Homeಕರ್ನಾಟಕಆತ್ಮವನ್ನೇ ಕಳೆದುಕೊಂಡ ವರ್ತಮಾನ ಮತ್ತು ಆದಿವಾಸಿಗಳು

ಆತ್ಮವನ್ನೇ ಕಳೆದುಕೊಂಡ ವರ್ತಮಾನ ಮತ್ತು ಆದಿವಾಸಿಗಳು

- Advertisement -
- Advertisement -

ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಮನೆ ಸೇರಲು ನಡೆದುಹೋಗುತ್ತಿದ್ದ ಕೃಷಿಕೂಲಿಗಳ ಮೇಲೆ ಸೈನ್ಯ ಬೇಕಾಬಿಟ್ಟಿ ಗುಂಡು ಹಾರಿಸಿ 14 ಜನರನ್ನು ಕೊಂದು ಹಾಕಿದೆ. ಸೈನಿಕರಿಗೆ ಹೀಗೆ ಕೊಲ್ಲುವ ಲೈಸೆನ್ಸ್ ನೀಡಿದ್ದು ನಮ್ಮದೇ ದೇಶದ ಆಫ್‌ಸ್ಪ (AFSPA) ಕಾಯ್ದೆ. ರಾಷ್ಟ್ರೀಯ ಭದ್ರತೆಗಾಗಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸೈನ್ಯಕ್ಕೆ ಪ್ರಭುತ್ವ ನೀಡಿದ ಅನಿಯಂತ್ರಿತ ವಿಶೇಷಾಧಿಕಾರವಿದು. ರಾಷ್ಟ್ರದ ಸಂರಕ್ಷಣೆಗಾಗಿ ಸೈನ್ಯ ಗುಂಡಿಕ್ಕಿತು, 14 ಜನ ನಾಗರಿಕರು ರಾಷ್ಟ್ರೀಯ ಭದ್ರತೆಗಾಗಿ ಜೀವ ಕಳೆದುಕೊಂಡರು. ‘ಭಯೋತ್ಪಾದಕರೆಂದು ಭಾವಿಸಿ ಗುಂಡು ಹಾರಿಸಿದೆವು’ ಎಂದು ಸೈನ್ಯ ಸಮಜಾಯಿಷಿ ನೀಡಿದೆ. ಇದೇ ಸಂದರ್ಭದಲ್ಲಿ ಕುಶಾಲನಗರದ ಬಳಿ ಬಹಳ ಜನರ ಗಮನಕ್ಕೆ ಬಾರದ ದುರ್ಘಟನೆಯೊಂದು ನಡೆದುಹೋಗಿದೆ. ದಿ: 01.12.2021ರಂದು ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ಬಳಿ ಜೇನುಕುರುಬ ಆದಿವಾಸಿ ಸಮುದಾಯದ ಬಸವ ಎಂಬ ಯುವಕನ ಮೇಲೆ ಅರಣ್ಯ ಇಲಾಖೆಯ ಗಾರ್ಡ್‌ಗಳು ಗುಂಡು ಹಾರಿಸಿ ಕೊಲ್ಲಲೆತ್ನಿಸಿದ್ದಾರೆ. ಗಾರ್ಡ್‌ಗಳು ಹಾರಿಸಿದ ಗುಂಡು ಗುರಿ ತಪ್ಪಿ ಅವನ ಕೆಳಬೆನ್ನನ್ನು ಹೊಕ್ಕಿದೆ. ಗಾಯಗೊಂಡು ತನ್ನ ಜಮೀನಿನಲ್ಲಿ ಬಿದ್ದಿದ್ದ ಯುವಕನ ನೆರವಿಗೆ ಬರಲು ಆ ಕ್ಷಣಕ್ಕೆ ಯಾರೂ ಸ್ಥಳದಲ್ಲಿರಲಿಲ್ಲ. ಅರಣ್ಯ ಇಲಾಖೆಯ ಗಾರ್ಡ್‌ಗಳು ‘ಆದಿವಾಸಿ ಯುವಕ ಬಸವನು ಗಂಧದ ಮರವನ್ನು ಕಡಿದು ಕದ್ದು ಸಾಗಿಸುತ್ತಿದ್ದ. ಅರಣ್ಯ ರಕ್ಷಣೆಗಾಗಿ ನಾವು ಗುಂಡು ಹಾರಿಸಿದೆವು’ ಎಂಬ ಹೇಳಿಕೆ ನೀಡಿ ತಾವು ಗುಂಡು ಹೊಡೆದದ್ದನ್ನು ಸಮರ್ಥಿಸಿಕೊಂಡಿದ್ದಾರೆ. ವರ್ತಮಾನದ ರಾಜಕೀಯ ಹರಾಕಿರಿಗಳಲ್ಲಿ ಇದೇನು ಅಂತಹ ಮಹತ್ವದ ಸಂಗತಿಯಲ್ಲ ಎಂದು ನಮ್ಮ ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು ಈ ಕಡೆಗೆ ತಿರುಗಿಯೂ ನೋಡಲಿಲ್ಲ.

