ಪಂಜಾಬ್‌ನ ಸುಮಾರು 20ಕ್ಕೂ ಹೆಚ್ಚು ರೈತ ಸಂಘಟನೆಗಳು ಒಗ್ಗೂಡಿ ‘ಸಂಯುಕ್ತ ಸಮಾಜ್ ಮೋರ್ಚಾ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸುವುದರ ಜೊತೆಗೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ರೈತ ಹೋರಾಟವನ್ನು ಮುನ್ನಡೆಸಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಈ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದ್ದು, ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರು ಬಳಸಿಕೊಳ್ಳದಂತೆ ತಾಕೀತು ಮಾಡಿದೆ.
ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್‌ರವರ ನೇತೃತ್ವದಲ್ಲಿ 117 ಕ್ಷೇತ್ರಗಳಲ್ಲಿಯೂ ಸಂಯುಕ್ತ ಸಮಾಜ್ ಮೋರ್ಚಾ ಸ್ಪರ್ಧಿಸಲಿದೆ ಎನ್ನಲಾಗಿದೆ. ಬಿಕೆಯು(ಡಕೊಂಡ), ಬಿಕೆಯು (ಲಖಾವಾಲ್) ಸೇರಿ ಇನ್ನಿತರ ಸಂಘಟನೆಗಳು ಈ ರಾಜಕೀಯ ಪಕ್ಷದ ಜೊತೆ ಸೇರಿಕೊಳ್ಳುತ್ತವೆಯೇ ಎಂಬುದಿನ್ನು ಸ್ಪಷ್ಟವಾಗಿಲ್ಲ. ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಸಂಯುಕ್ತ ಕಿಸಾನ್ ಮೋರ್ಚಾ ಈ ಇಡೀ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದೆ. ಸಂಯುಕ್ತ ಕಿಸಾನ್ ಮೋರ್ಚಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದರೊಂದಿಗೆ ಡಜನ್‌ಗೂ ಹೆಚ್ಚು ಸಂಘಟನೆಗಳು ಜನ ಚಳವಳಿಯಲ್ಲಿ ನಂಬಿಕೆಯಿಟ್ಟಿವೆ ಎಂದು ಹೇಳಿಕೆ ಮೂಲಕ ತಿಳಿಸಿದೆ.
ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಡಾ.ದರ್ಶನ್ ಪಾಲ್ ಜಂಟಿ ಪತ್ರಿಕಾ ಹೇಳಿಕೆ ನೀಡಿ, “ದೇಶಾದ್ಯಂತ 400 ಕ್ಕೂ ಹೆಚ್ಚು ವಿವಿಧ ಸೈದ್ಧಾಂತಿಕ ಸಂಘಟನೆಗಳ ವೇದಿಕೆಯಾಗಿರುವ ಎಸ್‌ಕೆಎಂ ರೈತರ ಸಮಸ್ಯೆಗಳಿಗಾಗಿ ಮಾತ್ರ ರೂಪುಗೊಂಡಿದೆ. ಸರ್ಕಾರದಿಂದ ತಮ್ಮ ಹಕ್ಕುಗಳನ್ನು ಪಡೆಯಲು ಜನರಿಂದ ರಚಿಸಲಾಗ ಒಕ್ಕೂಟವು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಹೋರಾಟವನ್ನು ಸ್ಥಗಿತಗೊಳಿಸಿದೆ. ಅದು ಚುನಾವಣೆ ಬಹಿಷ್ಕಾರದ ಕರೆ ಕೂಡ ನೀಡುವುದಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಎಸ್‌ಕೆಎಂ ಅಥವಾ 32 ಸಂಘಟನೆಗಳ ಹೆಸರನ್ನು ಯಾರೂ ಬಳಸಿಕೊಳ್ಳಬಾರದು” ಎಂದು ತಿಳಿಸಿದ್ದಾರೆ.
ನಮ್ಮ ಉಳಿದ ಬೇಡಿಕೆಗಳನ್ನು (ಎಂಎಸ್‌ಪಿಗೆ ಶಾಸನಬದ್ಧ ಮಾನ್ಯತೆ ಸೇರಿ) ಜನವರಿ 15, 2022 ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಂಘಟನೆಗಳು ತಮ್ಮ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ 32 ಸಂಘಟನೆಗಳ ಹೆಸರು ಮತ್ತು ಎಸ್‌ಕೆಎಂ ಹೆಸರು ಬಳಸಿಕೊಂಡಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಸ್‌ಕೆಎಂ ಎಚ್ಚರಿಸಿದೆ.
SKM ಒಕ್ಕೂಟದ ಭಾಗವಾಗಿರುವ ಅನೇಕ ರೈತ ಸಂಘಗಳು ಚುನಾವಣಾ ರಾಜಕೀಯದಿಂದ ದೂರವಿರಲು ನಿರ್ಧರಿಸಿವೆ. ಕೀರ್ತಿ ಕಿಸಾನ್ ಯೂನಿಯನ್, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಬಿಕೆಯು-ಕ್ರಾಂತಿಕಾರಿ, ದೋಬಾ ಸಂಘರ್ಷ ಸಮಿತಿ, ಬಿಕೆಯು-ಸಿಧುಪುರ್, ಕಿಸಾನ್ ಸಂಘರ್ಷ ಸಮಿತಿ ಮತ್ತು ಜೈ ಕಿಸಾನ್ ಆಂದೋಲನಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಂಡಿವೆ ಎಂದು ಎಸ್‌ಕೆಎಂ ಹೇಳಿದೆ.
ರೈತ ನಾಯಕ ಗುರ್ನಾಮ್ ಸಿಂಗ್ ಚದುನಿ ಈಗಾಗಲೇ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಅದನ್ನು ಸಂಯುಕ್ತ ಸಂಘರ್ಷ್ ಪಕ್ಷ ಎಂದು ಕರೆದಿದ್ದು, ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಹೊಸ ಪಕ್ಷ ಪ್ರಾರಂಭಿಸಿದ ರೈತ ನಾಯಕ ಗುರ್ನಾಮ್ ಸಿಂಗ್ ಚದುನಿ


