ರೈತ ನಾಯಕ ಗುರ್ನಾಮ್ ಸಿಂಗ್ ಚದುನಿ ಶನಿವಾರ ತಮ್ಮ ಹೊಸ ರಾಜಕೀಯ ಪಕ್ಷವನ್ನು ಕಟ್ಟಿದ್ದಾರೆ. ಹೊಸ ಪಕ್ಷವನ್ನು ಅವರು ಸಂಯುಕ್ತ ಸಂಘರ್ಷ್ ಪಕ್ಷ ಎಂದು ಕರೆದಿದ್ದು, ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಚದುನಿ ಅವರು 40 ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ (SKM) ಸದಸ್ಯರಾಗಿದ್ದಾರೆ. ಈ ಒಕ್ಕೂಟವು ಕಳೆದ ಒಂದು ವರ್ಷದಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸಿ, ಅದನ್ನು ರದ್ದುಗೊಳಿಸವಂತೆ ಮಾಡಿತ್ತು.
ಇದನ್ನೂ ಓದಿ:ತಾಯ್ನೆಲ ತಲುಪಿದ ರೈತರು: ಪಂಜಾಬ್‌ನ ಪ್ರತಿ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ
ಚಂಡೀಘಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ಸಂಯುಕ್ತ ಸಂಘರ್ಷ್ ಪಕ್ಷವನ್ನು ಪ್ರಾರಂಭಿಸುತ್ತಿದ್ದೇವೆ. ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ” ಎಂದು ಚದುನಿ ಹೇಳಿದ್ದಾರೆ.
“ರಾಜಕೀಯವನ್ನು ಶುದ್ಧೀಕರಿಸುವುದು ಮತ್ತು ಒಳ್ಳೆಯ ಜನರನ್ನು ಮುಂದೆ ತರುವುದು ನಮ್ಮ ಉದ್ದೇಶವಾಗಿದೆ” ಎಂದು ಹರಿಯಾಣ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷರೂ ಆಗಿರುವ ಚದುನಿ ಹೇಳಿದ್ದಾರೆ.
ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, “ಬಡವರ ಹಿತಾಸಕ್ತಿಗಳನ್ನು ಕಡೆಗಣಿಸಿ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಾರೆ. ಸಂಯುಕ್ತ ಸಂಘರ್ಷ್ ಪಕ್ಷವು ಜಾತ್ಯತೀತ ಪಕ್ಷವಾಗಲಿದ್ದು, ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಎಸ್‌ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿರುದ್ಧ ಸುಪ್ರಿಂ ಮೆಟ್ಟಿಲೇರಿದ ಪಂಜಾಬ್


