Homeಮುಖಪುಟಕೊರಗರ ಮೇಲಿನ ಪೊಲೀಸರ ಹಲ್ಲೆ; ಸಂತ್ರಸ್ತರೇ ಅಪರಾಧಿಗಳಾಗುವ ವಿಕಟ ಸಂದರ್ಭ

ಕೊರಗರ ಮೇಲಿನ ಪೊಲೀಸರ ಹಲ್ಲೆ; ಸಂತ್ರಸ್ತರೇ ಅಪರಾಧಿಗಳಾಗುವ ವಿಕಟ ಸಂದರ್ಭ

- Advertisement -
- Advertisement -

2021ನೇ ಡಿಸೆಂಬರ್ 27ರಂದು ಉಡುಪಿ ಜಿಲ್ಲೆ ಬ್ರಹ್ಮಾವರ ಬಳಿಯ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಕುಟುಂಬವೊಂದು ಮದುವೆಯ ಪೂರ್ವ ತಯಾರಿ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ಸಂದರ್ಭವದು. ಈ ಮದುವೆಯ ಭಾಗವಾಗಿ ಆ ಕುಟುಂಬ ‘ಮೆಹಂದಿ ಕಾರ್ಯಕ್ರಮ’ವನ್ನು ಹಮ್ಮಿಕೊಂಡಿರುತ್ತದೆ. ಎಲ್ಲರಂತೆ ಕೋಟತಟ್ಟು ಗ್ರಾಮದಲ್ಲೂ ಅಂದು ಕೊರಗ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಧ್ವನಿವರ್ಧಕವನ್ನು ಬಳಸಲಾಗಿದೆ. ಮದುವೆಗಳಲ್ಲಿ ಧ್ವನಿವರ್ಧಕ ಬಳಸುವುದು ಸರ್ವೇಸಾಮಾನ್ಯ ಸಂಗತಿ. ಆದಿವಾಸಿಗಳು ಇಂತಹ ಸಾಮುದಾಯಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಹಾಡು ನೃತ್ಯಗಳಲ್ಲಿ ಮೈಮರೆತು ತಲ್ಲೀನರಾಗುವುದು ಸಹಜ. ನಿತ್ಯದ ಗೋಳು, ನೋವು ಮತ್ತು ದಮನಗಳನ್ನು ಮರೆಯಲು ಈ ಸಮುದಾಯಗಳು ಇಂತಹ ಉಲ್ಲಾಸದ ಸಮಯವನ್ನು ಸೃಷ್ಟಿಸಿಕೊಳ್ಳುತ್ತವೆ. ಇಂತಹ ಸಮುದಾಯಗಳ ಮದುವೆಗಳಲ್ಲಿ ಅಬ್ಬರ, ಆಡಂಬರಗಳಿರುವುದಿಲ್ಲ. ಇಡೀ ಸಮುದಾಯ ಸ್ವಇಚ್ಛೆಯಿಂದ ಇಂತಹ ಸಂದರ್ಭದಲ್ಲಿ ಪಾಲ್ಗೊಳ್ಳುತ್ತದೆ. ಆದರೆ ಅಂದು ಕೊರಗರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿರುವಾಗ ಏಕಾಏಕಿ ಮದುವೆ ಮನೆಗೆ ನುಗ್ಗಿದ ಪೊಲೀಸರು ವಧುವರರನ್ನೂ ಬಿಡದೆ ಹಲ್ಲೆ ನಡೆಸಿದ್ದಾರೆ.

