ಧರ್ಮಾಚರಣೆಯ ಅಪರಾಧೀಕರಣ, ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಮೇಲಿನ ದ್ವೇಷದ ಅಪರಾಧಗಳ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕದ (ಪಿಯುಸಿಎಲ್) ವರದಿಯು ಆತಂಕವನ್ನು ವ್ಯಕ್ತಪಡಿಸಿದೆ. ಜನವರಿಯಿಂದ ನವೆಂಬರ್‌ವರೆಗೆ ಒಟ್ಟು 39 ಕ್ರಿಶ್ಚಿಯನ್ನರ ಮೇಲಿನ ದ್ವೇಷ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ ಎಂದು ವರದಿ ಹೇಳಿದೆ.
ವರದಿಯನ್ನು ಪಿಯುಸಿಎಲ್ ಕರ್ನಾಟಕ ಮಂಗಳವಾರ ಬಿಡುಗಡೆ ಮಾಡಿದೆ. ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಅಂಗೀಕರಿಸಲ್ಪಟ್ಟಿರುವ, ಧರ್ಮವನ್ನು ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕಿನ ಮೇಲೆ ದಾಳಿ ನಡೆಸುವುದಕ್ಕೆ ಬಳಸಲಾಗುತ್ತಿರುವ ಮತಾಂತರವೆಂಬ ಸುಳ್ಳು ನೆಪವು ಮಿಥ್ಯೆಯೇ ಆಗಿದೆ ಎಂಬ ಅಂಶವನ್ನು ಈ ವರದಿ ಸಾರಿಹೇಳಿದೆ.
‘ಮತಾಂತರ’ ಎಂಬ ಪರಿಭಾಷೆಯನ್ನು ಬಳಸಿ, ಹೇಗೆ ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು ಆಚರಿಸುವ ಮತ್ತು ಪ್ರತಿಪಾದಿಸುವ ಸಾಂವಿಧಾನಿಕ ಹಕ್ಕನ್ನು ಇಂದಿನ ಕರ್ನಾಟಕದಲ್ಲಿ ಮೊಟಕುಗೊಳಿಸಲಾಗುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ವಿಸ್ತೃತವಾಗಿ ವರದಿ ಚರ್ಚಿಸಿದೆ.
ಕ್ರಿಶ್ಚಿಯನ್ನರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಅಪರಾಧಗಳು, ಧಾರ್ಮಿಕಾಚರಣೆಯ ಬಗೆಗೆ ಆದೇಶಿಸಲಾಗಿರುವ ಸಮೀಕ್ಷೆಗಳ ಸರಣಿ, ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನಿನ ನಿರೀಕ್ಷೆಯ ಸಂದರ್ಭದಲ್ಲಿ ವಿವಿಧ ಸ್ಥರಗಳಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಕೊಡಮಾಡಲಾಗುತ್ತಿರುವ ಕಿರುಕುಳವನ್ನು ದಾಖಲಿಸಲು ಈ ವರದಿಯನ್ನು ತಯಾರಿಸಲಾಗಿದೆ ಎಂದು ಪಿಯುಸಿಎಲ್ ಸಂಘಟಕರು ತಿಳಿಸಿದ್ದಾರೆ.
ಕರ್ನಾಟಕದಾದ್ಯಂತ ತಮ್ಮ ಪ್ರದೇಶಗಳಲ್ಲಿ ಕೋಮುವಾದಿ ಶಕ್ತಿಗಳಿಂದ ಪ್ರೇರಿತವಾದ ವಿವಿಧ ರೀತಿಯ ದಾಳಿಗಳನ್ನು ಎದುರಿಸಿದ ಪಾದ್ರಿಗಳಿಗೆ ನಮ್ಮ ತಂಡವು ಕರೆಗಳನ್ನು ಮಾಡಿತು ಮತ್ತು ಅವರನ್ನು ಭೇಟಿ ಮಾಡಿತು. ಅವರ ಕಥನಗಳನ್ನು, ಅದರ ವಿವರಗಳನ್ನು ದಾಖಲಿಸುವ ಮತ್ತು ಅಗತ್ಯವಿರುವ ಯಾವುದೇ ರೀತಿಯ ಕಾನೂನು ಬೆಂಬಲವನ್ನು ಒದಗಿಸಲು ಈ ಕಾರ್ಯವನ್ನು ಕೈಗೊಳ್ಳಲಾಯಿತು. ಈ ವರದಿಯನ್ನು 2021ರಲ್ಲಿ ಘಟಿಸಿದ 39 ಪ್ರತ್ಯೇಕ ಘಟನೆಗಳನ್ನು ಎದುರಿಸಿದ 39 ಪಾದ್ರಿಗಳೊಂದಿಗೆ ಮಾತನಾಡಿದ ನಂತರ ಈ ವರದಿಯನ್ನು ಸಿದ್ದಪಡಿಸಲಾಗಿದೆ. ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗದ ಅಥವಾ ಕಾನೂನು ಮತ್ತು ಆರ್ಥಿಕ ಸಹಾಯಕ್ಕಾಗಿ ಸಂಪನ್ಮೂಲಗಳನ್ನು ಅಥವಾ ನೆಟ್‌ವರ್ಕ್‌ಗಳನ್ನು ಸಹಾಯ ಪಡೆಯಲಾಗದ ಪ್ರಕರಣಗಳೂ ಹಲವಿವೆ. ಈ ವರದಿಗೂ ಮುನ್ನ APCR, UCF ಮತ್ತು ಯುನೈಟೆಡ್ ಅಗೇನ್ಸ್ಟ್ ಹೇಟ್ (United Against Hate) ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 300ಕ್ಕೂ ಹೆಚ್ಚು ಕ್ರಿಶ್ಚಿಯನ್ನರ ಮೇಲಿನ ದಾಳಿಯ ಘಟನೆಗಳನ್ನು ವಿವರಿಸುವ ವರದಿಯನ್ನು ಜಂಟಿಯಾಗಿ ಪ್ರಕಟಿಸಿತು. ಇದು ದೇಶದಾದ್ಯಂತ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದಾಳಿಗಳ ಪ್ರಮಾಣದ ಬಗ್ಗೆ ನಿಜವಾಗಿಯೂ ಒಂದು ಕಲ್ಪನೆಯನ್ನು ಒದಗಿಸುವ ಗಮನಾರ್ಹ ದಾಖಲಾತಿಯಾಗಿದೆ. ನಾವು ನಮ್ಮ ವರದಿಯಲ್ಲಿ ಭೌಗೋಳಿಕವಾಗಿ ಕರ್ನಾಟಕವನ್ನು ದೃಷ್ಟಿಯಲ್ಲಿರಿಸಿ ಕೊಂಡಿದ್ದೇವೆ ಮತ್ತು ಈ ದಾಳಿಗಳನ್ನು ಅರ್ಥೈಸಿಕೊಳ್ಳಲು ದ್ವೇಷದ ಅಪರಾಧಗಳ ಬಗ್ಗೆ ವಿಸ್ತಾರವಾದ ಚೌಕಟ್ಟನ್ನು ಸಹ ಒದಗಿಸಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದನ್ನೂ ಓದಿರಿ: ನೆಲಮಂಗಲ: ತಮಟೆ ಬಾರಿಸಿದ್ದಕ್ಕೆ ದಲಿತನಿಗೆ ಥಳಿತ; ಪ್ರಕರಣ ದಾಖಲು
ಬಹುತೇಕ ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರು ತಮ್ಮ ಪೂಜಾ ಸ್ಥಳಗಳನ್ನು ಮುಚ್ಚುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಅವರ ಭಾನುವಾರದ ಪ್ರಾರ್ಥನೆಗಾಗಿ ಒಟ್ಟುಗೂಡುವುದನ್ನು ನಿಲ್ಲಿಸಲಾಗುತ್ತಿದೆ. ಹಿಂದುತ್ವ ಗುಂಪುಗಳು ರಾಜ್ಯದ ಸಹಭಾಗಿತ್ವದೊಂದಿಗೆ ಸಾಮೂಹಿಕವಾಗಿ ಧಾರ್ಮಿಕ ಸಮುದಾಯವಾಗಿ ಪ್ರಾರ್ಥಿಸುವುದರ ಮೇಲಿನ ಈ ದಾಳಿಗಳು ಧರ್ಮವನ್ನು ಆಚರಿಸುವ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಕಾರ್ಯನಿರ್ವಹಿಸುತ್ತವೆ. ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ದಾಳಿಗಳು ಧರ್ಮವನ್ನು ಪ್ರಚಾರಮಾಡುವ ಪ್ರಚಾರದ ಹಕ್ಕಿಗೆ ಸಂಬಂಧಿಸಿರುವುದಿಲ್ಲ. ಬದಲಿಗೆ, ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ ಮತ್ತು ಆಚರಣೆ ಮಾಡುವ ಹಕ್ಕಿನ ಮೇಲಿನ ದಾಳಿಗಳಾಗಿವೆ ಎಂದು ವರದಿ ಹೇಳುತ್ತದೆ.
ಈ ಪ್ರಾರ್ಥನಾ ಸಭೆಗಳನ್ನು ಮುಚ್ಚುವಂತೆ ಹಿಂದುತ್ವ ಗುಂಪುಗಳು ಪಾದ್ರಿಗಳಿಗೆ ಬೆದರಿಕೆ ಹಾಕಿದಾಗ, ಅದು ಅವರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ ಮಾತ್ರವಲ್ಲದೇ, ಮಾನಸಿಕ ಯೋಗಕ್ಷೇಮ ಎಂದು ವ್ಯಾಖ್ಯಾನಿಸಲಾದ ಒಂದಿಡೀ ಸಮುದಾಯದ ಘನತೆಯ ಹಕ್ಕನ್ನು ಮತ್ತು ಜೀವನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಪಿಯುಸಿಎಲ್ ಆತಂಕ ವ್ಯಕ್ತಪಡಿಸಿದೆ.
ಮಾಬ್ ವಯೋಲೆನ್ಸಿನ ಅನೇಕ ಪ್ರಕರಣಗಳಲ್ಲಿ, ಪೊಲೀಸರು ಪಾದ್ರಿಗಳು ಮತ್ತು ಭಕ್ತರನ್ನು ಬಂಧಿಸಿದರು. ಪ್ರಾರ್ಥನಾ ಸಭೆಗಳನ್ನು ನಿಲ್ಲಿಸುವಂತೆ ಅವರು ಚರ್ಚ್‌ಗಳಿಗೆ ಔಪಚಾರಿಕ ಸೂಚನೆಗಳನ್ನು ಸಹ ನೀಡಿದರು. ರಾಜ್ಯದ ಈ ವೈಫಲ್ಯವು, ಕೋವಿಡ್ ಸಮಯದಲ್ಲಿ ಶಿಕ್ಷಣ, ಆಶ್ರಯ, ಆಹಾರ, ಜೀವನೋಪಾಯ ಮತ್ತು ಮೂಲಭೂತ ಘನತೆಯನ್ನು ಪಡೆಯಲು ಹೆಣಗಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯವನ್ನು ಮತ್ತಷ್ಟೂ ಅಂಚಿಗೆ ದೂಡುತ್ತಿದೆ ಎಂದು ಎಚ್ಚರಿಸಿದೆ.
ಈ ಎಲ್ಲಾ 39 ಕೋಮು ದ್ವೇಷದ ಅಪರಾಧಗಳ ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡಿರುವುದು ಹಿಂದುತ್ವ ಸಂಘಟನೆಗಳೇ ಆಗಿವೆ – ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗದಳ, ಹಿಂದೂ ಜಾಗರಣ ವೇದಿಕೆ. ಕಾರವಾರ (ಅಕ್ಟೋಬರ್ 4) ಮತ್ತು ಮಂಡ್ಯದಲ್ಲಿ (ಜನವರಿ 25) ನಡೆದ ದ್ವೇಷದ ಅಪರಾಧಗಳ ಎರಡು ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದಾಳಿಮಾಡುವ ಪೊಲೀಸರನ್ನು ಬೆಂಬಲಿಸುವವರು ಎಂದೂ ಭಾರತೀಯ ಜನತಾ ಪಕ್ಷದ ಶಾಸಕ ಸುನೀಲ್ ಹೆಗ್ಡೆ ಮತ್ತು 3 ಬಾರಿ ಬಿಜೆಪಿ ಪಕ್ಷದಿಂದ ಶಾಸಕ ಆಗಿರುವ ನಾರಾಯಣ ಗೌಡ ಅವರನ್ನೂ ಹೆಸರಿಸಿದರು. ಘಟನೆಗಳ ವಿವರಗಳನ್ನು ಕೇಳಿ ಪಡೆಯುವಾಗ ಹೊರಹೊಮ್ಮಿದ ಹೊಸ ಸಂಸ್ಥೆಯ ಹೆಸರು ಬಂಜಾರ ನಿಗಮ. ಈ ಸಂಸ್ಥೆಗಳು ಚಿಕ್ಕದಾಗಿದ್ದರೂ, ಇನ್ನು ಹೆಚ್ಚು ಹಿಂಸಾತ್ಮಕವಾಗಿ ಕಂಡುಬರುತ್ತಿವೆ. ಈ ಹಿಂದುತ್ವ ಸಂಘಟನೆಗಳ ಭಾಗವಲ್ಲದ ವ್ಯಕ್ತಿಗಳಿಂದ ಕ್ರಿಶ್ಚಿಯನ್ನರು ಎದುರಿಸುತ್ತಿರುವ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವು ವಿಶೇಷವಾಗಿ ಆತಂಕಕಾರಿಯಾಗಿದೆ. ಸಂತ್ರಸ್ತರ ಸ್ವಂತ ನೆರೆಹೊರೆಯವರು, ಭೂಮಾಲೀಕರು, ಉದ್ಯೋಗದಾತರು, ಕಿರಾಣಿ ಅಂಗಡಿಗಳಂತಹ ಸಣ್ಣ ವ್ಯಾಪಾರಗಳು, ಅವರ ಪ್ರದೇಶಗಳಲ್ಲಿನ ಶಾಲೆಗಳು ಸಹ ಈ ರೀತಿ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಪಾಲಿಸುತ್ತಿರುವುದು ಕಂಡುಬರುತ್ತಿವೆ ಎಂದು ವರದಿ ತಿಳಿಸಿದೆ.
ಪ್ರಾರ್ಥನಾ ಸಭೆಗಳ ಮೇಲೆ ನಡೆದ ದಾಳಿಗಳ ಬಹುತೇಕ ಎಲ್ಲಾ ನಿದರ್ಶನಗಳಲ್ಲಿ ಕಂಡುಬಂದ ಒಂದು ಸಾಮಾನ್ಯ ಮಾದರಿಯೆಂದರೆ, ಮೌಖಿಕ ನಿಂದನೆಯಲ್ಲಿ ಬಳಸುವ ಭಾಷೆಯು ಜಾತಿವಾದಿ ನಿಂದನೆಗಳಿಂದ ಕೂಡಿರುವುದು. ಗ್ರಾಮೀಣ ಭಾರತದಲ್ಲಿ ಕ್ರಿಶ್ಚಿಯನ್ನರು ಹೆಚ್ಚಾಗಿ ದೈನಂದಿನ ಕೂಲಿ ಕಾರ್ಮಿಕರನ್ನು, ಕೃಷಿ ಕಾರ್ಮಿಕರನ್ನು ಮತ್ತು ದಲಿತ ಸಮುದಾಯಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಈ ಜಾತಿವಾದಿ ನಿಂದನೆಗಳನ್ನು ನೋಡಬೇಕಾಗುತ್ತದೆ ಎಂದು ವರದಿ ಸೂಚಿಸಿದೆ.