ನಟಿಯೊಬ್ಬಳು ಗರ್ಭ ಧರಿಸಿದ್ದನ್ನು ‘ಬಿಗ್ ಬ್ರೇಕಿಂಗ್’ ಎಂದು ಬಿತ್ತರಿಸುವ ನಿರ್ಲಜ್ಜ ಮನಸ್ಥಿತಿಯವರಿಗೆ ಅಮಾಯಕನ ಮೇಲೆ ಗುಂಡು ಹಾರಿಸಿ ಕೊಲ್ಲಲೆತ್ನಿಸಿದ ಘಟನೆಯು ಕ್ಷುಲ್ಲಕವಾಗಿ ಕಂಡಿರಬೇಕು! ಕುಶಾಲನಗರದ ಜನವೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಗ್ರೀನ್ ಇಂಡಿಯಾ ಗಿರಿಜನ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಡಾ. ಮಹೇಂದ್ರಕುಮಾರ್ ಸ್ಥಳೀಯ ಆದಿವಾಸಿಗಳನ್ನು ಸಂಘಟಿಸಿ ಗಾಯಗೊಂಡ ಯುವಕನಿಗೆ ನ್ಯಾಯ ಕೊಡಿಸಲು ಹೋರಾಟವನ್ನು ಪ್ರಾರಂಭಿಸಿದರು. ನಂತರ ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಈ ಹೋರಾಟದ ಮುಂಚೂಣಿಗೆ ಬಂದ ಮೇಲೆ ಮೀಡಿಯಾದ ಕ್ಯಾಮರಾಗಳು ಹೋರಾಟದ ಕಡೆ ತಿರುಗಿ ನೋಡಲಾರಂಭಿಸಿದವು. ಮೈಸೂರಿನಲ್ಲಿ ಮಹೇಂದ್ರಕುಮಾರ್ ಮತ್ತು ಚೇತನ್ ಅಹಿಂಸಾ ಜೊತೆಗೆ ನಿಂತು ಹೋರಾಟ ಕಟ್ಟಿದವರು ಅಲ್ಲಿನ ದಲಿತ ಸಂಘಟನೆಗಳಿಗೆ ಸೇರಿದ ಯುವಕರು. ಆದರೆ ಸ್ಥಳೀಯರು ಮಾತ್ರ ಮುಗಮ್ಮಾಗಿ ಉಳಿದರು. ಏಕೆಂದರೆ ಗುಂಡು ಹೊಡೆಸಿಕೊಂಡವನು ಒಂದು ನಿರ್ಗತಿಕ ಸಮುದಾಯಕ್ಕೆ ಸೇರಿದವನು. ಇಂತಹ ದೌರ್ಜನ್ಯಗಳು ಸಹಜವೆಂಬಂತೆ ಸ್ಥಳೀಯರು ನಿರ್ಲಕ್ಷಿಸಿದಂತೆ ಕಾಣುತ್ತದೆ. ನಾಗರಿಕ ಸಮಾಜವೊಂದು ಇಂತಹ ಕೊಲೆ ಪ್ರಯತ್ನಗಳನ್ನು ‘ಇದೊಂದು ಸಾಮಾನ್ಯ ಘಟನೆ’ ಎಂದು ನಿರ್ಲಕ್ಷಿಸಿಬಿಟ್ಟರೆ ಅಷ್ಟರಮಟ್ಟಿಗೆ ನಮ್ಮ ಸಂವೇದನೆಗಳು ಸತ್ತು ಹೋಗಿವೆ ಎಂದು ಭಾವಿಸಬೇಕಾಗುತ್ತದೆ. ಅಮಾಯಕ ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿದ ಕ್ರೌರ್ಯವನ್ನು, ಕೊಲೆ ಪ್ರಯತ್ನವೊಂದನ್ನು ಸಾಮಾನ್ಯ ಘಟನೆ ಎಂದು ಪರಿಗಣಿಸಿಬಿಡುವ ನಾಗರಿಕ ಸಮಾಜದ ಕ್ರೌರ್ಯ ಅತ್ಯಂತ ಹೇಯವಾದದ್ದು. ಹಿಂಸೆಯನ್ನು ಸಾಮಾನ್ಯೀಕರಿಸಿಬಿಡುವ ನಾಗರಿಕ ಸಮಾಜದ ಈ ನಿರ್ಲಿಪ್ತತೆ ಭಯ ಹುಟ್ಟಿಸುತ್ತದೆ. ಸಹಜ ಮಾನವೀಯ ಮೌಲ್ಯಗಳಿಗೆ ನಾಗರಿಕ ಸಮಾಜ ತಿಲಾಂಜಲಿ ಇಟ್ಟಿದೆಯೇ ಎಂಬ ಭಾವನೆಯೂ ಬಲಗೊಳ್ಳುತ್ತಿದೆ. ಕೊಡಗಿನ ಈ ಭಾಗದಲ್ಲಿ ದಲಿತರ ಮೇಲೆ ಆದಿವಾಸಿಗಳ ಮೇಲೆ ನಡೆಯುವ ದೌರ್ಜನ್ಯಗಳು ನಿತ್ಯ ನಡೆದುಹೋಗುವ ಸರ್ವೇಸಾಧಾರಣ ಸಾಮಾಜಿಕ ಚಟುವಟಿಕೆಗಳಾಗಿಬಿಟ್ಟಿವೆ. ಅದರಲ್ಲೂ ಅಲ್ಲಿನ ಫಣಿ ಯರವ, ಪಂಜರಿ ಯರವ, ಕಾಡುಕುರುಬ ಮತ್ತು ಜೇನುಕುರುಬ ಸಮುದಾಯಗಳು ಈಗಲೂ ಜೀವಭಯದಲ್ಲಿಯೇ ಬದುಕುತ್ತಿವೆ.

ಬಸವ

ಬಸವ ಎಂಬ ಈ ಆದಿವಾಸಿ ಯುವಕ ದಿ: 01.12.2021ರಂದು ಬೆಳಗ್ಗೆ 10.30ರವರಗೆ ಆದಿವಾಸಿಗಳ ಸ್ಥಳೀಯ ಸಂಘಟನೆಯಾದ ‘ಬುಡಕಟ್ಟು ಕೃಷಿಕರ ಸಂಘ’ದ ಸಭೆಯಲ್ಲಿ ಪಾಲ್ಗೊಳ್ಳುತ್ತಾನೆ. ಸಭೆ ನಡೆಯುತ್ತಿರುವಾಗಲೆ ತನ್ನ ಜಮೀನಿಗೆ ತೆರಳಿ ಕೆಲಸದಲ್ಲಿ ತೊಡಗಿದ್ದಾನೆ. (ಈ ‘ಬುಡಕಟ್ಟು ಕೃಷಿಕರ ಸಂಘ’ವು ಕಳೆದ ಹಲವು ದಶಕಗಳಿಂದ ಇಲ್ಲಿನ ಆದಿವಾಸಿಗಳ ಸಹಜ ಹಕ್ಕುಗಳಿಗೆ ಹೋರಾಡುತ್ತಾ ಬಂದಿದೆ.) ಅಲ್ಲಿಗೆ ಏಕಾಏಕಿ ಬಂದ ಅರಣ್ಯ ಇಲಾಖೆಯ ಗಾರ್ಡ್‌ಗಳು ಅವನ ಮೇಲೆ ಗುಂಡು ಹಾರಿಸಿದ್ದಾರೆ. ಗಾರ್ಡ್‌ಗಳು ಹಾರಿಸಿದ ಗುಂಡು ಬಸವನ ಕೆಳಬೆನ್ನನ್ನು ಹೊಕ್ಕಿದೆ. ತೀವ್ರವಾಗಿ ಗಾಯಗೊಂಡ ಆತ ಜೀವಭಯದಲ್ಲಿ ಒದ್ದಾಡುತ್ತಿದ್ದಾಗ ಅರಣ್ಯ ಇಲಾಖೆಯ ಗಾರ್ಡ್‌ಗಳು ಆತನನ್ನು ಸಮೀಪದ ಕುಶಾಲನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಗಾಯಗೊಂಡ ಆತನಿಗೆ ಚಿಕಿತ್ಸೆ ಕೊಡಿಸದೆ ಅಲ್ಲಿಯೇ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ದೇಹದೊಳಗೆ ಹೊಕ್ಕ ಗುಂಡನ್ನು ಹೊರತೆಗೆಯುವ ವ್ಯವಸ್ಥೆ ಕುಶಾಲನಗರ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಮೈಸೂರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅವನು ಅಲ್ಲಿ ಗಾಯಗೊಂಡು ನರಳುತ್ತಿದ್ದ ಸಂದರ್ಭದಲ್ಲಿ ಕುಶಾಲನಗರದ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಗಾರ್ಡ್‌ಗಳು ತಾವು ಗುಂಡು ಹಾರಿಸಿ ಗಾಯಗೊಳಿಸಿದ ಸಂತ್ರಸ್ತ ಬಸವನ ಮೇಲೆಯೇ ಎಫ್‌ಐಆರ್‌ನ್ನೂ ದಾಖಲಿಸಿದ್ದಾರೆ.

ಯಾರು ಈ ಜೇನುಕುರುಬರು?