‘ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿದ್ದು ಅಪರಾಧ’ ಎಂದು ಪೊಲೀಸರು ಹೂಂಕರಿಸಿದ್ದಾರೆ. ಇದಲ್ಲದೆ ವಧುವರರ ಕುಟುಂಬದವರನ್ನು ಪೊಲೀಸ್ ಠಾಣೆಗೆ ಎಳೆತಂದು ಕೂಡಿಹಾಕುತ್ತಾರೆ. ಮರುದಿನ ಮದುವೆ ಮನೆಯವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕೊರಗ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಬಂಧಿಸಿ ಕರೆದುಕೊಂಡು ಬಂದಿದ್ದ ಕೊರಗರ ಮೇಲೆ ಐಪಿಸಿಯ ಹಲವು ಸೆಕ್ಷನ್ನುಗಳನ್ನು ಅನ್ವಯಿಸಿ ಕೇಸು ಹಾಕುತ್ತಾರೆ. ಮದುವೆ ಮನೆಯ ತುಂಬ ಆತಂಕ ಮತ್ತು ಅಭದ್ರತೆಗಳು ಆವರಿಸಿಕೊಂಡ ಸಂದರ್ಭದಲ್ಲಿ, ಈ ದೌರ್ಜನ್ಯ ಖಂಡಿಸಿ ಕೊರಗ ಸಂಘಟನೆಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುತ್ತವೆ. ಅಲ್ಲಿಯೇ ಇದ್ದ ಸಮಾಜ ಕಲ್ಯಾಣ ಸಚಿವರು ಸಂತ್ರಸ್ತ ಕೊರಗ ಕುಟುಂಬವನ್ನು ಸಂತೈಸಿ ನ್ಯಾಯ ಕೊಡಿಸುವ ಭರವಸೆ ನೀಡುತ್ತಾರೆ. ನಂತರ ಹಲ್ಲೆ ಮಾಡಿದ ಸಂಬಂಧಪಟ್ಟ ಠಾಣೆಯ ಅಧಿಕಾರಿಯನ್ನು ಅಮಾನತು ಮಾಡಿದ್ದಲ್ಲದೆ, ಘಟನೆಯಲ್ಲಿ ಭಾಗಿಗಳಾಗಿದ್ದ ಹಲವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗುತ್ತದೆ. ಇಂತಲ್ಲಿಗೆ ಕೊರಗ ಸಮುದಾಯದ ಮದುವೆ ಮನೆಯವರ ಮೇಲೆ ನಡೆದ ದೌರ್ಜನ್ಯದ ಪ್ರಕರಣವು ಸುಖಾಂತ್ಯವಾಯಿತು ಎಂದು ಎಲ್ಲರೂ ಭಾವಿಸುತ್ತಾರೆ. ಕೊರಗ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣವು ಹತ್ತು ಹಲವು ಸಂಗತಿಗಳಲ್ಲಿ ಇದೂ ಒಂದು ಎಂದು ಕಣ್ಮರೆಯಾಗುವ ಹಂತವನ್ನು ತಲುಪುತ್ತದೆ. ರಾಜ್ಯದ ಪ್ರಮುಖ ಪತ್ರಿಕೆಗಳಿಗೆ, ಮಾಧ್ಯಮ ಸಂಸ್ಥೆಗಳಿಗೆ ಇದೊಂದು ಸರ್ವೇಸಾಮಾನ್ಯ ಸಂಗತಿಯಂತೆಯೇ ಕಂಡು ಇನ್ನೇನು ಮರೆವಿಗೆ ಸರಿದುಹೋಗುತ್ತದೆ. ಮುಂದುವರಿದು, ದೇಶದ ಸೌಹಾರ್ದತೆಯನ್ನೇ ಮುಗಿಸಿಬಿಡುವ ಉತ್ಸಾಹದಲ್ಲಿರುವ ನಮ್ಮನ್ನಾಳುವ ಘನಂದಾರಿ ನಾಯಕರ ಅಭಿಪ್ರಾಯಗಳು ದಶದಿಕ್ಕುಗಳಲ್ಲೂ ಮೊಳಗುತ್ತವೆ.

