ತನ್ನ ಪಕ್ಷಕ್ಕೆ ಸೇರಲು ನಿರೀಕ್ಷಿತ ಅಭ್ಯರ್ಥಿಗಳಿಗೆ ತೃಣಮೂಲ ಕಾಂಗ್ರೆಸ್ ಪಕ್ಷವು 10 ರಿಂದ 20 ಕೋಟಿ ರೂಪಾಯಿಗಳವರೆಗೆ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಶನಿವಾರ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಮತ್ತು ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗೋವಾ: 4 ವರ್ಷದಲ್ಲಿ 50% ಶಾಸಕರು ಪಕ್ಷಾಂತರ!
“ಗೋವಾಕ್ಕೆ ಅವರ ಪಕ್ಷ ಏನು ಕೊಡುಗೆ ನೀಡಿದೆ. ಇಂದು ಅವರು ಕೋಟಿ-ಕೋಟಿ ರೂಪಾಯಿಗಳೊಂದಿಗೆ ಬರುತ್ತಿದ್ದಾರೆ. ಬನ್ನಿ ಅಭ್ಯರ್ಥಿಯಾಗಿ ನಾವು ನಿಮಗೆ 10 ರಿಂದ 20 ಕೋಟಿ ರೂ. ನೀಡುತ್ತೇವೆ ಎಂದು ಜನರಿಗೆ ಆಫರ್ ನೀಡುತ್ತಿದ್ದಾರೆ. ಈ ಹಣ ಎಲ್ಲಿಂದ ಮತ್ತು ಯಾವುದಕ್ಕೆ ಬರುತ್ತಿದೆ? ಅವರು ಅದನ್ನು ಮಾಡುವ ಉದ್ದೇಶವೇನು?” ಎಂದು ದಿನೇಶ್ ಗುಂಡೂರಾವ್ ಪಣಜಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಇವರ ಅಜೆಂಡಾ ಅತ್ಯಂತ ಸ್ಪಷ್ಟವಾಗಿದ್ದು, ಪರೋಕ್ಷವಾಗಿ ಅವರು ಬಿಜೆಪಿಗೆ ಸಹಾಯ ಮಾಡಲು ಬಯಸುತ್ತಿದ್ದಾರೆ. ನಾವು ಟಿಎಂಸಿ ಮೈತ್ರಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಅವರು ಕಾಂಗ್ರೆಸ್ ಅನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆಯೆ ಹೊರತು ಬಿಜೆಪಿಯನ್ನು ಅಲ್ಲ. ಇದು ಅವರ ಅಜೆಂಡಾ, ಆದ್ದರಿಂದ ನಾವು ಅವರ ಮೈತ್ರಿಯನ್ನು ಒಪ್ಪಿಕೊಳ್ಳುವುದು ಹೇಗೆ?” ಎಂದು ದಿನೇಶ್ ಗುಂಡೂರಾವ್ ಕೂಡ ಹೇಳಿದ್ದಾರೆ.
ಇದನ್ನೂ ಓದಿ:ಗೋವಾ ಚುನಾವಣೆ: ಟಿಎಂಸಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 5 ಸಾವಿರ ರೂ ಭರವಸೆ
ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷವು ಬಿಜೆಪಿ ವಿರುದ್ಧ ಮಹಾಘಟಬಂಧನ್‌ಗೆ ತಯಾರಾಗುತ್ತಿಲ್ಲ, ಆದರೆ ಬಿಜೆಪಿ ವಿರೋಧಿ ಪಕ್ಷಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಅವರು ಮಹಾಘಟಬಂಧನ್ ಅನ್ನು ಮುರಿಯುತ್ತಿದ್ದಾರೆ. ಆದರೆ ಇಂದು ದೇಶಾದ್ಯಂತ ಬಿಜೆಪಿ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಹೋರಾಡುವ ಹೆಸರಿನಲ್ಲಿ ಅವರು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು, ಕಾಂಗ್ರೆಸ್ ಅನ್ನು ನಾಶಮಾಡಲು ಬಯಸುತ್ತಿದ್ದಾರೆ” ಎಂದು ಗುಂಡೂರಾವ್ ಹೇಳಿದ್ದಾರೆ.
ಅವರು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ, ಬಿಜೆಪಿ ವಿರೋಧಿ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ, ಆದರೆ ಅವರೇಕೆ ಬಿಜೆಪಿ ನಾಯಕರ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ: ಗೋವಾ ಬಿಜೆಪಿ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ!