ಜೇನುಕುರುಬ ಸಮುದಾಯ ನಾಗರಹೊಳೆ ಕಾಕನಕೋಟೆ ಮತ್ತು ದುಬಾರೆ ಅರಣ್ಯಗಳಲ್ಲಿ ಹೆಚ್ಚಾಗಿ ವಾಸಿಸುವ ಕರ್ನಾಟಕದ ಅತ್ಯಂತ ಆದಿಮ ಬುಡಕಟ್ಟುಗಳಲ್ಲೊಂದು. ಭಾರತ ಸರಕಾರ ಕರ್ನಾಟಕದಲ್ಲಿ ಪಟ್ಟಿ ಮಾಡಿರುವ ಎರಡು ಆದಿಮ ಬುಡಕಟ್ಟುಗಳಲ್ಲಿ (Primitive Tribe) ಜೇನುಕುರುಬ ಸಮುದಾಯವೂ ಒಂದು. (ಇನ್ನೊಂದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುವ ಕೊರಗ ಸಮುದಾಯ). ಕರ್ನಾಟಕದ ದಕ್ಷಿಣ ಭಾಗದ 4 ಜಿಲ್ಲೆಗಳಲ್ಲಿ ಜೇನುಕುರುಬ ಸಮುದಾಯದ ಹಾಡಿಗಳಿವೆ. ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಜೇನುಕುರುಬರು ವಾಸವಾಗಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು ಮತ್ತು ಹೆಗ್ಗಡದೇವನಕೋಟೆಗಳಲ್ಲಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಸಕಲೇಶಪುರಗಳಲ್ಲೂ, ಕೊಡಗಿನ ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಜೇನುಕುರುಬರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ನಾಲ್ಕೂ ಜಿಲ್ಲೆಗಳಲ್ಲಿ 10,200 ಜೇನುಕುರುಬ ಕುಟುಂಬಗಳು 210 ಹಾಡಿಗಳಲ್ಲಿ ವಾಸಿಸುತ್ತಿವೆ. ಅಂದಾಜು ಜನಸಂಖ್ಯೆ 61,500. ಈ ಜೇನುಕುರುಬರು ಕುರಿ ಸಾಕುವುದಿಲ್ಲ. ವಸಾಹತು ಆಡಳಿತದ ಕಾಲದಲ್ಲಿ ಅರಣ್ಯ ಕಾಯ್ದೆಗಳು ಜಾರಿಗೆ ಬರುವ ಪೂರ್ವದಲ್ಲಿ ಇವರು ಕಣಿವೆಗಳಲ್ಲಿ ಕುಮ್ರಿ ಕೃಷಿಯನ್ನು ಮಾಡುತ್ತಿದ್ದರು. 1830ರ ಆಸುಪಾಸಿನಲ್ಲಿ ಕುಮ್ರಿ ಬೇಸಾಯವನ್ನು ಕಂಪನಿ ಆಡಳಿತ ನಿಷೇಧಿಸಿದ ಮೇಲೆ ಇವರು ಅರಣ್ಯದ ಉಪಉತ್ಪನ್ನಗಳನ್ನು ಸಂಗ್ರಹಿಸುತ್ತಾ ಜೀವನ ನಡೆಸಲಾರಂಭಿಸಿದರು.

ಇನ್ನು ರಾಜೀವ್ ಗಾಂಧಿ ಮತ್ತು ಬಂಡಿಪುರ ನ್ಯಾಷನಲ್ ಪಾರ್ಕ್‌ಗಳು ಅಸ್ತಿತ್ವಕ್ಕೆ ಬಂದ ಮೇಲೆ ಇವರನ್ನು ಕಾಡಿನಿಂದ ಸ್ಥಳಾಂತರಿಸಲಾಯ್ತು. ಇದಲ್ಲದೆ ಕಬಿನಿ, ನುಗು ಮತ್ತು ತಾರಕ ಅಣೆಕಟ್ಟುಗಳ ನಿರ್ಮಾಣದ ವಿವಿಧ ಹಂತಗಳಲ್ಲಿ ಅವರ ಪಾರಂಪರಿಕ ಆರ್ಥಿಕ ಮೂಲಗಳನ್ನ ಕಿತ್ತುಕೊಂಡಿದ್ದಲ್ಲದೆ, ತಲೆಮಾರುಗಳ ಕಾಲ ಬದುಕಿದ್ದ ಮೂಲನೆಲೆಗಳಿಂದಲೂ ಇವರನ್ನು ಒಕ್ಕಲೆಬ್ಬಿಸಲಾಯ್ತು. ಶತಮಾನಗಳಿಂದ ಇಲ್ಲಿನ ಅರಣ್ಯದ ಭಾಗವಾಗಿ ಜೀವನ ನಿರ್ವಹಣೆ ಮಾಡುತ್ತ ಬಂದ ಇವರು ಯಾವತ್ತೂ ಅರಣ್ಯವನ್ನು ನಾಶ ಮಾಡಿದವರಲ್ಲ. ಕಾಡಿನ ಗಿಡಮರ ಬಳ್ಳಿಗಳ ಜೊತೆ, ಪ್ರಾಣಿಸಂಕುಲದ ಜೊತೆ ಸಹಜೀವನ ನಡೆಸುತ್ತಾ ಬಂದವರು. ರಾಷ್ಟ್ರೀಯ ಉದ್ಯಾನ ಕಾಯ್ದೆ ಮತ್ತು 1972 ವನ್ಯಜೀವ ಸಂರಕ್ಷಣಾ ಕಾಯ್ದೆಗಳಿಂದ ತಮ್ಮ ಮೂಲನೆಲೆಗಳನ್ನು ಸರಕಾರಗಳ ಆದೇಶದ ಕಾರಣಕ್ಕಾಗಿ ತೊರೆದು ಬೀದಿಗೆ ಬಿದ್ದಿದ್ದಾರೆ. ಸಾವಿರಾರು ವರ್ಷಗಳಿಂದ ತಾವು ಬದುಕಿಬಾಳಿದ್ದ ಅರಣ್ಯಗಳಿಂದ ಹೊರಬಿದ್ದ ಆದಿವಾಸಿ ಸಮುದಾಯ ಇಂದು ಅಕ್ಷರಶಃ ಬೀದಿ ಪಾಲಾಗಿದೆ. ತಮ್ಮ ಹಾಡಿಗಳ ಪಕ್ಕದ ಕಣಿವೆಗಳಲ್ಲಿದ್ದ ಕುಮ್ರಿ ಜಮೀನನ್ನು ಕಳೆದುಕೊಂಡ ಇವರು ಅಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಫಿ ತೋಟಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದಾರೆ. ಇವರಲ್ಲಿ ಶೇ.95%ಕ್ಕೂ ಹೆಚ್ಚು ಜನ ಭೂರಹಿತ ಕೃಷಿಕೂಲಿಗಳು. ಇಂದು ಕೊಡಗಿನ ಶ್ರೀಮಂತ ಧಣಿಗಳ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ಅಕ್ಷರಶಃ ಜೀತದಾಳುಗಳಾಗಿ ಭಯದಲ್ಲಿ ಬದುಕುತ್ತಿದ್ದಾರೆ.


