Homeಪುಸ್ತಕ ವಿಮರ್ಶೆಬಹುಮುಖಿ ಅಮೆರಿಕಾ: ಮೂಡಿದ ಹೆಜ್ಜೆಗಳಿಗೆ ತೊಡಿಸಿದ ಬಣ್ಣದ ಚೌಕಟ್ಟುಗಳು

ಬಹುಮುಖಿ ಅಮೆರಿಕಾ: ಮೂಡಿದ ಹೆಜ್ಜೆಗಳಿಗೆ ತೊಡಿಸಿದ ಬಣ್ಣದ ಚೌಕಟ್ಟುಗಳು

- Advertisement -
- Advertisement -

ಮೂಲತಃ ಸಾಕ್ಷ್ಯಚಿತ್ರ ತಯಾರಿಸುವ ತಂತ್ರಜ್ಞರಾದ ಸಿರಿಗಂಧ ಶ್ರೀನಿವಾಸಮೂರ್ತಿಯವರು ಅಮೆರಿಕಾ ಪ್ರವಾಸದ ಅನುಭವಗಳನ್ನು ನುಡಿರೂಪಕ್ಕಿಳಿಸುವ ಮೂಲಕ ಕನ್ನಡದಲ್ಲಿ ಬರೆಯುವುದನ್ನು ಪ್ರಾರಂಭಿಸಿದ್ದಾರೆ. ಸರಿಸುಮಾರು ನಲವತ್ತೈದು ವರ್ಷಗಳ ಕಾಲ ಕ್ಯಾಮರಾವನ್ನು ಹೊತ್ತು ತಿರುಗಿದ ಅವರು, ಕ್ಯಾಮರಾ ಕಣ್ಣಿನ ಮೂಲಕ ಜನಪದರ ಬದುಕನ್ನು ಸಾಕ್ಷ್ಯಚಿತ್ರಗಳ ಮೂಲಕ ಅನಾವರಣ ಮಾಡಿ ನಮ್ಮಲ್ಲಿ ಬೆರಗು ಹುಟ್ಟಿಸಿದವರು. ಇಂತಹ ಶ್ರೀನಿವಾಸಮೂರ್ತಿ ಬರೆಯಲು ತೊಡಗಿರುವುದು ಕುತೂಹಲಕಾರಿ ಬೆಳವಣಿಗೆ. ಹಾಗೆಂದು ಶ್ರೀನಿವಾಸಮೂರ್ತಿ ಇಲ್ಲಿಯವರೆಗೆ ಬರವಣಿಗೆ ಮಾಡಿಲ್ಲವೆಂದಲ್ಲ. ಕೆಲವು ಪ್ರಬಂಧ ಮತ್ತು ಪುಟ್ಟ ಬರಹಗಳನ್ನು ಸಾಂದರ್ಭಿಕವಾಗಿ ಮಾಡಿರುವುದುಂಟು. ಆದರೆ ಒಂದು ತೀವ್ರ ಅನುಭವವನ್ನು ಸುದೀರ್ಘ ಬರವಣಿಗೆಯ ಮೂಲಕ ಮಂಡಿಸುತ್ತಿರುವುದು ಇದೇ ಮೊದಲು.

ಶ್ರೀನಿವಾಸಮೂರ್ತಿಯವರು ಒಬ್ಬ ಅಪರೂಪದ ಛಾಯಾಗ್ರಾಹಕರು. ಶ್ರೀನಿವಾಸಮೂರ್ತಿ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿಯೇ ಸಿನಿಮಾಟೋಗ್ರಫಿ ಕಲಿತು ಥಳುಕಿನ ವೇದಿಕೆಗಳಲ್ಲಿ ಕ್ಯಾಮರಾ ಹಿಡಿದವರು. ಕನ್ನಡದ ಅನೇಕ ಸಿನೆಮಾಗಳಿಗೆ ಕ್ಯಾಮರಾದ ಹಿಂದೆ ದುಡಿದವರು. ಹಲವು ಬಣ್ಣಗಳೇ ರಾರಾಜಿಸುವ ಸಿನೆಮಾ ಜಗತ್ತಿನಲ್ಲಿ ಅವರು ಮುಂದುವರೆದಿದ್ದರೆ ಕನ್ನಡ ಚಿತ್ರರಂಗ ಒಬ್ಬ ಅಪರೂಪದ ಛಾಯಾಗ್ರ್ರಾಹಕನನ್ನು ಪಡೆಯುತ್ತಿತ್ತು. ಆದರೆ ಶ್ರೀನಿವಾಸಮೂರ್ತಿ ಬಣ್ಣಗಳ ಜಗತ್ತಿನ ಮೋಡಿಗೊಳಗಾಗದೆ, ಅಂದು ಅಷ್ಟೇನು ಆಕರ್ಷಕವಲ್ಲದ ಮತ್ತು ಲಾಭದಾಯಕವಲ್ಲದ ಸಾಕ್ಷ್ಯಚಿತ್ರ ನಿರ್ಮಾಣದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಹಣ, ಪ್ರಭಾವ ಮತ್ತು ಗಣ್ಯತೆಯು ಸುಲಭವಾಗಿ ಲಭ್ಯವಾಗಿಬಿಡುವ ಚಿತ್ರರಂಗದ ಮೋಹವನ್ನು ಆರಂಭದಲ್ಲಿಯೇ ಇವರು ಬಿಟ್ಟುಕೊಟ್ಟು, ಜಾನಪದ ಮತ್ತು ಬುಡಕಟ್ಟು ಸಮುದಾಯಗಳ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಶ್ರಮದಾಯಕ ದುಡಿಮೆಗೆ ತೊಡಗೊಕೊಂಡರು. ಈ ಕಾರಣಕ್ಕಾಗಿ ಶ್ರೀನಿವಾಸಮೂರ್ತಿಯವರನ್ನು ನೋಡಿದಾಗೆಲ್ಲ ನನಗೆ ರಾಬರ್ಟ್ ಫ್ರಾಸ್ಟನ ‘The Road Not Taken’ ಪದ್ಯ ನೆನಪಿಗೆ ಬರುತ್ತದೆ. ಈ ಪದ್ಯದಲ್ಲಿ ಕವಿ ಹೆದ್ದಾರಿಯಲ್ಲಿ ನಿರಾಯಾಸವಾಗಿ ನಡೆದುಹೋಗದೆ, ದಾರಿಯೇ ಇಲ್ಲದ ದಟ್ಟ ಕಾನನದಲ್ಲಿ ನಡೆಯಲಾರಂಭಿಸುತ್ತಾನೆ. ಶ್ರೀನಿವಾಸಮೂರ್ತಿ ಹೀಗೆ ತನ್ನದೇ ಧಾಟಿಯಲ್ಲಿ ನಡೆದು, ನಡೆದ ಹಾದಿಯಲ್ಲಿ ಹೆಜ್ಜೆ ಮೂಡಿಸಿದವರು.

ಎರಡು ಸಲ ಅಮೆರಿಕಾ ಪ್ರವಾಸ ಮಾಡಿ ಬಂದಿರುವ ಶ್ರೀನಿವಾಸಮೂರ್ತಿ ಈಗ ತಮ್ಮ ಪ್ರವಾಸದ ಅನುಭವಗಳನ್ನು ಸುದೀರ್ಘವಾಗಿ ಬರೆದು ‘ಬಹುಮುಖಿ ಅಮೆರಿಕಾ’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಪ್ರಸ್ತುತ ಪ್ರವಾಸ ಕಥನದ ಬರಹಕ್ಕೆ ಹಲವು ಆಯಾಮಗಳಿವೆ. ಅವುಗಳಲ್ಲಿ ಕೆಲಸವನ್ನು ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.

ಶ್ರೀನಿವಾಸಮೂರ್ತಿ ಅಮೆರಿಕಾಕ್ಕೆ ಎರಡು ಸಲ ಪ್ರವಾಸ ಹೋಗುತ್ತಾರೆ. ಮೊದಲನೆಯದು ಏಕಾಂಗಿ ಪ್ರವಾಸ, ಎರಡನೇ ಸಲ ತಮ್ಮ ಆತ್ಮೀಯ ಗೆಳೆಯರ ಜೊತೆಗೆ ಪ್ರವಾಸ ಮಾಡುತ್ತಾರೆ. ಈ ಎರಡೂ ಪ್ರವಾಸಗಳ ಅನುಭವಗಳನ್ನು ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮ ಮುಂದಿಡುತ್ತಾರೆ. ಪ್ರವಾಸ ಕಥನವನ್ನು ಓದಿದ ಮೇಲೆ ಈ ಬರವಣಿಗೆಯಲ್ಲಿ ಹಲವು ಆಯಾಮಗಳಲ್ಲಿ ವಿಸ್ತರಿಸಿಕೊಂಡಿರುವುದು ಕಂಡುಬರುತ್ತದೆ. ಆ ಆಯಾಮಗಳು ಹೀಗಿವೆ.

1. ಅಮೆರಿಕದ ಭೌತಿಕ ಜಗತ್ತಿನ ಕುರಿತ ಬೆರಗು
2. ಅಲ್ಲಿನ ಶಿಸ್ತು ಮತ್ತು ಔಪಚಾರಿಕ ಜೀವನ ವಿಧಾನದ ಕುರಿತ ಮೆಚ್ಚುಗೆ ಮತ್ತು ತಕರಾರುಗಳು
3. ಪ್ರಮುಖ ಪ್ರವಾಸಿ ತಾಣಗಳ ಭೇಟಿ
4. ಅಲ್ಲಿನ ದುಡಿವ ಜನರ ಬದುಕು ಬವಣೆಗಳ ಕುರಿತ ವಿಶ್ಲೇಷಣೆ
5. ಮಾನವಶಾಸ್ತ್ರೀಯ ಮತ್ತು ಇತಿಹಾಸ ವಸ್ತುಸಂಗ್ರಹಾಲಯಗಳ ಭೇಟಿ
6. ಪ್ರವಾಸದ ಸಂದರ್ಭದಲ್ಲಿನ ಪರದಾಟ ಮತ್ತು ಎಡವಟ್ಟುಗಳು
7. ಆಫ್ರಿಕಾದ ಕಪ್ಪು ಜನರ ಸ್ಥಿತಿಗತಿಗಳು

ಈ ಆಯಾಮಗಳ ಹೊರತಾಗಿ ಬೇರೆಯದೇ ಆದ ಮಗ್ಗಲುಗಳು ಈ ಕಥನಕ್ಕೆ ಇರಬಹುದು. ಅಮೆರಿಕ ಅನೇಕ ಪ್ರವಾಸಿಗರನ್ನು ಸೆಳೆದುಕೊಳ್ಳುವುದು ತನ್ನಲ್ಲಿರುವ ಅಪರೂಪದ ನೈಸರ್ಗಿಕ ತಾಣಗಳಿಂದ. ಗ್ರಾಂಡ್ ಕ್ಯಾನಿಯನ್, ನಯಾಗಾರ ಜಲಪಾತ, ಮಯಾಮಿ, ಉತ್ಸಾ ನ್ಯಾಷನಲ್ ಪಾರ್ಕ್, ಕೊಲೊರಾಡೋ ಮುಂತಾದ ಜನಪ್ರಿಯ ತಾಣಗಳು ಇನ್ನೂ ತಾಜಾ ಆಗಿಯೇ ಉಳಿದಿವೆ. ಇನ್ನು ಸ್ಯಾನ್‌ಫ್ರಾನ್ಸಿಸ್ಕೋ, ಸಿಯಾಟಲ್, ವಾಷಿಂಗ್ಟನ್ ಡಿಸಿ, ಫ್ಲೋರಿಡಾ, ನ್ಯೂಯಾರ್ಕ್, ಬೋಸ್ಟನ್, ಚಿಕಾಗೋ, ಲಾಸ್ ಏಂಜಲೀಸ್, ಹ್ಯೂಸ್ಟನ್‌ನಂತಹ ಮಹಾನಗರಗಳ ವೈಭವಗಳು ಎಲ್ಲರನ್ನು ಇಂದೂ ಆಕರ್ಷಿಸುತ್ತಿವೆ. ಶ್ರೀನಿವಾಸಮೂರ್ತಿ ಸಹಜವಾಗಿಯೇ ಇಲ್ಲಿನ ಕೆಲ ಜನಪ್ರಿಯ ನಗರಗಳಿಗೆ ಭೇಟಿ ಮಾಡಿ ಅಲ್ಲಿನ ಶಿಸ್ತು ಮತ್ತು ಸ್ವಚ್ಛತೆಯನ್ನು ಕೊಂಡಾಡಿದ್ದಾರೆ. ಲಾಸ್ ವೇಗಸ್, ಜಗತ್ತಿನ ಮೊದಲ ನ್ಯಾಷನಲ್ ಪಾರ್ಕ್ ಆದ ಯಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್, ಗ್ರಾಂಡ್ ಕ್ಯಾನಿಯನ್‌ನ ರುದ್ರರಮಣೀಯ ಸೌಂದರ್ಯವನ್ನು ವಿವರಿಸಿದ್ದಾರೆ.

ಅವರ ಎರಡನೇ ಪ್ರವಾಸವು ಅತ್ಯಂತ ರೋಚಕವೂ, ಫಲಪ್ರದವೂ ಆಗಿರುವುದು ಗೊತ್ತಾಗುತ್ತದೆ. ಚಾರಣಿಗನೂ, ತಿರುಗುಪ್ರಿಯರೂ ಆದ ಲೇಖಕರು ತಮ್ಮ ಅಭಿರುಚಿಗಳಿಗೆ ಅನುಗುಣವಾಗಿ ಪ್ರವಾಸವನ್ನು ಯೋಜಿಸಿಕೊಂಡಿದ್ದಾರೆ. ಈ ಪ್ರವಾಸದಲ್ಲಿ ಜಾನಪದ, ಐತಿಹಾಸಿಕ ಮತ್ತು ಆದಿವಾಸಿ ವಸ್ತುಸಂಗ್ರಹಾಲಯಗಳಿಗೆ ಇವರು ಭೇಟಿ ನೀಡಿದ್ದಾರೆ. ಜಾನಪದ ಮತ್ತು ಬುಡಕಟ್ಟು ಜೀವನ ವಿಧಾನಗಳ ದಾಖಲೀಕರಣದ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಕೆಲಸ ಮಾಡಿರುವ ಇವರು ಇಲ್ಲಿನ ವಸ್ತುಸಂಗ್ರಹಾಲಯಗಳನ್ನು ನೋಡಿ ಬೆರಗಾಗಿದ್ದಾರೆ. ಈ ವಸ್ತುಸಂಗ್ರಹಾಲಯಗಳಲ್ಲಿ ಅಮೆರಿಕನ್ನರು ತೋರಿಸಿರುವ ವೃತ್ತಿಪರತೆ ಮತ್ತು ಶಿಸ್ತುಗಳನ್ನು ಕಂಡು ಮೆಚ್ಚಿ ಬರೆದಿದ್ದಾರೆ. ಯುರೋಪ್ ಮತ್ತು ಅಮೆರಿಕಾಗಳಲ್ಲಿ ಈ ವಸ್ತುಸಂಗ್ರಹಾಲಯಗಳ ನಿರ್ಮಾಣದ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಯುರೋಪಿನ ಮಾನವಕುಲಶಾಸ್ತ್ರ ಮತ್ತು ಮಾನವಶಾಸ್ತ್ರದ ಸಂಶೋಧನೆಗಳ ಜೊತೆಗೆ ಈ ಆರ್ಕೈವ್‌ಗಳ ಮತ್ತು ವಸ್ತಸಂಗ್ರಹಾಲಯಗಳ ಹುಟ್ಟು ಬೆಳವಣಿಗೆಗಳು ತಳುಕು ಹಾಕಿಕೊಂಡಿವೆ. ವಾಸ್ತವದಲ್ಲಿ ಹೆಚ್ಚು ಹೆಚ್ಚು ಆರ್ಕೈವ್‌ಗಳು ಮತ್ತು ವಸ್ತುಸಂಗ್ರಹಾಲಯಗಳು ಮೊದಲು ಪ್ರಾರಂಭವಾದದ್ದು ಯುರೋಪಿನಲ್ಲಿ. ಕೈಗಾರಿಕೀಕರಣದಿಂದಾಗಿ ತಮ್ಮ ಮೂಲ ಸಂಸ್ಕೃತಿ ಮತ್ತು ಪರಂಪರೆಗಳನ್ನು ಕಳೆದುಕೊಳ್ಳತೊಡಗಿದ ಯುರೋಪಿನ ಜನರಿಗೆ ತಮ್ಮ ಪುರಾತನತೆಯ ಬಗ್ಗೆ ಹಳಹಳಿಕೆಯುಂಟಾಯಿತು. ತಮ್ಮ ಮೂಲ ಚಹರೆಗಳನ್ನು ರಕ್ಷಿಸಿಡಲು ಅಲ್ಲಿನ ಸರಕಾರಗಳು ಮತ್ತು ವಿಶ್ವವಿದ್ಯಾಲಯಗಳು ಮುಂದಾದವು. ಅಲ್ಲಿನ ಹಾಡು, ಕುಣಿತ, ಪಾರಂಪರಿಕ ವಸ್ತುಗಳನ್ನು ಕಾಯ್ದಿಡಲೆಂದೇ ಅವರು ಆರ್ಕೈವ್ ಮತ್ತು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಿದರು. ವಿಶ್ವವಿದ್ಯಾಲಯಗಳ ಮಾನವಕುಲಶಾಸ್ತ್ರ ಮತ್ತು ಮಾನವಶಾಸ್ತ್ರದ ಸಂಶೋಧಕರು ಇದರಲ್ಲಿ ತೊಡಗಿಕೊಂಡರು. ಈ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದೆ ಅಮೆರಿಕಾವೂ ಅನುಸರಿಸಿತು. ಮಾನವಕುಲಶಾಸ್ತ್ರ ಮತ್ತು ಮಾನವಶಾಸ್ತ್ರ ಎಂಬ ಶೈಕ್ಷಣಿಕ ಶಿಸ್ತುಗಳೂ ಸಹ ಯುರೋಪಿನ ವಸಾಹತುಗಳಲ್ಲಿ ಜನಪ್ರಿಯಗೊಂಡವು.

ಯುರೋಪಿನ ಜೊತೆಜೊತೆಗೆ ಅಮೇರಿಕಾದಲ್ಲೂ 1900 ರಿಂದ 1915ರವರೆಗಿನ ಕಾಲ ಅಮೆರಿಕಾದ ಎತ್ನೋಲಜಿಯ ರೂಪುಗೊಳ್ಳುವ ಹಂತ. ಈ ಹಂತದಲ್ಲಿ ಫ್ರಾನ್ಸ್ ಬೋಯಿಸ್ ಮತ್ತು ಆತನ ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ತಮ್ಮದೇ ದೇಶದಲ್ಲಿ ನಶಿಸಿಹೋಗುತ್ತಿದ್ದ ರೆಡ್ ಇಂಡಿಯನ್ನರ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಆರಂಭಿಸಿದರು. ಅಮೆರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರು ಅಮೆರಿಕಾದ ಮುಖ್ಯಪ್ರವಾಹದ ಜೊತೆ ಬೆರೆತು ಹೋಗುವ ಮುನ್ನ ಅಧ್ಯಯನಕ್ಕೊಳಪಡಿಸಬೇಕೆಂಬ ಕಾತುರ ಅಲ್ಲಿನ ಮಾನವಶಾಸ್ತ್ರಜ್ಞರನ್ನು ಕಾಡಿತು. 1915ರಿಂದ 1930ರವರೆಗಿನ ಅವಧಿಯು ಅಮೆರಿಕಾದಲ್ಲಿ ಎತ್ನೋಲಜಿಯ ಬೆಳವಣಿಗೆಯ ಮುಖ್ಯ ಕಾಲಘಟ್ಟ. ಇದರ ಜೊತೆಗೆ ತಮ್ಮ ಮೂಲ ಸಂಸ್ಕೃತಿಯನ್ನು ’ರಕ್ಷಿಸಿಕೊಳ್ಳಬೇಕೆಂಬ’ ಹಪಾಹಪಿಯು ಯೂರೋಪ್ ಮತ್ತು ಅಮೆರಿಕಾದ ವಿದ್ವಾಂಸರನ್ನು ಕಾಡಿತು. ಆಗ ಮಾನವಶಾಸ್ತ್ರೀಯ ಮೂಸಿಯಮ್‌ಗಳು (Anthropological Museum) ಎಲ್ಲೆಡೆ ತಲೆ ಎತ್ತಿದವು. ’ನಶಿಸಿ’ ಹೋಗುತ್ತಿರುವ ಸಮಾಜಗಳ ಬದುಕನ್ನು ಬಹುಮಾಧ್ಯಮಗಳಲ್ಲಿ (Multimedia) ದಾಖಲಿಸುವ ಕೆಲಸ ಆರಂಭವಾಯಿತು. ಇದರ ಮುಂದುವರಿಕೆಯಾಗಿ ಮದ್ರಾಸಿನಲ್ಲಿ ಈ ದೇಶದ ಮೊದಲ ಮಾನವಶಾಸ್ತ್ರೀಯ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು.


