Homeಮುಖಪುಟಬಲವಂತದ ಮತಾಂತರಕ್ಕೆ ಸಂವಿಧಾನದಲ್ಲಿ ಶಿಕ್ಷೆಯಿದೆ, ಹೊಸ ಕಾಯ್ದೆಯ ಅಗತ್ಯವೇನಿದೆ?: ಸಿದ್ದರಾಮಯ್ಯ ಪ್ರಶ್ನೆ

ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲಿ ಶಿಕ್ಷೆಯಿದೆ, ಹೊಸ ಕಾಯ್ದೆಯ ಅಗತ್ಯವೇನಿದೆ?: ಸಿದ್ದರಾಮಯ್ಯ ಪ್ರಶ್ನೆ

”ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ’

- Advertisement -
- Advertisement -

“ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಸರ್ಕಾರದ ನೂತನ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ? ಇದೇ ಕಾರಣಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ’ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಆಗುವುದಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಪ್ರತಿ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ” ಎಂದು ಹೇಳಿದ್ದಾರೆ.

’ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಅದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರುವ ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ’ ಎಂದಿದ್ದಾರೆ.

ಹಿಂದಿನ ಕರಡು ಪ್ರತಿಗೂ ಇಂದಿನ ಕರಡು ಪ್ರತಿಗೂ ವ್ಯತ್ಯಾಸ ತಿಳಿಸಿರುವ ವಿ ಪಕ್ಷ ನಾಯಕ, “ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡು ಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ. ಮೊದಲನೆಯದು ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ  ವಿವಾಹ ಎಂಬ ಪದ ಬಳಕೆ ಇರಲಿಲ್ಲ. ಬಿಜೆಪಿ ಯವರು ತಮ್ಮ ಕಾಯ್ದೆಯಲ್ಲಿ ವಿವಾಹವನ್ನು ಹೊಸದಾಗಿ ಸೇರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷಾಧಾರಗಳ ಕೊರತೆ ಕಂಡುಬಂದರೆ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಕಾಯ್ದೆಯ ನಿಯಮ 12 ರ ಪ್ರಕಾರ ಸಾಕ್ಷಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಾಯ್ದೆಯು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: 2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಚಿಂತನೆಗೆ ಹಚ್ಚಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ

’ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ?’ ಎಂದು ಪ್ರಶ್ನಿಸಿದ್ದಾರೆ.

’ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಅಲ್ಲಿನ ಹೈಕೋರ್ಟ್, ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಗುಜರಾತ್, ಉತ್ತರ ಪ್ರದೇಶ ಸರ್ಕಾರಗಳ ಮತಾಂತರ ನಿಷೇಧ ಕಾಯ್ದೆಯಲ್ಲಿ ಬಳಕೆ ಮಾಡಿರುವ ಪದಗಳು, ವಾಕ್ಯಗಳೇ ಇಲ್ಲಿಯೂ ಯಥಾವತ್ತಾಗಿವೆ. ಈ ಎಲ್ಲಾ ಸರ್ಕಾರಗಳ ಕರಡು ತಯಾರಿಕೆಯ ಹಿಂದೆ ಯಾವುದೋ ಒಂದು ಕಾಣದ ಕೈ ಇದೆ ಎಂಬ ಅನುಮಾನ ನನಗಿದೆ. ಅದು ಯಾವುದು ಎಂದು ಸರ್ಕಾರವೇ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

’ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರ ಗೊಂಡರು. ಸಾಮ್ರಾಟ್ ಆಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇದಕ್ಕೆ ಕಾರಣವೇನು ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ. ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರು ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್  ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಇವರ್ಯಾರು ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರಗೊಂಡವರಲ್ಲ’ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

’ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. 2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ. 2001 ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ 83.86% ಹಿಂದೂಗಳ ಪ್ರಮಾಣ ಇತ್ತು, ಅದು 2011 ಕ್ಕೆ ಶೇ. 84 ಕ್ಕೆ ಏರಿಕೆಯಾಗಿದೆ. ಮುಸ್ಲಿಮರ ಪ್ರಮಾಣ 12.23% ಇಂದ 12.92 ಹೆಚ್ಚಾಗಿದೆ. ಕ್ರೈಸ್ತರ ಪ್ರಮಾಣ 1.91% ಇಂದ 1.87% ಗೆ ಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ’ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ.

’ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದಿ ತಿಳಿಸಿದ್ದಾರೆ.

’ಹಿಂದೂ ಧರ್ಮದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಕಿತ್ತುಹಾಕಲು ಪ್ರಯತ್ನ ಮಾಡಿದ ಬಾಬಾ ಸಾಹೇಬರು, ಅದು ಸಾಧ್ಯವಾಗದಿದ್ದಾಗ ” ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ” ಎಂದು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಜೊತೆಗೆ ಲಕ್ಷಾಂತರ ಜನರಿಗೆ ಸ್ವ ಇಚ್ಛೆಯಿಂದ ಮತಾಂತರಗೊಳ್ಳಲು ಕರೆನೀಡಿದ್ದು ನಿಜವಲ್ಲವೇ? ಬಲವಂತದಿಂದ, ಆಸೆ ಆಮಿಷ ಒಡ್ಡಿ, ಹೆದರಿಸಿ ಬೆದರಿಸಿ, ಮೋಸದ ಮೂಲಕ ಮತಾಂತರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದರ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ಅನುಸರಿಸುತ್ತಿರುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

“ಮತಾಂತರವನ್ನು ದೂಷಿಸುವ ಬದಲು, ಮತಾಂತರವಾಗಲು ನಮ್ಮಲ್ಲಿರುವ ದೋಷಗಳೇನು ಎಂಬುದನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇದು ನಿಜವಾಗಿ ಈಗ ನಾವು ಮಾಡಲೇಬೇಕಾದ ಕೆಲಸ. ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮತಾಂತರ ನಿಷೇಧ ಮಸೂದೆ ಬೆನ್ನಲ್ಲೆ ದುಷ್ಕರ್ಮಿಗಳಿಂದ ಚರ್ಚ್ ಧ್ವಂಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...