“ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 1,000 ರೂ. ಠೇವಣಿ ಇಡಲಾಡಲಾಗುವುದು” ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ.
ಕುಮಾನ್‌ನ ಯುಎಸ್ ನಗರದ ಕಾಶಿಪುರ ಪ್ರದೇಶಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ಯುಎಸ್ ನಗರವು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ತವರು ಜಿಲ್ಲೆಯಾಗಿದೆ.
ಕೇಜ್ರಿವಾಲ್ ಮಾತನಾಡಿ, “ಹಣ ಎಲ್ಲಿಂದ ಬರುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ಉತ್ತರಾಖಾಂಡ್ ಬಜೆಟ್ ಗಾತ್ರ ಸುಮಾರು 55,000 ಕೋಟಿ ರೂ.. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲವೇ? ಯಾವುದೇ ಕಾಮಗಾರಿಯಾದರೂ ಎಷ್ಟು ಭ್ರಷ್ಟಾಚಾರ ರಾಜ್ಯದಲ್ಲಿದೆ? ರಾಜ್ಯದಲ್ಲಿ ಶೇ.60, ಶೇ.80ರಷ್ಟು ಭ್ರಷ್ಟಾಚಾರ ಇದೆ ಎನ್ನುತ್ತಾರೆ ಕೆಲವರು. ಶೇ. 20ರಷ್ಟು ಭ್ರಷ್ಟಾಚಾರವಿದೆ ಎಂದು ಹೇಳೋಣ. ಹೀಗಾಗಿ 55,000 ಕೋಟಿ ರೂ.ಗಳಲ್ಲಿ ಶೇ. 20 ಅಂದರೆ 11,000 ಕೋಟಿ ರೂ.ಗಳಾಗುತ್ತದೆ. ಇಷ್ಟು ಹಣ ರಾಜಕಾರಣಿಗಳ ಜೇಬಿಗೆ, ಸ್ವಿಸ್ ಬ್ಯಾಂಕ್‌ಗೆ ಹೋಗುತ್ತದೆ” ಎಂದು ಅವರು ಆರೋಪಿಸಿದ್ದಾರೆ.
ಮಹಿಳೆಯರಿಗೆ ಮಾಸಿಕವಾಗಿ ಒಂದು ಸಾವಿರ ರೂ. ನೀಡುವುದಾದರೆ 3,000 ಕೋಟಿ ರೂ.ಗಳನ್ನು ಇದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ ಎಂದು ಹೇಳಿರುವ ಕೇಜ್ರಿವಾಲ್, “ಸ್ವಿಸ್ ಬ್ಯಾಂಕ್‌ಗಳಿಗೆ ಹೋಗುತ್ತಿರುವ ಹಣವನ್ನು ನಾನು ನಿಲ್ಲಿಸುತ್ತೇನೆ. ಹಾಗಾಗಿ ಸ್ವಿಸ್ ಬ್ಯಾಂಕ್ ಗಳಿಗೆ ಹೋಗುವ ಹಣ ಇಲ್ಲಿನ ಮಹಿಳೆಯರ ಜೇಬಿಗೆ ಸೇರುತ್ತದೆ” ಎಂದು ಭರವಸೆ ನೀಡಿದ್ದಾರೆ.
ಈ ವರ್ಷ ಕೇಜ್ರಿವಾಲ್ ಅವರು ಉತ್ತರಾಖಾಂಡ್ ರಾಜ್ಯಕ್ಕೆ ಐದನೇ ಬಾರಿಗೆ ಭೇಟಿ ನೀಡಿದ್ದಾರೆ. ನವೆಂಬರ್ 21ರಂದು ಹರಿದ್ವಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ದೆಹಲಿಯ ಎಎಪಿ ಸರ್ಕಾರವು ಒದಗಿಸುವ ಉಚಿತ ತೀರ್ಥಯಾತ್ರೆಯ ಸೇವೆಯನ್ನು ರಾಜ್ಯದ ಜನರಿಗೂ ಒದಗಿಸಲಾಗುವುದು” ಎಂದು ಘೋಷಿಸಿದರು.
ಸೆಪ್ಟೆಂಬರ್‌ನಲ್ಲಿ ನೈನಿತಾಲ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, “ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯಲ್ಲೂ ಉದ್ಯೋಗ ಸೃಷ್ಟಿಸಲಾಗುವುದು, ನಿರುದ್ಯೋಗಿ ಯುವಕರಿಗೆ 5000 ರೂ. ಸ್ಟೈಫಂಡ್ ನೀಡಲಾಗುವುದು” ಎಂದು ಘೋಷಿಸಿದ್ದರು. ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ 1 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿಯೂ ಅವರು ಭರವಸೆ ನೀಡಿದ್ದರು.
ಆಗಸ್ಟ್ 17ರಂದು ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡಿದಾಗ, “ಜಗತ್ತಿನಾದ್ಯಂತ ಇರುವ ಹಿಂದೂಗಳಿಗಾಗಿ ಉತ್ತರಾಖಂಡ್ ರಾಜ್ಯವನ್ನು ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡಲಾಗುವುದು” ಎಂದು ಕೇಜ್ರಿವಾಲ್ ಘೋಷಿಸಿದ್ದರು. ಜುಲೈ 11ರಂದು, ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡಿದಾಗ, “ಆಪ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು” ಎಂದಿದ್ದರು.


