ಅಕಾಲಿಕ ಮಳೆಯಿಂದ ಭತ್ತ, ಗೋವಿನಜೋಳ, ಹತ್ತಿ, ಕಬ್ಬು, ಅಡಿಕೆ ನೀರುಪಾಲಾಗಿ ರೈತರ ಬದುಕು ಮೂರಾಬಟ್ಟೆಯಾಗಿದ್ದರೆ, ಮತ್ತೊಂದೆಡೆ ತರಕಾರಿ ಬಳೆದು ಬದುಕತ್ತಿದ್ದ ಕೃಷಿಕರ ಕೈಗೆ ಫಸಲು ಸಿಗದಂತಾಗಿದೆ. ನಿರಂತರ ಮಳೆಯ ಮಧ್ಯೆ ಅಳಿದುಳಿದ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದು ಗಣಮಟ್ಟ ಇಲ್ಲದಾಗಿದೆ. ಇದರಿಂದಾಗಿ ಸಾಮಾನ್ಯವಾಗಿ ಎಲ್ಲ ತರಕಾರಿ ವಿಪರೀತ ತುಟ್ಟಿಯಾಗಿದ್ದು, ಕೃಷಿಕ ಮತ್ತು ಗ್ರಾಹಕ ಇಬ್ಬರ ಕಣ್ಣಲ್ಲೂ ನೀರು ತರಿಸುತ್ತಿದೆ!
ಅನಾಹುತಕಾರಿ ಮಳೆಗೆ ವಿಶೇಷವಾಗಿ ಟೊಮೊಟೊ ಬೆಳೆ ನೆಲ ಕಚ್ಚಿದ್ದು, ಇದ್ದರಿಂದಾಗಿ ಒಂದು ಕೆಜಿ.ಗೆ 80 ರಿಂದ 100ರೂ ಕೊಡಬೇಕಾಗಿದೆ. ಟೊಮೇಟೊದಂತೆ ಉಳಿದ ಕಾಯಿ-ಪಲ್ಲೆ ದರವೂ ಏರಿಕೆಯಾಗಿದೆ. ಇದು ಮಧ್ಯಮ ವರ್ಗದ ಬದುಕನ್ನು ದುರ್ಬರಗೊಳಿಸಿಬಿಟ್ಟಿದೆ. ಉತ್ತರ ಕನ್ನಡಕ್ಕೆ ಪಕ್ಕದ ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ತರಕಾರಿ-ಟೊಮೇಟೊ ಸರಬರಾಜಾಗುತ್ತದೆ. ಅಲ್ಲೆಲ್ಲ ಮಳೆಯ ಹೊಡೆತಕ್ಕೆ ತರಕಾರಿ ಬೆಳೆ ನಾಶವಾಗಿದೆ. ಇದರಿಂದಾಗಿ ಜಿಲ್ಲೆಯ ತರಕಾರಿ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದ್ದು, ಗ್ರಾಹಕ ತರಕಾರಿ ಬೆಲೆಯೇರಿಕೆಗೆ ಬೆಚ್ಚಿಬಿದ್ದಿದ್ದಾನೆ!
ಎರಡು ವಾರದ ಹಿಂದೆ ಇದ್ದಕ್ಕಿದಂತೆ ಟೊಮೊಟೊ ದರ ಕೆಜಿಗೆ 100 ರೂ.ದಾಟಿತ್ತು. ನಂತರದ ವಾರದಲ್ಲಿ 40 ರಿಂದ 60 ರೂ.ಗೆ ಇಳಿದಿತ್ತು. ಈಗ ಮತ್ತೆ 70 ರಿಂದ 80 ರೂಗೆ ಏರಿಕೆಯಾಗಿದೆ. ಜತೆಗೆ ಬೇರೆಬೇರೆ ಕಾಯಿ-ಪಲ್ಲೆಯೂ 60 ರಿಂದ 80ರ ಆಸುಪಾಸಿನಲ್ಲೆ ಗಿರಕಿ ಹೊಡೆಯುತ್ತಿರುವುದು ಎಲ್ಲ ವರ್ಗದ ಗ್ರಾಹಕರನ್ನು ದಿಕ್ಕೆಡಿಸಿದೆ. ಅಲ್ಪ-ಸ್ವಲ್ಪ ಏರಿಕೆಯಾದರೆ ಹೇಗಾದರೂ ಸಂಬಾಳಿಸಿ ಕಾಲ ಕಳೆಯಬಹುದು; ಆದರೆ ಈ ರೀತಿ 4-6 ಪಟ್ಟು ದುಬಾರಿಯಾದರೆ ಬದುಕುವುದಾದರೂ ಹೇಗೆ? ಎಂದು ಜನರು ಹೇಳುತ್ತಾರೆ. ನಮಗೇನೂ ಸಂಬಳ-ಕೂಲಿ ಹೆಚ್ಚಾಗಿಲ್ಲ. ದಿನಸಿ, ತರಕಾರಿ ಬೆಲೆ ಮಾತ್ರ ಒಂದೇ ಸಮನೆ ಗಗನಕ್ಕೆ ನೇಗೆಯುತ್ತಿದೆಯೆಂದು ಅಂದಿನ ತುತ್ತು ಅಂದು ಗಳಿಸಿ ತಿನ್ನುವ ಮಂದಿ ಗೋಗರೆಯುತ್ತಾರೆ!
ಇಷ್ಟೇಕೆ ತರಕಾರಿ ದರ ಏರಿಕೆಯಾಗುತ್ತಿದೆ. ನೀವು ಹೇಗೆ ಖರೀದಿಸಲು ಸಾಧ್ಯವಾಗುತ್ತದೆ ಎಂದು ತರಕಾರಿ ವ್ಯಾಪಾರಿಗಳನ್ನು ಕೇಳಿದರೆ, ತರಕಾರಿ ಬೆಳೆಯುವ ಹತ್ತಿರದ ಪ್ರದೇಶಗಳಲ್ಲಿನ ನಿರಂತರ ಅಕಾಲಿಕ ಮಳೆ ಹಾವಳಿಯಿಂದ ಟೊಮ್ಯಾಟೊ ಗಿಡಗಳು ಮತ್ತಿತರ ತರಕಾರಿ ಫಸಲು ಕೊಳೆತುಹೋಗಿದೆ. ದೂರದ ನಾಸಿಕ್‌ನಿಂದ ಟೊಮ್ಯಾಟೊ ತರಿಸುತ್ತಿದ್ದೇವೆ. ಹಾಗಾಗಿ ಸಾಗಾಣಿಕಾ ವೆಚ್ಚ ಮತ್ತು ದುಬಾರಿ ಖರೀದಿಯಿಂದ ತುಟ್ಟಿ ಮಾರದಿದ್ದರೆ ನಮಗೇನು ಗಿಟ್ಟುವುದಿಲ್ಲ ಎಂದು ಬೇಸರದಿಂದಲೆ ಹೇಳುತ್ತಾರೆ. ಮಹಾರಾಷ್ಟ್ರ ಕಡೆಯಿಂದ ಜಿಲ್ಲೆಗೆ ಪ್ರತಿ ದಿನ ಟನ್‌ಗಟ್ಟಲೆ ಟೊಮೇಟೊ ಬರುತ್ತಿದ್ದು ದರವೂ ಗಾಬರಿ ಹುಟ್ಟಿಸುವಂತಿದೆ.

ಉತ್ತರ ಕನ್ನಡಕ್ಕೆ ಹೊರ ಜಿಲ್ಲೆಗಳಿಂದ ಬರುವ ತರಕಾರಿ ಬೆಲೆ ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ. ಹಾಗಂತ ಗೋಕರ್ಣ ಸೀಮೆಯ ತರಕಾರಿ ತಾಜಾ ಮತ್ತು ಸ್ವಲ್ಪ ಕಡಿಮೆ ಬೆಲೆಗೆ ಸಿಗತ್ತಿದೆ. ಆ ಭಾಗದ ಹಾಲಕ್ಕಿ ಒಕ್ಕಲು ಬುಡಕಟ್ಟಿನ ಮಂದಿ ಮತ್ತಿತರ ಸಮುದಾಯದವರು ತರಕಾರಿ ಬೆಳೆಯುತ್ತಿದ್ದು ಅದಕ್ಕೆ ವಿಶೇಷ ಬೇಡಿಕೆಯಿದೆ. ಆದರೆ ಜಿಲ್ಲೆಯ ಬೇಡಿಕೆ ಪೂರೈಸುವಷ್ಟು ಪ್ರಮಾಣದಲ್ಲಿ ಗೋಕರ್ಣ ಸೀಮೆಯಲ್ಲಿ ತರಕಾರಿ ಬೆಳೆಯಿಲ್ಲ. ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳಿಯ ಶಾಸಕರು ಒಳ್ಳೆಯ ಗುಣಮಟ್ಟದ ಗೋಕರ್ಣ ಸೀಮೆ ತರಕಾರಿ ಕೃಷಿ ವಿಸ್ತರಣೆಗೆ ಯೋಚಿಸಬೇಕಿದೆಯೆಂಬ ಆಗ್ರಹ ಬಹಳ ಹಿಂದಿನದು. ಈ ದುಬಾರಿ ದಿನಮಾನದಲ್ಲಿ ಗೋಕರ್ಣ ಸೀಮೆ ತರಕಾರಿ ಕ್ಷೇತ್ರ ವಿಸ್ತರಣೆ ಪ್ರೋತ್ಸಾಹಿಸುವ ಅಗತ್ಯದ ಮಾತು ಮತ್ತೆ ಕೇಳಿ ಬರುತ್ತಿದೆ.
ಉತ್ತರ ಕನ್ನಡದ ತರಕಾರಿ ದರ (ಪ್ರತಿ ಕೆಜಿಗೆ)
ಚವಳಿ : 80ರೂ.
ತೊಂಡೆಕಾಯಿ : 30-50ರೂ
ಬೀಟ್ರೂಟ್ : 40-50ರೂ
ಬೆಂಡೆಕಾಯಿ : 60-70ರೂ
ಬೀನ್ಸ್ : 100-120ರೂ
ಹಾಗಲಕಾಯಿ : 80ರೂ.
ಹಸಿ ಮೆಣಸು : 60ರೂ
ನವಿಲುಕೋಸ್ : 60ರೂ
ನುಗ್ಗೆಕಾಯಿ : 100ರೂ
ಬದನೆಕಾಯಿ : 80ರೂ
ಟೊಮ್ಯಾಟೊ : 70-80ರೂ
ಈರುಳ್ಳಿ: 40-50ರೂ
ಬಟಾಣಿ : 30ರೂ
ಹೀರೆಕಾಯಿ : 60ರೂ
ಕ್ಯಾರೇಟ್ : 80ರೂ
ಸೌತೆಕಾಯಿ : 70ರೂ
ಹರಗಿ-1 ಕಟ್ಟು : 10ರೂ
ಬಸಳೆ-1ಕಟ್ಟು : 40ರೂ
ಇದನ್ನೂ ಓದಿ: ಟೊಮಟೊ ಟ್ರಾಲ್: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್ ಸೃಷ್ಟಿ; ನೋಡಿ ನಕ್ಕುಬಿಡಿ


