ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಶನಿವಾರ (ಡಿಸೆಂಬರ್ 11) ಬಲಪಂಥೀಯ ಗುಂಪುಗಳ ಯುವಕರು ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿ, ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ದಾಳಿ ನಡೆದಾಗ ಕ್ರೈಸ್ತ ಗುಂಪುಗಳ ಪ್ರತಿನಿಧಿಗಳು ಶ್ರೀನಿವಾಸಪುರದಲ್ಲಿ ಮನೆ ಮನೆಗೆ ಕಿರುಪುಸ್ತಕಗಳನ್ನು ಹಂಚುತ್ತಿದ್ದರು.
ಬುಕ್‌ಲೆಟ್‌ಗಳನ್ನು ವಿತರಿಸುವುದರ ವಿರುದ್ಧ ಕ್ರೈಸ್ತರಿಗೆ ಎಚ್ಚರಿಕೆಯನ್ನು ಹಿಂದುತ್ವ ಪರ ಗುಂಪುಗಳು ನೀಡಿದ್ದವು. ಯಾವುದೇ ದೂರು ಇಲ್ಲದ ಕಾರಣ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ಮನೆಗೆ ಹೋಗಿ ಪ್ರಚಾರ ಮಾಡುವ ಮೂಲಕ ಯಾವುದೇ ಕೋಮು ಸೌಹಾರ್ದತೆಯನ್ನು ಕೆಡಿಸದಂತೆ ನಾವು ಕ್ರಿಶ್ಚಿಯನ್ ಸಮುದಾಯಕ್ಕೆ ತಿಳಿಸಿದ್ದೇವೆ. ಬಲಪಂಥೀಯರು ಮತ್ತು ಕ್ರಿಶ್ಚಿಯನ್ ಸಮುದಾಯದವರು ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಗೊಳಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ಹೇಳಿಕೆ ನೀಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಘಟನೆಯ ನಂತರ ಕ್ರಿಶ್ಚಿಯನ್ ಗುಂಪುಗಳ ಸದಸ್ಯರು ಪೊಲೀಸರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿದ್ದಾರೆ. ಬಲಪಂಥೀಯ ಗುಂಪಿನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
ಕ್ರಿಶ್ಚಿಯನ್ನರಿಂದ ಬಲವಂತವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಹಿಂದುತ್ವ ಪರ ಬಲಪಂಥೀಯ ಗುಂಪುಗಳು ಆರೋಪಿಸಿವೆ.
ಅದೇ ದಿನ, ಬೆಳಗಾವಿಯಲ್ಲಿ ಮತ್ತೊಂದು ಕ್ರಿಶ್ಚಿಯನ್ ವಿರೋಧಿ ದಾಳಿ ನಡೆಸಲು ಯತ್ನಿಸಲಾಗಿದೆ. ಒಬ್ಬ ಪಾದ್ರಿಯ ಮೇಲೆ ತಲವಾರ್‌ನಿಂದ ದಾಳಿ ಮಾಡಲು ವ್ಯಕ್ತಿಯೊಬ್ಬರು ಹಿಂಬಾಲಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ತಲವಾರ್ ಹಿಡಿದ ವ್ಯಕ್ತಿ ಬಾಕ್ಸೈಟ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವರ್ಕರ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾದರ್ ಫ್ರಾನ್ಸಿಸ್ ಡಿಸೋಜಾ ಅವರನ್ನು ಬೆನ್ನಟ್ಟುತ್ತಿರುವುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೈಸ್ತ ಗುಂಪುಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ. ದುಷ್ಕರ್ಮಿಗಳನ್ನು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಪಡಿಸುವುದನ್ನು ಬಿಟ್ಟು ಸಂತ್ರಸ್ತರಿಗೆಯೇ ಪೊಲೀಸರು ಬುದ್ಧಿ ಹೇಳುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಸಿವಿಲ್ ಸೊಸೈಟಿ ಸಂಘಟನೆಯ ಇತ್ತೀಚಿನ ಸತ್ಯಶೋಧನಾ ವರದಿಯು ದಕ್ಷಿಣ ಕನ್ನಡವೊಂದರಲ್ಲೇ ಕನಿಷ್ಠ 71 ಕೋಮು ವೈಷಮ್ಯದ ಪ್ರಕರಣಗಳು ಕಳೆದ ಎಂಟು ತಿಂಗಳ ಅವಧಿಯಲ್ಲಿ ನಡೆದಿವೆ ಎಂದು ಹೇಳಿದೆ.
ಇದನ್ನೂ ಓದಿರಿ: ‘ಹಿಂದುತ್ವಕ್ಕೆ ಸತ್ಯವೆಂದರೆ ಆಗದು, ಹಿಂದೂಧರ್ಮ, ಹಿಂದುತ್ವ ಒಂದೇ ಅಲ್ಲ’