ಪ್ರಸ್ತುತ ಪ್ರಕರಣಕ್ಕೆ ಇನ್ನೊಂದು ಪುಟ್ಟ ಚರಿತ್ರೆ ಇದೆ. ಅದೇನೆಂದರೆ, ಕರ್ನಾಟಕ ಸರಕಾರವು ಯಾವುದೋ ಜಮಾನದಲ್ಲಿ ಭೂತಾನ್ ಸಿಂಗ್ ಎಂಬ ಉತ್ತರ ಭಾರತದ ಬಂಡವಾಳಶಾಹಿಯೊಬ್ಬನಿಗೆ ಕುಶಾಲನಗರದ ರಾಣಿಪೇಟೆ ಬಳಿ 2900 ಎಕರೆ, 5 ಗುಂಟೆ ಕೃಷಿ ಜಮೀನನ್ನು ಪ್ರತಿ ಎಕರೆಗೆ ವಾರ್ಷಿಕ 5 ರೂಪಾಯಿಗಳ ಬಾಡಿಗೆಗೆ ನೀಡುತ್ತದೆ. ಈ ಭೂತಾನ್ ಸಿಂಗ್ 2900 ಎಕರೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸುತ್ತಾನೆ. ಅದರಲ್ಲೂ ಮುಖ್ಯವಾಗಿ ಶುಂಠಿಯನ್ನು ಆತ ಪ್ರಧಾನವಾಗಿ ಬೆಳೆಯಲಾರಂಭಿಸುತಾನೆ. ಅದೇ ಹೊತ್ತಿಗೆ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಾರಣಕ್ಕಾಗಿ ಅರಣ್ಯದಲ್ಲಿನ ತಮ್ಮ ಮೂಲ ನೆಲೆಗಳಿಂದ ಆಚೆ ಎಸೆಯಲ್ಪಟ್ಟ ಜೇನುಕುರುಬ ಮತ್ತು ಕಾಡುಕುರುಬ ಸಮುದಾಯದವರು ಭೂತಾನ್ ಸಿಂಗ್ ಬಳಿ ಕೃಷಿಕೂಲಿಗಳಾಗಿ ಸೇರಿಕೊಳ್ಳುತ್ತಾರೆ. ಸಾವಿರಾರು ವರ್ಷಗಳ ಕಾಲ ನಿರಪಾಯಕಾರಿಗಳಾಗಿ ಬದುಕಿ ಕಾಡು ಮತ್ತು ಕಾಡುಪ್ರಾಣಿಗಳನ್ನು ರಕ್ಷಿಸಿಕೊಂಡು ಬಂದ ಈ ಆದಿವಾಸಿಗಳಿಗೆ ಒಂದು ಅಂಗೈ ಅಗಲದ ಭೂಮಿ ನೀಡದ ನಮ್ಮ ಸರಕಾರ ಉತ್ತರ ಭಾರತದ ಬಂಡವಾಳಿಗನಿಗೆ ಸಾವಿರಾರು ಎಕರೆಗಳನ್ನು ಚಿಲ್ಲರೆ ಕಾಸಿಗೆ ಬಾಡಿಗೆ ಕೊಡುತ್ತದೆ. ಅದೇ ಮಣ್ಣಿನ ಮಕ್ಕಳಾದ ಆದಿವಾಸಿಗಳು ತಮ್ಮದೇ ನೆಲದಲ್ಲಿ ಜೀತದಾಳುಗಳಾಗಿ ಕೆಲಸಕ್ಕೆ ಸೇರುತ್ತಾರೆ.

ಪ್ರಭುತ್ವವು ಅತ್ಯಂತ ನಿರ್ದಯವಾಗಿ ಈ ಆದಿವಾಸಿಗಳನ್ನು ಅವರದ್ದೇ ನೆಲದಲ್ಲಿ ಜೀತದಾಳುಗಳನ್ನಾಗಿಸಿದ್ದಲ್ಲದೆ, ಅವರು ಬದುಕಿ ಬಾಳಿದ ಪರಿಸರದಲ್ಲಿ ಅವರನ್ನು ಅನ್ಯರನ್ನಾಗಿಸುತ್ತದೆ. ಸರಕಾರ ಹೀಗೆ ಭೂತಾನ್ ಸಿಂಗ್‌ಗೆ ಮಾತ್ರ ಮೂರು ಕಾಸಿನ ಬಾಡಿಗೆಗೆ ಕೃಷಿ ಜಮೀನನ್ನು ನೀಡಿಲ್ಲ. ಕೊಡಗಿನಲ್ಲಿ ಟಾಟಾ, ಎಂಎಸ್‌ಪಿಎಲ್, ಮಲಯಾಳಿ ಬಂಡವಾಳಿಗರಿಗೆ ಮತ್ತು ಟಿಬೇಟಿನಿಂದ ಹೊರತಳ್ಳಲ್ಪಟ್ಟ ಅನ್ಯದೇಶಿಯರಿಗೂ ಸಾವಿರಾರು ಎಕರೆಗಳನ್ನು ಲೀಸ್‌ಗೆ ನೀಡಿದೆ. ಈ ಬಂಡವಾಳಿಗರು ಅಲ್ಲಿನ ಕಾಡನ್ನು ಮಾತ್ರ ತಮ್ಮ ಬಂಡವಾಳ ವೃದ್ಧಿಗೆ ಬಳಸಿಕೊಳ್ಳಲಿಲ್ಲ. ಅಲ್ಲಿ ಸಾವಿರಾರು ವರ್ಷಗಳಿಂದ ಬದುಕು ಕಟ್ಟಿಕೊಂಡು ಬಂದಿದ್ದ ಆದಿವಾಸಿಗಳನ್ನೂ ಜೀತದಾಳುಗಳಂತೆ ಬಳಸಲಾರಂಭಿಸಿದರು. ಕಾಡಿನ ಒಡೆಯರೇ ಆಗಿದ್ದ ಆದಿವಾಸಿಗಳು ತಮ್ಮ ನೆಲದಲ್ಲೇ ಸ್ವಾತಂತ್ರ್ಯ ಕಳೆದುಕೊಂಡು ಲೈನ್‌ಮನೆಗಳಲ್ಲಿ ಬಂಧಿಗಳಾದರು. 1980ರ ದಶಕದಲ್ಲಿ ರಾಣಿಗೇಟ್‌ನ ಭೂತಾನ್ ಸಿಂಗ್‌ಗೆ ಅಲ್ಲಿ ಕೃಷಿ ಮಾಡಿದ್ದು ಸಾಕೆನ್ನಿಸಿ ಸರಕಾರಕ್ಕೆ ಲೀಸ್ ಹಣವನ್ನು ಕಟ್ಟದೆ ತಪ್ಪಿಸಿಕೊಳ್ಳುತ್ತಾನೆ. ಆಗ ಅಲ್ಲಿ ಕೃಷಿಕೂಲಿಗಳಾಗಿದ್ದ ಆದಿವಾಸಿಗಳು ತಾವು ಉಳುಮೆ ಮಾಡುತ್ತಿದ್ದ ಜಮೀನನ್ನು ತಮಗೆ ಕಾನೂನುಪ್ರಕಾರ ನೀಡಿ ಎಂದು, ವನ್ಯಜೀವ ಸಂರಕ್ಷಣೆಯ ಕಾರಣಕ್ಕೆ ತಮ್ಮ ಆರ್ಥಿಕ ಮೂಲಗಳನ್ನು ಕಳೆದುಕೊಂಡಿದ್ದ ಆದಿವಾಸಿಗಳು ಸ್ಥಳೀಯ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸುತ್ತಾರೆ.

ಜೊತೆಗೆ ‘ಬುಡಕಟ್ಟು ಕೃಷಿಕರ ಸಂಘ’ ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳೂ ಸಹ ಆದಿವಾಸಿಗಳ ಪರ ಹೋರಾಟಕ್ಕಿಳಿಯುತ್ತವೆ. ಇದರ ಫಲವಾಗಿ ನ್ಯಾಯಾಲಯವು ದಿ:3.3.1981ರಂದು ಜೇನುಕುರುಬರ 125 ಕುಟುಂಬಗಳಿಗೆ ಮೂರರಿಂದ ನಾಲ್ಕು ಎಕರೆಗಳಿಗೆ ಸೀಮಿತಗೊಳಿಸಿ ಕೃಷಿ ಮಾಡಲು ಜಮೀನನ್ನು ಮಂಜೂರು ಮಾಡಲು ಸರಕಾರಕ್ಕೆ ಸೂಚನೆ ನೀಡುತ್ತದೆ. ಉಳಿದ ಕೃಷಿ ಜಮೀನನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗುತ್ತದೆ. ಹೀಗೆ ಜೇನುಕುರುಬ ಸಮುದಾಯದ ಕುಟುಂಬಗಳಿಗೆ ಜಮೀನು ನೀಡಿದ್ದನ್ನು ಅರಣ್ಯ ಇಲಾಖೆಯು ಸೇರಿದಂತೆ ಸ್ಥಳೀಯ ಭೂಮಾಲಿಕ ವರ್ಗವೂ ವಿರೋಧಿಸುತ್ತದೆ. ಅಂದಿನ ನೂರಿಪ್ಪತ್ತೈದು ಕುಟುಂಬಗಳು ಈಗಾಗಲೇ ಎರಡು ತಲೆಮಾರುಗಳನ್ನು ಕಂಡಿವೆ. ಸಹಜವಾಗಿಯೇ ಕುಟುಂಬಗಳ ನಡುವೆ ಪಾಲು ವಿಭಾಗವಾಗಿ ಈಗ ಒಂದೊಂದು ಕುಟುಂಬಕ್ಕೆ ಒಂದು ಅಥವಾ ಅರ್ಧ ಎಕರೆ ಜಮೀನು ಮಾತ್ರ ಉಳಿದುಕೊಂಡಿದೆ. ಇಂತಹ ನಿರ್ಗತಿಕ ಜೇನುಕುರುಬರ ಕುಟುಂಬಕ್ಕೆ ಸೇರಿದ ಬಸವನಿಗೂ ಒಂದು ಎಕರೆ ಜಮೀನಿದೆ. ಅರಣ್ಯದಲ್ಲಿದ್ದ ಕಾಡುಜನ ಕೋರ್ಟ್ ಆದೇಶದ ಕಾರಣಕ್ಕೆ ಸ್ವತಂತ್ರ ಕೃಷಿಕರಾಗಿಬಿಟ್ಟರು ಎಂದು ಸ್ಥಳೀಯ ಭೂಮಾಲಿಕರಿಗೂ, ಅರಣ್ಯದ ಫಲವತ್ತಾದ ಭೂಮಿ ದಿಕ್ಕಿಲ್ಲದ ಆದಿವಾಸಿಗಳಿಗೆ ಸಿಕ್ಕಿತಲ್ಲ ಎಂದು ಅರಣ್ಯ ಇಲಾಖೆಗೂ ವೈಷಮ್ಯ ಬೆಳೆಯುತ್ತಲೇ ಹೋಗುತ್ತದೆ. ಈ ವೈಷಮ್ಯವು ಆಗಾಗ ಚಿಕ್ಕಪುಟ್ಟ ಕಿರುಕುಳಗಳಲ್ಲಿ, ಬಡಿದಾಟಗಳಲ್ಲಿ ವ್ಯಕ್ತವಾಗುತ್ತಿದ್ದುದನ್ನು ಸ್ಥಳೀಯ ಆದಿವಾಸಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.

ಈ ಬಸವನ ಮೇಲೆ ನಡೆದ ದೌರ್ಜನ್ಯ ಕೇವಲ ಗಾರ್ಡ್‌ಗಳಿಂದ ಮಾತ್ರ ನಡೆದಿದ್ದಲ್ಲ. ಬದಲಿಗೆ ನಮ್ಮ ಊಳಿಗಮಾನ್ಯ ಸಮಾಜದಲ್ಲಿ ಸದಾ ಜೀವಂತವಾಗಿರುವ ಅಂತರ್ಗತ ಅಸಹನೆಯು ಅರಣ್ಯ ಇಲಾಖೆಯ ಜವಾನನಿಂದ ಹಿಂಸೆಯಾಗಿ ರೂಪಾಂತರಗೊಂಡಿದೆಯಷ್ಟೆ. ದಮನಗಳ ಮೂಲವಿರುವುದು ವರ್ಗ ಮತ್ತು ಜಾತಿ ವೈಷಮ್ಯಗಳಲ್ಲಿ. ದಲಿತರು, ಆದಿವಾಸಿಗಳು ಮತ್ತು ಅಲೆಮಾರಿ ಸಮುದಾಯಗಳಿಗೆ ಸೇರಿದ ಜನ ಸ್ವಾಭಿಮಾನದ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ಊಳಿಗಮಾನ್ಯ ದೊರೆಗಳ ಅಸಹನೆ ಮಡುಗಟ್ಟಲಾರಂಭಿಸುತ್ತದೆ. ಶೋಷಿತರು ಆತ್ಮಪ್ರತ್ಯಯದೊಂದಿಗೆ ಸಮಾಜದಲ್ಲಿ ತಮ್ಮನ್ನು ಮರುಸ್ಥಾಪಿಸಿಕೊಳ್ಳಲು ಯತ್ನಿಸುವಾಗ, ಸಾಮಾಜಿಕ ಅವಮಾನಗಳಿಗೆ ಕಾರಣವಾದ ಪಾರಂಪರಿಕ ವೃತ್ತಿಗಳನ್ನು ಬಿಟ್ಟು ಶಿಕ್ಷಣ ಮತ್ತು ಹೊಸ ವೃತ್ತಿ ಮೂಲಗಳಲ್ಲಿ ನಮ್ಮ ವಿಮೋಚನೆಯ
ದಾರಿಗಳಿವೆ ಎಂಬುದನ್ನು ಅರಿತು ಆಕಡೆ ಚಲಿಸಲು ಉದ್ಯುಕ್ತವಾದಾಗ ಮತ್ತು ಶೋಷಿತರು ಹೀಗೆ ವಿಮೋಚನೆಗೆ ಪ್ರಯತ್ನಿಸಿದಾಗೆಲ್ಲ ನಮ್ಮ ಆಳುವ ವರ್ಗ ಕನಲಿಹೋಗಿದೆ. ಖೈರ್ಲಾಂಜಿಯ ಸ್ವಾಭಿಮಾನಿ ದಲಿತರ ಮೇಲೆ ನಡೆದ ಅತ್ಯಾಚಾರ, ಕೊಲೆ, ಕಂಬಾಲಪಲ್ಲಿಯ ದಲಿತರನ್ನು ಸುಟ್ಟು ಹಾಕಿದ್ದು, ಜಮ್ಮುವಿನ ಕಾಥುವಾದಲ್ಲಿ ಕುದುರೆ ಮೇಯಿಸುತ್ತಿದ್ದ ಅಲೆಮಾರಿ ಬಾಲಕಿ ಆಸೀಫಾಳನ್ನು ಅತ್ಯಾಚಾರ ಮಾಡಿ ಕೊಂದು ಹಾಕಿದ್ದು, ಹತ್ರಾಸ್‌ನ ಯುವತಿಯ ಅತ್ಯಾಚಾರ ಮತ್ತು ರೋಹಿತ್ ವೇಮುಲಾನ ಆತ್ಮಹತ್ಯೆಗೆ ಕಾರಣವಾದದ್ದು ಇದೇ ಪಾಖಂಡಿ ಅಸಹನೆ.

ಗುಂಡೇಟು ತಿಂದ ಜೇನುಕುರುಬ ಸಮುದಾಯದ 32 ವಯಸ್ಸಿನ ಬಸವನಿಗೆ ಈಗ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಈಗ ಆತ ತನ್ನ ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾನೆ. ಅರಣ್ಯ ಇಲಾಖೆಯು, ‘ಬಸವ ಕಾಡಲ್ಲಿ ಗಂಧದ ಮರವನ್ನು ಕಡಿಯಲು ಬಂದಿದ್ದ ಆ ಕಾರಣಕ್ಕಾಗಿ ಗುಂಡು ಹಾರಿಸಿದ್ದೇವೆ’ ಎಂದು ಎಫ್‌ಐಆರ್ ದಾಖಲಿಸಿದೆ. ಈ ಎಫ್‌ಐಆರ್‌ಗೆ ಪೂರಕವಾಗಿ ಇಲಾಖೆಯು ಅಗತ್ಯ ಸಾಕ್ಷಿಗಳನ್ನು ಸೃಷ್ಟಿ ಮಾಡಿಟ್ಟುಕೊಂಡಿದೆ. ತನ್ನ ನೆಲದಲ್ಲಿ ಅನ್ಯನಾಗಿದ್ದ ಬಸವ ಜಮೀನು ಪಡೆದು ಸ್ವಾಭಿಮಾನಿಯಾಗಿ ಬದುಕಲಾರಂಭಿಸಿದ್ದ. ಆದರೆ ಈಗ ದುಡಿಯಲು ಬೇಕಾದ ಅಂಗಾಂಗಳನ್ನೇ ಕಳೆದುಕೊಂಡು ಶಾಶ್ವತವಾಗಿ ಮೂಲೆ ಸೇರುವಂತಾಗಿದೆ. ನಾಗರಿಕ ಸಮಾಜವನ್ನೂ ಒಳಗೊಂಡಂತೆ, ಅಧಿಕಾರ ಹಿಡಿಯುವ ಯಾವುದೇ ರಾಜಕೀಯ ಪಕ್ಷ ಮತ್ತು ನೌಕರಶಾಹಿಯು ಆದಿವಾಸಿಗಳನ್ನು ಇನ್ನೂ ಅಂತಃಕರಣದಿಂದ ನೋಡುವ ಪ್ರವೃತ್ತಿಯನ್ನೇ ಬೆಳೆಸಿಕೊಂಡಿಲ್ಲ. ಆದಿವಾಸಿ ಸಮುದಾಯಗಳು ನಮ್ಮದೇ ಸಮಾಜದ ಬೇರುಗಳು ಎಂಬ ಕನಿಷ್ಟ ಪ್ರಜ್ಞೆಯೂ ನಮ್ಮಲ್ಲಿ ಮೂಡಿಲ್ಲ. ಆದಿವಾಸಿಗಳು ಈ ನೆಲದ ಮೂಲ ನಿವಾಸಿಗಳು, ಕಾಡು, ಕಣಿವೆ, ನದಿ, ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಿಕೊಂಡು ಬಂದ ನಿಸರ್ಗದ ಮಕ್ಕಳು ಎಂಬ ಪ್ರಾಥಮಿಕ ಪಾಠಗಳನ್ನು ಇವರಿಗೆ ಯಾರು ಹೇಳಿಕೊಡಬೇಕು?

ಆತ್ಮವನ್ನೇ ಕಳೆದುಕೊಂಡ ವರ್ತಮಾನ ಮಾತ್ರ ತನ್ನನ್ನು ಪೋಷಿಸಿದ ಪರಂಪರೆಗೆ ವಿಷವುಣಿಸಬಲ್ಲದು. ತನಗೆ ಪ್ರಜ್ಞೆಯನ್ನು ನೀಡಿದ ಪರಿಸರದ ಗರ್ಭವನ್ನೇ ಹಿಂಡಿ ರಕ್ತ ಹೀರಬಲ್ಲದು.

ಡಾ. ಎ ಎಸ್ ಪ್ರಭಾಕರ

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಬಿಡುಗಡೆಯಾಗಿದೆ.


ಇದನ್ನೂ ಓದಿ: ಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -