Homeಮುಖಪುಟರೈತ ಹೋರಾಟಕ್ಕೆ ಒಂದು ವರ್ಷ; ಕವಿತಾ ಕುರುಗಂಟಿ ಸಂದರ್ಶನ

ರೈತ ಹೋರಾಟಕ್ಕೆ ಒಂದು ವರ್ಷ; ಕವಿತಾ ಕುರುಗಂಟಿ ಸಂದರ್ಶನ

- Advertisement -
- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟಕ್ಕೆ ನವೆಂಬರ್ 26ಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯೆ, ರೈತ ನಾಯಕಿ ಕವಿತಾ ಕುರುಗಂಟಿ ಜೊತೆಗೆ ನ್ಯಾಯಪಥ-ನಾನುಗೌರಿ.ಕಂ ನಡೆಸಿದ ಸಂದರ್ಶನದ ಭಾಗ ಇದು.

(ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ನವೆಂಬರ್ 19 ರಂದು ಘೋಷಿಸಿದರು. ಅದಕ್ಕೂ ಎರಡು ದಿನಗಳ ಮುಂಚೆ ನಡೆದ ಸಂದರ್ಶನ ಇದು.)

ಪ್ರ: ರೈತ ಹೋರಾಟದ ಈ ಒಂದು ವರ್ಷದಲ್ಲಿ ಹಲವು ಘಟನೆಗಳು ನಡೆದಿವೆ. ಈ ಒಂದು ವರ್ಷದಲ್ಲಿ ರೈತ ಹೋರಾಟದ ಪಯಣದ ಬಗ್ಗೆ ತಿಳಿಸಿ.

ಕವಿತಾ ಕುರುಗಂಟಿ: ದೆಹಲಿಯ ಗಡಿಗಳಲ್ಲಿನ ಪ್ರತಿಭಟನೆಗೆ ಇಂದು 355ನೇ ದಿನ. ಆದರೆ, ಪಂಜಾಬಿನಲ್ಲಿ 412ನೇ ದಿನ. ಅಲ್ಲಿ ನೂರಕ್ಕೂ ಹೆಚ್ಚು ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಇತಿಹಾಸದಲ್ಲಿ ಎಲ್ಲಿಯೂ ರೈತರು ಇಷ್ಟು ದೀರ್ಘವಾಗಿ ಪ್ರತಿಭಟನೆ ನಡೆಸಿಲ್ಲ. ಅದರಲ್ಲಿಯೂ ಲಕ್ಷಾಂತರ ರೈತರನ್ನು ಒಳಗೊಂಡಿರುವ ಹೋರಾಟ ಎಲ್ಲಿಯೂ ನಡೆದಿಲ್ಲ.

ಈ ಒಂದು ವರ್ಷದಿಂದ ರೈತರ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಜನವರಿ 22ರಿಂದ ಸರ್ಕಾರ ರೈತರೊಂದಿಗಿನ ಮಾತುಕತೆಯನ್ನು ನಿಲ್ಲಿಸಿದೆ. ಬೇಡಿಕೆಗಳು ಹಾಗೆಯೇ ಉಳಿದಿದೆ. ಕೆಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಂತೆ ಕಾಣಿಸಿದರೂ ಮುಖ್ಯವಾದ ಬೇಡಿಕೆಗಳನ್ನು ಅದು ನಿರಾಕರಿಸಿದೆ. ಮೇಲ್ನೋಟಕ್ಕೆ ನೋಡುವುದಾದರೆ ಪ್ರತಿಭಟನೆ ನಡೆಯುತ್ತಲೇ ಇದೆ ಮತ್ತು ಇದು ಏನೂ ಗಳಿಸಿಕೊಂಡಿಲ್ಲ. ಕಾಯ್ದೆ ರದ್ದತಿ ಕುರಿತು ಯಾವುದೇ ಪಾಸಿಟಿವ್ ವಿಷಯಗಳು ಹೊರಹೊಮ್ಮಿಲ್ಲ ಎನ್ನಿಸಬಹುದು.

ಆದರೆ, ರೈತ ಹೋರಾಟದ ಒಳಹೊಕ್ಕರೆ ಈ 11 ತಿಂಗಳಿಗೂ ಮೀರಿದ ಹೋರಾಟ ಒಂದು ಕಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಿಜ ಬಣ್ಣವನ್ನು ತೋರಿಸಿದೆ. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಈ ಸಂಘಟನೆಗಳು, ಬಿಜೆಪಿ ಪಕ್ಷದ ಹಿರಿಯ ನಾಯಕರು, ಅದರಲ್ಲೂ ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ರೈತರ ವಿರುದ್ಧ ಹಿಂಸಾತ್ಮಕವಾಗಿ ನಡೆದುಕೊಂಡಿದ್ದಾರೆ. ರೈತರ ವಿರುದ್ಧ ಜನರನ್ನು ಎತ್ತಿಕಟ್ಟಿದ್ದಾರೆ.

ಮತ್ತೊಂದು ಕಡೆ ತಮ್ಮದೆ ಮನೆ, ಕುಟುಂಬ, ಬ್ಯುಸಿನೆಸ್, ಹೊಲಗಳಿದ್ದರೂ ಕೂಡ ಈ ಸಿಂಘು, ಗಾಝಿಪುರ್, ಟಿಕ್ರಿ, ಪಲ್ವಲ್, ಶಹಜಹನ್ಪುರ್, ಹಲವು ಟೋಲ್ ಪ್ಲಾಜಾಗಳಲ್ಲಿ ರೈತರು ಅವೆಲ್ಲವನ್ನೂ ಬಿಟ್ಟು ಮನೆಯಿಲ್ಲದವರಂತೆ ಬದುಕಿದ್ದಾರೆ. ಇಲ್ಲಿ ರೈತರ ತಾಳ್ಮೆ, ಶಾಂತಿ, ನಂಬಿಕೆ, ಛಲ, ಜೀವನ ಪ್ರೀತಿ ಕಾಣಿಸಿದೆ. ತಮ್ಮ ಜೀವನವನ್ನು ಉಳಿಸಿಕೊಳ್ಳುವ ಜೊತೆಗೆ ತಮ್ಮ ಮುಂದಿನ ಪೀಳಿಗೆಯವರಿಗಾಗಿ ಹೋರಾಡುವ ಅವರ ನಿಜ ಕಾಳಜಿ ಕಾಣಿಸಿದೆ.

ಬಿಜೆಪಿ ಮತ್ತು ಬಿಜೆಪಿ ನಾಯಕರ ಹಿಂಸಾತ್ಮಕ ಕೃತ್ಯಗಳು, ಜನ ವಿರೋಧಿ, ಸಂವಿಧಾನ ವಿರೋಧಿ ಕೆಲಸಗಳು, ಇದರ ಹಿಂದಿರುವ ಆರ್‌ಎಸ್‌ಎಸ್; ಇವೆಲ್ಲವನ್ನೂ 11 ತಿಂಗಳ ರೈತರ ಪ್ರತಿಭಟನೆ ತೋರಿಸಿಕೊಟ್ಟಿದೆ.

ಇದರ ಜೊತೆಗೆ ರೈತರು ಗಳಿಸಿಕೊಂಡಿದ್ದು ಎಂದರೆ ಒಗ್ಗಟ್ಟು. ಈ ದೊಡ್ಡ ಹೋರಾಟಕ್ಕೆ ಒಗ್ಗಟ್ಟು ತುಂಬಾ ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದಾರೆ. ಅಡೆತಡೆಗಳಾದ ಜಾತಿ, ಧರ್ಮ, ಲಿಂಗ ಮತ್ತು ವಯಸ್ಸಿನ ತಾರತಮ್ಯ ಬಿಟ್ಟು ಒಟ್ಟುಗೂಡಿದ್ದಾರೆ. ಬೆಳೆಗಳ ಮೇಲೆ ರೈತರನ್ನು ವಿಭಜನೆ ಮಾಡಿರುವ ಈ ದೇಶದಲ್ಲಿ ಹರಿಯಾಣ-ಪಂಜಾಬ್, ಝಾಟ್-ಮುಸ್ಲಿಂ, ವೃದ್ಧ-ಯುವಕ, ಗುಜ್ಜರ್-ಮೀನಾ, ಉತ್ತರ-ದಕ್ಷಿಣ, ಪುರುಷ- ಮಹಿಳೆಯರು ಹೀಗೆ ಎಲ್ಲಾ ತಾರತಮ್ಯ ಬಿಟ್ಟು ದಶಕಗಳ ಬಳಿಕ ಒಂದು ಹೋರಾಟದಲ್ಲಿ ಒಗ್ಗಟ್ಟು ಕಂಡು ಬಂದಿದೆ.

