ಲೋಕಸಭಾ ಅಧಿವೇಶನದಲ್ಲಿ ಕೃಷಿ ಕಾನೂನುಗಳ ರದ್ಧತಿ ಮಸೂದೆ -2021 ಯನ್ನು ಸೋಮವಾರ ಅಂಗೀಕರಿಸುತ್ತಿದ್ದಂತೆ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್, ಈ ಕಾಯ್ದೆಯನ್ನು ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ರೈತ ಹೋರಾಟದಲ್ಲಿ ಹುತಾತ್ಮರಾದ 750 ರೈತರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ರದ್ದತಿ ಕ್ರಮದ ಬಗ್ಗೆ ಮಾತನಾಡಿದ ಟಿಕಾಯತ್, ರೈತರ ಆಂದೋಲನ ಮುಂದುವರಿಯುತ್ತದೆ. “ಕೃಷಿ ಕಾನೂನು ರದ್ದತಿ ಮಸೂದೆಯು ಆಂದೋಲನದ ಸಮಯದಲ್ಲಿ ಮಡಿದ 750 ರೈತರಿಗೆ ಶ್ರದ್ಧಾಂಜಲಿಯಾಗಿದೆ. ನಮಗಿನ್ನು MSP (ಕನಿಷ್ಠ ಬೆಂಬಲ ಬೆಲೆ) ಖಾತ್ರಿಯ ಕಾನೂನು ಜಾರಿಯಾಗಿಲ್ಲ. ಎಂಎಸ್ಪಿ ಸೇರಿದಂತೆ ಇತರೆ ಸಮಸ್ಯೆಗಳು ಬಾಕಿ ಉಳಿದಿರುವುದರಿಂದ ಪ್ರತಿಭಟನೆ ಮುಂದುವರಿಯಲಿದೆ’’ ಎಂದು ಟಿಕಾಯತ್ ಹೇಳಿದ್ದಾರೆ.
ಭಾನುವಾರವಷ್ಟೆ ಬಿಕೆಯು ಮುಖಂಡರಾದ ಟಿಕಾಯತ್ ರೈತ ಸಂಘಟನೆಗಳು ಕೇಂದ್ರದೊಂದಿಗೆ ಮಾತನಾಡದೇ, ದೆಹಲಿ ಗಡಿಗಳಲ್ಲಿರುವ ಪ್ರತಿಭಟನಾ ಸ್ಥಳಗಳನ್ನು ಬಿಡುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಅಂಗೀಕಾರ
ಕೇಂದ್ರದೊಂದಿಗೆ ಮಾತುಕತೆ ನಡೆಸಲು ರೈತ ಸಂಘಟನೆಗಳು ಮುಕ್ತವಾಗಿವೆ ಎಂದು ಹೇಳಿದ ಟಿಕಾಯತ್, ರೈತರು ಸರ್ಕಾರದ ಮಧ್ಯಪ್ರವೇಶವಿಲ್ಲದೇ ಆಂದೋಲನವನ್ನು ಕೊನೆಗೊಳಿಸಬೇಕೆಂದು ಕೇಂದ್ರವು ಬಯಸುತ್ತದೆ ಎಂದು ತಿಳಿಸಿದರು.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಪರಿಹಾರ ಕಂಡುಕೊಂಡಿರುವ ಕೇಂದ್ರವು ಕಳೆದ ಒಂದು ವರ್ಷದಲ್ಲಿ ಆಗಿರುವ ಹಾನಿಯ ಬಗ್ಗೆ ಈಗ ಮಾತನಾಡಬೇಕು. ಸರ್ಕಾರವು ಮೋಸ, ಸುಳ್ಳು ಹೇಳಿಕೆಗಳೊಂದಿಗೆ ವಿಷಯವನ್ನು ಇತ್ಯರ್ಥಗೊಳಿಸಲು ಬಯಸಿದರೆ ಸಮಸ್ಯೆ ಕೊನೆಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಅಧಿಕೃತವಾಗಿ ಹಿಂಪಡೆಯುವ ಉದ್ದೇಶದಿಂದ ಕೃಷಿ ಕಾನೂನುಗಳ ರದ್ಧತಿ ಮಸೂದೆ-2021 ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಂಡಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಯಾವುದೇ ಚರ್ಚೆಯಿಲ್ಲದೆ ಮಸೂದೆಯನ್ನು ಕೇವಲ ನಾಲ್ಕು ನಿಮಿಷದಲ್ಲಿ ಅಂಗೀಕರಿಸಲಾಯಿತು.
ಇದನ್ನೂ ಓದಿ: ರೈತನ ಬೆತ್ತಲೆ ಸುಲಿದು ಪುಟಗೋಸಿ ಎಸೆವ ಪ್ರಧಾನಿ


