ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ ಸುಮಾರು ಮೂರು ತಿಂಗಳ ನಂತರ, ಗೋವಾದ ಮಾಜಿ ಶಾಸಕ ಲಾವೂ ಮಮಲ್ದರ್ ಸೇರಿದಂತೆ ಅದರ ಐದು ಪ್ರಾಥಮಿಕ ಸದಸ್ಯರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷವು ಕೋಮುವಾದಿಯಾಗಿದ್ದು, ಓಟಿಗಾಗಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ನಡುವೆ ವಿಭಜನೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗೋವಾದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಲಿದೆ.
“ನಾವು ಗೋವಾ ಮತ್ತು ಗೋವನ್ನರಿಗೆ ಉಜ್ವಲ ದಿನಗಳನ್ನು ತರುತ್ತೇವೆ ಎಂಬ ಭರವಸೆಯೊಂದಿಗೆ ಟಿಎಂಸಿಗೆ ಸೇರಿದ್ದೇವೆ. ಆದರೆ ಟಿಎಂಸಿ ಗೋವಾ ಮತ್ತು ಗೋವನ್ನರನ್ನು ಅರ್ಥಮಾಡಿಕೊಂಡಿಲ್ಲ ಎಂಬುವುದು ದುರದೃಷ್ಟಕರ” ಎಂದು ರಾಜೀನಾಮೆ ನೀಡಿದ ನಾಯಕರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೊಲ್ಕತ್ತಾ ಮುನ್ಸಿಪಲ್‌ನಲ್ಲಿ ಟಿಎಂಸಿ ಅಭೂತಪೂರ್ವ ಜಯ; BJP ಹೀನಾಯ ಸೋಲು
“ಹಿಂದೂ ಮತಗಳನ್ನು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಕಡೆಗೆ ಮತ್ತು ಕ್ಯಾಥೋಲಿಕ್ ಮತಗಳನ್ನು ಟಿಎಂಸಿ ಕಡೆಗೆ ಧ್ರುವೀಕರಿಸುತ್ತಿದ್ದು, ಈ ಕ್ರಮವು ಸಂಪೂರ್ಣವಾಗಿ ಕೋಮುವಾದಿತನದ್ದಾಗಿದೆ.
ಗೋವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಪಕ್ಷದೊಂದಿಗೆ ನಾವು ಮುಂದುವರಿಯಲು ಬಯಸುವುದಿಲ್ಲ. ಗೋವಾವನ್ನು ವಿಭಜಿಸಲು ನಾವು ನಾವು ಬಿಡುವುದಿಲ್ಲ, ರಾಜ್ಯದ ಜಾತ್ಯತೀತತೆಯನ್ನು ನಾವು ರಕ್ಷಿಸುತ್ತೇವೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಲಾವೂ ಮಮಲ್ದರ್ ಅವರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಿದ್ದರು. ಫೆಬ್ರವರಿ 2022 ರಲ್ಲಿ ನಡೆಯಲಿರುವ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದ ರಾಜ್ಯದ ಮೊದಲ ಕೆಲವು ಸ್ಥಳೀಯ ನಾಯಕರಲ್ಲಿ ಅವರು ಒಬ್ಬರಾಗಿದ್ದಾರೆ.
ಈ ಹಿಂದೆ, ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ತೃಣಮೂಲ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಪೋಂಡಾ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಲಾವೂ ಮಮಲ್ದರ್ ಆರೋಪಿಸಿದ್ದಾರೆ.
“ಟಿಎಂಸಿ ಕೋಮುವಾದಿ ಪಕ್ಷವಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಡಿಸೆಂಬರ್ 5 ರಂದು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಮೈತ್ರಿ ಘೋಷಿಸಲಾಯಿತು. ಹೀಗಾಗಿ ಟಿಎಂಸಿ ಕೂಡ ಕೋಮುವಾದಿ ಎಂದು ನಾನು ಕಂಡುಕೊಂಡೆ” ಎಂದು ಎಂಜಿಪಿಯನ್ನು ತೊರೆದು ತೃಣಮೂಲ ಪಕ್ಷ ಸೇರಿದ್ದ ಅವರು ಹೇಳಿದ್ದಾರೆ.
ಮುಂಬರುವ ಚುನಾವಣೆಗಳಿಗಾಗಿ ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಪ್ರಚಾರ ನಡೆಸುತ್ತಿದೆ. ಪಕ್ಷವು ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ಅವರನ್ನು ಟಿಎಂಸಿ ಸೇರ್ಪಡೆಗೊಳಿಸಿದೆ. ಈ ತಿಂಗಳ ಆರಂಭದಲ್ಲಿ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ ನೀಡಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು. 2022 ರ ಆರಂಭದಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ.