ಇನ್ನೊಂದು ಪ್ರಮುಖ ಬೆಳವಣಿಯೆಂದರೆ ನಾವು ರೈತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು. ಈ ಮೊದಲು ರೈತ ಎಂದು ಹೇಳಿಕೊಳ್ಳಲು ಸಂಕೋಚಪಡುತ್ತಿದ್ದ ಯುವಜನರು ಇಂದು ಹೆಮ್ಮೆಯಿಂದ ನಾನು ರೈತ ಎನ್ನುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಳ್ಳದಿದ್ದರೂ ರೈತ ಕುಟುಂಬದಿಂದ ಬಂದಿರುವ ಎಲ್ಲಾ ಯುವಜನತೆ ನಾನು ರೈತ ಎಂದು ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಬಟ್ಟೆ, ಕಾರು, ಬೈಕ್, ಬ್ಯಾನರ್‌ಗಳ ಮೇಲೆ ನಾನು ಅನ್ನದಾತ ಎಂಬ ಹೇಳಿಕೆಗಳನ್ನು ಕಾಣುತಿದ್ದೇವೆ. ನಗರ ಮತ್ತು ಹಳ್ಳಿಗಳ ನಡುವೆ ಇದ್ದ ತಾರತಮ್ಯವನ್ನು ಇಲ್ಲವಾಗಿಸುತ್ತಿದ್ದಾರೆ. ನಾವು ನಿಮಗೆ ಊಟ ನೀಡುವವರು ಎಂಬುದನ್ನು ಖುಷಿಯಿಂದ ಹೇಳುಕೊಳ್ಳುತ್ತಿದ್ದಾರೆ.

ಇನ್ನು ಈ 11 ತಿಂಗಳ ಕಾಲ ರೈತರ ಸಂಘಟನಾ ಕೌಶಲ್ಯವನ್ನು ಇಡೀ ದೇಶಕ್ಕೆ ಎತ್ತಿ ತೋರಿಸಿದೆ. ಅದರಲ್ಲೂ ಬಿಜೆಪಿ ನಾಯಕರು, ಪ್ರತಿಭಟನಾ ನಿರತರು ರೈತರಲ್ಲ, ಯಾವ ರೈತ ತಮ್ಮ ಹೊಲ ಬಿಟ್ಟು ದೆಹಲಿ ಗಡಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬಂತಹ ಸುಳ್ಳಿನ ಹಂಗಿಸುವ ಮಾತುಗಳನ್ನು ಪದೇ ಪದೇ ಹೇಳುತ್ತಿದ್ದರೂ, ಇವುಗಳಿಗೆ ಕಿವಿಗೊಡದೆ ರೈತರು ತಾವು ಯೋಜಿಸಿದ್ದಂತೆ ಕೆಲಸ ಮಾಡುತ್ತಿದ್ದಾರೆ. ಅವರ ಪ್ಲಾನಿಂಗ್ ತುಂಬಾ ಚೆನ್ನಾಗಿತ್ತು. ಪ್ರತಿ ಹಳ್ಳಿಯಿಂದ ಪಾಳಿ ಮಾದರಿಯಲ್ಲಿ 20-30 ಜನರ ದಂಡು ಬಂದು 10-15 ದಿನ ಗಡಿಯಲ್ಲಿ ಕೆಲಸ ಮಾಡುವುದು, ನಂತರ ಊರಿಗೆ ಹೋಗುವುದು ನಡೆಯುತ್ತಿತ್ತು.

ಗಡಿಗಳಲ್ಲಿನ ಸ್ವಚ್ಛತೆ, ಕಸ ಬೇರ್ಪಡಿಸುವುದು, ಊಟ ಬಡಿಸುವುದು, ಲಂಗರ್‌ಗಳ ಮೂಲಕ ಊಟ ನೀಡುವುದು, ವೇದಿಕೆ ನಿರ್ವಹಣೆ, ಹಣಕಾಸಿನ ವಹಿವಾಟು ಮತ್ತು ಮುಖ್ಯವಾಗಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ರೈತರ ಸಂಘಟನಾ ಕೌಶಲ್ಯ ಬೆಳಕಿಗೆ ಬಂದಿದೆ. ಜೊತೆಗೆ ದೇಶದ ಭವಿಷ್ಯಕ್ಕೆ ಉತ್ತಮ ನಾಯಕರನ್ನು ಕೂಡ ಈ ಪ್ರತಿಭಟನೆ ನೀಡಿದೆ.

ಕಬ್ಬು ಬೆಲೆ ಹೆಚ್ಚಳ, ವಿದ್ಯುಚ್ಛಕ್ತಿ, ಭೂಕಬಳಿಕೆ, ರೈತರ ಮೇಲಿನ ಸುಳ್ಳು ಆರೋಪಗಳು ಇಂತಹ ಅನ್ಯಾಯಗಳ ವಿರುದ್ಧ ಧನಿ ಎತ್ತಲು ರೈತ ಹೋರಾಟ ಧೈರ್ಯ ನೀಡಿದೆ. ರೈತರು ಅತ್ಯುತ್ತಮ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೂ, ಇಷ್ಟು ದಿನಗಳ ಕಾಲ ಈ ಪ್ರತಿಭಟನೆ ನಡೆಯಬಾರದಿತ್ತು. ಇದು ಮೋದಿ ಸರ್ಕಾರದ ವೈಫಲ್ಯ.

ಪ್ರ: ನವೆಂಬರ್ 26ಕ್ಕೆ ರೈತ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಗಳು ಮತ್ತು ದೇಶಾದ್ಯಂತ ಯಾವ ಕಾರ್ಯಕ್ರಮಗಳು ನಡೆಯಲಿವೆ?

ಉ: ನವೆಂಬರ್ 26ಕ್ಕೆ ಒಂದು ವರ್ಷದ ವಾರ್ಷಿಕೋತ್ಸವವಿದೆ. ಅಂದು ನವೆಂಬರ್ 26, 2020ರಂದು ಏನೇನು ನಡೆಯಿತು, ಅದನ್ನು ರಿಕ್ರಿಯೇಟ್ ಮಾಡಲಿದ್ದೇವೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ದೆಹಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ರೈತರು ಗಡಿಗಳಿಗೆ ಬರಲಿದ್ದಾರೆ. ಜನವರಿ 26ರ ಜನಸಂಖ್ಯೆಯನ್ನೆ ನಾವು ನಿರೀಕ್ಷಿಸುತ್ತದ್ದೇವೆ.

ಇನ್ನು ದೆಹಲಿಗೆ ದೂರದಲ್ಲಿರುವ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭಟನೆ ಆಯೋಜನೆಗೊಂಡಿವೆ. ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಟ್ರ್ಯಾಕ್ಟರ್ ಮಾರ್ಚ್ ಆಯೋಜನೆ ಮಾಡಲಾಗಿದ್ದು, ಅಂದು ರಾಜ್ಯ ರಾಜಧಾನಿಗೆ ಟ್ರ್ಯಾಕ್ಟರ್‌ಗಳ ಜೊತೆಗೆ ರೈತರು ಬರಲಿದ್ದಾರೆ.

ಕರ್ನಾಟಕದಲ್ಲಿ 26ರಂದು ಆಯ್ಕೆ ಮಾಡಲಾಗಿರುವ 10ರಿಂದ 12 ಸ್ಥಳಗಳಲ್ಲಿ ಮುಖ್ಯವಾದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಯುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಲಿದೆ. ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಧಾನಿ ಮತ್ತು ಜಿಲ್ಲಾ ಹೆಡ್ ಕ್ವಾರ್ಟರ್ಸ್‌ಳಲ್ಲಿ ಪ್ರತಿಭಟನೆ ನಡೆಯಲಿದೆ.

ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿಭಟನೆ ನಡೆಯಲಿದೆ. ಜೊತೆಗೆ ಭಾರತದ ರಾಯಭಾರಿ ಕಚೇರಿ ಬಳಿ ಸ್ಲೀಪ್ ಔಟ್‌ಗಳನ್ನು ಆಯೋಜಿಸಲಾಗಿದೆ. ಬ್ರಿಟನ್, ಯೂರೋಪ್, ಅಮೆರಿಕಾ, ಇಟಲಿಯಲ್ಲೂ ಪ್ರತಿಭಟನೆ ನಡೆಯಲಿವೆ.

ಇನ್ನು ನವೆಂಬರ್ 29ಕ್ಕೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, 500 ಮಂದಿಯ ರೈತರ ತಂಡಗಳು ತಮ್ಮ ಟ್ರ್ಯಾಕ್ಟರ್‌ಗಳು, ಟ್ರಾಲಿಗಳ ಜೊತೆಗೆ ಪಾರ್ಲಿಮೆಂಟ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿವೆ.

ಪ್ರ: ಮುಂಬರುವ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಚುನಾವಣೆಗಳ ಮೇಲೆ ರೈತ ಹೋರಾಟದ ಪ್ರಭಾವಹೇಗಿರಬಹುದು?

ಉ: ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ಮಿಷನ್ ಉತ್ತರ ಪ್ರದೇಶ್, ಮಿಷನ್ ಉತ್ತರಾಖಂಡ ಕಾರ್ಯಕ್ರಮ ಘೋಷಿಸಿದೆ. ದೊಡ್ಡ ಮತ್ತು ಸಣ್ಣ ಕಿಸಾನ್ ಮಹಾ ಪಂಚಾಯತ್‌ಗಳನ್ನು ನಡೆಸಲಾಗಿದೆ. ಎಸ್‌ಕೆಎಂ ಯೋಜನೆಗಳು ಜಾರಿಯಾಗುತ್ತಿದ್ದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ರೈತರ ಹತ್ಯಾಕಾಂಡ ನಡೆಸಲಾಯಿತು. ನಾಚಿಕೆಯಿಲ್ಲದೆ ಆರೋಪಿಯ ತಂದೆಯನ್ನು ಮೋದಿ ಸರ್ಕಾರ ಇನ್ನೂ ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೇ ಹೋರಾಟದ ಪ್ರಭಾವವನ್ನು ನೋಡುತ್ತಿದ್ದೇವೆ. ಚುನಾವಣಾ ಫಲಿತಾಂಶದಲ್ಲಿಯೂ ರೈತ ಹೋರಾಟ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಸಲಾಗಿದೆ.

ಪ್ರ: ಗಡಿಗಳಲ್ಲಿ 600ಕ್ಕೂ ಹೆಚ್ಚು ರೈತರು ಮೃತಪಟ್ಟದ್ದಾರೆ. ಅವರ ಕುಟುಂಬದ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರಗಳು ಮತ್ತು ಎಸ್‌ಕೆಎಂ ಕಡೆಯಿಂದ ಏನಾದರೂ ಪರಿಹಾರ ಸಿಕ್ಕಿದೆಯೇ?

ಉ: 670 ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಇಷ್ಟು ರೈತರು ಮೃತಪಟ್ಟಿದ್ದರೂ ಅವರ ಕುಟುಂಬದವರು ಹೋರಾಟದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಪರಿಹಾರ ನೀಡುವುದಿರಲಿ, ಒಕ್ಕೂಟ ಸರ್ಕಾರ ಇಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನೇ ಒಪ್ಪಿಕೊಳ್ಳುತ್ತಿಲ್ಲ. ಜೊತೆಗೆ ನಮ್ಮ ಬಳಿ ಡೇಟಾ ಇಲ್ಲ ಎಂಬ ನಾಚಿಕೆಯಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪ್ರತಿಭಟನಾ ಬೆಂಬಲಿಗರ ಬ್ಲಾಗ್ ’ಹ್ಯೂಮನ್ ಕಾಸ್ಟ್ ಆಫ್ ಫಾರ್ಮಸ್ಸ್ ಮೂಮೆಂಟ್’ ಎಂಬುದರಲ್ಲಿ ಮೃತಪಟ್ಟ ರೈತರ ಪ್ರತಿ ಮಾಹಿತಿಯೂ ಇದೆ.

ಪಂಜಾಬ್ ಸರ್ಕಾರ ಒಂದೇ ಮೃತರಿಗೆ ಪರಿಹಾರ ನೀಡುತ್ತಿದೆ. ಇನ್ನು ಲಖಿಂಪುರ್ ಕೇರಿ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ 45 ಲಕ್ಷ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ಪರಿಹಾರ ಘೋಷಿಸಿಲ್ಲ. ಆದರೆ ಈ ಹರಿಯಾಣ ಸರ್ಕಾರ ರೈತರ ಮೇಲೆ ಹಲ್ಲೆ ಮಾಡಲು ತಿಳಿಸುತ್ತಿದೆ, ಅಂತಹದರಲ್ಲಿ ಪರಿಹಾರವೆಲ್ಲಿ?

ಸಂಯುಕ್ತ ಕಿಸಾನ್ ಮೋರ್ಚಾ ಕಡೆಯಿಂದ ಮೃತಪಟ್ಟ ರೈತರಿಗೆ ಪರಿಹಾರ ನೀಡುವ ಕ್ರಮವಿಲ್ಲ. ಆದರೆ, ವೈಯಕ್ತಿಕವಾಗಿ ಆಯಾ ರೈತ ಸಂಘಟನೆಗಳು ತಮ್ಮ ಸದಸ್ಯರನ್ನು ಕಳೆದುಕೊಂಡಾಗ ಶಕ್ತಿ ಮೀರಿ ಪರಿಹಾರ ನೀಡುತ್ತಿವೆ.

ಪ್ರ: ನೀವು ’ಮಹಿಳಾ ರೈತರ ಹಕ್ಕುಗಳ ವೇದಿಕೆ’ – ಮಕಾಮ್‌ನ ಹೋರಾಟಗಾರ್ತಿ. ಹೀಗಾಗಿ ದೆಹಲಿಯ ಗಡಿಗಳಲ್ಲಿನ ರೈತ ಮಹಿಳೆಯರ ಪಾತ್ರ, ಸವಾಲುಗಳ ಬಗ್ಗೆ ತಿಳಿಸಿ.

ಉ: ಮಹಿಳೆಯರು ದೇಶದ ನಿಜವಾದ ಅನ್ನದಾತರು. ಅವರು ಹೊಲಗಳಲ್ಲಿ ಕೆಲಸ ಮಾಡುತ್ತಾ ಬೆಳೆ ಬೆಳೆದು ಅನ್ನ ನೀಡುವ ಜೊತೆಗೆ ಅಡುಗೆ ಮನೆಯಲ್ಲಿಯೂ ಕೆಲಸ ಮಾಡುತ್ತಾರೆ. ಅವರನ್ನು ಮನೆಯವರ ಊಟದ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರು ಅಡುಗೆ ಮಾಡಿ ನಮಗೆ ನೇರವಾಗಿ ಊಟ ನೀಡುವುದರಿಂದಲೂ ಅವರು ನಿಜವಾದ ಅನ್ನದಾತರು.

ದೇಶದ ರೈತರು, ಕೃಷಿ ಸಂಘಟನೆಗಳು ಮತ್ತು ಸರ್ಕಾರಗಳು ಕೂಡ ರೈತ ಮಹಿಳೆಯರನ್ನು ರೈತರು ಎಂದು ಗುರುತಿಸುವುದಿಲ್ಲ. ಲಿಂಗಾಧಾರಿತ ಅಸಮಾನತೆ ಇದಕ್ಕೆ ಕಾರಣವಾಗಿದೆ. ಮುಖ್ಯವಾಗಿ ರೈತ ಎಂದು ಗುರುತಿಸಲು ಜಮೀನು ಒಡೆಯನ ಹೆಸರಿನಲ್ಲಿರಬೇಕು. ಆದರೆ, ದೇಶದಲ್ಲಿ ಬಹುಪಾಲು ಜಮೀನು ಪುರುಷನ ಹೆಸರಿನಲ್ಲಿರುತ್ತದೆ. ಹೀಗಾಗಿ ಮಹಿಳಾ ರೈತರನ್ನು ಗುರುತಿಸುವುದು ಇಂದು ಮುಖ್ಯ ಅಗತ್ಯವಾಗಿದೆ.

ಈ ಪ್ರತಿಭಟನೆಯಲ್ಲಿ ಪಂಜಾಬ್‌ನ ಕೆಲವು ಸಂಘಟನೆಗಳು ಮಹಿಳೆಯರಿಗೆ ಕೇವಲ ಸದಸ್ಯತ್ವ ನೀಡಿಲ್ಲ. ಅವರನ್ನೇ ಮುಖ್ಯಸ್ಥರನ್ನಾಗಿಸಿದ್ದಾರೆ. ಆದರೆ, ಇದು ಕೆಲವೆಡೆ ಮಾತ್ರ. ದೇಶದ ಹಲವು ಸಂಘಟನೆಗಳಲ್ಲಿ ಮಹಿಳೆಯರಿಗೆ ಮುಖ್ಯಸ್ಥೆ ಮಾಡುವುದಿರಲಿ, ಸದಸ್ಯತ್ವವನ್ನು ಕೂಡ ನೀಡಿಲ್ಲ.

ಜನವರಿ 18ರಿಂದ ಸ್ಪೆಷಲ್ ವುಮೆನ್ ಫಾರ್ಮರ್ಸ್ ಡೇ ಮತ್ತು ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆಯಂದು ನಾವು ಸಾವಿರಾರು ಮಹಿಳೆಯರನ್ನು ಕಂಡೆವು. ಅವರೇ ವೇದಿಕೆಗಳನ್ನು ನಿರ್ವಹಿಸಿದ್ದಾರೆ. ಅವರೇ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಉಳಿದ ದಿನಗಳಲ್ಲಿಯೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಅದು 50% ಇಲ್ಲ. ಪ್ರತಿಭಟನೆಯಲ್ಲಿ ಮಹಿಳೆಯರ ಪಾತ್ರ 15ರಿಂದ 20% ಇದೆ.

