ಮೈಸೂರಿನ ರಂಗಾಯಣವು ಡಿಸೆಂಬರ್ 10 ರಿಂದ 19 ರವರೆಗೆ ನಡೆಸಲು ಉದ್ದೇಶಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಸರ್ಕಾರದ ಕೋವಿಡ್-19 ಮಾರ್ಗಸೂಚಿಯ ಕಾರಣಕ್ಕಾಗಿ ಮುಂದೂಡಿದೆ.
ಕೋವಿಡ್-19ರ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ ಓಮೈಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿ 500ಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿದೆ. ಆದರೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಪ್ರತಿದಿನ ಸಾವಿರಾರು ರಂಗಾಸಕ್ತರು ಭಾಗವಹಿಸುತ್ತಾರೆ. ಪ್ರತಿದಿನ ಪ್ರದರ್ಶನ ನೀಡುವ ಕಲಾವಿದರೇ 500ಕ್ಕಿಂತ ಹೆಚ್ಚು ಜನ ಭಾಗವಹಿಸುತ್ತಾರೆ. ಇವರನ್ನು ನಿರ್ಬಂಧಿಸಿ ಕಾರ್ಯಕ್ರಮ ನಡೆಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಆದುದರಿಂದ ಈಗ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮುಂದೂಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಜನವರಿ ಮೊದಲ ವಾರದಲ್ಲಿ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ರಂಗಾಯಣ ಫೇಸ್ಬುಕ್ ಪುಟದಲ್ಲಿ ತಿಳಿಸಲಾಗಿದೆ.
ಈ ಕುರಿತು ಅಧಿಕೃತ ಮಾಹಿತಿ ಪಡೆಯಲು ನಾನುಗೌರಿ.ಕಾಂ ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪರವರನ್ನು ಸಂಪರ್ಕಿಸಿದಾಗ ಅವರು ಮಾಹಿತಿ ನೀಡಲು ನಿರಾಕರಿಸಿದ್ದಲ್ಲದೆ ಅತ್ಯಂತ ಉಡಾಫೆಯಿಂದ, ಉದ್ಧಟತನದಿಂದ ನಡೆದುಕೊಂಡಿದ್ದು, ಅಸಾಂವಿಧಾನಿಕ ಪದಗಳನ್ನು ಬಳಸಿ ನಿರ್ದೇಶಕ ಹುದ್ದೆಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ನಾನು ನಿಮಗೆ ಯಾವುದೇ ಮಾಹಿತಿ ಕೊಡುವುದಿಲ್ಲ. ನೀವು ಅನಾವಶ್ಯಕವಾಗಿ ನನ್ನ ಫೋಟೊವನ್ನು ಪ್ರಕಟಿಸಿ ಅವಮಾನ, ಚಾರಿತ್ರ್ಯವಧೆ ಮಾಡಿದ್ದೀರಿ, ನಿಮ್ಮ ಸಿದ್ಧಾಂತಗಳು ನಿಮಗಾದರೆ, ಹೌದ್ರಿ ನಾನು ಆರ್ಎಸ್ಎಸ್, ಪ್ರಧಾನ ಮಂತ್ರಿ ಆರ್ಎಸ್ಎಸ್, ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿ ಆರ್ಎಸ್ಎಸ್ ಏನ್ ಇವಾಗ? ಎಂದು ಅಸಾಂವಿಧಾನಿಕ ಪದಗಳನ್ನು ಬಳಸಿ ಹೀಗಳೆದಿದ್ದಾರೆ. ನಂತರ ಫೋನ್ ನಂಬರ್ ಅನ್ನು ಬ್ಲಾಕ್ ಲಿಸ್ಟ್ಗೆ ಹಾಕಿದ್ದಾರೆ.
ರಂಗಾಯಣದ ನಿರ್ದೇಶಕರೇಕೆ ಹೀಗೆ?
