ಕರ್ನಾಟಕದ ಹಲವಾರು ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಆದರೆ ಮತ್ತಷ್ಟು ಜನರು ಲಸಿಕೆಯ ಅಡ್ಡಪರಿಣಾಮದ ಭಯದಿಂದ, ಇತರೆ ಗುಮಾನಿಗಳಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಆರೋಗ್ಯ ಕಾರ್ಯಕರ್ತರು ಮನವೊಲಿಸಿದರೂ ಸಹ ಕೆಲವರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಲಸಿಕೆಯಿಂದ ಅಡ್ಡಪರಿಣಾಮವಿಲ್ಲ ಎಂಬ ಗ್ಯಾರಂಟಿ ಕೊಡ್ತೀರಾ? ಎಂದು ಪ್ರಶ್ನಿಸಿ ಜಿಲ್ಲಾಧಿಕಾರಿಯಿಂದ ಮುಚ್ಚಳಿಕೆ ಬರೆಸಿಕೊಂಡು ಲಸಿಕೆ ಪಡೆದ ಪ್ರಸಂಗ ಹುಬ್ಬಳ್ಳಿಯಲ್ಲಿ ಜರುಗಿದೆ.
ಲಸಿಕೆ ಪ್ರಮಾಣ ಹೆಚ್ಚಿಸಲು ಜನಜಾಗೃತಿ ಮೂಡಿಸುವ ಸಲುವಾಗಿ ಹುಬ್ಬಳಿಯ ಮಹಾನಗರ ಪಾಲಿಕೆಯ ಆವರಣದಲ್ಲಿ ಸಾರ್ವಜನಿಕರು ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಯಲ್ಲಾಪುರ ಓಣಿಯ ನಿವಾಸಿಯಾದ ಆನಂದ ಕೊನ್ನೂರುಕರ ಎಂಬುವವರು ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ ಎಂಬುದಕ್ಕೆ ಯಾರು ಗ್ಯಾರಂಟಿ? ಒಂದು ವೇಳೆ ನನಗೆ ಏನಾದರೂ ತೊಂದರೆಯಾದರೆ ನನ್ನ ಕುಟುಂಬವನ್ನು ಯಾರು ನೋಡುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನನ್ನ ಮನೆಯಲ್ಲಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಆದರೆ ಏನಾದರೂ ಹೆಚ್ಚು ಕಡಿಮೆ ಆಗಬಹುದೆಂಬ ಭಯಕ್ಕೆ ನಾನು ಲಸಿಕೆ ಪಡೆದಿಲ್ಲ. ನನ್ನ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಾದರೆ ನೀವು ಜವಾಬ್ದಾರಿ ತೆಗೆದುಕೊಳ್ಳುವಿರಾ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲರವರು ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ್‌ರವರು ಲಸಿಕೆಯಿಂದ ಅಡ್ಡಪರಿಣಾಮ ಅಥವಾ ದುಷ್ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಲಿಖಿತವಾಗಿ ಬರೆದು ತಮ್ಮ ಸಹಿಯೊಂದಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಮತ್ತು ಉಪ ವಿಭಾಗಾಧಿಕಾರಿಯವರ ಸಹಿ ಹಾಕಿಸಿ ಆನಂದ ಕೊನ್ನೂರುಕರವರಿಗೆ ನೀಡಲಾಯಿತು. ನಂತರ ಅವರು ಕೋವಾಕ್ಸಿನ್ ಲಸಿಕೆ ಪಡೆದಿದ್ದಾರೆ.
ಅವರ ಈ ಲಸಿಕೆ ಪಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲಾಡಳಿತವು ಈ ಲಿಖಿತ ಭರವಸೆಯ ಮೂಲಕ ಹೆಚ್ಚಿನ ಜನರು ಲಸಿಕೆ ಪಡೆಯಲು ಮುಂದೆ ಬರಬಹುದು ಎಂದು ಅಂದಾಜಿಸಿದೆ. ಸರ್ಕಾರವು ಜನರಿಗೆ ಲಸಿಕೆಯ ಕುರಿತು ಇನ್ನಷ್ಟು ಧೈರ್ಯ ನೀಡಬೇಕಿದೆ. ಜೊತೆಗೆ ಈಗಲೇ ಮತ್ತೊಂದು ಕೋವಿಡ್ ಅಲೆ ಬಾರದಂತೆ, ಒಂದು ವೇಳೆ ಬಂದರೂ ಅದನ್ನು ಸಮರ್ಪಕವಾಗಿ, ವೈಜ್ಞಾನಿಕವಾಗಿ, ಹೆಚ್ಚಿನ ಸಾವು ನೋವುಗಳಿಗೆ ಆಸ್ಪದ ರೀತಿ ಎದುರಿಸಲು ಸಿದ್ದತೆ ನಡೆಸಬೇಕಿದೆ.
ಇದನ್ನೂ ಓದಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ: ಕೃಷಿ ಕಾನೂನು ರದ್ದತಿ ಮಸೂದೆ ಮಂಡನೆ ನಿರೀಕ್ಷೆ


