಿಕ್ ನಿಂದ ಮುಂಬೈವರೆಗಿನ 750 ಕಿ. ಮೀ. ನ ಆ ಆಭೂತಪೂರ್ವ ಕಾಲ್ನಡಿಗೆ ಹೊಸ ಇತಿಹಾಸವನ್ನೇ ಬರೆಯಿತು. ‘ಜನರಿಂದ ಜನರಿಗಾಗಿ’ ರೂಪುಗೊಂಡಿದ್ದ ಆ ಹೋರಾಟ ಫ್ಯಾಸಿಸ್ಟ್ ಕಾಲದಲ್ಲಿಯೂ ಸಹ ನೂರಾರು ನದಿಗಳು ಸೇರಿಕೊಳ್ಳುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿತು.

ಇದರಿಂದಾಗಿ ಸ್ಪೂರ್ತಿ ಪಡೆದ ದೆಹಲಿ ರೈತ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಮುಂದಿನ ರಚನಾತ್ಮಕ ಸಂಘಟನೆಗೆ ಚಿಮ್ಮು ಹಲಗೆಯಾಗಿದೆ.
ಪ್ರಜಾಪ್ರಬುತ್ವದಲ್ಲಿ ‘ಹೋರಾಟ ಮತ್ತು ಸಂಘಟನೆ’ ಬಿತ್ತಿದ ಬೀಜಗಳನ್ನು ರಚನಾತ್ಮಕ ಕಾರ್ಯಯೋಜನೆಗಳು ಗಿಡವಾಗಿ ಬೆಳೆಸುತ್ತವೆ. ಅದು ಕೊಂಬೆಗಳಾಗಿ ಟಿಸಿಲೊಡೆಯುತ್ತದೆ. ಇದು ಪ್ರಜಾಪ್ರಬುತ್ವದ ಆತ್ಮದಂತೆ.
ಪ್ರತಿಕ್ರಿಯೆ ಮತ್ತು ಕ್ರಿಯಾತ್ಮಕ ಎರಡೂ ಪೂರಕವಾಗಿ ಸಂಘಟಿತವಾಗುವುದರಿಂದಲೇ ಪ್ರಜಾಪ್ರಬುತ್ವವು ಉಸಿರಾಡುತ್ತದೆ.
ಈ ಪ್ರಕ್ರಿಯೆ ಎಶ್ಚೇ ಹಿನ್ನಡೆ ಅನುಬವಿಸಿದರೂ ಸಹ ಇವೆರಡರ ಕಾರಣದಿಂದ ಕನಿಶ್ಟ ಅಬಿವ್ಯಕ್ತಿ ಸ್ವಾತಂತ್ರ್ಯವಂತೂ ಖಾತರಿಯಾಗಿರುತ್ತದೆ. ಇಂದು ಬೀದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವಶ್ಟು ಸ್ವಾತಂತ್ರವಿದೆ ಎಂದರೆ ಅದಕ್ಕೆ ಈ ಹೋರಾಟಗಳು ಕಾರಣ. ಇದರ ಮೇಲೆ ಮುಂದಿನ ಬವಿಶ್ಯವನ್ನು ಕಟ್ಟಬೇಕಿರುವುದು ಪ್ರಜ್ಞಾವಂತರ ಜವಬ್ದಾರಿ.
ಪ್ರಜಾಪ್ರಬುತ್ವದ ಈ ಆಯಾಮಗಳು, ಕೈ ದೀವಿಗೆಗಳು ಮತ್ತು ಆದಾರಸ್ತಂಬಗಳು ಒಂದೆಡೆಯಾದರೆ ‘ಚುನಾವಣಾ ಪ್ರಜಾಪ್ರಬುತ್ವ’ ಮತ್ತೊಂದು ಮಗ್ಗಲು. ಅದಿಕಾರ ರಾಜಕಾರಣ ಮಹತ್ವದ ಕಾರಣಕ್ಕೆ ಇದರ ಗೆಲುವು ಸೋಲುಗಳು ಮುಖ್ಯವಾಗುತ್ತದೆ.
ಆದರೆ ಬಿಜೆಪಿಯಂತಹ ಸರ್ವಾದಿಕಾರಿ ಪಕ್ಷವು ಅದಿಕಾರದ ಹಿಂದೆ ಬಿದ್ದಾಗ ಮಿಕ್ಕಿದೆಲ್ಲವನ್ನು ಬಿಟ್ಟು ಕೇವಲ ಚುನಾವಣಾ ರಾಜಕಾರಣವನ್ನು ಪ್ರಜಾಪ್ರಬುತ್ವದ ಮೌಲ್ಯಮಾಪನವಾಗಿಸಿಬಿಡುತ್ತದೆ. ಇದೊಂದು ಬೋನು.
680 ರೈತರು ಪ್ರಾಣಬಿಟ್ಟರೂ ತಲೆ ಕೆಡಿಸಿಕೊಳ್ಳದ ಸರ್ವಾದಿಕಾರಿಗಳು ಚುನಾವಣೆಗೋಸ್ಕರ ನಿರ್ದಾರ ತೆಗೆದುಕೊಳ್ಳುವಂತಹ ಒತ್ತಡಕ್ಕೆ ಒಳಗಾಗುತ್ತಾರೆ.
ಆದರೆ ನಿರಂತರ ಹೋರಾಟಗಳು ಇಂತಹ ನಿರಂಕುಶ ಪ್ರಬುತ್ವವನ್ನು ಬಗ್ಗಿಸಿ ಚುನಾವಣಾ ಗಿಮಿಕ್ ಮಾಡುವ ಅನಿವಾರ್ಯತೆಯನ್ನು ಸೃಶ್ಟಿ ಮಾಡುತ್ತವೆ ಎಂಬುದೇ ಪ್ರಜಾಪ್ರಬುತ್ವದ ಹಿರಿಮೆ. ಇಲ್ಲಿ ದೆಹಲಿ ರೈತ ಹೋರಾಟದ ಗೆಲುವಿದೆ.
ಆದರೆ ಭಾರತದಂತಹ ದುರ್ಬಲ ಪ್ರಜಾಪ್ರಬುತ್ವದಲ್ಲಿ ಮುನ್ನಡೆಯು ಈ ರೀತಿಯ ಪ್ಯಾಕೇಜ್ ಗಳ ರೀತಿಯಿರುತ್ತದೆ.
ಪ್ರಜಾಪ್ರಬುತ್ವವು ಡೈನಮಿಕ್ ಆಗಿರುವಂತೆ ಎಚ್ಚರ ವಹಿಸುವುದು ನಮ್ಮ ಹೊಣೆಗಾರಿಕೆ. ಅದು ಎರಡು ಹೆಜ್ಜೆ ಮುಂದೆ, ಮೂರು ಹೆಜ್ಜೆ ಹಿಂದೆ ರೀತಿ ಆಗಿದ್ದರೂ ಪರವಾಗಿಲ್ಲ, ಚಲನಶೀಲವಾಗಿರಬೇಕು. ಇದನ್ನು ದೆಹಲಿ ರೈತ ಹೋರಾಟ ಸಾದಿಸಿದೆ
ನಾನು ಎಡ ಚಳುವಳಿಯಲ್ಲಿದ್ದಾಗ ನಾವೆಲ್ಲ ಹಾಡುತ್ತಿದ್ದ ಸಾಲುಗಳು ಈಗಲೂ ಬೀಜ ವಾಕ್ಯಗಳು
“ಎಲ್ಲಿಂದ ಬಂದಿರಿ ಎಂದು ಕೇಳುತೀರಿ ನೀವು
ಜನರ ನಡುವಿಂದ ಬಂದೆವು ಎಂದು ಹೇಳುತೇವೆ ನಾವು
ಎಲ್ಲಿಗೆ ಹೋಗುವಿರಿ ಎಂದು ಕೇಳುವಿರಿ ನೀವು
ಮರಳಿ ಜನರ ಬಳಿಗೆ ಎಂದು ಹೇಳುತೇವೆ ನಾವು”
- ಶ್ರೀಪಾದ್ ಭಟ್
ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ


