Homeಚಳವಳಿಶೂದ್ರ ಮಂಡಲ ಮಧ್ಯದೊಳಗೆ..!

ಶೂದ್ರ ಮಂಡಲ ಮಧ್ಯದೊಳಗೆ..!

- Advertisement -
- Advertisement -

ಭಾರತದ ಆಧುನಿಕ ಇತಿಹಾಸವನ್ನು ಪ್ರಭಾವಿಸಿದ ನಾಲ್ವರು ಮಹಾಪುರುಷರೆಂದರೆ, ಜೋಗಿಂದರ್‌ನಾಥ್ ಮಂಡಲ್, ಬಿಂಧೇಶ್ವರಿ ಪ್ರಸಾದ್ ಮಂಡಲ್, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವಿ.ಪಿ. ಸಿಂಗ್. ಇವರಲ್ಲಿ ಜೋಗಿಂದರ್‌ನಾಥ್ ಮಂಡಲ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಸಭೆಗೆ ಪ್ರವೇಶಿಸಲು ನೆರವಾದವರು. ಡಾ. ಬಿ.ಆರ್. ಅಂಬೇಡ್ಕರ್ ನಮ್ಮ ದೇಶದ ಸಂವಿಧಾನವನ್ನು ರಚಿಸಿದವರು. ಮನುಷ್ಯರನ್ನು, ಮನುಷ್ಯರನ್ನಾಗಿ ಕಾಣುವಂತೆ ಮಾಡಿದ ಕಾನೂನು, ಕಾಂ, ಮೀಸಲಾತಿ ಅಸ್ತ್ರವನ್ನು ಕೊಟ್ಟವರು.

ಶೂದ್ರ, ಅತಿಶೂದ್ರ, ಆದಿವಾಸಿಗಳು ಮತ್ತು ಮುಸಲ್ಮಾನರನ್ನು ಒಳಗೊಂಡಂತೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ‘ಮೀಸಲು ಫಲ’ ಕೊಡಲು ವರದಿ ಕೊಟ್ಟವರು ಬಿಂಧೇಶ್ವರಿ ಪ್ರಸಾದ್ ಮಂಡಲ್. ಬಿಂಧೇಶ್ವರಿ ಪ್ರಸಾದ್ ಮಂಡಲ್ ಅವರ ವರದಿಯನ್ನು ಜಾರಿಗೆ ತಂದವರು ಮಾಜಿ ಪ್ರಧಾನಿ ವಿ.ಪಿ. ಸಿಂಗ್.

2015ರಲ್ಲಿ ಪ್ರಥಮ ಬಾರಿಗೆ ‘ಸಂವಿಧಾನದ ದಿನ’ವನ್ನು ಆಚರಿಸಲಾಯಿತು. 1949ರ ನವೆಂಬರ್ 26ರಂದು ಸಂವಿಧಾನ ಅಂತಿಮ ಕರಡನ್ನು ಸ್ವೀಕರಿಸಿದ ದಿನ ಅದು. ಅಂದಿನ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾಡಿದ ಭಾಷಣ ಐತಿಹಾಸಿಕವಾಗಿತ್ತು. ನಮ್ಮ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ಅವರ ಅವಿರತ ಹೋರಾಟ ಮತ್ತು ಶ್ರಮದ ಫಲ. ಇವರು ನಮ್ಮ ಸಂವಿಧಾನದ ಕರಡು ಸಭೆಯ ಅಧ್ಯಕ್ಷರಾಗಿದ್ದರೆಂಬುದು ಎಲ್ಲರೂ ಅರಿತಿರುವ ಸತ್ಯ. ಆದರೆ ಕೆಲವರಿಗೆ ಗೊತ್ತಿಲ್ಲದ ಸತ್ಯ ಒಂದಿದೆ. ಸಂವಿಧಾನ ಕರಡು ಸಭೆಗೆ ಪ್ರವೇಶ ಪಡೆಯುವುದು ಅಂಬೇಡ್ಕರ್ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ ಎಂಬುದು.

ವರ್ಣಾಶ್ರಮ ಪ್ರತಿಪಾದನೆಯ ನಮ್ಮ ದೇಶದಲ್ಲಿ ಅತ್ಯಂತ ಪ್ರತಿಭಾವಂತ, ಗುಣಸಂಪನ್ನರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೂಡ ಓರ್ವ ಜಾತಿಯ ಮುಖಂಡನಂತೆ ಕಂಡಿದ್ದು ನಿಜಕ್ಕೂ ದೇಶದ ದೌರ್ಭಾಗ್ಯವೇ ಸರಿ. ಇವರಷ್ಟು ವಿದ್ಯಾರ್ಜನೆ ಮಾಡಿದವರು ಅಂದಿಗೆ ಯಾರೂ ಇರಲಿಲ್ಲ. ಆದರೂ ಸಂವಿಧಾನ ರಚನೆಗೆ ಪೂರಕವಾದ ಪ್ರಾಂತೀಯ ಸಭೆಗೆ  ಆಯ್ಕೆಯಾಗುವುದು ಕೆಲವರಿಗೆ ಬೇಕಿರಲಿಲ್ಲ. ಈ ಕಾರಣಕ್ಕೆ ಅತ್ಯಂತ ದ್ವೇಷಿಸಲ್ಪಡುವ ವ್ಯಕ್ತಿ ಇವರಾಗಿದ್ದರು. ‘ದೇಶದ್ರೋಹಿ’ ಎಂಬಂತೆ ಬಿಂಬಿಸಲಾಗಿತ್ತು. ಈ ದೇಶದ ‘ಪರಮವೈರಿ’ ಎಂಬಂತೆ ಕಳಂಕ ಹಚ್ಟಿಟ್ಟಿದ್ದರು. ’ನಿಮ್ನ’ ವರ್ಗಗಳಿಗೆ ‘ಪ್ರತ್ಯೇಕ ಮತದಾನ’ ಪದ್ಧತಿಗೆ ಒತ್ತಾಯಿಸಿದ್ದೆ ಇಷ್ಟೆಲ್ಲಾ ‘ವಿಶೇಷಣ’ಗಳಿಗೆ ಅವರು ಒಳಗಾಗಿದ್ದಿದು. ಇದನ್ನು ಸ್ವತಃ ಅಂಬೇಡ್ಕರ್ ಅವರೇ ತಮ್ಮ ಭಾಷಣದಲ್ಲಿ ತೋಡಿಕೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ‘ಪ್ರತ್ಯೇಕ ಮತದಾನ’ ವಿರೋಧಿಸಿ ಉಪವಾಸ ಕೂತಿದ್ದರಿಂದ, ವಿಧಿಯಿಲ್ಲದೆ ‘ಪ್ರತ್ಯೇಕ ಮತದಾನ’ ಬೇಡಿಕೆ ಕೈಬಿಡಲಾಗಿತ್ತು.

ಇದೆಲ್ಲದರ ಪರಿಣಾಮವಾಗಿ ‘ಸೇಡು’ ತೀರಿಸಿಕೊಳ್ಳಲು ಮೇಲ್ವರ್ಗಗಳಿಗೊಂದು ಅವಕಾಶ ದೊರಕಿತ್ತು. ಆದು ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಲು ‘ಪ್ರಾಂತೀಯ ಸಭಾ’ ಚುನಾವಣೆಯನ್ನು ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ಆಗ ಪಕ್ಷಭೇದವಿಲ್ಲದೆ ‘ದುಷ್ಟಕೂಟ’ ರಚನೆಯಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ‘ಪ್ರಾಂತೀಯ ಸಭೆ’ಗೆ ಆಯ್ಕೆಯಾಗದಂತೆ ತಡೆಗಟ್ಟುವ ಒಂದಂಶದ ಕಾರ್ಯಕ್ರಮ ಸಿದ್ಧವಾಯಿತು. ಹೀಗಾಗಿ ಸಂವಿಧಾನ ರಚನಾ ಸಭೆಗೆ ಇವರು ಆಯ್ಕೆಯಾಗಲು ಸಾಧ್ಯವಾಗಲೇ ಇಲ್ಲ. ಅವರನ್ನು ಸೋಲಿಸಲಾಯಿತು.

ಆಗ ಬಂಗಾಳದ ಷೆಡ್ಯೂಲ್ ಕಾಸ್ಟ್ ಫೆಡರೇಷನ್ ಅಧ್ಯಕ್ಷರಾಗಿದ್ದ ಜೋಗಿಂದರ್‌ನಾಥ್ ಮಂಡಲ್ ಅವರು ಮುಸ್ಲಿಂ ಲೀಗ್ ಮತ್ತು ಆಂಗ್ಲೋ-ಇಂಡಿಯನ್ನರ ಬೆಂಬಲ ಪಡೆದು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಬೆಂಬಲಿಸಿದರು. ಇದರಿಂದಾಗಿ ಪೂರ್ವ ಬಂಗಾಳದ ಜೈಸೂರು-ಕುಲ್ನಾ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್‌ನಿಂದ ಆಯ್ಕೆಯಾಗಿದ್ದ ಅಭ್ಯರ್ಥಿಯ ರಾಜೀನಾಮೆಯಿಂದಾಗಿ, ಅಂಬೇಡ್ಕರ್ ಅವರು ‘ಅವಿರೋಧ ಆಯ್ಕೆ’ಯಾಗುವಂತೆ ನೋಡಿಕೊಳ್ಳಲಾಯಿತು.

ಮುಂದೆ ಜೈಸೂರು-ಕುಲ್ನಾ ಮತ ಕ್ಷೇತ್ರ ದೇಶ ವಿಭಜನೆಯಿಂದ ಪಾಕಿಸ್ತಾನದ ಪಾಲಾಗುತ್ತದೆ. ಆಗ ಅಂಬೇಡ್ಕರ್ ರಾಜೀನಾಮೆ ನೀಡಿ ‘ಲಂಡನ್’ಗೆ ತೆರಳುತ್ತಾರೆ. ಆದರೆ ಆ ಹೊತ್ತಿಗೆ ಸಂವಿಧಾನ ಕರಡು ಸಮಿತಿಗೆ ಅವರ ಅವರ ಅವಶ್ಯಕತೆಯ ಬಗ್ಗೆ ಎಲ್ಲರಿಗೂ ಮನವರಿಕೆಯಾಗಿರುತ್ತದೆ. ಬ್ರಿಟನ್ ಪ್ರಧಾನಿ ರಾಮ್ಸಿ ಮೆಕ್‌ಡೊನಾಲ್ಡ್ ಅವರಿಂದ ಮಹಾತ್ಮಾ ಗಾಂಧಿ ಮತ್ತು ನೆಹರು ಮೇಲೆ ಒತ್ತಡ ಕೂಡ ಬರುತ್ತದೆ. ಒತ್ತಡಕ್ಕೆ ಬಿದ್ದ ಕಾಂಗ್ರೆಸ್ ಪೂನಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಭ್ಯರ್ಥಿಯ ರಾಜೀನಾಮೆ ಪಡೆದು, ಅಂಬೇಡ್ಕರ್ ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿತು.

ದೇಶ ವಿಭಜನೆಯ ನಂತರ, ಜೋಗೀಂದ್ರನಾಥ್ ಮಂಡಲ್ ಪಾಕಿಸ್ತಾನದ ದಲಿತರ ಮತ್ತು ಹಿಂದುಳಿದವರ ಹಿತಾಸಕ್ತಿಯ ಪ್ರತಿನಿಧಿಯಾಗಿ ಅಲ್ಲಿಗೆ ವಲಸೆ ಹೋದರು. ವಿಭಜನೆಯಿಂದಾಗಿ ರಚನೆಯಗಿದ್ದ ಪಾಕಿಸ್ತಾನ ಸಂವಿಧಾನ ರಚನಾ ಸಭೆಯ ಸದಸ್ಯರಾದರು ಹಾಗೂ ಅಲ್ಲಿನ ಪ್ರಧಾನಿ ಲಿಯಖತ್ ಆಲಿಖಾನ್ ಅವರ ಸಂಪುಟದಲ್ಲಿ ಕಾನೂನು ಮತ್ತು ಕಾರ್ಮಿಕರ ಸಚಿವರಾದರು. ಅಲ್ಲಿಯೂ ಕೂಡ ದೀನ, ದಲಿತರ ಉದ್ಧಾರ ಸಾಧ್ಯವಾಗದೆಂದು ಭ್ರಮನಿರಸಗೊಂಡು 1950ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ನಮ್ಮ ದೇಶ ಕಂಡ ಮತ್ತೋರ್ವ ಪ್ರಮುಖ ನೇತಾರ ಬಿಂಧೇಶ್ವರಿ ಪ್ರಸಾದ್ ಮಂಡಲ್. ಇವರು ಬಿಹಾರದ ಮಾಧೇಪುರದ ಮುರ್ಡೊ ಎಂಬ ಹಳ್ಳಿಯಲ್ಲಿ 1918 ಆಗಸ್ಟ್ 25ರಂದು ಜನಿಸಿದರು. ‘ಸಾಮಾಜಿಕ ನ್ಯಾಯ’ ಚಳವಳಿಗೆ ‘ಸಾಂಕೇತಿಕ ಸ್ಥಾನಮನ’ ತಂದುಕೊಟ್ಟ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಅಲ್ಲದೆ ವಿವಿಧ ಹೆಸರುಗಳಲ್ಲಿ ಹರಿದು ಹಂಚಿಹೋಗಿರುವ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ‘ಸಾಮಾಜಿಕ ನ್ಯಾಯ’ಕ್ಕಾಗಿ ಹೋರಾಡಲು ಪ್ರೇರೇಪಿಸಿದರವರು ಇವರು.

ಮೇಲ್ವರ್ಗದ ಶಾಸಕರೊಬ್ಬರು ಬಿಹಾರ ವಿಧಾನಸಭೆಯಲ್ಲಿ ತಮ್ಮ ಸಹವರ್ತಿಗಳನ್ನು ಅವಮಾನಿಸಲು ‘ಗ್ವಾಲಾ’ ಎಂಬ ಪದ ಬಳಕೆ ಮಾಡಿದ್ದನ್ನು ಬಿ ಪಿ ಮಂಡಲ್ ಖಂಡಿಸಿದ್ದರು. ‘ಗ್ವಾಲಾ’ ಪದ ಅಸಂಸದೀಯವೆಂದು ಮೇಲ್ವರ್ಗದ ಶಾಸಕರಿಗೆ ಬಿಹಾರ ವಿಧಾನಸಭೆಯಿಂದ ನೋಟಿಸ್ ಕೊಡಿಸಿದ್ದರು. ಹೀಗೆ ಆತ್ಮಗೌರವ ಮತ್ತು ಬಲವಾದ ಸಾಕ್ಷಿಪ್ರಜ್ಞೆಯನ್ನು ಹೊಂದಿದ್ದವರವರು.

ಇವರು 1967ರಲ್ಲಿ ‘ಶೋಷಿತದಳ’ ಎಂಬ ಪಕ್ಷವನ್ನು ಕಟ್ಟಿದ್ದರು. 1968ರ ಫೆಬ್ರವರಿ 1ರಂದು ಬಿಹಾರದ 7ನೇ ಮುಖ್ಯಮಂತ್ರಿಯಾಗಿದ್ದರು. ಉತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯದ ಮೊದಲ ಶೂದ್ರವ್ಯಕ್ತಿ ಇವರಾಗಿದ್ದರು. ತಮ್ಮ ಸಂಪುಟದಲ್ಲಿ ದಲಿತ, ಹಿಂದುಳಿದ ವರ್ಗಗಳ ಶಾಸಕರಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟಿದ್ದರು. ಹೀಗೆ ’ಸಮಪಾಲು-ಸಮಬಾಳು’ ಕಲ್ಪನೆಯಡಿ ಸರ್ಕಾರವನ್ನು ಕೊಂಡೊಯ್ದಿದ್ದರಿಂದ ನಲವತ್ತ ಏಳೇ ದಿನಕ್ಕೆ ಬಿಂಧೇಶ್ವರಿ ಪ್ರಸಾದ್ ಮಂಡಲ್ ಸರ್ಕಾರ ಕುಸಿದು ಬಿತ್ತು. ಆಗ ಟಿ.ಎಲ್. ವೆಂಕಟರಾಮ ಅಯ್ಯರ್ ಅವರ ನೇತೃತ್ವದ ಹಿರಿಯ ಕಾಂಗ್ರೆಸ್ ಮುಖಂಡರ ಮತ್ತು ಮಂತ್ರಿಗಳ ಮೇಲಿನ ‘ಭ್ರಷ್ಟಾಚಾರ’ದ ಆರೋಪಗಳನ್ನು ತನಿಖೆ ಮಡಲು ಆಂಗ ರಚನೆಯಗಿತ್ತು. ಆ ಆಂಗವನ್ನು ವಿಸರ್ಜನೆ ಮಾಡಿದ್ದು ಬಿ.ಪಿ. ಮಂಡಲ್ ಅವರು ರಾಜೀನಾಮೆ ಕೊಡಲು ಕಾರಣವಾಗಿತ್ತು.

1968ರಲ್ಲಿ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ವಿಧಾನಸಭೆಗೆ ಬಂದು, 1974ರಲ್ಲಿ ಕಾಂಗ್ರೆಸ್ ಆಡಳಿತವನ್ನು ವಿರೋಧಿಸಿ ವಿಧಾನಸಭೆಗೆ ರಾಜೀನಾಮೆ ನೀಡಿದ್ದರು. 1977ರಲ್ಲಿ ಮತ್ತೆ ಮಧೇಪುರ ಲೋಕಸಭಾ ಕ್ಷೇತ್ರದಿಂದ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು. 1978 ಡಿಸೆಂಬರ್ 20ರಂದು ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲೀಕರಿಸಲು ಹಿಂದುಳಿದ ವರ್ಗಗಳ ಆಂಗದ ಅಧ್ಯಕ್ಷರನ್ನಾಗಿ ಬಿ ಪಿ ಮಂಡಲ್ ಅವರನ್ನು ನೇಮಕ ಮಾಡಿದರು. ಆಯೋಗವು ದೇಶದ ಜನಸಂಖ್ಯೆಯಲ್ಲಿ ಶೇಕಡ 50ಕ್ಕೂ ಹೆಚ್ಚಿರುವ ಹಿಂದುಳಿದ ವರ್ಗಗಳು, ಜಾತಿ, ಆರ್ಥಿಕ ಮತ್ತು ಸಾಮಾಜಿಕ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗಿವೆಯೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಿತು. ಇದು ಹಿಂದುಳಿದ ವರ್ಗಗಳಲ್ಲಿ ಮತ್ತು ಆ ಸಮುದಾಯಗಳ ಬಗ್ಗೆ ಹೊಸ ‘ಜಾಗೃತಿ’ ಮೂಡಿಸಿತು.

ಇವರು ಕೊಟ್ಟ ವರದಿ ಹಿಂದುಳಿದ ವರ್ಗಗಳ ಇತಿಹಾಸದಲ್ಲಿ ‘ಹೊಸ ಶಕೆ’ ಬರೆಯಿತು. ‘ಮಂಡಲ್ ವರದಿ’ ಎಂದು ಜನಪ್ರಿಯವಾಗಿ ದೇಶವ್ಯಾಪಿ ‘ಹೊಸ ಭರವಸೆ’ ಮೂಡಿಸಿತು. ದೇಶದ ಜನಸಂಖ್ಯೆಯಲ್ಲಿ ಶೇಕಡ 52ರಷ್ಟು ಹಿಂದುಳಿದ ವರ್ಗಗಳ ಜನರಿದ್ದಾರೆಂದು ಈ ವರದಿ ಗುರುತಿಸಿ ದಾಖಲಿಸಿತು. ಈ ಹಿಂದುಳಿದ ಸಮುದಾಯಗಳಿಗೆ ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಶೇಕಡ 27ರಷ್ಟು ಉದ್ಯೋಗಗಳನ್ನು ಕಾಯ್ದಿರಿಸಬೇಕೆಂದು ಶಿಫಾರಸ್ಸು ಮಾಡಿತು. ಅಂದರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಸೂಚಿಸಿತ್ತು. ವಿಶೇಷವಾಗಿ ಸಂಖ್ಯಾಬಲದ ಆಧಾರದ ಮೇಲೆ ಪ್ರಾತಿನಿಧ್ಯ ನೀಡಲು ವರದಿಯಲ್ಲಿ ಹೇಳಿತ್ತು.

ಭಾರತ ರಾಜಕೀಯದಲ್ಲಿ ಹಿಂದುಳಿದ ವರ್ಗಗಳಿಗೆ ಹೊಸ ಚೈತನ್ಯ ತಂದುಕೊಟ್ಟ ಬಿ.ಪಿ. ಮಂಡಲ್ ಅಧ್ಯಕ್ಷತೆ ವಹಿಸಿ, ಅಧ್ಯಯನ ನಡೆಸಿ ನೀಡಿದ ಮಂಡಲ್ ಆಂಗದ ವರದಿಯನ್ನು 1980 ಡಿಸೆಂಬರ್ 31ರಂದು ರಾಷ್ಟ್ರಪತಿಯಗಿದ್ದ ಜಿಯನಿ ಜೈಲ್ ಸಿಂಗ್ ಅವರಿಗೆ ಸಲ್ಲಿಸಲಾಯಿತು.

ಹೀಗೆ ಹಿಂದುಳಿದ ವರ್ಗಗಳಿಗೆ ಅಧಿಕಾರದ ಪಾಲನ್ನು ಹಂಚುವ ಬಿ.ಪಿ. ಮಂಡಲ್ ವರದಿ ಅನುಷ್ಠಾನಗೊಳಿಸಲು ‘ಮಂಡಲ ಮಹರ್ಷಿ’ ವಿ.ಪಿ. ಸಿಂಗ್ ಅವರು ಪ್ರಧಾನಿಯಗಬೇಕಾಯಿತು. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರನ್ನು ದ್ವೇಷಿಸುವ ಮತ್ತು ಪ್ರೀತಿಸುವವರಿಬ್ಬರೂ ‘ಗೌರವ’ ಕೊಡುತ್ತಾರೆ. ಇದು ಅವರ ‘ಪ್ರಾಮಾಣಿಕ ವ್ಯಕ್ತಿತ್ವ’ ಹಾಗೂ ‘ಮಂಡಲ್ ಆಯೋಗ’ ವರದಿ ಜಾರಿ ಕುರಿತಂತೆ ತೆಗೆದುಕೊಂಡ ‘ಖಂಡಿತಾತ್ಮಕ ಕ್ರಮ’ವೇ ಕಾರಣವಾಗಿದೆ.

ಇಷ್ಟಕ್ಕೂ ವಿಶ್ವನಾಥ ಪ್ರತಾಪ್ ಸಿಂಗ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರಂತೆ ಅವಮಾನ, ಹಿಂಸೆ ಅನುಭವಿಸಿ ಬೆಳೆದವರಲ್ಲ. ಅವರು ರಾಜಕುಟುಂಬದ ಕುಡಿಯಾದರೂ ಪ್ರತಿಷ್ಠೆಗಾಗಿ ಎಂದಿಗೂ ಜೋತುಬಿದ್ದವರಲ್ಲ. ‘ಫಕೀರ’ನಂತೆ ಬದುಕು ನಡೆಸಿದವರು. ‘ಸಾಮಾಜಿಕ ನ್ಯಾಯ’ವನ್ನು ನಂಬಿದ್ದ ಸಮಾಜವಾದಿ. ರಾಜೀವ್ ಗಾಂಧಿ ಸರ್ಕಾರದಲ್ಲಿ ಅತ್ಯಂತ ಸ್ವಚ್ಛ ಹಣಕಾಸು ಸಚಿವರಾಗಿದ್ದರು.

ಇವರ ‘ಸ್ವಚ್ಛಹಸ್ತ’ ಹಲವು ಕಾರ್ಪೊರೇಟ್ ಕಂಪನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದರಿಂದ ಹಣಕಾಸು ಇಲಾಖೆಯಿಂದ ರಕ್ಷಣಾ ಇಲಾಖೆಯ ಸಚಿವರಾಗಿ ಬದಲಾವಣೆಗೊಂಡರು. ರಕ್ಷಣಾ ಖಾತೆ ವಹಿಸಿಕೊಂಡ ನಂತರ ಕೆಲವು ಪತ್ರಕರ್ತರ ಮೂಲಕ ‘ಬೋಫೋರ್ಸ್ ಹಗರಣ’ ಬೆಳಕಿಗೆ ತಂದರು. ಆನಂತರ ಕಾಂಗ್ರೆಸ್ ಪಕ್ಷವನ್ನು ತೊರೆದರು. ಅಂದು ವಿ.ಪಿ. ಸಿಂಗ್ ಅವರು ಹೊಡೆದ ‘ಬೋಪೋರ್ಸ್ ಹಗರಣ’ದ ಮೊಳೆಯಿಂದಾಗಿ ಕಾಂಗ್ರೆಸ್ ಇಂದಿಗೂ ಚೇತರಿಸಿಕೊಳ್ಳಲು ಆಗುತ್ತಿಲ್ಲ.

ಬಲಪಂಥೀಯ ರಾಜಕಾರಣದ ಬಗ್ಗೆ ವಿರೋಧವಿದ್ದರೂ, ಬಲಪಂಥೀಯ ರಾಜಕೀಯ ಪಕ್ಷ ಮತ್ತು ಎಡಪಂಥೀಯ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಎರಡನೇ ಕಾಂಗ್ರೆಸ್ಸೇತರ ಪ್ರಧಾನಿಯದ ‘ದಾಖಲೆ’ಯೂ ಇವರ ಹೆಸರಲ್ಲಿಯೇ ಇದೆ. ನ್ಯಾಷನಲ್ ಫ್ರಂಟ್ ಸರ್ಕಾರದ ಮುಖ್ಯಸ್ಥರಾಗಿದ್ದ ವಿ.ಪಿ. ಸಿಂಗ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ಪ್ರಧಾನ ಮಾಡಿದರು.

1990 ಆಗಸ್ಟ್ 7ರಂದು ಬಿ.ಪಿ. ಮಂಡಲ್ ಆಂಗದ ವರದಿಯನ್ನು ವಿ.ಪಿ ಸಿಂಗ್ ಜಾರಿಗೆ ತಂದರು. ಅಂತಿಮವಾಗಿ 1993ರಲ್ಲಿ ಸುಪ್ರಿಂ ಕೋರ್ಟಿನ ಐತಿಹಾಸಿಕ ತೀರ್ಪಿನೊಂದಿಗೆ ‘ಮಂಡಲ್ ವರದಿ’ ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿತು. ಇದು ಮೀಸಲಾತಿ ಇತಿಹಾಸದಲ್ಲಿ ‘ಇಂದ್ರಸಾಹ್ನಿ ತೀರ್ಪು’ ಎಂದೇ ಜನಜನಿತವಾಯಿತು. ದುರಂತದ ವಿಚಾರ ಎಂದರೆ, ಇಂದಿಗೂ ವಿ.ಪಿ. ಸಿಂಗ್‌ರ ಮೇಲೆ ‘ವಾಕ್‌ದಾಳಿ’, ‘ಟ್ರೋಲ್‌ದಾಳಿ’ ನಡೆಯುತ್ತಲೇ ಇವೆ. ಇದೇನೆ ಇರಲಿ, ಮಂಡಲ್ ವರದಿ ಜಾರಿಗೆ ಬಂದ ನಂತರ, ಬಹುಸಂಖ್ಯಾತ ಭಾರತೀಯರು ರಾಜಕೀಯ ಅಧಿಕಾರದಲ್ಲಿ ಪಾಲು ಪಡೆದರು. ಲಾಲು ಯಾದವ್, ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಜನಾರ್ಧನ ಪೂಜಾರಿ, ವೀರಪ್ಪ ಮೊಯ್ಲಿ, ಬಂಗಾರಪ್ಪ, ಸಿದ್ದರಾಮಯ್ಯ, ಕೋಟಾ ಶ್ರೀನಿವಾಸ ಪೂಜಾರಿ ಅವರಂತಹವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು.

ಈ ನಾಲ್ಕು ಜನ ಮಹನೀಯರಿಂದ, ದೇಶದ ಜನಸಂಖ್ಯೆಯಲ್ಲಿ ಅತಿ ಹೆಚ್ಚಾಗಿ ಅಂಧಕಾರದಲ್ಲಿ, ಅಧಿಕಾರಹೀನವಾಗಿ, ಅವಕಾಶಗಳಿಂದ ವಂಚನೆಗೊಂಡು ಬದುಕು ಸವೆಸುತ್ತಿದ್ದ ಜನ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಜ್ಞಾವಂತರಾದರು.

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.


ಇದನ್ನೂ ಓದಿ: ರೈತ ಹೋರಾಟಕ್ಕೆ ಒಂದು ವರ್ಷ; ಕವಿತಾ ಕುರುಗಂಟಿ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...