‘ಒಂದು ನೂರು ಜನ ಹಿಂದುಗಳು ಕನಿಷ್ಟ 20 ಲಕ್ಷ ಮುಸ್ಲಿಮರನ್ನು ಕೊಲ್ಲಬೇಕು’ ‘ರೈತರೇನು ನನಗಾಗಿ ಸತ್ತರೇ?’ ಎಂಬ ಹೇಳಿಕೆಗಳು ದೇಶದ ಅತ್ಮವನ್ನೇ ನಡುಗಿಸುತ್ತಿರುವ ಸಂದರ್ಭದಲ್ಲಿ ನಾಗರಿಕ ಸಮಾಜ ಮಾತ್ರ ತಣ್ಣಗೆ ವಿರಮಿಸುವ ಹವಣಿಕೆಯಲ್ಲಿದ್ದಂತೆ ಕಾಣುತ್ತಿದೆ. ಮಾಧ್ಯಮಗಳು ಯಥಾವತ್ತು ಪ್ರಭುತ್ವದ ಭಜನೆಯಲ್ಲಿ ತೊಡಗಿಕೊಂಡಿವೆ. ಮುಸ್ಲಿಮರನ್ನು ಕೊಲ್ಲುವ ಮತ್ತು ರೈತರ ಸಾವುಗಳನ್ನು ನಗಣ್ಯವಾಗಿಸುವ ಈ ಎರಡು ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ಕಣ್ಗಾವಲಲ್ಲಿ ನಮ್ಮ ದೇಶ ತೆವಳುತ್ತಿದೆ. ಮೊದಲ ಹೇಳಿಕೆಯು ನಮ್ಮನ್ನು ಪರೋಕ್ಷವಾಗಿ ಆಳುತ್ತಿರುವ, ತಾವು ಧರ್ಮ ರಕ್ಷಕರು ಎಂದು ಹೇಳಿಕೊಳ್ಳುವ ಸನ್ಯಾಸಿಗಳಿಂದ ಬಂದದ್ದು. ನಮ್ಮಿಂದಿಲೇ ಆಯ್ಕೆಯಾದ ರಾಜಪ್ರಭುತ್ವಕ್ಕೆ ಸೇರಿದವರು ರೈತರ ಕುರಿತು ಬಿಡುಬೀಸಾಗಿ ಮಾತಾಡಿದ್ದಾರೆ. ಒಬ್ಬರು ರಾಜಪ್ರಭುತ್ವದ ವಾರಸುದಾರರಾದರೆ, ಇನ್ನೊಬ್ಬರು ಧಾರ್ಮಿಕ ಪ್ರಭುತ್ವದ ವಾರಸುದಾರರು. ನಮ್ಮ ಸಮಾಜ ಯಾರ ಕಣ್ಗಾವಲಲ್ಲಿ ನಲುಗುತ್ತಿದೆ ಎಂಬುದನ್ನು ಈ ಎರಡೂ ಹೇಳಿಕೆಗಳು ಸೂಚ್ಯವಾಗಿ ಧ್ವನಿಸುತ್ತಿವೆ. ಹರಿದ್ವಾರದ ಧರ್ಮ ಸಂಸತ್‌ನಲ್ಲಿ ಕರ್ಮಠ ಧಾರ್ಮಿಕರು ಮಾಡಿದ ಹೂಂಕಾರಗಳು ನಮ್ಮ ನಾಗರಿಕ ಸಮಾಜವನ್ನು ತಲ್ಲಣಕ್ಕೀಡುಮಾಡಬೇಕಿತ್ತು. ‘ರೈತರೇನು ನನಗಾಗಿ ಸತ್ತರೇ?’ ಎಂಬ ಹೇಳಿಕೆಯು ನಮ್ಮನ್ನಾಳುತ್ತಿರುವ ‘ದೊರೆ’ಯ ಬಾಯಿಂದ ಸುಖಾಸುಮ್ಮನೆ ಬರಲು ಸಾಧ್ಯವೂ ಇಲ್ಲ. ಸಾವುಗಳನ್ನು ಹಲ್ಲೆಗಳನ್ನು, ಅತ್ಯಾಚಾರಗಳನ್ನು ಮತ್ತು ಕೊಲೆಗಳನ್ನು ಸರ್ವೇಸಾಧಾರಣ ಸಂಗತಿಯಾಗಿಸಿಬಿಡುವ ವಾತಾವರಣದಲ್ಲಿ ಹಿಂಸೆಯು ಹೇಗೆ ಅಂತರ್ಗತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ ನಾಗರಿಕ
ಭಾರತವು ಪ್ರಭುತ್ವ ಹಂಚಿದ ಮಾರಕ ಅಫೀಮಿನಲ್ಲಿ ಓಲಾಡುತ್ತಿದೆ. ನಮ್ಮನ್ನಾವರಿಸಿರುವ ಹಿಂಸೆಯಿಂದ ಖಿಲಗೊಳ್ಳುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಯೋಚಿಸುವುದೇ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ದಮನಿತರ ಮೇಲೆ ನಡೆಯುವ ಕೊಲೆ ಅತ್ಯಾಚಾರಗಳನ್ನೂ ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವ ಹಂತಕ್ಕೆ ಹೋಗಿರುವ ಸಮಾಜದಲ್ಲಿ ಅಂತಃಸಾಕ್ಷಿ ಇರಲು ಸಾಧ್ಯವೇ?

ಕೊರಗರ ಮೇಲೆ ಮೊನ್ನೆ ನಡೆದ ಹಲ್ಲೆಯು ನಮ್ಮನ್ನು ವಿಚಲಿತಗೊಳಿಸದೆ ಇದ್ದಲ್ಲಿ ನಾವು ಈ ಹಲ್ಲೆ ನಡೆಸಿದ ವ್ಯಕ್ತಿಗಳಿಗಿಂತ ಕ್ರೂರಿಗಳಾಗಿಬಿಡುತ್ತೇವೆ. ಭಾರತ ಸರಕಾರ ಕರ್ನಾಟಕದಲ್ಲಿ ಪಟ್ಟಿ ಮಾಡಿರುವ ಎರಡು ಆದಿಮ ಬುಡಕಟ್ಟುಗಳಲ್ಲಿ (Primitive Tribe) ಕೊರಗ ಸಮುದಾಯವೂ ಒಂದು. (ಇನ್ನೊಂದು, ಜೇನುಕುರುಬ ಸಮುದಾಯ. ಈ ಸಮುದಾಯ ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದೆ). ಜೇನುಕುರುಬರು ಮತ್ತು ಕೊರಗರು ದಕ್ಷಿಣ ಭಾರತದ ಅತ್ಯಂತ ಆದಿಮ ಸಮುದಾಯಗಳಿಗೆ ಸೇರಿದವರು. ಕೊರಗರು ಮುಖ್ಯವಾಗಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉದ್ದಕ್ಕೂ ಅಲ್ಲಲ್ಲಿ ನೆಲೆಯಾಗಿದ್ದಾರೆ. ಇವರ ವಾಸದ ನೆಲೆಯನ್ನು ‘ಕೊರಗರ ಕೊಪ್ಪ’ ಎಂದು ಕರೆಯುತ್ತಾರೆ. ಮಂಗಳೂರು ಪರಿಸರದ ಕುದ್ದೋರಿ, ಗುಡ್ಡೆ, ಬಜಪೆ, ಮರವೂರು, ಬೈಕಂಪಾಡಿ, ಹಳೆಯಂಗಡಿ, ದೇರಬೈಲು, ಮುಲ್ಕಿ, ಕಿನ್ನಿಮುಲ್ಕಿ, ಮಿಜಾರು, ಬಪ್ಪನಾಡು, ಉಡುಪಿ ಬಳಿಯ ಪುತ್ತೂರು, ಬನ್ನಂಜೆ, ಇಂದ್ರಾಳಿ, ಮಣಿಪಾಲ, ಪಕಾಳ, ಕೊರಂಗ್ರಪಾಡಿ, ಚಿಪ್ಪಾಡಿ, ಕುಪ್ಪಾಡಿಗಳಲ್ಲಿ ಕುಂದಾಪುರ ಪರಿಸರದ ಅಸೊಡು ಬಿದ್ಕರ್ಲ ಕಟ್ಟೆ, ಅಮಾಸೆ ಬೈಲ್, ವಕ್ವಾಡಿ, ಕುಂಬಾಣಿ, ವಡೇರ ಹೋಬಳಿಗಳಲ್ಲಿ ಹಾಗೂ ಕಾರ್ಕಳ, ಪುತ್ತೂರು, ಸುಳ್ಳ, ಬೆಳ್ತಂಗಡಿ ತಾಲೂಕುಗಳಲ್ಲಿ ಕೊರಗ ಸಮುದಾಯದ ದಟ್ಟಣೆ ಇದೆ.

ಕೊರಗರು ಇಂದಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ದುಸ್ಥಿತಿಯಲ್ಲೇ ಇದ್ದಾರೆ. ವಸಾಹತು ಸಂದರ್ಭದಲ್ಲಿ ಇವರನ್ನು ಕಾಡಿನಿಂದ ನಾಡಿಗೆ ತಂದು ಉಳ್ಳವರ ಗುಲಾಮರನ್ನಾಗಿಸಲಾಯಿತು. ಆಗ ಕಾಡಿನೊಂದಿಗೆ ಇವರಿಗಿದ್ದ ಅನ್ಯೋನ್ಯ ಸಂಬಂಧ ಕಡಿದುಹೋಯಿತು. ಕಾಡಿನ ಬಿಳಲು, ಬಿದಿರು ಬಳಸಿಕೊಂಡು ಬುಟ್ಟಿಗಳು, ಮೀನು ಹಿಡಿಯುವ ಕುತ್ತರಿ, ಕದಿಕೆ, ಪೆಟಾರಿ, ತೊಟ್ಟಿಲು ಮುಂತಾದವುಗಳನ್ನು ಕೊರಗರು ತಯಾರಿಸುತ್ತಾರೆ. ಜೊತೆಗೆ ಜೇನು, ಔಷಧಿಯ ಬೇರು, ನಾರು, ತೊಗಟೆಗಳ ಸಂಗ್ರಹ ಮಾಡುವುದನ್ನು ಇವರು ಉಪಕಸುಬುಗಳನ್ನಾಗಿಸಿಕೊಂಡಿದ್ದಾರೆ. ಆದರೆ ಅರಣ್ಯ ಕಾಯ್ದೆಗಳ ಕಾರಣಕ್ಕಾಗಿ ಈ ಬಗೆಯ ಆರ್ಥಿಕ ಮೂಲಗಳಿಂದಲೂ ಕೊರಗರು ವಂಚಿತರಾಗುತ್ತಿದ್ದಾರೆ. ನಗರವನ್ನು ಆಶ್ರಯಿಸಿದ ಕೂಲಿಗಳಾಗಿ ಮಾರ್ಪಟ್ಟಿದ್ದಾರೆ. ಉಡುಪಿ ಮತ್ತು ಮಂಗಳೂರು ನಗರದ ಪೌರಕಾರ್ಮಿಕರಾಗಿ ಇವರು ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ.

ಸಾಮಾಜಿಕವಾಗಿ ಕೊರಗರು ಅಸ್ಪೃಶ್ಯರು. ಅನಾದಿಕಾಲದಿಂದ ಅಪಮಾನಕ್ಕೆ ಒಳಗಾಗುತ್ತಲೇ ಇರುವ, ಸಾಮಾಜಿಕವಾಗಿ ಕೆಳಸ್ತರದಲ್ಲಿ ನಿಯುಕ್ತಿಗೊಂಡ ಸಮುದಾಯವಿದು. ಭಾರತ ದೇಶದ ಊಳಿಗಮಾನ್ಯತೆಯ ಕ್ರೌರ್ಯವನ್ನು ಅರ್ಥಮಾಡಿಕೊಳ್ಳಲು ಭಾರೀ ಪುಸ್ತಕಗಳನ್ನೇನು ಓದಬೇಕಿಲ್ಲ. ಒಮ್ಮೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೊರಗರ ವಾಸಸ್ಥಳಗಳಿಗೆ ಭೆಟಿಕೊಟ್ಟರೆ ಸಾಕು. ಕೊರಗರು ಅನಾದಿಯಿಂದ ಕರಾವಳಿಯ ಧಣಿಗಳ ಮನೆಗಳಲ್ಲಿ ಅನೇಕ ಬಿಟ್ಟಿ ಸೇವೆಗಳನ್ನು ಮಾಡಲೆಂದು ಗುಲಾಮಗಿರಿಗೆ ತಳ್ಳಲ್ಪಟ್ಟವರು. ದಕ್ಷಿಣ ಕನ್ನಡವನ್ನು ಒಳಗೊಂಡಂತೆ ಅಂದು (ಇಂದಿಗೂ) ಜಾರಿಯಲ್ಲಿದ್ದ ಕೊರಗರ ಗುಲಾಮಗಿರಿಯ ಕುರಿತು ಶ್ರೀ ಡಬ್ಲ್ಯು ಲೋಗನ್, ಶ್ರೀ ಉಲ್ಲಾಳ ರಾಘವೇಂದ್ರರಾವ್ ಮತ್ತು ಪ್ರೊ. ಪುರುಷೋತ್ತಮ ಬಿಳಿಮಲೆಯವರು ವಿವರವಾಗಿ ಬರೆದಿದ್ದಾರೆ. (ನೋಡಿ: Malabar Manual, Native Life in Travancore, 1883, Indian Antiquary. III, 1874,ಕೊರಗರು, 1993) ಈ ಗುಲಾಮ ಪದ್ಧತಿಯಲ್ಲಿ ಅತ್ಯಂತ ಹೇಯವಾದದ್ದು ‘ಅಜಲು’ ಪದ್ಧತಿ. ಅಜಲು ಎನ್ನುವುದು ಗುಲಾಮ ಕೊರಗರು ಧಣಿಗಳ ಮನೆಯಲ್ಲಿ ನಿರ್ವಹಿಸಲೇಬೇಕಾದ ಕರ್ತವ್ಯಗಳಲ್ಲೊಂದು. ‘ಅಜಲು’ ಎಂದರೆ, ಮೇಲ್ಜಾತಿಯ ಧಣಿಗಳಿಗೆ ಅಥವಾ ಅವರ ಮಕ್ಕಳಿಗೆ ಅನಾರೋಗ್ಯವಾದ ಸಂದರ್ಭದಲ್ಲಿ ಅವರು ಅನ್ನದಲ್ಲಿ ಕೂದಲು, ಉಗುರನ್ನು ಬೆರೆಸಿ ಕೊರಗರಿಗೆ ತಿನ್ನಲು ಕೊಡುತ್ತಾರೆ.