ಪ್ರತಿಭಟನೆ ಆರಂಭಕ್ಕೂ ಇಂದಿಗೂ ಹೋಲಿಸಿದರೇ ಇಂದು ರೈತ ನಾಯಕಿಯರು ಅದರಲ್ಲೂ ಯುವ ರೈತ ನಾಯಕಿಯರು ಬೆಳಕಿಗೆ ಬರುತ್ತಿದ್ದಾರೆ. ಪಂಜಾಬಿನ ಯುವ ನಾಯಕಿಯರ ಜೊತೆಗೆ ಅತಿ ಸಂಕೋಚ ಮತ್ತು ಖಾಪ್ ಪಂಚಾಯತ್‌ನಿಂದ ನಿಯಂತ್ರಿಸಲ್ಪಡುವ ಹರಿಯಾಣದ ಮಹಿಳೆಯರು ಕೂಡ ಮುಂಚೂಣಿಗೆ ಬರುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಕಾಣುವ ಮತ್ತೊಂದು ಬಹು ದೊಡ್ಡ ಬದಲಾವಣೆಯೆಂದರೆ, ಅಡುಗೆ ಮನೆಗಳಲ್ಲಿ ಕೆಲಸ ಮಾಡುವ ಪುರುಷರು. ಹೆಣ್ಣು ಮಕ್ಕಳು ಇಡೀ ದಿನ ಇಷ್ಟು ಕಷ್ಟ ಪಡುತ್ತಿದ್ದರಾ? ನಮಗೆ ಈಗ ಅವರ ಕಷ್ಟಗಳು ಅರ್ಥವಾಗುತ್ತಿದೆ ಎಂಬ ಮಾತುಗಳು ಪುರುಷರ ಬಾಯಲ್ಲಿ ಬರುತ್ತಿವೆ.

ಇನ್ನು ಈ ಕೃಷಿ ಕಾನೂನುಗಳು ಮಹಿಳಾ ರೈತರ ಮೇಲೆ ಏನು ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಬದಲಾವಣೆ ಕೊಂಚವಾಗಿದೆ. ಆದರೆ ಇನ್ನೂ ಆಗುವುದು ಸಾಕಷ್ಟು ಬಾಕಿ ಉಳಿದಿದೆ.

ಪ್ರ: ಒಂದು ವರ್ಷವಾದರೂ ರೈತರ ಹೋರಾಟಕ್ಕೆ ಸರ್ಕಾರ ಬಗ್ಗಿಲ್ಲ. ಹೀಗಿರುವ ನಿಮ್ಮ ಮುಂದಿನ ಯೋಜನೆಗಳೇನು?

ರೈತ ಹೋರಾಟಗಾರರು ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನಾ ಸ್ಥಳಗಳನ್ನು ಬಿಟ್ಟು ಹೋಗುವುದಿಲ್ಲ. 670 ಮಂದಿ ರೈತರು ಹುತಾತ್ಮರಾಗಿದ್ದಾರೆ. ಹೀಗಿರುವಾಗ ಖಾಲಿ ಕೈಗಳಲ್ಲಿ ರೈತರು ವಾಪಸ್ ಹೋಗುವುದಿಲ್ಲ. ಪ್ರತಿಭಟನೆ ಆರಂಭಕ್ಕೆ ಮುನ್ನ ರೈತರು ಯಾವ ಭಯ ಹೊಂದಿದ್ದರೋ ಅದೇ ಈಗ ಆಗಿದೆ. ಮಂಡಿಗಳನ್ನು ಮುಚ್ಚಲಾಗುತ್ತಿದೆ. ಬೆಲೆ ನಿರ್ಧಾರ ಹೊರಭಾಗದಲ್ಲಾಗುತ್ತಿದೆ. ಎಪಿಎಂಸಿಯಲ್ಲಿ ಬೆಲೆ ಕಡಿಮೆಯಾಗುವುದು, ರೈತರನ್ನು ಮೋಸಗೊಳಿಸುವುದು ಎಲ್ಲವೂ ನಡೆಯುತ್ತಿದೆ. ಹೀಗಾಗಿ ರೈತರು ತಮ್ಮ ಬೇಡಿಕೆ ಸರಿಯಾಗಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಾಠ ಕಲಿಯದಿದ್ದರೂ, ಈ ಹೋರಾಟ ಮುಂದುವರೆಯುತ್ತದೆ. 2024ರ ಚುನಾವಣೆಯಲ್ಲಿ ಬಿಜೆಪಿ ಇದರ ಫಲ ಅನುಭವಿಸಲಿದೆ. ರೈತರು ಮಾತ್ರ ಗಡಿಗಳಿಂದ ವಾಪಸ್ ಹೋಗುವುದಿಲ್ಲ. ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಈ ಹೋರಾಟ ಹಲವರಿಗೆ ಮಾದರಿಯಾಗಿದೆ.

ಈಗಾಗಲೇ ಈ ಹೋರಾಟ ಮೋದಿ ಸರ್ಕಾರಕ್ಕೆ ಹೊಡೆತ ನೀಡಿದೆ ಎನ್ನುವುದಕ್ಕೆ ಅವರು ಒಂದೂವರೆ ವರ್ಷ, ಎರಡು ವರ್ಷ ಕಾನೂನುಗಳನ್ನು ಅಮಾನತ್ತಿನಲ್ಲಿ ಇಡುವ ಆಫರ್ ನೀಡಿರುವುದೇ ಸಾಕ್ಷಿಯಾಗಿದೆ.

ಒಂದು ಪ್ರತಿಭಟನೆ ನಡೆಸುವವರು ಉಳಿಯಲು ಆಹಾರ ಬೇಕು. ರೈತರು ತಮಗೆ ಬೇಕಾದ ಆಹಾರ ತಾವೇ ಬೆಳೆದುಕೊಳ್ಳುತ್ತಾರೆ. ಹೀಗಾಗಿ ಅವರು ಎಷ್ಟು ದಿನ ಬೇಕಾದರೂ ಪ್ರತಿಭಟನೆ ಮುಂದುವರಿಸಬಹುದು.

ಪ್ರ: ಕರ್ನಾಟಕದ ರೈತರ ಮೇಲೆ ಈ ಐತಿಹಾಸಿಕ ಹೋರಾಟದ ಪ್ರಭಾವ ಏನು?

ಉ: ದೆಹಲಿಯ ಗಡಿಗಳಲ್ಲಿ ಕಾಣಿಸುವಷ್ಟು ದಟ್ಟವಾಗಿ ದಕ್ಷಿಣ ಭಾರತದಲ್ಲಿ ಪ್ರತಿಭಟನೆ ಕಾಣಿಸದಿದ್ದರೂ, ಕರ್ನಾಟಕದ ರೈತ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಲು ಮುಂದೆಬಂದಿವೆ. ಉತ್ತಮ ಬದಲಾವಣೆ ಕಾಣಿಸುತ್ತಿದೆ. ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ನಿಧನದ ಬಳಿಕ ಬಿಡಿಬಿಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ, ತಮ್ಮ ಶಕ್ತಿ ಕಳೆದುಕೊಂಡಂತೆ ಕಾಣುತ್ತಿದ್ದ ರೈತ ಸಂಘಟನೆಗಳು ಇಂದು ಒಂದುಗೂಡಿ ತಮ್ಮ ಬೇಡಿಕೆಗಳಿಗಾಗಿ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿವೆ.

ಕವಿತಾ ಕುರಗಂಟಿ

ಆಂಧ್ರಪ್ರದೇಶದಲ್ಲಿ ಆಶಾ – ಸ್ವರಾಜ್ ಸಂಘಟನೆಯ ಮೂಲಕ ರೈತರನ್ನು ತಳಮಟ್ಟದಲ್ಲಿ ಸಂಘಟಿಸುವ ಕೆಲಸದಲ್ಲಿ ಕವಿತಾ ತೊಡಗಿಕೊಂಡಿದ್ದಾರೆ. ಅಖಿಲ‌ ಭಾರತ ರೈತ ಸಂಘರ್ಷ್ ಸಮನ್ವಯ ಸಮಿತಿ ಹಾಗೂ ಈಗಿನ ಸಂಯುಕ್ತ ಕಿಸಾನ್ ಮೋರ್ಚಾಗಳಲ್ಲೂ ಅವರದ್ದು ಪ್ರಮುಖ ಪಾತ್ರವಿದೆ

ಸಂದರ್ಶನ: ಮಮತ.ಎಂ ಮತ್ತು ಸ್ವಾತಿ ಶುಕ್ಲ
ನಿರೂಪಣೆ: ಮಮತ. ಎಂ


ಇದನ್ನೂ ಓದಿ: ರೈತ ಹೋರಾಟವನ್ನು ತಕ್ಷಣಕ್ಕೆ ಹಿಂಪಡೆಯುವುದಿಲ್ಲ: ರಾಕೇಶ್ ಟಿಕಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...