ಇದನ್ನೂ ಓದಿರಿ: ಕೋಲಾರ: ಕ್ರಿಶ್ಚಿಯನ್ನರ ಮೇಲೆ ಹಲ್ಲೆ, ಧರ್ಮಗ್ರಂಥಗಳಿಗೆ ಬೆಂಕಿ
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೂ ಜಾತಿಗೂ ಏನು ಸಂಬಂಧ? ಅಂಬೇಡ್ಕರರು ತಮ್ಮ ಭಾಷಣವೊಂದರಲ್ಲಿ “Why Go For Conversion” (ಮತಾಂತರಕ್ಕೆ ಏಕೆ ಮೊರೆಹೋಗಬೇಕು)” ವಾಸ್ತವವಾಗಿ ಮತಾಂತರವು ಸಮಾನತೆಯೆಡೆಗಿನ ಮಾರ್ಗವಾಗಿದೆ ಎಂದು ವಿವರಿಸುತ್ತಾರೆ ಎಂದಿರುವ ವರದಿಯು ಅಂಬೇಡ್ಕರ್ ಅವರ ವಿಶ್ಲೇಷಣೆಯನ್ನು ಉಲ್ಲೇಖಿಸಿದೆ. “ನನ್ನ ಪ್ರಕಾರ, ಈ ಧರ್ಮದ ಪರಿವರ್ತನೆಯು ಅಸ್ಪೃಶ್ಯರಿಗೆ ಮತ್ತು ಹಿಂದೂಗಳಿಬ್ಬರಿಗೂ ಸಂತೋಷವನ್ನು ತರುತ್ತದೆ. ನೀವು ಹಿಂದೂಗಳಾಗಿ ಉಳಿಯುವವರೆಗೆ, ನೀವು ಸಾಮಾಜಿಕ ಬೆರೆಯುವಿಕೆಗಾಗಿ, ಆಹಾರ ಮತ್ತು ನೀರಿಗಾಗಿ ಮತ್ತು ಅಂತರ್ಜಾತಿ ವಿವಾಹಗಳಿಗಾಗಿ ಹೋರಾಡಬೇಕಾಗುತ್ತದೆ. ಮತ್ತು ಎಲ್ಲಿಯವರೆಗೆ ಈ ಜಗಳ ಮುಂದುವರಿಯುತ್ತದೆಯೋ, ಅಲ್ಲಿಯವರೆಗೆ ನಿಮ್ಮ ಮತ್ತು ಹಿಂದೂಗಳ ನಡುವಿನ ಸಂಬಂಧವು ಶಾಶ್ವತವಾಗಿ ಶತ್ರುಗಳಂತೆಯೇ ಇರುತ್ತದೆ.. ಮತಾಂತರದಿಂದ, ಎಲ್ಲಾ ಜಗಳಗಳ ಬೇರುಗಳು ಮಾಯವಾಗುತ್ತವೆ… ಹೀಗೆ ಮತಾಂತರದಿಂದ ಸಮಾನತೆಯನ್ನು ಸಾಧಿಸಲು ಸಾಧ್ಯವಾದರೆ ಮತ್ತು ಹಿಂದೂಗಳು ಮತ್ತು ಅಸ್ಪೃಶ್ಯರ ನಡುವೆ ಬಾಂಧವ್ಯವನ್ನು ಬೆಸೆಯಲು ಸಾಧ್ಯವಾದರೆ, ಅಸ್ಪೃಶ್ಯರು ಸಮಾನತೆಯನ್ನು ಸಾಧಿಸುವ ಸರಳ ಮತ್ತು ಸಂತೋಷದ ಮಾರ್ಗವನ್ನು ಏಕೆ ಅಳವಡಿಸಿಕೊಳ್ಳಬಾರದು? ಈ ದೃಷ್ಟಿಕೋನದ ಮೂಲಕ ಈ ಸಮಸ್ಯೆಯನ್ನು ನೋಡಿದಾಗ, ಈ ಪರಿವರ್ತನೆಯ ಮಾರ್ಗವು ಅಂತಿಮವಾಗಿ ಸಮಾನತೆಗೆ ಕಾರಣವಾಗುವ, ಸ್ವಾತಂತ್ರ್ಯದೆಡೆಗೆ ಸರಿಯಾದ ಏಕೈಕ ಮಾರ್ಗವಾಗಿದೆ. ಇದು ಹೇಡಿತನವೂ ಅಲ್ಲ ಅಥವಾ ಪಲಾಯನವಾದವೂ ಅಲ್ಲ” ಎಂದು ಅಂಬೇಡ್ಕರ್ ಅವರು ಹೇಳಿರುವುದನ್ನು ವರದಿಯಲ್ಲಿ ದಾಖಲಿಸಲಾಗಿದೆ.
ಹಿಂದೂ ಧರ್ಮದಲ್ಲಿ ಜಾತಿ ಮತ್ತು ಅಸ್ಪೃಶ್ಯತೆಯ ಸರ್ವವ್ಯಾಪಿತ್ವವು ಮತಾಂತರವನ್ನು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾಧಿಸುವ ಸಾಧನವನ್ನಾಗಿ ಮಾಡುತ್ತದೆ. ಜಾತಿ ವ್ಯವಸ್ಥೆಯ ಬಿಗಿತವು ಮತ್ತು ವಿಶೇಷವಾಗಿ ಹಿಂದುತ್ವ ಗುಂಪುಗಳು SC/ST ಗಳ ಮೇಲೆ ನಡೆಸುತ್ತಿರುವ ನಿರಂತರ ದಬ್ಬಾಳಿಕೆಯು ವ್ಯಕ್ತಿಗಳು ಹಿಂದೂ ಧರ್ಮವನ್ನು ತೊರೆಯುವುದನ್ನು ಖಚಿತಪಡಿಸುತ್ತದೆ. ಮಹಿಳೆಯರು ಮತ್ತು ಮಕ್ಕಳು ಸಹ ಇಂತಹ ದೈಹಿಕ ದಾಳಿಗೆ ಗುರಿಯಾಗಿದ್ದಾರೆ. ಹಿಂದುತ್ವ ಗುಂಪುಗಳು ಮಹಿಳೆಯರೊಂದಿಗೆ ಜಾತಿವಾದ ನಿಂದನೆಗಳನ್ನು ಒಳಗೊಂಡ, ಅಶ್ಲೀಲವಾದ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸುತ್ತವೆ ಮತ್ತು ಮಹಿಳೆಯರು ಅವರಿಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿದಾಗ, ಅವರ ಮೇಲೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯವನ್ನು ಎಸಗುತ್ತಾರೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಈ ಹಂತದಲ್ಲಿ, ಪೊಲೀಸರ ಪಾತ್ರದ ಬಗ್ಗೆ ಕಾನೂನು ಬಹಳಷ್ಟು ಸ್ಪಷ್ಟವಾಗಿದೆ ಎಂಬುದನ್ನು ಗಮನಿಸಬೇಕು. CrPCಯ ಸೆಕ್ಷನ್ 154ರ ಪ್ರಕಾರ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಕ್ರಮ ಕೈಗೊಳ್ಳಬೇಕಾಗುತ್ತದೆ. ವಿಶೇಷವಾಗಿ ದೈಹಿಕ, ಮೌಖಿಕ, ಲೈಂಗಿಕ ದೌರ್ಜನ್ಯದ ಮೂಲಕ ಕೋಮು ದ್ವೇಷ ಅಪರಾಧಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ನಡೆಸುತ್ತಿರುವಾಗ, ಎಫ್‌ಐಆರ್ ದಾಖಲಿಸುವ ಮೂಲಕ ಕ್ರಮವನ್ನು ಪ್ರಾರಂಭಿಸದಿರಲು ಪೊಲೀಸರಿಗೆ ಯಾವುದೇ ಸಮರ್ಥನೆಯಿಲ್ಲ ಎಂದು ವರದಿ ತಿಳಿಸಿದೆ.
ಬಾಬಾಸಾಹೇಬ್ ಅಂಬೇಡ್ಕರ್, ಚರ್ಚೆಗಳ ಮೂಲಕ ಆರ್ಟಿಕಲ್ 25 ಸಾದರಪಡಿಸಿದವರು ಮತ್ತು ಸ್ಪಷ್ಟವಾಗಿ ಆರ್ಟಿಕಲ್ 25ರ ಪಠ್ಯದ ಹಿಂದಿನ ಪ್ರಮುಖ ಶಕ್ತಿಗಳಲ್ಲಿ ಒಬ್ಬರು. ಧರ್ಮವನ್ನು ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವು ಅವರ ತತ್ವಶಾಸ್ತ್ರದ ತಿರುಳಾಗಿತ್ತು ಮತ್ತು ಒಬ್ಬರ ಮೂಲಭೂತ ಹಕ್ಕುಗಳ ಅತ್ಯಗತ್ಯ ಭಾಗವಾಗಿ ಮತಾಂತರಗೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂಬುದಕ್ಕೇ ಅವರ ಜೀವನ ಪಥವು ಬದ್ಧವಾಗಿತ್ತು. ‘ನಾನು ಹಿಂದೂವಾಗಿ ಹುಟ್ಟಿದ್ದೇನೆ ಏಕೆಂದರೆ ಇದರ ಮೇಲೆ ನನಗೆ ನಿಯಂತ್ರಣವಿಲ್ಲ ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದವರು ಬಾಬಾಸಾಹೇಬ್ ಅಂಬೇಡ್ಕರ್ ಎಂದೂ ವರದಿ ನೆನಪಿಸುತ್ತದೆ. ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಅಕ್ಟೋಬರ್ 14, 1956ರಂದು ಬೌದ್ಧ ಧರ್ಮಕ್ಕೆ ಅಂಬೇಡ್ಕರ್ ಮತಾಂತರಗೊಂಡರು. ಇಂದಿನವರೆಗೂ ಅಕ್ಟೋಬರ್ 14 ಅಥವಾ ಧರ್ಮ ದೀಕ್ಷೆಯ ದಿನವನ್ನು ಅವರ ಲಕ್ಷಾಂತರ ಅನುಯಾಯಿಗಳು ಆಚರಿಸುತ್ತಾರೆ. ಆದಾಗ್ಯೂ, 25ನೇ ವಿಧಿಯ ಆಧಾರವಾಗಿರುವ ವಿಶಾಲವಾದ ವಿಮೋಚನೆಯ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳದ ನ್ಯಾಯಾಂಗವು 1977ರ ರೆವ್ ಸ್ಟಾನಿಸ್ಲಾಸ್ ವರ್ಸಸ್ ಸ್ಟೇಟ್ ಆಫ್ ಮಧ್ಯ ಪ್ರದೇಶ್ ಪ್ರಕರಣದ ತೀರ್ಪಿನಲ್ಲಿ (ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ) ಧರ್ಮವನ್ನು ಪ್ರಚಾರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು ಎಂದು ಉಲ್ಲೇಖಿಸಿದೆ.
2015ರಲ್ಲಿ ಹೊರಬಿದ್ದ, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದ, ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ತೀರ್ಪಿನ ಹಿನ್ನೆಲೆಯಲ್ಲಿ ಸ್ಟಾನಿಸ್ಲಾಸ್ ನಲ್ಲಿನ ನಿರ್ಧಾರವನ್ನು ಮರುಪರಿಶೀಲಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯವು ‘ಖಾಸಗಿತನವು ವ್ಯಕ್ತಿಯ ಪವಿತ್ರತೆಯ ಅಂತಿಮ ಅಭಿವ್ಯಕ್ತಿಯಾಗಿದೆ. ಇದು ಸಾಂವಿಧಾನಿಕ ಮೌಲ್ಯವಾಗಿದ್ದು, ಮೂಲಭೂತ ಹಕ್ಕುಗಳ ಸ್ಪೆಕ್ಟ್ರಮ್‌ನಾದ್ಯಂತ ವ್ಯಾಪಿಸಿಕೊಳ್ಳುವ ಮತ್ತು ವ್ಯಕ್ತಿಗೆ ಆಯ್ಕೆಯ ಮತ್ತು ಸ್ವಯಂ-ನಿರ್ಣಯದ ವಲಯವನ್ನು ರಕ್ಷಿಸುತ್ತದೆ’ ಎಂದು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ ಎಂದು ವರದಿ ತಿಳಿಸಿದೆ.
ಕ್ರೈಸ್ತರು ಚರ್ಚುಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಪ್ರಾರ್ಥಿಸುವಾಗ, ಅವರು ತಮ್ಮ ಧರ್ಮವನ್ನು ಆಚರಿಸುವ, ಪ್ರತಿಪಾದಿಸುವ ಹಕ್ಕನ್ನು ಚಲಾಯಿಸುವುದಕ್ಕಿಂತ ಹೆಚ್ಚೇನೂ ಮಾಡುತ್ತಿಲ್ಲ. ಬಲಪಂಥೀಯ ಗುಂಪುಗಳ ಕ್ರಿಶ್ಚಿಯನ್ನರ ಮೇಲೆ ನಡೆಸುತ್ತಿರುವ ಈ ದಾಳಿಯು ಧರ್ಮವನ್ನು ಪ್ರಚಾರ ಮಾಡುವ ಹಕ್ಕುಗಳಿರಲಿ, ಧರ್ಮವನ್ನು ಆಚರಿಸುವ, ಪ್ರತಿಪಾದಿಸುವ ಹಕ್ಕಿನ ಮೇಲಿನ ದಾಳಿಯೇ ಆಗಿದೆ. ಈ ದ್ವೇಷ ಅಪರಾಧಗಳು ಮುಂದುವರಿಯಲು ಅವಕಾಶ ನೀಡಿದರೆ 25 ನೇ ವಿಧಿ ಹೆಸರಿಗೆ ಮಾತ್ರ ಉಳಿಯುತ್ತದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿರಿ: ‘ಹಿಂದುತ್ವಕ್ಕೆ ಸತ್ಯವೆಂದರೆ ಆಗದು, ಹಿಂದೂಧರ್ಮ, ಹಿಂದುತ್ವ ಒಂದೇ ಅಲ್ಲ’
ಮಾಧ್ಯಮಗಳ ಹಿಂದುತ್ವ
ತನಿಖಾ ಪತ್ರಿಕೋದ್ಯಮದ ತಂತ್ರವನ್ನು ಬಳಸಿಕೊಳ್ಳುವ ಮೂಲಕ ಮತ್ತು ಮತಾಂತರದ ವಿಷಯವನ್ನು ಭಾವೋದ್ರೇಕಗೊಳಿಸುವುದರ ಮೂಲಕ ಮತಾಂತರದ ಮೇಲೆ ಹಿಂದುತ್ವದ ದೃಷ್ಟಿಕೋನಗಳನ್ನು ಹೇರುವ ಕನ್ನಡ ಟಿವಿ ಮಾಧ್ಯಮದ ಕೊಡುಗೆಯನ್ನು ವರದಿ ಗುರುತಿಸುತ್ತದೆ. ಮಾಧ್ಯಮಗಳ ಪ್ರಸಾರವು ಹಿಂದುತ್ವವಾದಿ ಶಕ್ತಿಗಳ ಪರವಾಗಿ ಮತ್ತು ಕ್ರಿಶ್ಚಿಯನ್ ಧರ್ಮ ವಿರೋಧಿ ವಾದಗಳು, ತೋರಿಕೆಯ ವಾದಗಳು, ತಪ್ಪುದಾರಿಗೆಳೆಯುವ ಹೇಳಿಕೆಗಳು, ಸಂಪೂರ್ಣ ಸುಳ್ಳು ಕಥನಗಳು, ಏಕಪಕ್ಷೀಯ ವರದಿಗಾರಿಕೆ ಮತ್ತು ಪಕ್ಷಪಾತದ ಮಿಶ್ರಣವಾಗಿದೆ ಎಂದು ವರದಿ ತಿಳಿಸುತ್ತದೆ.
ಕ್ರಿಶ್ಚಿಯನ್ನರ ವಿರುದ್ಧದ ಈ 39 ದ್ವೇಷ ಅಪರಾಧಗಳ ಬಗ್ಗೆ ರಾಜ್ಯವು ಏನು ಕ್ರಮ ಜರುಗಿಸಿದೆ?
ಒಬ್ಬ ವ್ಯಕ್ತಿಯ ಧರ್ಮ/ ಮತವನ್ನು ನಿಯಂತ್ರಿಸುವಲ್ಲಿ ರಾಜ್ಯವು ಯಾವ ಪಾತ್ರವನ್ನು ಹೊಂದಿದೆ?
ಪ್ರಸ್ತುತ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಗಳ ಅಡಿಯಲ್ಲಿ ಶಿಕ್ಷೆಗೊಳಗಾದವರು ಕೆಲವೇ ಕೆಲವರಾಗಿರುವಾಗ ರಾಜ್ಯವು ಮತಾಂತರ ನಿಷೇಧ ಮಸೂದೆಯನ್ನು ತರಲುಹೊರಟಿರುವುದಾದರೂ ಏಕೆ?
ಸಂವಿಧಾನದ ಆಶಯ ಮತ್ತು ಆಧ್ಯಾದೇಶಕ್ಕೆ ವಿರುದ್ಧವಾಗಿ ಒಬ್ಬ ವ್ಯಕ್ತಿಯ ಮತ/ಧರ್ಮದ ವಿಚಾರದಲ್ಲಿ ರಾಜ್ಯ ಏಕೆ ಹಸ್ತಕ್ಷೇಪ ಮಾಡುತ್ತಿದೆ? ಪೊಲೀಸರೇಕೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ದ್ವೇಷ ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್ನರ ದುರ್ಬಲತೆಯನ್ನು ಹೆಚ್ಚಿಸುತ್ತಿದ್ದಾರೆ?
ಧರ್ಮ/ ಮತವನ್ನು ಆಚರಿಸುವ ತನ್ನ ನಾಗರಿಕರ ಮೂಲಭೂತ ಹಕ್ಕನ್ನು ನಿರಾಕರಿಸಲು ರಾಜ್ಯವೇಕೆ ಬಯಸುತ್ತದೆ? ಎಂದು ಪ್ರಶ್ನೆಗಳನ್ನು ವರದಿ ಕೇಳಿದೆ.
ಕ್ರಿಶ್ಚಿಯನ್ನರ ವಿರುದ್ಧದ ದ್ವೇಷ ಅಪರಾಧಗಳ 39 ಘಟನೆಗಳಲ್ಲಿ ಯಾವುದನ್ನಾದರೂ ಯಾವ ಚಾನಲ್‌ಗಳು ವರದಿ ಮಾಡಿವೆ? ಜನರ ಮನೆಗಳಿಗೆ ಪ್ರವೇಶಿಸಲು ಮತ್ತು ಅವರು ತಮ್ಮ ಧರ್ಮವನ್ನು ಆಚರಿಸಿದ್ದಕ್ಕೆ ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದಕ್ಕೆ ಚಾನಲ್‌ಗಳಿಗೆ ಅಧಿಕಾರ ಎಲ್ಲಿಂದ ಬರುತ್ತಿದೆ? ಸುದ್ದಿಯನ್ನು ಪಡೆಯುವ ಸಾರ್ವಜನಿಕರಾಗಿ ತಟಸ್ಥ, ವಸ್ತುನಿಷ್ಠ, ನಿಷ್ಪಕ್ಷಪಾತ ಮಾಹಿತಿಯನ್ನು ಪಡೆಯುವ ನಮ್ಮ ಹಕ್ಕನ್ನು ಚಾನಲ್‌ಗಳು ಉಲ್ಲಂಘಿಸ ಬಹುದಾದರೂ ಹೇಗೆ? ಎಂದು ಪ್ರಶ್ನಿಸಿದೆ.
ಮಾಬ್ ವಯೋಲೆನ್ಸ್ ಮತ್ತು ಲಿಂಚಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಸೀನ್ ಎಸ್ ಪೂನಾವಾಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ [AIR 2018 SC 3354] ನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರಂತೆ, ಇತರೆ ನಿರ್ದೇಶನಗಳೊಂದಿಗೆ ಯಾವುದೇ ವಿಳಂಬವಿಲ್ಲದೆ ಎಫ್‌ಐಆರ್ ದಾಖಲಿಸಬೇಕು, ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಒದಗಿಬರಬಹುದಾದ ಯಾವುದೇ ಕಿರುಕುಳವನ್ನು ತಡೆಗಟ್ಟಬೇಕು, ದಿನನಿತ್ಯದ ಮಾಬ್ ವಯೋಲೆನ್ಸ್ ಪ್ರಕರಣಗಳು ಫಾಸ್ಟ್ ಟ್ರ್ಯಾಕ್ ಕೋರ್ಟಿನಲ್ಲಿ ವಿಚಾರಣೆಗೆ ಬರುವಂತೆ ಖಚಿತಪಡಿಸಿಕೊಳ್ಳಬೇಕು ಮತ್ತು ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಫಲವಾಗುವ ಪೊಲೀಸ್ ಅಧಿಕಾರಿಗಳನ್ನು ಉತ್ತರದಾಯಿಯನ್ನಾಗಿಸಬೇಕು ಎಂದು ವರದಿ ಶಿಫಾರಸ್ಸು ಮಾಡಿದೆ.
ಸಂಬಂಧಿತ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು/ಗೃಹ ಇಲಾಖೆಯ ಕಾರ್ಯದರ್ಶಿ, ಎಲ್ಲಾ ನೋಡಲ್ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸ್ ಗುಪ್ತಚರ ಮುಖ್ಯಸ್ಥರೊಂದಿಗೆ ಕ್ರಮಬದ್ಧವಾಗಿ ಪರಿಶೀಲನಾ ಸಭೆಗಳನ್ನು (ಕನಿಷ್ಟ ತ್ರೈಮಾಸಿಕಕ್ಕೆ ಒಮ್ಮೆಯಾದರೂ) ನಡೆಸಬೇಕು. ರಾಜ್ಯ ಮಟ್ಟದಲ್ಲಿ ಮಾಬ್ ವಯೋಲೆನ್ಸ್ ಮತ್ತು ಲಿಂಚಿಂಗ್ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯತಂತ್ರವನ್ನು ರೂಪಿಸಲು ಯಾವುದೇ ಅಂತರ-ಜಿಲ್ಲಾ ಸಮನ್ವಯ ಸಮಸ್ಯೆಗಳನ್ನು ನೋಡಲ್ ಅಧಿಕಾರಿಗಳು ಡಿಜಿಪಿ ಅವರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದೆ.
ಶಾಸಕಾಂಗದ ಸದಸ್ಯರು ಕಡ್ಡಾಯವಾಗಿ ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಮಸೂದೆ ಕರಡು ಮಂಡಿಸುವುದನ್ನು ವಿರೋಧಿಸಬೇಕು. ಕಾನೂನು ಸಹಾಯವನ್ನು ಒದಗಿಸುವ ಮೂಲಕ ಕ್ರಿಶ್ಚಿಯನ್ನರಿಗೆ ಐಕಮತ್ಯ ಮತ್ತು ಸ್ಪಷ್ಟವಾದ ಬೆಂಬಲವನ್ನು ವಿಸ್ತರಿಸಬೇಕು. ಮತಾಂತರ ನಿಷೇಧ ಮಸೂದೆ ವಿರುದ್ಧ ತೀವ್ರ ಪ್ರತಿಭಟನೆ ಕೈಗೊಳ್ಳಬೇಕು. ಯಾವುದೇ ವರದಿಗಳನ್ನು ಮಾಡುವಾಗ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆ, ನೀತಿಸಂಹಿತೆಗಳನ್ನು ಮತ್ತು ಪ್ರಸಾರಣಾ ಮಾನದಂಡಗಳನ್ನು ಅನುಸರಿಸಬೇಕು. ‘ಬಲವಂತದ ಮತಾಂತರ’ ಎಂಬ ಮಿಥ್ಯೆಯನ್ನು ಭಾವೋದ್ರೇಕಗೊಳಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಇತ್ಯಾದಿ ಶಿಫಾರಸ್ಸುಗಳನ್ನು ವರದಿ ಮಾಡಿದೆ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ‘ಹಿಂದುತ್ವದ ಟೆರರಿಸ್ಟ್‌ಗಳು ಮುಸ್ಲಿಂ ವ್ಯಕ್ತಿಯನ್ನು ಕೊಲ್ಲುತ್ತಿದ್ದಾರೆ’ ಎಂದು ಸುಳ್ಳು ಹರಡಲಾಗುತ್ತಿದೆ!