ಕೊರಗರು ಕೂದಲು ಉಗುರುಗಳು ಬೆರೆತ ಅನ್ನವನ್ನು ತಿನ್ನಬೇಕು. ಧಣಿಗಳ ಹಸುಗೂಸುಗಳು ಕಾಯಿಲೆ ಬಿದ್ದರೆ ಆ ಕೂಸುಗಳನ್ನು ಮೊರದಲ್ಲಿಟ್ಟು ಕೊರಗ ಮಹಿಳೆಗೆ ನೀಡಿ ಮೊಲೆ ಹಾಲು ನೀಡಲು ಹೇಳಲಾಗುತ್ತದೆ. ಇದಲ್ಲದೆ ಧಣಿಗಳು ಊಟ ಮಾಡಿ ಬಿಟ್ಟ ಬಾಳೆಲೆಯಲ್ಲಿನ ಉಳಿದ ಎಂಜಲನ್ನು ತಿನ್ನಲು ಹೇಳಲಾಗುತ್ತದೆ. ಅಜಲಿನಲ್ಲಿ ನಿಯುಕ್ತಿಗೊಳಿಸಿದ ಈ ಕ್ರಮಗಳಿಂದಾಗಿ ಧಣಿ ಮತ್ತು ಅವರ ಮಕ್ಕಳ ಕಾಯಿಲೆಗಳು ಕೊರಗರಿಗೆ ವರ್ಗಾವಣೆಯಾಗಿ ತಾವು ಗುಣಮುಖರಾಗುತ್ತೇವೆ ಎಂದು ಊಳಿಗಮಾನ್ಯ ದೊರೆಗಳು ನಂಬುತ್ತಾರೆ. ಧಣಿಗಳ ಮನೆಯ ಶುಭಕಾರ್ಯ, ಶೋಕ ಮತ್ತು ಕಂಬಳದ ಸಂದರ್ಭಗಳಲ್ಲಿ ಇವರು ಕಡ್ಡಾಯವಾಗಿ ಡೋಲು ನುಡಿಸಬೇಕು. ಇವೆಲ್ಲವನ್ನು ಅಜಲು ಪದ್ಧತಿಯ ಭಾಗವಾಗಿ ಊಳಿಗದ ಕೊರಗರು ನಿರ್ವಹಿಸಲೇಬೇಕಾದ ಕರ್ತವ್ಯಗಳು. ಕೊರಗ ಸಮುದಾಯದಲ್ಲಿ ಹುಟ್ಟಿ ಬೆಳೆದ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿ ಸಮುದಾಯಕ್ಕೆ ಧೈರ್ಯ ತುಂಬಿದ ‘ಕೊರಗ ತನಿಯ’ನನ್ನು ಇವರು ಸಾಂಸ್ಕೃತಿಕ ನಾಯಕನಂತೆ ಆರಾಧಿಸುತ್ತಾರೆ. ಕ್ರಮೇಣ ಕೊರಗ ತನಿಯ ಒಂದು ಶಕ್ತಿಯಾಗಿ, ‘ನಮ್ಮ ರಕ್ಷಕ’ ಎಂಬ ಭಾವದಲ್ಲಿ ಕೊರಗರು ಆತನನ್ನು ‘ಕೊರಗಜ್ಜ’ನೆಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಈತನಿಗೆ ‘ಅಗೆತ ತಂಬಿಲ’ ಕೊಡುತ್ತಾರೆ. ಇದು ‘ಕೊರಗ ತನಿಯ’- ಈ ಸಮುದಾಯ ಕಟ್ಟಿಕೊಂಡ ಹೊಸ ಬಗೆಯ ಅನನ್ಯತೆಯೂ ಆಗಿದೆ. ಆದರೆ, ಕೊರಗಜ್ಜ (ಕೊರಗ ತನಿಯ) ಈ ಸಮುದಾಯದ ಅನನ್ಯತೆಯಾಗಿ ಉಳಿಯಲಾಗುತ್ತಿಲ್ಲ. ತನ್ನ ಪವಾಡಗಳಿಗೆ ಹೆಸರಾದ ಈತ ಮೇಲ್ವರ್ಗದ ಧಣಿಗಳ ಪಾಲಾಗುತ್ತಿದ್ದಾನೆ. ಕೊರಗ ಸಮುದಾಯದಲ್ಲಿ ಜನಿಸಿದ ಕೊರಗಜ್ಜನನ್ನು ಧಣಿಗಳು ತಮ್ಮ ವಶ ಮಾಡಿಕೊಂಡಿದ್ದಾರೆ. ಆದರೆ ಇಂತಹ ಅಸಮಾನ್ಯ ವ್ಯಕ್ತಿಯು ರೂಪುಗೊಳ್ಳುವುದಕ್ಕೆ ಕಾರಣವಾದ ಕೊರಗ ಸಮುದಾಯವನ್ನು ಇನ್ನೂ ಹೀನಾಯ ಶೋಷಣೆಗೆ ಗುರಿ ಮಾಡುತ್ತಲೇ ಇದ್ದಾರೆ. ಅಜಲು ಪದ್ಧತಿಯನ್ನು ಸರಕಾರ 1997ರಲ್ಲಿ ನಿಷೇಧಿಸಿ, 2000ರದ ಇಸ್ವಿಯಲ್ಲಿ ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ. (2000ರ ಕರ್ನಾಟಕ ಅಧಿನಿಯಮ ಸಂಖ್ಯೆ-30, ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ಅಧಿನಿಯಮ 2000) ಆದರೂ ಅಜಲು ಧೋರಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಮಡೆಸ್ನಾನವನ್ನು ಸಮರ್ಥಿಸುವ ‘ಬುದ್ಧಿವಂತ’ರ ನಾಡಲ್ಲಿ ಇಂತಹ ಆಚರಣೆಗಳು ಹೇಗೆ ತಾನೇ ನಾಶವಾಗಲು ಸಾಧ್ಯ?

ಇಂತಹ ಕೊರಗರ ಮೇಲೆ ಇಂದಿಗೂ ದಬ್ಬಾಳಿಕೆಗಳು ನಿಂತಿಲ್ಲ. ಕಂಬಳದ ಸಂದರ್ಭದಲ್ಲಿ ‘ಪನಿಕುಲ್ಲನಿ’ ಎಂಬ ಪದ್ಧತಿಯಲ್ಲಿ ಕೊರಗರು ಭಾಗವಹಿಸಲೇಬೇಕು.

ಭಾಗವಹಿಸಲು ನಿರಾಕರಿಸುವ ಕೊರಗರ ಮೇಲೆ ಹಲ್ಲೆಗಳು ಇಂದಿಗೂ ನಡೆಯುತ್ತಿವೆ. ಊಳಿಗಮಾನ್ಯ ಸಮಾಜದ ಪಳೆಯುಳಿಕೆಯಂತಿರುವ ‘ಕಂಬಳವನ್ನು ಒಂದು ಕ್ರೀಡೆಯಾಗಿ ಮಾತ್ರ ಉಳಿಸಿಕೊಳ್ಳಿ ಆದರೆ ಅದನ್ನು ಒಂದು ಆಚರಣೆಯನ್ನಾಗಿ ಪರಿಗಣಿಸುವುದು ಬೇಡ’ ಎಂದು ಅನೇಕರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಕಂಬಳದ ಆಚರಣೆ ಮತ್ತು ಕೊರಗರ ದಮನಗಳೆರಡೂ ಇನ್ನೂ ನಿಂತಿಲ್ಲ.

ಕೊರಗರಂತಹ ಸಮುದಾಯಗಳ ಮೇಲಿನ ಹಲ್ಲೆಗಳನ್ನು ನಾಗರಿಕ ಸಮಾಜವನ್ನೂ ಒಳಗೊಂಡಂತೆ ಮಾಧ್ಯಮಗಳು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎಂದು ಭಾವಿಸುತ್ತವೆ. ಪ್ರಭುತ್ವ ಮತ್ತು ಜನರ ನಡುವಿನ ತಿಕ್ಕಾಟ ಎಂದು ಪರಿಗಣಿಸುತ್ತವೆ. ಜೊತೆಗೆ, ಇಂತಹ ಹಲ್ಲೆಯ ಪ್ರಕರಣಗಳಲ್ಲಿ ನೈತಿಕ ಪ್ರಶ್ನೆಗಳನ್ನು ಮುಖ್ಯವಾಗಿಟ್ಟುಕೊಂಡು ಅರ್ಥಮಾಡಿಕೊಳ್ಳುವಂತೆ ನಮ್ಮ ಮಾಧ್ಯಮಗಳು ಸುದ್ದಿಗಳನ್ನು ತಿರುಚುತ್ತವೆ. ಇಂತಹ ಹಲ್ಲೆ ಮತ್ತು ಅತ್ಯಾಚಾರಗಳ ಹಿಂದೆ ಜಾತಿ ಅಸಹನೆಗಳು ಕೆಲಸ ಮಾಡುತ್ತವೆ ಎಂಬುದನ್ನು ಈ ಮಾಧ್ಯಮಗಳು ನಿರಂತರವಾಗಿ ಮುಚ್ಚಿಡುತ್ತಲೇ ಬಂದಿವೆ. ಕಳೆದ ತಿಂಗಳು ಪಿರಿಯಾಪಟ್ಟಣದ ರಾಣಿಗೇಟ್ ಬಳಿ ಜೇನುಕುರುಬ ಸಮುದಾಯದ ಕೃಷಿಕನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೂ, ಮದುವೆ ಮನೆಯಲ್ಲಿ ಧ್ವನಿವರ್ಧಕ ಬಳಸಿದ ಕೊರಗ ಸಮುದಾಯದ ಕುಟುಂಬದ ಮೇಲೆ ಪೊಲೀಸರು ನಡೆಸಿದ ಹಲ್ಲೆಗಳ ನಡುವೆ ಅನೇಕ ಸಾಮ್ಯತೆಗಳಿವೆ. ಈ ಎರಡೂ ಪ್ರಾಣಘಾತಕ ಪ್ರಕರಣಗಳು ಊಳಿಗಮಾನ್ಯ ಸಮಾಜದ ಹೀನ ಸ್ವಭಾವಗಳಿಂದ ಪ್ರೇರಣೆ ಪಡೆದಿವೆ. ಜೊತೆಗೆ ಎರಡೂ ಪ್ರಕರಣಗಳಲ್ಲಿ ಊಳಿಗಮಾನ್ಯ ದೊರೆಗಳು ನೇರ ಭಾಗಿಗಳಾಗದೆ ಸರಕಾರಿ ನೌಕರರು ಭಾಗಿಗಳಾಗಿದ್ದಾರೆ. ಸರಕಾರಿ ನೌಕರರು ಮಾಡಿದ ಕೊಲೆ ಪ್ರಯತ್ನ ಮತ್ತು ಹಲ್ಲೆಗಳ ಹಿಂದೆ ಊಳಿಗಮಾನ್ಯ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಅಸಹನೆಯು ಪ್ರಧಾನವಾಗಿ ಕೆಲಸ ಮಾಡಿದೆ.

ಹೀಗಾಗಿ ನಮ್ಮ ಸಮಾಜದಲ್ಲಿನ ಜಾತಿ ಅಸಹನೆಗಳನ್ನು ಪರೋಕ್ಷವಾಗಿ ಸರಕಾರ ಜಾರಿಯಲ್ಲಿಡುತ್ತಾ ಬಂದಿದೆ. ಇದಲ್ಲದೆ, ಈ ಸರಕಾರಿ ನೌಕರರು ಇನ್ನೂ ಮುಂದುವರೆದು ತಮ್ಮ ಹೀನ ಕೃತ್ಯಗಳನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳಲು ಸಂತ್ರಸ್ತ ಸಮುದಾಯಗಳನ್ನೇ ಅಪರಾಧಿಗಳನ್ನಾಗಿಸಲು ಮುಂದಾದದ್ದು. ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜೇನುಕುರುಬರ ಬಸವನ ಮೇಲೆ ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಳ್ಳಲು ಅರಣ್ಯ ಇಲಾಖೆಯ ಗಾರ್ಡ್‌ಗಳು ‘ಬಸವ ಗಂಧದ ಮರ ಕಡಿಯಲು ಪ್ರಯತ್ನಿಸಿದ್ದ, ಅದಕ್ಕಾಗಿ ಗುಂಡು ಹಾರಿಸಬೇಕಾಯ್ತು’ ಎಂದು ಸುಳ್ಳು ಹೇಳಿ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದರು. ‘ಮದುವೆ ಮನೆಯಲ್ಲಿ ಧ್ವನಿವರ್ಧಕ ಬಳಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿದ ಕಾರಣಕ್ಕಾಗಿ ಕೊರಗರನ್ನು ಬಂಧಿಸಲಾಗಿದೆ’ ಎಂದು ಪೋಲೀಸರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯದವರು ತಮ್ಮ ಸಹಜ ಹಕ್ಕುಗಳನ್ನು ಅನುಭವಿಸಲು ಅನರ್ಹರು ಎಂಬ ಸನಾತನ ದಬ್ಬಾಳಿಕೆ ಕೆಲಸ ಮಾಡಿದೆ. ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಸಹ ಪ್ರಸ್ತುತ ಪ್ರಕರಣಗಳನ್ನು ತಥಾಕಥಿತ ವಿಧಾನಗಳ ಮೂಲಕವೇ ಅರ್ಥೈಸಿ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತವೆ. ನ್ಯಾಯಾಲಯಗಳೂ ಸಹ ಮಾಧ್ಯಮಗಳ ವರದಿಗಳನ್ನು ಮತ್ತು ಪೊಲೀಸರು ‘ಸಾಕ್ಷಿ’ ಸಮೇತ ಮಂಡಿಸುವ ಮೇಲ್‌ಸ್ತರದ ವಿವರಗಳನ್ನೇ ನಂಬಿಬಿಡುತ್ತವೆ.

ಹೀಗಾಗಿ ಯಾವ ಜೀವವಿರೋಧಿ ಸಮಾಜಘಾತುಕರಿಗೂ ಶಿಕ್ಷೆಯಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತತ್‌ಫಲವಾಗಿ ನಮ್ಮ ಸಮಾಜದ ಆಳದಲ್ಲಿ ಜೀವಂತವಿರುವ ಜಾತಿ ಅಸಹನೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗದೇ ಆರೋಪಿಗಳು ಖುಲಾಸೆಯಾಗುತ್ತಿರುವುದರ ಹಿಂದೆ ಸರಕಾರದ ಜಾತಿ/ವರ್ಗ ತಾರತಮ್ಯದ ನಿಲುವು ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಜೇನುಕುರುಬ ಮತ್ತು ಕೊರಗ ಸಮುದಾಯಗಳಂತಹ ತಳಸ್ತರದ ಸಮುದಾಯಗಳ ಮೇಲಾಗುವ ದೌರ್ಜನ್ಯ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ನಮ್ಮ ನಾಗರಿಕ ಸಮಾಜ ಮತ್ತು ಮಾಧ್ಯಮಗಳು ನೋಡುವ ವಿಧಾನ ಬದಲಾಗಬೇಕು. ನ್ಯಾಯಾಲಯಗಳು ಗರಿಷ್ಟ ನಿಗಾವಹಿಸಿ ಪ್ರಭುತ್ವಗಳು ಇಂತಹ ಪ್ರಕರಣಗಳನ್ನು ನಿರ್ವಹಿಸುವ ರೀತಿಯನ್ನು ಬದಲಿಸುವಂತೆ ಒತ್ತಾಯಿಸಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ ಜೇನುಕುರುಬ ಮತ್ತು ಕೊರಗರಂತಹ ಸಮುದಾಯದ ಜನ ಹೆಚ್ಚು ಸಂಘಟಿತರಾಗಿ ತಮ್ಮ ಮೇಲೆ ನಡೆವ ದೌರ್ಜನ್ಯಗಳ ಹಿಂದಿರುವ ಜಾತಿ ಹುನ್ನಾರಗಳನ್ನು ಬಯಲಿಗೆಳೆಯಬೇಕು. ಸಾಂವಿಧಾನಿಕ ಚೌಕಟ್ಟಿನಲ್ಲಿ ತಮ್ಮ ಹಕ್ಕುಗಳಿಗಾಗಿನ ಹೋರಾಟವನ್ನು ಸುಸಂಘಟಿಸುವ ನಿಟ್ಟಿನಲ್ಲಿ ನಮ್ಮ ಒಗ್ಗಟ್ಟನ್ನು ಸಾಧಿಸಬೇಕು. ಇಲ್ಲದಿದ್ದಲ್ಲಿ ಸಂತ್ರಸ್ತರೆ ಅಪರಾಧಿಗಳಾಗುವ ವಿಕಟ ಸನ್ನಿವೇಶಗಳು ಸೃಷ್ಟಿಯಾಗುತ್ತಲೇ ಇರುತ್ತವೆ.

ಡಾ. ಎ ಎಸ್ ಪ್ರಭಾಕರ

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಬಿಡುಗಡೆಯಾಗಿದೆ.


ಇದನ್ನೂ ಓದಿ: ಕೊರಗರದ್ದು ಇನ್ನೊಂದು ‘ಜೈ ಭೀಮ್‌’ ಕಥೆ ಆಗದಿರಲಿ: ಎಚ್‌.ಸಿ.ಮಹದೇವಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...