ಭಾರೀ ಪೊಲೀಸ್ ಉಪಸ್ಥಿತಿಯ ಹೊರತಾಗಿಯೂ ಗುರ್‌ಗಾಂವ್‌ನಲ್ಲಿ ಬಲಪಂಥೀಯ ಕಾರ್ಯಕರ್ತರು ಇಂದು(ಶುಕ್ರವಾರ) ಮತ್ತೆ ಮುಸ್ಲಿಮರು ಶುಕ್ರವಾರದ ನಮಾಜ್ ಮಾಡುವುದಕ್ಕೆ ಅಡ್ಡಿಪಡಿಸಿದ್ದಾರೆ. ಶುಕ್ರವಾರದ ನಮಾಜ್‌ಗೆ ಸರ್ಕಾರ ಗೊತ್ತುಪಡಿಸಿದ ಸ್ಥಳದಲ್ಲಿ ನಮಾಜ್ ಮಾಡದಂತೆ ತಡೆಯಲು ಬಂದ ಸುಮಾರು ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಐವರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಸೆಕ್ಟರ್ 37 ರ ನಮಾಜ್ ಸೈಟ್‌ನಲ್ಲಿ ನಡೆದ ಘಟನೆಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಲಪಂಥೀಯ ಕಾರ್ಯಕರ್ತರು ಮುಸ್ಲಿಮರು ನಮಾಜ್ ಮಾಡುತ್ತಿದ್ದ ಸ್ಥಳದಿಂದ 30 ಮೀಟರ್‌ಗಿಂತ ಕಡಿಮೆ ಅಂತರದಿಂದ ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ:ದೆಹಲಿ: ಸ್ಥಳೀಯರ ವಿರೋಧದಿಂದ ನಮಾಜ್‌ಗೆ ನಿಗದಿಪಡಿಸಿದ್ದ 8 ಸ್ಥಳಗಳ ಅನುಮತಿ ವಾಪಸ್
ನಮಾಜ್ ಸ್ಥಳವು ಪೊಲೀಸ್ ಠಾಣೆಗೆ ಸಮೀಪವಿದ್ದರೂ, ಮೈದಾನದಲ್ಲಿ ಭದ್ರತಾ ವ್ಯವಸ್ಥೆಯು ಅಸಮರ್ಪಕವಾಗಿತ್ತು ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ಹೇಳಿದೆ. ವಿಡಿಯೊದಲ್ಲಿ, ನಮಾಜ್‌ಗೆ ಅಡ್ಡಿಪಡಿಸದಂತೆ ಪೊಲೀಸರು ಬಲಪಂಥೀಯ ಕಾರ್ಯಕರ್ತರು ತಡೆಯಲು ಪ್ರಯತ್ನಿಸುತ್ತಿರುವುದು ಕಾಣುತ್ತದೆ.
ನಮಾಜ್ ಸೈಟ್‌ನ ಕಡೆಗೆ ನಡೆಯುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ದುಷ್ಕರ್ಮಿಯೊಬ್ಬ ತಡೆಯಲು ಬರುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಅವನನ್ನು ಕರೆದೊಯ್ದಿದ್ದಾರೆ.
ವರದಿಗಳ ಪ್ರಕಾರ, ಸುಮಾರು 15 ಮುಸ್ಲಿಮರು ಇಂದು ನಮಾಜ್‌ಗಾಗಿ ಮೈದಾನದಲ್ಲಿ ಜಮಾಯಿಸಿ, ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ನಡುವೆಯೆ ಬಲಪಂಥೀಯರು ‘ಜೈ ಶ್ರೀ ರಾಮ್’ ಮತ್ತು ‘ವಂದೇ ಮಾತರಂ’ ಘೋಷಣೆ ಕೂಗಿದ್ದಾರೆ. ಇದಕ್ಕೂ ಮುಂಚೆ ಬೇರೆ ಕಡೆ ತಮ್ಮ ಟ್ರಕ್‌ಗಳನ್ನು ನಿಲ್ಲಿಸಲು ಜಾಗವಿಲ್ಲ ಎಂದು ಹೇಳಿ ಸ್ಥಳೀಯರು ತಮ್ಮ ಟ್ರಕ್‌ಗಳನ್ನು ನಮಾಜ್‌ಗೆ ಗೊತ್ತು ಪಡಿಸಿದ್ದ ಮೈದಾನದಲ್ಲಿ ನಿಲ್ಲಿಸಿದ್ದರು.
2018 ರಲ್ಲಿ ಇದೇ ರೀತಿಯ ಘರ್ಷಣೆಯಾಗಿ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಪ್ಪಂದ ನಡೆದು ಸೆಕ್ಟರ್ 37 ನಲ್ಲಿರುವ ಮೈದಾನವು ನಮಾಜ್‌ಗಾಗಿ ಮೀಸಲಿಡಲಾಗಿತ್ತು. ಅಂದು ಗೊತ್ತು ಪಡಿಸಲಾಗಿದ್ದ 29 ಸೈಟ್‌ಗಳಲ್ಲಿ ಇದೂ ಒಂದಾಗಿದೆ.
ನಮಾಜ್ ಮಾಡಬಾರದು ಎಂದು ಪ್ರತಿಭಟನೆಗಳು ನಡೆದು ಮೊದಲ ಸುದ್ದಿಯಾದಾಗ ಹರಿಯಾಣ ಮುಖ್ಯಮಂತ್ರಿ ಖಟ್ಟರ್, “ಎಲ್ಲರಿಗೂ ಪ್ರಾರ್ಥನೆ ಮಾಡುವ ಹಕ್ಕಿದೆ. ಆದರೆ ಪ್ರಾರ್ಥನೆ ಮಾಡುವವರು ರಸ್ತೆ ಸಂಚಾರವನ್ನು ನಿರ್ಬಂಧಿಸಬಾರದು” ಎಂದು ಹೇಳಿಕೆ ನೀಡಿದ್ದರು.



ರೋಡಲ್ಲಿ ನಮಾಜ್ ಮಾಡಿದರೆ ,ಸಾರ್ವಜನಿಕರ ಬದುಕಿಗೆ ಅಡ್ಡಿ ಮಾಡಿದರೆ ಯಾವುದೇ ಮುಲಾಜಿಲ್ಲದೇ ಅಲ್ಲಿಂದ ನಮಾಜ್ ಮಾಡುವವರ ವಿರುದ್ಧ ಘೋಷಣೆ ಕೂಗದೇ ಇರಲಾರು