ರಷ್ಯಾದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಭಾರತದೊಂದಿಗೆ ಮಾತುಕತೆ ಮುಕ್ತಾಯದ ಹಂತದಲ್ಲಿದೆ ಮತ್ತು ಸ್ಪುಟ್ನಿಕ್ ವಿ ತಯಾರಿಕೆಯ ಒಪ್ಪಂದವನ್ನು ಸಹ ಕಾರ್ಯಗತಗೊಳಿಸಲಾಗುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಸೋಮವಾರ ಬಹಿರಂಗಪಡಿಸಿದ್ದಾರೆ. ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗಿನ 2+2 ಸಭೆಯ ನಂತರ ಲಾವ್ರೊವ್ ಈ ಹೇಳಿಕೆ ನೀಡಿದ್ದಾರೆ.
“ಪ್ರತಿ ವರ್ಷ ಸುಮಾರು ನೂರು ಮಿಲಿಯನ್ ಡೋಸ್‌ಗಳಷ್ಟು ದೊಡ್ಡ ಪ್ರಮಾಣದಲ್ಲಿ ನಿರೀಕ್ಷಿಸಲಾಗಿದೆ” ಎಂದು ಅವರು ಹೇಳಿದ್ದಾರೆಂದು ರಷ್ಯಾದ ಸುದ್ದಿ ಸಂಸ್ಥೆ TASS ಉಲ್ಲೇಖಿಸಿದೆ. ಸೆಪ್ಟೆಂಬರ್ ಮಧ್ಯದಲ್ಲಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅಡಿಯಲ್ಲಿ ತಜ್ಞರ ಸಮಿತಿಯು ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಅಧ್ಯಯನದ ಮೂರನೇ (ಅಂತಿಮ) ಹಂತದ ಮಧ್ಯಂತರ ಪರೀಕ್ಷೆಗಳಿಗೆ ಅನುಮತಿಯನ್ನು ನೀಡಿತು.
ಇದನ್ನೂ ಓದಿ:ಲಸಿಕೆಯಿಂದ ಅಡ್ಡಪರಿಣಾಮವಿಲ್ಲ ಎಂಬ ಗ್ಯಾರಂಟಿ ಕೊಡ್ತೀರಾ? ಡಿಸಿಯಿಂದ ಮುಚ್ಚಳಿಕೆ ಬರೆಸಿ ಲಸಿಕೆ ಪಡೆದ ವ್ಯಕ್ತಿ!
ದೇಶದಲ್ಲಿ ಭವಿಷ್ಯದ ಉತ್ಪಾದನೆಯ ಭರವಸೆಯೊಂದಿಗೆ ಸ್ಪುಟ್ನಿಕ್ ಲೈಟ್ ಪ್ರಯತ್ನವನ್ನು ಬೆಂಬಲಿಸುತ್ತಿರುವ ರಷ್ಯಾದ ನೇರ ಹೂಡಿಕೆ ನಿಧಿ (RDIF)ಯು 12-17 ವರ್ಷ ವಯಸ್ಸಿನ ಹದಿಹರೆಯದವರಿಗೆ ಉದ್ದೇಶಿಸಿರುವ ಸ್ಪುಟ್ನಿಕ್ M ಲಸಿಕೆಯ ವಿವರಗಳನ್ನು ಭಾರತೀಯ ನಿಯಂತ್ರಕರಿಗೆ ಒದಗಿಸಿದೆ ಎಂದು ಬಹಿರಂಗಪಡಿಸಿದೆ.
ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್ ಡಿಮಿಟ್ರಿವ್ ಅವರು ಸ್ಪುಟ್ನಿಕ್ ಲೈಟ್ ಉತ್ಪಾದನೆಯನ್ನು ಭಾರತದ ಅತಿದೊಡ್ಡ ಲಸಿಕೆ ಉತ್ಪಾದಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. “ನಾವು ಡಿಸೆಂಬರ್‌ನಲ್ಲಿ ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಅನ್ನು ಪ್ರಾರಂಭಿಸುವ ಭರವಸೆ ಹೊಂದಿದ್ದೇವೆ ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಭಾರತವು ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಅಸ್ಟ್ರಾಜೆನೆಕಾದ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಬಳಸುತ್ತಿದೆ. ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಸಹ ಭಾರತೀಯರಿಗೆ ಲಸಿಕೆಗಳನ್ನು ಬಿಡುಗಡೆ ಮಾಡಲು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.
ಇದನ್ನೂ ಓದಿ:ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್


