ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಶಾಸನಬದ್ಧವಾಗಿ ಕಾನೂನು ಖಾತರಿ ಹಾಗೂ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮರಣಹೊಂದಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ಬುಧವಾರ ಬೆಳಗ್ಗೆ ನಡೆದ ಸಂಸದೀಯ ಸಭೆಯಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೈತರ ಬೇಡಿಕೆಗಳನ್ನು ತಮ್ಮ ಪಕ್ಷವು ಬೆಂಬಲಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.
ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವಲ್ಲಿ ಆಡಳಿತಾರೂಢ ಪಕ್ಷವು ವಿಫಲವಾಗಿದೆ ಎಂದು ಬಿಜೆಪಿ ಪಕ್ಷವನ್ನು ಟೀಕಿಸಿದ ಸೋನಿಯಾ ಗಾಂಧಿ, ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ನಮ್ಮ ಪಕ್ಷ ಒತ್ತಾಯಿಸುತ್ತದೆ ಎಂದಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಅಭಿನಂದಿಸಿದ ಸೋನಿಯಾ, ‘ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ, ರೈತರು ಬೆಳೆದ ಬೆಳೆಗೆ ಕೃಷಿ ವೆಚ್ಚವನ್ನು ಪೂರೈಸುವ ಲಾಭದಾಯಕ ಬೆಲೆ ಹಾಗೂ ದುಖಿಃತ ಕುಟುಂಬಗಳಿಗೆ ಪರಿಹಾರ… ರೈತರ ಈ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ. ಕಳೆದ ಹದಿನೈದು ತಿಂಗಳಿನಿಂದ ‘ಶಿಸ್ತು ಮತ್ತು ಸಮರ್ಪಣೆ’ ಭಾವದಿಂದ ಸಾವಿರಾರು ರೈತರು ಕರಾಳ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ಹಿಂತೆಗೆದುಕೊಳ್ಳುವಂತೆ ಪ್ರತಿಭಟಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಕ್ಷಮೆ ಕೋರುವ ಮೂಲಕ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಇತ್ತೀಚೆಗಷ್ಟೆ ಸಂಸತ್ತಿನಲ್ಲಿಯೂ ಕೃಷಿ ಕಾನೂನುಗಳ ರದ್ದತಿ ಮಸೂದೆಗೂ ಅಂಗೀಕಾರ ದೊರೆತಿದೆ. ಆದರೆ ಎಂಎಸ್‌ಪಿಗೆ ಕಾನೂನು ಖಾತರಿ ಹಾಗೂ ಇತರೆ ಬೇಡಿಕೆಗಳನ್ನು ಇನ್ನೂ ಬಾಕಿ ಇರುವ ಕಾರಣ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.
ರೈತರ ನಿರಂತರ ಒತ್ತಡಕ್ಕೆ ಮಣಿದ ಸರ್ಕಾರ, ಎಂಎಸ್ಪಿಗೆ ಕಾನೂನು ಖಾತರಿಯನ್ನು ಸಂಪೂರ್ಣವಾಗಿ ಪರಿಗಣಿಸಲಾಗುವುದು ಎಂದು ಲಿಖಿತ ಭರವಸೆ ನೀಡಲು ಸಿದ್ಧ ಎಂದು ನಿನ್ನೆ ಹೇಳಿದೆ. ಈ ಪ್ರಸ್ತಾಪದ ಕುರಿತು ಚರ್ಚಿಸಲು ರೈತ ಮುಖಂಡರು ಇಂದು ಬೆಳಿಗ್ಗೆ ದೆಹಲಿಯಲ್ಲಿ ಸಭೆ ನಡೆಸುತ್ತಿದ್ದಾರೆ.
ಬೆಲೆ ಏರಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ‘ಮೋದಿ ಸರ್ಕಾರವು ಹೇಗೆ ಮತ್ತು ಏಕೆ ಇಷ್ಟೊಂದು ಸಂವೇದನಾಶೀಲತೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಸಂಕಷ್ಟಗಳು ಜನರಿಗೆ ನುಂಗಲಾರದ ತುತ್ತಾಗಿವೆ. ಪೆಟ್ರೊಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರವು ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು ಸಂಪೂರ್ಣವಾಗಿ ಅಸಮರ್ಪಕವಾಗಿದೆ’ ಎಂದರು.
ಕೊರೊನಾ ತಂದೊಡ್ಡಿದ ಸಮಸ್ಯೆಗಳಿಂದ ಹೊರಬರಲು ಹೆಣಗಾಡುತ್ತಿರುವ ಜನರಿಗೆ ಬೆಲೆ ಏರಿಕೆ ಬಿಸಿ ಬರಸಿಡಿಲಿನಂತಾಗಿದೆ. ಪ್ರತಿನಿತ್ಯದ ಬಳಕೆಯ ವಸ್ತು, ತರಕಾರಿ ಬೆಲೆಗಳು ಗಗನಕ್ಕೇರಿವೆ. ಗ್ಯಾಸ್ ಬೆಲೆ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ. ಪೆಟ್ರೊಲ್ ಡೀಸೆಲ್ ಬೆಲೆ ಜನಸಾಮಾನ್ಯರಿಗೆ ಬಿಸಿತುಪ್ಪದಂತಾಗಿದೆ. ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳು ಜನರನ್ನು ಮಾನಸಿಕವಾಗಿ ದೈಹಿಕವಾಗಿ ಹೈರಾಣವಾಗಿಸಿವೆ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಬೆಲೆ ಇಳಿಸಬೇಕಾಗಿದೆ.
ಇದನ್ನೂ ಓದಿ; ಗೌರಿ ಲಂಕೇಶ್ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವ ಕವಿತಾ ಲಂಕೇಶ್: ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ


