ವಾಯು ಮಾಲಿನ್ಯ ಇದ್ದರೂ ಶಾಲೆ ತೆರೆದಿರುವುದರ ಬಗ್ಗೆ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಇದರ ನಂತರ ಮುಂದಿನ ಆದೇಶದವರೆಗೆ ದೆಹಲಿಯ ಶಾಲೆಗಳನ್ನು ನಾಳೆಯಿಂದ ಮುಚ್ಚಲಾಗುವುದು ಎಂದು ರಾಜ್ಯ ಪರಿಸರ ಸಚಿವ ಗೋಪಾಲ್ ರೈ ಗುರುವಾರ ಘೋಷಿಸಿದ್ದಾರೆ.
“ವಾಯು ಗುಣಮಟ್ಟ ಸುಧಾರಿಸುವ ಮುನ್ಸೂಚನೆಯನ್ನು ಪರಿಗಣಿಸಿ ನಾವು ಶಾಲೆಗಳನ್ನು ಪುನರಾರಂಭಿಸಿದ್ದೇವೆ. ಆದಾಗ್ಯೂ, ವಾಯು ಮಾಲಿನ್ಯದ ಮಟ್ಟವು ಮತ್ತೆ ಹೆಚ್ಚಾಗಿದ್ದು, ಮುಂದಿನ ಆದೇಶದವರೆಗೆ ನಾವು ಶುಕ್ರವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ” ಎಂದು ಗೋಪಾಲ್ ರೈ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ: ಸೋಮವಾರದಿಂದ ಶಾಲಾ- ಕಾಲೇಜು ಮತ್ತೆ ಆರಂಭ
ಹದಗೆಡುತ್ತಿರುವ ಗಾಳಿಯ ಗುಣಮಟ್ಟಕ್ಕೆ ಮುಖ್ಯ ಕಾರಣವೆಂದು ಪರಿಗಣಿಸಲಾದ ಕೈಗಾರಿಕೆ ಮತ್ತು ವಾಹನದ ಮಾಲಿನ್ಯದ ವಿರುದ್ದ ಕ್ರಮ ಕೈಗೊಳ್ಳಲು ಒಕ್ಕೂಟ ಸರ್ಕಾರ, ದೆಹಲಿ ಮತ್ತು ನೆರೆಯ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ 24 ಗಂಟೆಗಳ ಅಲ್ಟಿಮೇಟಮ್ ನೀಡಿದೆ.
ಶಾಲೆಗಳ ಪುನರಾರಂಭದ ಕುರಿತು ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸಿದ ಸುಪ್ರೀಂ ಕೋರ್ಟ್, “ಮೂರು-ನಾಲ್ಕು ವರ್ಷದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಆದರೆ ವಯಸ್ಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ. “ನಿಮ್ಮ ಸರ್ಕಾರದ ಆಡಳಿತವನ್ನು ನಡೆಸಲು ನಾವು ಯಾರನ್ನಾದರೂ ನೇಮಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಹೇಳಿದ್ದಾರೆ.
ನವೆಂಬರ್ 13 ರಿಂದ ಮುಚ್ಚಲ್ಪಟ್ಟ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳ ತರಗತಿಗಳು ಸೋಮವಾರದಿಂದ ಪುನರಾರಂಭಗೊಂಡಿದ್ದವು.
ಕಳೆದ ತಿಂಗಳು ದೀಪಾವಳಿಯ ನಂತರ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಕೃಷಿ ಭೂಮಿಯಲ್ಲಿ ಹೊತ್ತಿಸಲಾಗುತ್ತಿರುವ ಬೆಂಕಿ ಕೂಡಾ ಈ ವಾಯು ಮಾಲಿನ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ದೆಹಲಿಯು ಒಂದು ತಿಂಗಳಿನಿಂದ ವಾಯು ಮಾಲಿನ್ಯದಿಂದ ಬಳಲುತ್ತಿದೆ. ಮುಂದಿನ ಆದೇಶದವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವಿದೆ.
ಇದನ್ನೂ ಓದಿ:ದೆಹಲಿ ವಾಯುಮಾಲಿನ್ಯ: 5 ಸ್ಟಾರ್ ಹೋಟೆಲ್‌ನಲ್ಲಿ ಕುಳಿತ ಜನ ರೈತರನ್ನು ದೂಷಿಸುತ್ತಿದ್ದಾರೆ- ಸುಪ್ರೀಂ ತರಾಟೆ