ಈ ಮೊದಲು ಡಿಸೆಂಬರ್ 10 ರಿಂದ 19 ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸಲು ನಿರ್ಧರಿಸಿ ಸಮಾರೋಪ ಸಮಾರಂಭಕ್ಕೆ ವಿವಾದಾತ್ಮಕ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರಿಗೆ ಆಹ್ವಾನ ನೀಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಕುರಿತು ಅಡ್ಡಂಡ ಕಾರ್ಯಪ್ಪ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗ “ಚಕ್ರವರ್ತಿ ಸೂಲಿಬೆಲೆ ಅವರು ಹೇಳುವುದು ನಿಮಗೆ ಸುಳ್ಳಾಗಿರಬಹುದು, ಆದರೆ ನಮಗಲ್ಲ. ಅವರನ್ನು ಕಂಡರೆ ನಿಮಗೆ ಆಗಲ್ಲ, ನಮಗೆ ಅವರನ್ನು ಕಂಡರೆ ಆಗುತ್ತದೆ” ಎಂದು ಉತ್ತರಿಸಿದ್ದರು.
“ಬಹುರೂಪಿಯು ಬಹುತ್ವವನ್ನು ಪ್ರತಿನಿಧಿಸುವ ಒಂದು ಕಾರ್ಯಕ್ರಮ. ಬಹುತ್ವದ ಬಗ್ಗೆ ನಂಬಿಕೆ ಇರದವರನ್ನು ವೇದಿಕೆಗೆ ಕರೆಸುವುದು ಎಷ್ಟು ಸರಿ?” ಎಂದು ಕೇಳಿದ್ದಕ್ಕೆ, “ಈ ಸಿದ್ಧಾಂತವನ್ನೆಲ್ಲ ನಿಮಗೆ ಇಟ್ಟುಕೊಳ್ಳಿ. ನಮಗಲ್ಲ. ಇನ್ನೊಬ್ಬರನ್ನು ಓಲೈಸಲು ಆಗಲ್ಲ. ಸೂಲಿಬೆಲೆ ನಿಮಗೆ ಸುಳ್ಳುಗಾರರಾಗಿರಬಹುದು. ನಮಗೆ ಸುಳ್ಳುಗಾರನಲ್ಲ. ಒಂದು ವರ್ಷ ಅಧಿಕಾರದಲ್ಲಿರುತ್ತೇನೆ, ಏನು ಬರೆದುಕೊಳ್ಳುತ್ತೀರೋ ಬರೆದುಕೊಳ್ಳಿ. ಯಾವುದಕ್ಕೂ ಧೃತಿಗೆಡುವುದಿಲ್ಲ ಎಂದು ಉಡಾಫೆಯಿಂದ ಉತ್ತರಿಸಿದ್ದರು. ಇದನ್ನು ನಾನುಗೌರಿ ಯಥಾವತ್ ಪ್ರಕಟಸಿತ್ತು. ಆ ಸಿಟ್ಟಿನಲ್ಲಿ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ಬೇಕಾಬಿಟ್ಟಿ ಮಾತಾನಾಡುತ್ತಿದ್ದಾರೆ.
ಮೈಸೂರು ರಂಗಾಯಣದ ಪ್ರತಿಷ್ಟಿತ ಕಾರ್ಯಕ್ರಮವಾದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಬಿಜೆಪಿ ಬೆಂಬಲಿತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕ ಅವಿನಾಶ್ ಅವರನ್ನು ಕರೆಸಬಾರದು ಎಂದು ‘ಪರ್ವ’ ನಾಟಕದ ಕಿರಿಯ ಕಲಾವಿದರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಇಂದು ಪತ್ರ ಬರೆದಿದ್ದಾರೆ.
ಆದರೆ ಇಂದು ರಂಗಾಯಣ ಬಿಡುಗಡೆ ಮಾಡಿರುವ ಪತ್ರಿಕಾಹೇಳಿಕೆಯಲ್ಲಿ “ಈಗ ತೀರ್ಮಾನಿಸಿರುವಂತೆ ಭಾಗವಹಿಸುವ ಎಲ್ಲಾ ನಾಟಕ ತಂಡಗಳು, ಜಾನಪದ ತಂಡಗಳು, ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳು, ಈ ಮೊದಲು ನಿಶ್ಚಿತವಾದ ಸಮಾರಂಭದ ಎಲ್ಲಾ ಅತಿಥಿಗಳು ಅವರೇ ಇರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಾರ್ಯಕ್ರಮ ಮುಂದೂಡಿರುವುದರಿಂದ ಆಗಿರುವ ತೊಂದರೆಗಳಿಗೆ ವಿಷಾದಿಸುತ್ತೇವೆ” ಎಂದು ತಿಳಿಸಿದೆ.
ಇದನ್ನೂ ಓದಿ; ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ


