ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕಿ ಮತ್ತು 10 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅವರದೆ ಮನೆಯಲ್ಲಿ ಹತ್ಯೆಗೀಡಾಗಿರುವ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದಾರೆ.
16 ವರ್ಷದ ಬಾಲಕಿಯನ್ನು ಕೊಲೆ ಮಾಡುವ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದಿರುವ ಸಂಬಂಧಿಕರು, ಪಕ್ಕದ ಮನೆಯ “ಮೇಲ್ಜಾತಿ” ಎಂದು ಕರೆಯಲ್ಪಡುವ ಕುಟುಂಬದವರ ಮೇಲೆ ಕೊಲೆ ಆರೋಪ ಮಾಡಿದ್ದಾರೆ.
ಪೊಲೀಸರು 11 ಮಂದಿಯ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಹಲವು ಪ್ರಕರಣ ಎಫ್‌ಐಆರ್ ದಾಖಲಿಸಿದ್ದಾರೆ. ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಯಾಗರಾಜ್ ಪೊಲೀಸ್ ಮುಖ್ಯಸ್ಥ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಂಸಲೇಖ ಹೇಳಿಕೆ ಪರವಾಗಿ ಬೆಂಗಳೂರಿನಲ್ಲಿ ಬೃಹತ್ ‘ಜನದನಿ’ ರ್‍ಯಾಲಿ
50 ವರ್ಷದ ವ್ಯಕ್ತಿ, 45 ವರ್ಷದ ಪತ್ನಿ ಮತ್ತು ಅವರ ಮಕ್ಕಳಾದ 16 ವರ್ಷದ ಬಾಲಕಿ ಮತ್ತು 10 ವರ್ಷದ ಬಾಲಕರ ಶವಗಳು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿರಬಹುದು. ನಾಲ್ವರ ತಲೆಗೆ ಕೊಡಲಿಯಿಂದ ಹೊಡೆದಿರುವಂತೆ ತೋರುತ್ತಿದೆ. ದೇಹಗಳ ಮೇಲೆ ಗಂಭೀರವಾದ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. 16 ವರ್ಷದ ಬಾಲಕಿಯ ಶವ ಮನೆಯೊಳಗಿನ ಕೊಠಡಿಯಲ್ಲಿ ಪತ್ತೆಯಾಗಿದ್ದರೆ, ಉಳಿದ ಮೂರು ಶವಗಳು ಒಟ್ಟಿಗೆ ಅಂಗಳದಲ್ಲಿ ಪತ್ತೆಯಾಗಿವೆ.
ಮೃತ ಸಂತ್ರಸ್ತ ಕುಟುಂಬ 2019 ರಿಂದ “ಮೇಲ್ಜಾತಿ” ಕುಟುಂಬದೊಂದಿಗೆ ಭೂ ವಿವಾದ ಹೊಂದಿದ್ದರು. ಇವರ ಮೇಲೆ ಸೆಪ್ಟೆಂಬರ್‌ನಲ್ಲಿ ಮೇಲ್ಜಾತಿ ಕುಟುಂಬ ಹಲ್ಲೆ ನಡೆಸಿತ್ತು. ಆದರೂ ಪೊಲೀಸರು ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದರು ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
“ಪೊಲೀಸರು ಮೃತ ಸಂತ್ರಸ್ತರನ್ನು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಸುಶೀಲ್ ಕುಮಾರ್ (ಪೊಲೀಸ್ ಕಾನ್‌ಸ್ಟೆಬಲ್) ನಮ್ಮ ಬಳಿಗೆ ಬಂದು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಪೊಲೀಸರು ಆರೋಪಿಗಳ ಮನೆಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಸ್ಥಳೀಯ ಇನ್ಸ್‌ಪೆಕ್ಟರ್ ಕೂಡ ನಮಗೆ ರಾಜಿ ಮಾಡಿಕೊಳ್ಳಲು ಹೇಳಿದರು. ಸೆಪ್ಟೆಂಬರ್ 21 ರಂದು ಮೃತ ಕುಟುಂಬದವರನ್ನು ಥಳಿಸಲಾಯಿತು. ಆದರೆ ಒಂದು ವಾರದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಹಲ್ಲೆಗೊಳಗಾದ ಕುಟುಂಬದವರ ವಿರುದ್ಧವೂ ಕೌಂಟರ್ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಮೃತ ಕುಟುಂಬದ ಸಂಬಂಧಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
2019 ಮತ್ತು 2021ರಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಪ್ರಗತಿಯಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಯಾಗರಾಜ್ ಪೊಲೀಸ್ ಮುಖ್ಯಸ್ಥ ಸರ್ವಶ್ರೇಷ್ಠ ತ್ರಿಪಾಠಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಧ್ಯಾಹ್ನ 3 ಗಂಟೆಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದು, ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.


