ಅಖಿಲ ಭಾರತ ಶ್ರಮಿಕ ಸ್ವರಾಜ್ ಕೇಂದ್ರ- ಕರ್ನಾಟಕವು ಕನ್ನಡದ ಹೆಸರಾಂತ ದಿಟ್ಟ ಪತ್ರಕರ್ತೆ ಹುತಾತ್ಮ ಗೌರಿ ಲಂಕೇಶ್‌ರವರ ಹೆಸರಿನಲ್ಲಿ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಬೆಂಗಳೂರಿಗೆ ವಲಸೆ ಬಂದು ನೆಲೆ ಕಂಡುಕೊಂಡಿರುವ ಬಡ ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಉಚಿತ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ.
ಶನಿವಾರ ಮಧ್ಯಾಹ್ನ 11 ಗಂಟೆಗೆ ಗೌರಿ ಲಂಕೇಶ್‌ರವರ ಸಹೋದರಿ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್‌ರವರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಂಬುಲೆನ್ಸ್‌ಗೆ ಚಾಲನೆ ನೀಡಲಿದ್ದಾರೆ ಎಂದು ಕಲೀಂ ಉಲ್ಲಾರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಂತರ ಬಡಜನರಿಗೆ ಆರೋಗ್ಯ ಸೇವೆಗಳು ಸುಲಭಕ್ಕೆ ಸಿಗುತ್ತಿಲ್ಲ. ಬೆಂಗಳೂರಿನ ಮಹಾದೇವಪುರ ಸುತ್ತಾ ಮುತ್ತ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಕೆಲಸ ಅರಸಿ ವಲಸೆ ಬಂದ ಸಾವಿರಾರು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕೋವಿಡ್ ಭಯವಿರುವುದರಿಂದ ಅವರಿಗೆ ಉಪಯೋಗವಾಗಲೆಂದು ಉಚಿತ ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಗೌರಿ ಲಂಕೇಶ್‌ರವರು ತಮ್ಮ ಜೀವನಪೂರ್ತಿ ಬಡವರು, ತಳಸಮುದಾಯದವರ ಪರ ಹೋರಾಡಿದರು ಮತ್ತು ಬರೆದರು. ಹಾಗಾಗಿ ನಮ್ಮ ಆಂಬುಲೆನ್ಸ್ ಸೇವೆಗೆ ಅವರ ಹೆಸರನ್ನು ಇಟ್ಟಿದ್ದೇವೆ. ಗೌರಿ ಲಂಕೇಶ್ ನಮ್ಮೊಳಗೆ ಸದಾ ಜೀವಂತವಿದ್ದಾರೆ ಎಂದು ಕಲೀಂ ಉಲ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯ ಅಧೋಗತಿಯ ಹಾದಿ ಹಿಡಿದದ್ದು ಹೇಗೆ?


