ಗಡಿ ಭದ್ರತಾ ಪಡೆಯ ವ್ಯಾಪ್ತಿಯನ್ನು 15ರಿಂದ 50 ಕಿ.ಮೀವರೆಗೆ ವಿಸ್ತರಿಸುವ ಕೇಂದ್ರದ ಇತ್ತೀಚಿನ ಅಧಿಸೂಚನೆಯ ವಿರುದ್ಧ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯ ವಿಸ್ತರಣೆಯನ್ನು ಪ್ರಶ್ನಿಸಿದ ಮೊದಲ ರಾಜ್ಯ ಪಂಜಾಬ್ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಶ್ಲಾಘಿಸಿದ್ದಾರೆ.
“ಸಂವಿಧಾನದಲ್ಲಿ ಅಡಕವಾಗಿರುವ ತತ್ವಗಳನ್ನು ಉಳಿಸಿಕೊಳ್ಳಲು ಅಂದರೆ ಫೆಡರಲ್ ರಚನೆ, ರಾಜ್ಯಗಳ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ಹೋರಾಟ ಆರಂಭವಾಗಿದೆ. ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನೋಟಿಸ್ ನೀಡಲಾಗಿದೆ” ಎಂದು ಸಿಧು ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ತಿದ್ದುಪಡಿ ಮಾಡಿತು. ಅಕ್ಟೋಬರ್ 11, 2021ರಿಂದ ಜಾರಿಗೆ ಅಧಿಸೂಚನೆ ಹೊರಡಿಸಲಾಗಿತ್ತು. “ಭಾರತ-ಪಾಕಿಸ್ತಾನ, ಭಾರತ-ಬಾಂಗ್ಲಾದೇಶ ಗಡಿಗಳ ಉದ್ದಕ್ಕೂ ಭಾರತದೊಳಗಿನ 50 ಕಿ.ಮೀ. ವ್ಯಾಪ್ತಿಯಲ್ಲಿ ಬಿಎಸ್‌ಎಫ್ ಶೋಧಗಳನ್ನು ನಡೆಸಬಹುದು, ಶಂಕಿತರನ್ನು ಬಂಧಿಸಬಹುದು” ಎಂದು ತಿದ್ದುಪಡಿ ಮಾಡಲಾಗಿತ್ತು.
ಈ ತಿದ್ದುಪಡಿಯಿಂದ ಅಧಿಕಾರ ಪಡೆದ ಬಿಎಸ್‌ಎಫ್ ಈಗ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಬಹುದಾಗಿದೆ. ಐದು ಈಶಾನ್ಯ ರಾಜ್ಯಗಳಲ್ಲಿ (ಮಣಿಪುರ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ) ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು 20 ಕಿ.ಮೀ. ಮೊಟಕುಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
“ಕೇಂದ್ರ ಸರ್ಕಾರವು ಗಡಿ ವಿಸ್ತರಣೆಯನ್ನು ನಿರ್ದಿಷ್ಟಪಡಿಸುವ ‘ವೇಳಾಪಟ್ಟಿ’ಯನ್ನು ಪರಿಷ್ಕರಿಸಿದೆ. ಬಿಎಸ್‌ಎಫ್ ಪಾಸ್‌ಪೋರ್ಟ್ ಕಾಯಿದೆ, ಎನ್‌ಡಿಪಿಎಸ್ ಕಾಯಿದೆ, ಕಸ್ಟಮ್ಸ್ ಕಾಯಿದೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನಂತಹ ಕಾಯಿದೆಗಳ ಅಡಿಯಲ್ಲಿ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಗುಜರಾತ್, ರಾಜಸ್ಥಾನ, ಪಂಜಾಬ್, ಬಂಗಾಳ ಮತ್ತು ಅಸ್ಸಾಂ ಭಾಗಗಳು ಒಳಪಡಲಿವೆ” ಎಂದು ಗೃಹ ಸಚಿವಾಲಯ ಹೇಳಿದೆ.
ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139ರ ಅಡಿಯಲ್ಲಿ, ಕಾಲಕಾಲಕ್ಕೆ ಪ್ರದೇಶ ಮತ್ತು ಪಡೆಗಳ ವ್ಯಾಪ್ತಿಯನ್ನು ತಿಳಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
ಇದನ್ನೂ ಓದಿರಿ: ಕಾಶ್ಮೀರಿ ಪಂಡಿತರಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕ್ಷಮೆಯಾಚನೆ


