ಉತ್ತರ ಕನ್ನಡದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವೇರಿದ್ದು, ಸಮಬಲದ ಆಖಾಡದಲ್ಲಿ ಕಾಂಗ್ರೆಸ್-ಬಿಜೆಪಿ ಘಟಾನುಘಟಿಗಳು ದಾಳಿ-ಪ್ರತಿದಾಳಿ ಬಿರುಸಾಗಿ ನಡೆಸಿದ್ದಾರೆ. ಕಾರವಾರ-ಅಂಕೋಲಾದಲ್ಲಿ ಕಾಂಗ್ರೆಸ್‌ನ ಪ್ರಚಾರ ಉಸ್ತವಾರಿ ಹೊತ್ತುಕೊಂಡಿರುವ ಮಾಜಿ ಶಾಸಕ ಸತೀಶ್ ಸೈಲ್ ಹೋದಲ್ಲಿ ಬಂದಲ್ಲಿ ಬಿಜೆಪಿಗೆ ಹಿಂದುತ್ವ ಮತ್ತು ಮೀನುಗಾರರ ಮೇಲೆ ಪ್ರೀತಿ ಇದ್ದಿದ್ದರೆ ಮೀನುಗಾರರ ಹುಡುಗ ಪರೇಶ್ ಮೇಸ್ತನ ತಂದೆಯನ್ನು ಎಮ್ಮೆಲ್ಸಿ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸಾವಿಗೀಡಾದ ಹೊನ್ನಾವರದ ಪರೇಶ್ ಮೇಸ್ತ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿಗರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗೆದ್ದು ಬಂದಿದ್ದಾರೆ. ಮಗನ ಸಾವಿನ ನೋವಿನಲ್ಲಿದ್ದ ಪರೇಶ್‌ನ ತಂದೆಯನ್ನು ಮನೆಯಲ್ಲಿ ಇರಲುಬಿಡದೆ ಕರಾವಳಿ ಉದ್ದಕ್ಕೆ ಓಡಾಡಿಸಿ ಪ್ರಚಾರಕ್ಕೆ ಬಳಸಿಕೊಂಡು ದೊಡ್ಡ ಲಾಭ ಮಾಡಿಕೊಂಡಿದ್ದಾರೆ. ಆದರೆ ಈಗ ದೊರವಿಟ್ಟಿದದ್ದಾರೆ. ಅಂದು ಕಾಂಗ್ರೆಸ್ ಸರಕಾರವಿತ್ತು. ಬಿಜೆಪಿಯವರು ಪರೇಶ್ ಪ್ರಕರಣ ಸಿಬಿಐಗೆ ಕೊಡುವಂತೆ ಹಠ ಹಿಡಿದಿದ್ದರು. ಸಿದ್ದರಾಮಯ್ಯ ಸರಕಾರ ತಕ್ಷಣ ಸಿಬಿಐಗೆ ಕೇಸ್ ವಹಿಸಿತ್ತು. ಈಗ ರಾಜ್ಯ-ರಾಷ್ಟ್ರ ಎರಡು ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಪರೇಶ್ ಸಾವಿಗೆ ಅವರಿಂದ ನ್ಯಾಯ ಕೊಡಿಸಲಾಗಿಲ್ಲ ಎಂದು ಸೈಲ್ ವಾಗ್ದಾಳಿ ನಡೆಸಿದ್ದಾರೆ.
ಪರೇಶ್ ತಂದೆಗೆ ಎಮ್ಮೆಲ್ಸಿ ಟಿಕೆಟ್ ಬಿಜೆಪಿ ಕೊಟ್ಟು ಋಣ ತೀರಿಸುವ ಪ್ರಯತ್ನ ಮಾಡಬಹುದಿತ್ತು. ಅಂದು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ದೇಶಪಾಂಡೆ ಪರೇಶ್ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದರು; ಕೆಡಿಸಿಸಿ ಬ್ಯಾಂಕಲ್ಲಿ ಉದ್ಯೋಗ ಕೊಡುವುದಾಗಿ ಅದರ ಅಧ್ಯಕ್ಷರಾಗಿದ್ದ ಎಸ್.ಎಲ್.ಘೋಟನೇಕರ್ ಹೇಳಿದ್ದರು. ಆದರೆ ಪರೇಶ್ ಕುಟುಂಬದವರು ಅದನ್ನು ತಿರಸ್ಕರಿಸುವಂತೆ ಬಿಜೆಪಿಯವರು ಮಾಡಿದ್ದರು. ಬಿಜೆಪಿಗರು ಪರೇಶ್ ಪರಿವಾರವನ್ನು ಬಳಸಿಕೊಂಡು ದೂರ ಮಾಡಿದರಷ್ಟೇ ಎಂದು ಅವರು ದೂರಿದ್ದಾರೆ.
ಬಿಜೆಪಿಯವರಿಗೆ ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡುವುದು ಬಿಟ್ಟು ಬೇರೇನು ಗೊತ್ತಿಲ್ಲ. ಚುನಾವಣೆಗಾಗಿ ಹಿಂದುತ್ವ ಮಾಡುವುದನ್ನು ಬಿಟ್ಟು ಇನ್ನಾದರು ಸಮಾಜದ ಒಳಿತಿಗೆ ಕೆಲಸ ಮಾಡುವುದನ್ನು ಬಿಜೆಪಿಗರು ಕಲಿಯಲಿಯೆಂದು ಸತೀಶ್ ಸೈಲ್ ಹೇಳಿದ್ದಾರೆ.
ಇದನ್ನೂ ಓದಿ: ಒಮೈಕ್ರಾನ್‌ಗೆ ಬೂಸ್ಟರ್ ಡೋಸ್ ಶಿಫಾರಸು; ಕರ್ನಾಟಕದಲ್ಲಿ ದ.ಆಫ್ರಿಕಾದ 10 ಜನರು ನಾಪತ್ತೆ


