ಸ್ಥಳವನ್ನು ಬಂದ್ ಮಾಡುವ ಬೆದರಿಕೆ ಮತ್ತು ವಿಶೇಷ ಆಸನ ಅನುಮತಿಗಳನ್ನು ನಿರಾಕರಿಸಿದ ಕಾರಣ ಮುಂದಿನ 20 ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಮೆಡಿಯನ್ ಕುನಾಲ್ ಕಮ್ರಾ ಘೋಷಿಸಿದ್ದಾರೆ.
ಡಿಸೆಂಬರ್ 1ರಿಂದ 19ರ ನಡುವೆ ಬೆಂಗಳೂರಿನ ಜೆಪಿ ನಗರದ ಸ್ಥಳವೊಂದರಲ್ಲಿ ‘ಕುನಾಲ್ ಕಮ್ರಾ ಲೈವ್’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಕಮ್ರಾ ಪ್ರದರ್ಶಿಸಲು ಸಜ್ಜಾಗಿದ್ದರು. ಇತರ ರಾಜ್ಯಗಳಲ್ಲಿ ಇದೇ ರೀತಿಯ ಕಾರಣಗಳಿಂದಾಗಿ ಅವರ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ಕುನಾಲ್ ಅವರ ಆಪ್ತ ಮೂಲಗಳು ಹೇಳಿವೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಮ್ರಾ ಅವರ ಕಾರ್ಯಕ್ರಮ ರದ್ದಾಗಿದೆ.
ಗುಜರಾತ್ ಮೂಲದ ಮುನಾವರ್ ಫರೂಕಿ ನಂತರ ಕಳೆದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ತನ್ನ ಪ್ರದರ್ಶನವನ್ನು ರದ್ದುಪಡಿಸಿದ ಎರಡನೇ ಹಾಸ್ಯನಟ ಕಮ್ರಾ. ಮೂಲಗಳ ಪ್ರಕಾರ, ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯು ಕಮ್ರಾ ಅವರ ಪ್ರದರ್ಶನ ನಡೆಯಲಿರುವ ಆರ್ಟ್ ಖೋಜ್ ಮಾಲೀಕರಿಗೆ ಸಮನ್ಸ್ ನೀಡಿತ್ತು.
ಈ ಮಧ್ಯೆ, ನವೆಂಬರ್ 30 ರಂದು ಕೆಲವು ಜನರು ಸ್ಥಳದ ಹೊರಗೆ ಜಮಾಯಿಸಿ, ಪ್ರದರ್ಶನವನ್ನು ವಿರೋಧಿಸಿದರು. ಈ ವೇಳೆ ಪೊಲೀಸ್ ವ್ಯಾನ್ ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿತು ಎಂದು ಮೂಲಗಳು ತಿಳಿಸಿವೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಆರ್ಟ್ ಖೋಜ್ ಜೊತೆ ಪೊಲೀಸರು ಠಾಣೆಯಲ್ಲಿ ಸಭೆ ನಡೆಸಿದರು. ಕೋವಿಡ್-19 ನಿರ್ಬಂಧಗಳಿಂದಾಗಿ ಪ್ರದರ್ಶನವನ್ನು ರದ್ದುಗೊಳಿಸಲಾಗುತ್ತಿದೆ ಎಂದು ಲಿಖಿತವಾಗಿ ತಿಳಿಸಲು ಕೇಳಿಕೊಂಡರು ಎಂದು ಮೂಲಗಳು ಹೇಳುತ್ತವೆ. ಆದರೆ, ಕುನಾಲ್ ಕಮ್ರಾ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ಬೆದರಿಕೆಗಳಿಂದಾಗಿ ಕಾರ್ಯಕ್ರಮ ರದ್ದು ಮಾಡಲಾಗಿದೆ ಆರೋಪಿಸಿದ್ದಾರೆ. ಡಿಸೆಂಬರ್ 31ರವರೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಪೊಲೀಸರು ಸ್ಥಳದ ಮಾಲೀಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Cancelling comedy shows 101.
— Kunal Kamra (@kunalkamra88) December 1, 2021
😎😎😎 pic.twitter.com/fN0U7N8QrX
ಕಮ್ರಾ ಅವರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಡಿಸೆಂಬರ್ 1ರಂದು ಮಾಹಿತಿ ಹೊರಬಿದ್ದಿದೆ. ಮುನಾವರ್ ಅವರ ಕಾರ್ಯಕ್ರಮವನ್ನು ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ರದ್ದು ಮಾಡುವಾಗ ಪೊಲೀಸರು, “ಮುನಾವರ್ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ವಿವಾದಾತ್ಮಕ ವ್ಯಕ್ತಿಯಾಗಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು” ಎಂದಿದ್ದರು. ಕುನಾಲ್ ಕಮ್ರಾ ಪ್ರಕರಣದಲ್ಲಿ, ಪೊಲೀಸರು ಯಾವುದೇ ಆಕ್ಷೇಪಣೆಯನ್ನು ಲಿಖಿತವಾಗಿ ನೀಡಿಲ್ಲ.
ಎರಡು ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ತನ್ನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ಕಮ್ರಾ ಆರೋಪಿಸಿದ್ದಾರೆ. “ಮೊದಲನೆಯದಾಗಿ, ಹೆಚ್ಚು ಕುಳಿತುಕೊಳ್ಳಬಹುದಾದ ಸ್ಥಳದಲ್ಲಿ 45 ಜನರನ್ನು ಕೂರಿಸಲು ನಾವು ವಿಶೇಷ ಅನುಮತಿಗಳನ್ನು ಪಡೆದಿಲ್ಲ. ಎರಡನೆಯದಾಗಿ, ನಾನು ಎಂದಾದರೂ ಅಲ್ಲಿ ಪ್ರದರ್ಶನ ನೀಡಿದರೆ ಸ್ಥಳವನ್ನು ಮುಚ್ಚುವುದಾಗಿ ಬೆದರಿಕೆ ಹಾಕಲಾಗಿದೆ. ಇದು COVID-19 ಪ್ರೋಟೋಕಾಲ್ ಮತ್ತು ಹೊಸ ಮಾರ್ಗಸೂಚಿಗಳ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ವೈರಸ್‌ನ ರೂಪಾಂತರದಂತೆ ನಾನು ಕಾಣುತ್ತಿದ್ದೇನೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ಕಮ್ರಾ.
“ತನ್ನ ಪರಿಸ್ಥಿತಿಯನ್ನು ಮುನಾವರ್‌ಗೆ ಹೋಲಿಸಿರುವ ಕಮ್ರಾ, ಇಬ್ಬರನ್ನೂ ಒಂದೇ ರೀತಿಯಲ್ಲಿ ಮೌನಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ. ‘ಫಾರೂಕಿ ಹಾಸ್ಯವನ್ನು ತೊರೆಯಬೇಕಾದಾಗ ಕಮ್ರಾ ಹೇಗೆ ಪ್ರದರ್ಶನ ನೀಡುತ್ತಾನೆ’ ಎಂದು ಆಶ್ಚರ್ಯ ಪಡುವವರಿಗೆ ಆಡಳಿತ ವರ್ಗವು ಕನಿಷ್ಠ ಸಮಾನತೆಯಿಂದ ದಬ್ಬಾಳಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂಬ ಅಂಶದಿಂದ ನಾವು ಸಾಂತ್ವನವನ್ನು ಕಂಡುಕೊಳ್ಳಬಹುದು” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿರಿ: ಕರ್ನಾಟಕ ಹೈಕೋರ್ಟ್‌ನ ವಿಚಾರಣೆಯ ವೇಳೆ ಅರೆಬೆತ್ತಲೆಯಾಗಿ ಸ್ನಾನ ಮಾಡಿದ ವ್ಯಕ್ತಿ!


