ಕಳೆದ ಅಕ್ಟೋಬರ್ 29 ರಂದು ನಮ್ಮನ್ನಗಲಿದ ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆಯ ಸಾಕ್ಷ್ಯಚಿತ್ರದ ಟೈಟಲ್ ಹಾಗೂ ಟೀಸರ್ ಇಂದು (ಡಿ.6) ಬಿಡುಗಡೆಯಾಗಿದೆ. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಕುರಿತು ಮಾಡಿರುವ ಈ ಡಾಕ್ಯುಮೆಂಟರಿಗೆ “ಗಂಧದಗುಡಿ” ಎಂದು ಹೆಸರಿಡಲಾಗಿದೆ.
ನಾಡಿನ ಕಾಡು, ಮೇಡು ಅಲೆದು ಪುನೀತ್ ರಾಜ್‌ಕುಮಾರ್ ಅವರು ಈ ಡಾಕ್ಯುಮೆಂಟರಿ ಮಾಡಿದ್ದರು. ಇದರ ಬಗ್ಗೆ ಅಕ್ಟೋಬರ್ 27 ರಂದು ಚಿಕ್ಕ ಸುಳಿವು ಕೂಡ ನೀಡಿದ್ದರು. ಆದರೆ ಅಷ್ಟರಲ್ಲಿ ಅನಿರೀಕ್ಷಿತ ಘಟನೆ ನಡೆದುಹೋಯಿತು.
ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಗಂಧದಗುಡಿ ಟೀಸರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಡ್‌ಸ್ಕಿಪ್ಪರ್ ಸಂಸ್ಥೆಯವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘವರ್ಷ ನಿರ್ದೇಶನ ಗಂಧದಗುಡಿಗಿದೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಸಂಸ್ಥೆಯ ದೇಣಿಗೆಗಾಗಿ ಆಯೋಜಿಸಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಪೊಲೀಸರು
ಕಳೆದ ಅಕ್ಟೋಬರ್ 27 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸಾಕ್ಷ್ಯಚಿತ್ರದ ಬಗ್ಗೆ ಅಪ್ಪು ಬರೆದುಕೊಂಡಿದ್ದು ಹೀಗೆ…”ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ” ಎಂದಿದ್ದರು. ನವೆಂಬರ್ 1 ರಂದು ಟೀಸರ್ ಬಿಡುಗಡೆಯಾಗಬೇಕಿತ್ತು.
ಸಾಕ್ಷ್ಯಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಬಹಳ ವಿರಳ. ಆದರೆ, ಗಂಧದಗುಡಿ ಚಿತ್ರಿಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 2022 ಕ್ಕೆ ಚಿತ್ರಮಂದಿರಗಳಿಗೆ ಕಾಲಿಡಲಿದೆ ಎಂದು ಚಿತ್ರತಂಡ ತಿಳಿಸಿದೆ.
ಗಂಧಧಗುಡಿ ಟೀಸರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಚಿತ್ರರಂಗದವರು, ಅಭಿಮಾನಿಗಳು ಸೇರಿದಂತೆ ಹಲವರು ಹಂಚಿಕೊಂಡಿದ್ದು ಮಿಸ್ ಯು ಅಪ್ಪು ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಸರ್ ಹಂಚಿಕೊಂಡಿದ್ದು, “ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.