ಶ್ರೀನಿವಾಸಮೂರ್ತಿ ಅಮೆರಿಕಾದ ಆರ್ಕೈವ್ ಮತ್ತು ವಸ್ತುಸಂಗ್ರಹಾಲಯಗಳ ವಿಸ್ತಾರ, ಅಗಾಧತೆ ಮತ್ತು ವೃತ್ತಿಪರತೆಯನ್ನು ತಮ್ಮ ಪ್ರವಾಸ ಕಥನದಲ್ಲಿ ವಿವರವಾಗಿ ಬರೆದಿದ್ದಾರೆ. ಇನ್ನು ಆಫ್ರಿಕಾದ ಕರಿಯರು ಮತ್ತು ಅಲ್ಲಿನ ಬಡಕೂಲಿಗಳ ಜೀವನವನ್ನು ಹೃದ್ಯವಾಗಿ ಬರೆದಿದ್ದಾರೆ. ವೈಭವದ ಅಮೆರಿಕಾದ ಒಳಗಿನ ಕುರೂಪಗಳನ್ನು ಮತ್ತು ಕ್ರೌರ್ಯವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ.

ಮೊದಲ ಮತ್ತು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾದ ಆತಂಕಕಾರಿ ನಡೆಗಳು ಜಗತ್ತನ್ನೇ ನಡುಗಿಸಿವೆ. ಹಿರೋಷಿಮಾದ ಮೇಲೆ ಹಾಕಿದ ಅಣುಬಾಂಬ್, ವಿಯಟ್ನಾಮ್ ಮೇಲಿನ ದಾಳಿ, ಕ್ಯೂಬಾವನ್ನು ಇನ್ನಿಲ್ಲದಂತೆ ಕಾಡಿದ್ದು, ತೈಲ ಸಂಪತ್ತಿಗಾಗಿ ನಡೆಸಿದ ಕೊಲ್ಲಿ ಯುದ್ಧಗಳು, ಮಧ್ಯಪ್ರಾಚ್ಯದ ರಕ್ತಸಿಕ್ತ ದಿನಗಳನ್ನು ಜೀವಂತವಾಗಿಟ್ಟಿರುವುದು, ವೆನಿಜುವಲದ ಮೇಲಿನ ದಾಳಿ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಹಲವು ಆಯಾಮಗಳ ಅಮೆರಿಕಾಗೆ ಕನ್ನಡದ ಅನೇಕ ಲೇಖಕರು ಪ್ರವಾಸ ಮಾಡಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಗೊರೂರು ಸ್ವಾಮಿ ಅಯ್ಯಂಗಾರ್ ಅವರಿಂದ ನಾಗತಿಹಳ್ಳಿ ಚಂದ್ರಶೇಖರ್ ಅವರವರೆಗೆ ಅನೇಕ ಕ್ಷೇತ್ರದ ಸೂಕ್ಷ್ಮಜ್ಞರು ಅಮೆರಿಕಾದ ಹಲವು ಮುಖಗಳನ್ನು ತಮ್ಮ ಪ್ರವಾಸ ಕಥನಗಳಲ್ಲಿ ಅನಾವರಣ ಮಾಡಿದ್ದಾರೆ. ಈ ಎಲ್ಲ ಪ್ರವಾಸ ಕಥನಗಳಿಗೆ ಹೋಲಿಸಿದರೆ ಶ್ರೀನಿವಾಸಮೂರ್ತಿಯವರ ಬರಹ ವಿಭಿನ್ನವಾಗಿದೆ. ಇಂತಹ ಅಪರೂಪದ ಪ್ರವಾಸ ಕಥನವನ್ನು ನಮಗೆ ಓದಲು ಅನುವು ಮಾಡಿಕೊಟ್ಟ ಶ್ರೀನಿವಾಮೂರ್ತಿಯವರಿಗೆ ಧನ್ಯವಾದಗಳು.

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಬಿಡುಗಡೆಯಾಗಿದೆ.


ಇದನ್ನೂ ಓದಿ: ಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...