2022ರಲ್ಲಿ ಬರಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಜೊತೆಗೆ ಸ್ಥಾನಗಳನ್ನು ಹಂಚಿಕೊಳ್ಳುವ ಕುರಿತು ಚರ್ಚೆ ಆರಂಭಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಲಕ್ನೋದಲ್ಲಿ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ನಂತರ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಈ ಘೋಷಣೆ ಮಾಡಿದ್ದಾರೆ. ಈ ಹಿಂದೆಯೂ ಇಬ್ಬರ ನಡುವೆ ಸಭೆ ನಡೆದಿದ್ದರೂ ಮೈತ್ರಿ ಸಾಧ್ಯತೆಯ ಮಾತು ಸಾಧ್ಯವಾಗಿರಲಿಲ್ಲ.
“ನಮ್ಮ ಮಾತುಕತೆಗಳು ಆರಂಭವಾಗಿವೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಸೋಲಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಯೋಗಿ ಆದಿತ್ಯನಾಥ ಅವರ ದುರಾಡಳಿತಕ್ಕೆ ಒಳಗಾಗಿರುವ ಉತ್ತರ ಪ್ರದೇಶವನ್ನು ಕಾಪಾಡಬೇಕಾಗಿದೆ. ಅಖಿಲೇಶ್ ಯಾದವ್ ಅವರು ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಭೆ ನಡೆದಿದೆ” ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಆಮ್‌ಆದ್ಮಿ ಪಾರ್ಟಿಯ ಉತ್ತರ ಪ್ರದೇಶದ ಉಸ್ತುವಾರಿಯಾಗಿರುವ ಸಿಂಗ್, “ಬಿಜೆಪಿಯನ್ನು ಸೋಲಿಸುವುದೇ ವಿರೋಧ ಪಕ್ಷಗಳ ಮೊದಲ ಗುರಿಯಾಗಿರಬೇಕು” ಎಂದು ಹೇಳಿದ್ದಾರೆ.
ಆರ್‌ಎಲ್‌ಡಿ ಮತ್ತು ಸಮಾಜವಾದಿ ಪಕ್ಷ ತಮ್ಮ ಸ್ಥಾನಗಳನ್ನು ಹಂಚಿಕೊಳ್ಳುವ ಕೊನೆಯ ಹಂತದ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲಿ ಎಎಪಿಯಿಂದ ಈ ಬೆಳವಣಿಗೆ ಕಂಡುಬಂದಿದೆ.
ಇದನ್ನೂ ಓದಿದೆ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲು ಹೈಕೋರ್ಟ್ ಸೂಚನೆ
ಸೋಮವಾರ ಸಿಂಗ್ ಅವರು ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ 82ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಭೇಟಿ ಮಾಡಿದ್ದರು. ಎಎಪಿ ನಾಯಕ ಮತ್ತು ಅಖಿಲೇಶ್ ನಡುವಿನ ಕೊನೆಯ ಸಾರ್ವಜನಿಕ ಸಭೆ ಜುಲೈನಲ್ಲಿ ನಡೆದಿತ್ತು.
2017ರ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷವಾಗಿದ್ದ ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಜೊತೆಗೆ ಎಸ್‌ಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಎಸ್‌ಬಿಎಸ್‌ಪಿ ಜೊತೆಗೆ, ಭಾಗಿದರಿ ಸಂಕಲ್ಪ್ ಮೋರ್ಚಾ, ರಾಜ್‌ಭರ್ ನೇತೃತ್ವದ ಸಣ್ಣ ಪಕ್ಷಗಳ ಗುಂಪು, ಎಸ್‌ಪಿ ನೇತೃತ್ವದ ಮೈತ್ರಿಕೂಟದ ಭಾಗವಾಗುತ್ತಿವೆ.
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನವೆಂಬರ್ 28ರಂದು ಲಕ್ನೋದಲ್ಲಿ ರೋಜ್ಗಾರ್ ಗ್ಯಾರಂಟಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು, ಅದೇ ದಿನ ನಡೆಯಲಿರುವ ಯುಪಿ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದಾಗಿ ಸ್ಥಳೀಯ ಆಡಳಿತವು ರ್‍ಯಾಲಿಯನ್ನು ಮುಂದೂಡಿದೆ. ಕಳೆದ ತಿಂಗಳು ಕೇಜ್ರಿವಾಲ್ ಅವರು ಅಯೋಧ್ಯೆಗೆ ಭೇಟಿ ನೀಡಿ, ರಾಮ್ ಲಲ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಎಎಪಿ ಕಳೆದ ಎರಡು ತಿಂಗಳುಗಳಲ್ಲಿ ನೋಯ್ಡಾ, ಆಗ್ರಾ, ಅಯೋಧ್ಯೆ ಮತ್ತು ಲಕ್ನೋ ಸೇರಿದಂತೆ ಯುಪಿಯ ಹಲವು ಪಟ್ಟಣಗಳಲ್ಲಿ ಸರಣಿ ತಿರಂಗ ಯಾತ್ರೆಗಳನ್ನು ಕೈಗೊಂಡಿದೆ. ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು, 300 ಯೂನಿಟ್‌ವರೆಗೆ ಗೃಹ ಬಳಕೆ ವಿದ್ಯುತ್‌ಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿರಿ: ಹಳೆಯ ಪ್ರಕರಣ ಕೆದಕಿದ ಯುಪಿ ಪೊಲೀಸರು: ಸಿಎಎ ವಿರೋಧಿ ನಾಲ್ವರು ಪ್ರತಿಭಟನಾಕಾರರ ಬಂಧನ; ಜಾಮೀನು



ಆಶಾದಾಯಕ ಬೆಳವಣಿಗೆ, ಮನುವಾದಿಗಳನ್ನು ಸೋಲಿಸಲು ಎಲ್ಲಾ ವಿರೋದಪಕ್ಶಗಳೂ ಒಂದಾಗಬೇಕು.