Homeಪುಸ್ತಕ ವಿಮರ್ಶೆಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

ಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

- Advertisement -
- Advertisement -

ಕ್ರಿ.ಪೂ. 6ನೆಯ ಶತಮಾನ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದಂತೆ ಉಳಿದುಬಿಡುವ ಕಾಲಮಾನ. ತಥಾಗತ ಬುದ್ಧನ ದರ್ಶನವು ವಿಕಾಸಗೊಂಡ ಕಾಲ. ನಂತರ ಆ ದರ್ಶನವು ಸಾಮ್ರಾಟ್ ಅಶೋಕನ ಮನಪರಿವರ್ತನೆಯಿಂದಾಗಿ ದಕ್ಷಿಣ ಏಷಿಯಾವನ್ನೇ ಆವರಿಸಿತು. ಅಷ್ಟಕ್ಕೆ ನಿಲ್ಲದೆ ಆಯಾ ನೆಲದ ಸಂಸ್ಕೃತಿಗಳೊಂದಿಗೆ ಕೊಡುಕೊಳ್ಳುವಿಕೆ ಮಾಡಿಕೊಂಡು ಬೆಳೆಯಿತು. ಇಂದು ಬೌದ್ಧ ದರ್ಶನವು ಹೀನಾಯಾನ, ಮಹಾಯಾನ, ತೇರಾವಾದ, ವಜ್ರಯಾನ, ಜೆನ್, ನವಯಾನ ಮುಂತಾದ ಹಲವು ಧಾರೆಗಳಾಗಿ ಬೆಳೆದಿದೆ. ಪ್ರಪಂಚದಾದ್ಯಂತ ತನ್ನ ಬೆಳಕನ್ನು ಚೆಲ್ಲುತ್ತಿದೆ. ಆದರೆ ಬೌದ್ಧ ದರ್ಶನ ಜೀವ ತಾಳಿದ ಭಾರತದಲ್ಲಿ 20ನೇ ಶತಮಾನದವರೆಗೂ ಅದರ ಸ್ಥಿತಿ ಶೋಚನೀಯವಾಗಿತ್ತು. ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರರ ’ಮಹಾ ಮರಳುವಿಕೆ’ಯಿಂದಾಗಿ ಭಾರತೀಯರಿಗೆ ಬೌದ್ಧ ದರ್ಶನದ ವಿಸ್ಮೃತಿಯು ಕಳಚಿಬಿದ್ದಿತು. ಇದರ ಮುಂದುವರೆದ ಭಾಗವಾಗಿ ಹಲವು ವಿದ್ವಾಂಸರು ಬೌದ್ಧ ದರ್ಶನವನ್ನು ’ಧಮ್ಮ’ವನ್ನಾಗಿ ಅಭ್ಯಾಸ ಮಾಡಿದರು. ಅಂತಹವರಲ್ಲಿ ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರೂ ಒಬ್ಬರು.

ವೇದೋಪನಿಷತ್ತುಗಳು ಜನಸಾಮಾನ್ಯರ ಭಾಷೆಯಲ್ಲದ ಸಂಸ್ಕೃತವನ್ನು ಮುಖ್ಯಭಾಷೆಯಾಗಿ ಪರಿಗಣಿಸಿ ಕಟ್ಟಿಕೊಂಡ ತಾತ್ವಿಕತೆಯನ್ನು ಅನುಸರಿಸದೆ ಬುದ್ಧಗುರು ಜನಸಾಮಾನ್ಯರ ಭಾಷೆಯಾದ ’ಪಾಲಿ’ಯಲ್ಲಿ ದುಃಖನಿವಾರಣೆಗಾಗಿ ತನ್ನ ಸಂಶೋಧನಾ ಮತ್ತು ಅನುಭವ ತತ್ವಗಳನ್ನು ಬೋಧಿಸಿದನು. ಶಾತವಾಹನರ ನಂತರದ ಕಾಲಘಟ್ಟದಲ್ಲಿ ಯಜಮಾನ್ಯ ಸಂಸ್ಕೃತಿಯ ಭಾಗವಾಗಿ ಬೌದ್ಧ ವಿಹಾರದ ಭಿಕ್ಕುಗಳೂ ಸಹ ಜನಸಾಮಾನ್ಯರಿಂದ ದೂರ ಸರಿದು ಸಂಸ್ಕೃತವನ್ನೇ ಬಳಸಿಕೊಂಡರು. ಬೌದ್ಧ ದರ್ಶನವನ್ನೇ ಜನಸಾಮಾನ್ಯರಿಂದ ದೂರಗೊಳಿಸಿದರು. ಆದರೆ ‘ಬುದ್ಧಾನುಸಾಸನಂ’ ಜನಸಾಮಾನ್ಯರಿಗೆ ಬೌದ್ಧ ದರ್ಶನವನ್ನು ಸರಳವಾಗಿ ಅರ್ಥಮಾಡಿಸುವಲ್ಲಿ ಖಂಡಿತವಾಗಿಯೂ ಗೆಲ್ಲುತ್ತದೆ.

ಸಾಮ್ರಾಟ್ ಅಶೋಕ

’ಬುದ್ಧಾನುಸಾಸನಂ’ ಬೌದ್ಧ ಚಿಂತನೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ. ಆದರೆ ಒಂದು ಲೇಖನದಿಂದ ಮತ್ತೊಂದು ಲೇಖನಕ್ಕೆ ಸಂಬಂಧವಿರುವುದರಿಂದ ಇಡೀ ಕೃತಿಯನ್ನು ಬೌದ್ಧ ಚಿಂತನೆಗಳ ಬುಟ್ಟಿ ಎಂದು ಕರೆಯಬಹುದು. ಕೃತಿಯ ಉದ್ದಕ್ಕೂ ಲೇಖಕರ ಅಗಾಧವಾದ ಓದು ಮತ್ತು ಜೀವನಾನುಭವ ಎದ್ದು ಕಾಣುತ್ತದೆ. ಜನಸಾಮಾನ್ಯರಿಗೆ ಮಾತ್ರವಲ್ಲ ಬೌದ್ಧ ತತ್ವಕ್ಕೆ ಸ್ವಲ್ಪ ಪ್ರವೇಶವಿರುವವರಿಗೂ ಇರಬಹುದಾದ ಹಲವು ಅನುಮಾನಗಳಿಗೆ ಮುಖಾಮುಖಿಯಾಗುತ್ತದೆ.

ಬೌದ್ಧ ಧಮ್ಮ ಮಾಂಸಾಹಾರ ಸೇವಿಸಲು ಅನುಮತಿಸಿದೆಯೇ? ಬೌದ್ಧ ಧಮ್ಮದಲ್ಲಿ ಆತ್ಮಕ್ಕೆ ಸ್ಥಾನವಿಲ್ಲವೇ? ಪುನರ್ಜನ್ಮವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ? ದೇವರ ಬಗ್ಗೆ ಬುದ್ಧಗುರುವಿನ ಮಾತುಗಳೇನು? ಸ್ವರ್ಗ, ನರಕ, ಪಾಪ, ಪುಣ್ಯಗಳ ಕುರಿತು ಬುದ್ಧಗುರುವಿನ ನಿಲುವೇನು? ಚಾತುರ್ವರ್ಣವನ್ನು ಏಕೆ ಬುದ್ಧಗುರು ಪುರಸ್ಕರಿಸಲಿಲ್ಲ? ಹಿಂಸೆ ಮತ್ತು ಅಹಿಂಸೆಗಳ ಬಗ್ಗೆ ವ್ಯಾಖ್ಯಾನವೇನು? ಹೀಗೆ ಬೌದ್ಧ ದರ್ಶನದ ಬಗ್ಗೆ ತೂರಿಬರುವ ಸಾಮಾನ್ಯ ಪ್ರಶ್ನೆಗಳಿಗೆ ಇದುವರೆಗೆ ಹಲವರು ಉತ್ತರಿಸುತ್ತಲೇ ಬಂದಿದ್ದಾರೆ. ಆದರೆ ಇವುಗಳ ಬಗ್ಗೆ ಬುದ್ಧಗುರು ಯಾವ ಸುತ್ತದಲ್ಲಿ ಹಾಗೂ ಸನ್ನಿವೇಶದಲ್ಲಿ ಮಾತನಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ನೀಡುವ ಬೆರಳೆಣಿಕೆಯಷ್ಟು ಕೃತಿಗಳಿರಬಹುದಷ್ಟೆ. ಅದರಲ್ಲೂ ಮೂಲ ಪಠ್ಯಗಳನ್ನಾಧರಿಸಿದ ವ್ಯಾಖ್ಯಾನ ಸಿಗುವುದು ಬಲು ಕಷ್ಟ. ಹಾಗಾಗಿ ’ಬುದ್ಧಾನುಸಾಸನಂ’ ಈ ಕೊರತೆಯನ್ನು ನೀಗಿಸುತ್ತದೆ. ಸ್ವತಃ ಲೇಖಕರೇ ’ದೇವರಿಲ್ಲದೆ, ಪವಾಡವಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ ಗ್ರಂಥವೇನಾದರೂ ಇದ್ದರೆ ಅದು ಧಮ್ಮಪದ’ ಎಂದು ಹೇಳುವ ಮೂಲಕ ಅವರ ಪ್ರತಿಯೊಂದು ಮಾತಿಗೂ ಜವಾಬ್ದಾರಿಯುತವಾಗಿ ಸಾಕ್ಷಿ ನೀಡುತ್ತಾರೆ. ಸಮಕಾಲೀನ ಯುವಬರೆಹಗಾರರು ಈ ಬದ್ಧತೆಯನ್ನು ಮೂಡ್ನಾಕೂಡರಿಂದ ಕಲಿಯಲೇಬೇಕಿದೆ.

ಬೌದ್ಧ ತಾತ್ವಿಕತೆಗೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ವಲಯದಲ್ಲಿಯೂ ಸಾಕಷ್ಟು ಚರ್ಚೆಗಳಿವೆ ಹಾಗೂ ಪ್ರಶ್ನೆಗಳಿವೆ. ನಾಮರೂಪ ತತ್ವ, ಮಧ್ಯಮ ಮಾರ್ಗ, ಬುದ್ಧಗುರು ಕೇವಲ ದುಃಖದ ಬಗ್ಗೆಯೇ ಮಾತನಾಡಿದ್ದಾನೆ ಎಂಬ ವಿಚಾರಗಳ ಮೇಲೂ ’ಬುದ್ಧಾನುಸಾಸನಂ’ ಸ್ಪಷ್ಟವಾದ ಬೆಳಕನ್ನು ಚೆಲ್ಲುತ್ತದೆ.

ಇದರೊಂದಿಗೆ ಬೌದ್ಧ ಚಿಂತಕರು ಹೆಚ್ಚು ಪ್ರಚುರಪಡಿಸದ ವಿಚಾರಗಳು ಕೃತಿಯುದ್ದಕ್ಕೂ ಹರಡಿಕೊಂಡಿರುವುದರಿಂದ ಅಂತಹ ಒಂದೆರಡು ನಿದರ್ಶನಗಳನ್ನು ನೀಡಬೇಕೆನಿಸುತ್ತಿದೆ.

ಬೌದ್ಧ ಭಿಕ್ಕುಗಳು ಯಾರಿಂದಲಾದರೂ, ಯಾವ ಆಹಾರವಾದರೂ ಸರಿ ಸ್ವೀಕರಿಸಿ ಉಣ್ಣಬೇಕು. ಇದು ವಿಚಾರವಲಯದಲ್ಲಿರುವ ಗಟ್ಟಿಯಾದ ನಂಬಿಕೆ. ಆದರೆ ಲೇಖಕರು ಬೌದ್ಧ ಸಾಹಿತ್ಯದ ’ಮಾತಂಗ ಜಾತಕ’ದಲ್ಲಿನ ಐತಿಹ್ಯವೊಂದನ್ನು ತಿಳಿಸಿದ್ದಾರೆ. ಅಲ್ಲಿ ಮಾದಿಗ ಮಾತಂಗ ಮುನಿಯೊಂದಿಗೆ ಬ್ರಾಹ್ಮಣ ಕನ್ಯೆ ದಿಟ್ಟಮಂಗಲಿಕೆಯ ವಿವಾಹವಾಗುತ್ತದೆ. ಅವರಿಗೆ ಮಂಡವ್ಯ ಎಂಬ ಮಗ ಹುಟ್ಟುತ್ತಾನೆ. ಬೋಧಿಸತ್ವನಾದ ಮಾತಂಗನಿಗೆ ಮಂಡವ್ಯ ದಾನ ಕೊಡಲು ನಿರಾಕರಿಸಿದಾಗ, ಜಾತಿ ಎಂಬುದು ಅರಿಷಡ್ವರ್ಗಗಳಂತೆ ಒಂದು ಅವಗುಣ. ಅದು ಇರುವವರಿಂದ ದಾನ ಪಡೆಯುವುದು ಯೋಗ್ಯವಲ್ಲ. ಅಂತಹವರು ದಾನ ನೀಡಲೂ ಸಹ ಯೋಗ್ಯರಲ್ಲ ಎಂದು ಹೇಳುವ ಮಾತಂಗ ಗಾಥೆಯದು. ಈ ಗಾಥೆಯು ಏಕಕಾಲಕ್ಕೆ ಅನುಲೋಮ ವಿವಾಹ ಪದ್ಧತಿಯನ್ನೂ ಜೊತೆಗೆ ಅದೇ ಕಾಲಘಟ್ಟದಲ್ಲಿ ಜಡಗೊಂಡ ಸಮಾಜವನ್ನೂ ಪರಿಚಯಿಸುತ್ತದೆ. ಇನ್ನೂ ಮುಂದೆ ಹೋಗಿ ಮಾದಿಗರು ಬೌದ್ಧ ದರ್ಶನಕ್ಕೆ ಕೊಡುಗೆ ನೀಡಿರುವ ಬಗ್ಗೆ ಸಾಕ್ಷಿ ನುಡಿಯುತ್ತಿದೆ.

ಇನ್ನೊಂದು ನಿದರ್ಶನ ’ಕುಮಾರ ಪನ್ಹ’. ಇದು ಬೌದ್ಧ ಅರಹಂತನಾದ ಅಸ್ಪೃಶ್ಯ ಜಾತಿಗೆ ಸೇರಿದ್ದ ’ಸೋಪಾಕ’ ಎಂಬ ಬಾಲಕ ಬೌದ್ಧ ತಾತ್ವಿಕತೆಯನ್ನು ಒಂದು, ಎರಡು, ಮೂರು.. ಎಂದು ವಿವರಿಸುವ ಬಹಳ ಮಹತ್ವವಾದ ಸುತ್ತ. ಸ್ವತಃ ಬುದ್ಧಗುರು ಯಾವುದು ಒಂದು? ಯಾವುದು ಎರಡು? ಹೀಗೆ ಹತ್ತರವರೆಗೂ ಪ್ರಶ್ನೆಗಳನ್ನು ಕೇಳಿದಾಗ ಕುಮಾರ ಸೋಪಕ ಉತ್ತರಿಸುವ ಈ ಭಾಗ ನಿಜಕ್ಕೂ ಅದ್ಭುತವಾಗಿದೆ. ಇಡೀ ಬೌದ್ಧ ತಾತ್ವಿಕತೆಯನ್ನು ಹತ್ತು ವಾಕ್ಯಗಳಲ್ಲಿ ಅಸ್ಪೃಶ್ಯನಾಗಿದ್ದ ಸೋಪಕ ಕಟ್ಟಿಕೊಡುವುದು ವಿಸ್ಮಯ ಮೂಡಿಸುತ್ತದೆ. ಬುದ್ಧಗುರುವಿನ ಕಾಲಕ್ಕೆ ಚರ್ಮಗಾರರು ಹಾಗೂ ಊರು ಸ್ವಚ್ಚಗೊಳಿಸುವವರು ಇನ್ನೂ ಶೂದ್ರರಲ್ಲಿನ ಅಂತ್ಯಜರಾಗಿದ್ದು ಬೌದ್ಧ ದರ್ಶನಕ್ಕೆ ಅವರು ನೀಡಿರಬಹುದಾದ ಕೊಡುಗೆಯನ್ನು ಇದು ತಿಳಿಸುತ್ತದೆ. ಮತ್ತೊಂದು, ಬೌದ್ಧ ಸಾಹಿತ್ಯದಲ್ಲಿ ಅರಸನನ್ನು ’ಭಾಗದುಗ’ ಅಂದರೆ ಉತ್ಪಾದನೆಯ ಭಾಗವನ್ನು ಕಸಿಯುವವನು ಎಂದಿರುವುದು. ಎಮ್ಮೆ ಕಾಯುವ ಯುವಕ ’ನಂದ’ ಬೌದ್ಧ ಸಂಘಕ್ಕೆ ಸೇರಿಸಿಕೊಳ್ಳಲು ಕೇಳಿಕೊಂಡಾಗ ಸ್ವತಃ ಬುದ್ಧ ’ಎಮ್ಮೆಗಳನ್ನು ಕೊಟ್ಟಿಗೆಗೆ ಹಿಂದಿರುಗಿಸಿ ಒಡೆಯನ ಅಪ್ಪಣೆಯನ್ನು ಪಡೆದು ಬಾ’ ಎನ್ನುತ್ತಾರೆ. ಇವೆರಡೂ ಅಂದಿನ ಶೂದ್ರ ಸಮಾಜವನ್ನು ಪರಿಚಯಿಸುವುದರ ಜೊತೆಗೆ ಸ್ವತಃ ಬುದ್ಧನಿಗೂ ಇದ್ದ ಒತ್ತಡವನ್ನು ತಿಳಿಸುತ್ತದೆ. ’ಒಡೆಯನ ಅಪ್ಪಣೆ’ ಎನ್ನುವುದು ಸಮಾಜದ ಕೆಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬುದ್ಧಗುರು ಗಟ್ಟಿಯಾಗಿ ಮಾತನಾಡಬೇಕಾದಷ್ಟು ಮಾತಾಡಲು ಆಗಲಿಲ್ಲವೇನೋ ಎಂಬುದನ್ನೂ ತಿಳಿಸುತ್ತದೆ.

ಲೇಖಕರು ಸಾಮ್ರಾಟ್ ಅಶೋಕ ತನ್ನಿಬ್ಬರು ಮಕ್ಕಳ ಸಮೇತ ಹನ್ನೆರಡು ಭಿಕ್ಕುಗಳನ್ನು ಒಂಬತ್ತು ಪ್ರದೇಶಗಳಿಗೆ ಧಮ್ಮ ಪ್ರಸಾರಕ್ಕಾಗಿ ಕಳುಹಿಸಿದ ಮಹತ್ವದ ಮಾಹಿತಿಯನ್ನು ಲೇಖಕರು ಹಂಚಿಕೊಂಡಿದ್ದಾರೆ. ಅವುಗಳು 1. ಕಾಶ್ಮೀರ – ಗಾಂಧಾರ 2. ಮಹಿಷಮಂಡಲ (ಮೈಸೂರು) 3. ಬನವಾಸಿ 4. ಅಪರಾಂತಕ (ಗುಜರಾತ್, ಕಚ್ ಮತ್ತು ಸಿಂದ್ ಪ್ರಾಂತ್ಯಗಳು) 5. ಮಹಾರಾಷ್ಟ್ರ 6. ಯೋನ (ಗ್ರೀಸ್) 7. ಹಿಮಾಲಯ (ಟಿಬೆಟ್) 8. ಸುವರ್ಣಭೂಮಿ (ಮ್ಯಾನ್ಮಾರ್ ಮತ್ತು ಥೈಲ್ಯಾಂಡ್) 9. ಶ್ರೀಲಂಕಾ. ಕ್ರಿ.ಪೂ 3ನೇ ಶತಮಾನದಲ್ಲಿಯೇ ಕರ್ನಾಟಕದ ಎರಡು ಪ್ರಸಿದ್ಧ ಸ್ಥಳಗಳಿಗೆ ಅಶೋಕನು ಬೌದ್ಧ ಧಮ್ಮವನ್ನು ಪರಿಚಯಿಸಿದ್ದಾನೆ ಎನ್ನುವ ಮಾಹಿತಿ ಸರ್ವವಿಧಿತವಾಗಿದೆ. ಇದರ ಬಗ್ಗೆ ಡಾ. ತಾಳ್ತಜೆ ವಸಂತಕುಮಾರ ಅವರೂ ಸಹ ತಮ್ಮ ’ಬೌದ್ಧಾಯನ’ ಕೃತಿಯಲ್ಲಿ ತಮ್ಮ ಸಾಕಷ್ಟು ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ. 1986ರಲ್ಲಿಯೇ ಗುಲ್ಬರ್ಗಾದ ಸನ್ನತಿಯಲ್ಲಿ ಅಶೋಕನ ಮೂರ್ತಿಯನ್ನು ಹೊಂದಿದ್ದ ವಿಹಾರ ಪತ್ತೆಯಾಗಿದೆ. ಮಸ್ಕಿ, ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ನಿಟ್ಟೂರು, ಉಡೆಗೊಳ, ಪಾಲ್ಕಿ ಗುಂಡು, ಗವಿಸಿದ್ಧೇಶ್ವರ ಮಠ ಮುಂತಾದ ಕಡೆಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಆದಾಗ್ಯೂ ಕರ್ನಾಟಕದಲ್ಲಿ ಬೌದ್ಧ ಇತಿಹಾಸದ ಕಡೆ ಬೆಳಕು ಚೆಲ್ಲುವ ಗಂಭೀರ ಪ್ರಯತ್ನವನ್ನು ಯಾವುದೇ ಸರ್ಕಾರ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇದರ ಬಗ್ಗೆ ಮೂಡ್ನಾಕೂಡುರವರು ಕೃತಿಗಳು ಮತ್ತಷ್ಟು ಬೆಳಕು ಚೆಲ್ಲಬಹುದಾಗಿದೆ.

ಬೌದ್ಧರಲ್ಲಿ ಬುದ್ಧ ಪೂರ್ಣಿಮೆಯನ್ನು ಬಿಟ್ಟರೆ ಬೇರೆ ಆಚರಣೆಗಳೇ ಇಲ್ಲವೆಂದು ನಂಬಲಾಗಿದೆ. ಆದರೆ ’ಬುದ್ಧಾನುಸಾಸನಂ’ ಬೌದ್ಧರ ಎರಡು ಮಹತ್ವವಾದ ಆಚರಣೆಗಳನ್ನು ವಿವರಿಸುತ್ತದೆ. ವರ್ಷದ ಕೊನೆಯ ಹುಣ್ಣಿಮೆಯಲ್ಲಿ ರಾತ್ರಿಯಿಡೀ ಜನಸಾಮಾನ್ಯರು ಒಂದೆಡೆ ಹಬ್ಬದಂತೆ ಸೇರಿ ಸ್ವತಃ ಕೈಯಾರೆ ತಯಾರಿಸಿದ ಚೀವರಗಳನ್ನು ಬೌದ್ಧ ಭಿಕ್ಕುಗಳಿಗೆ ದಾನ ನೀಡುವ ’ಕಠಿಣ ಚೀವರ ದಾನ’. ಮತ್ತೊಂದು ಯಾಜಮಾನ್ಯ ಸಂಸ್ಕೃತಿ ತನ್ನದೆಂದು ಬಿಂಬಿಸಿಕೊಂಡಿರುವ ’ಗುರುಪೂರ್ಣಿಮೆ’. ಆಷಾಢ ಹುಣ್ಣಿಮೆಯ ದಿನದಂದು ಬೌದ್ಧ ಪರಂಪರೆಯಲ್ಲಿ ಬುದ್ಧಗುರು ಮೊದಲ ’ಧಮ್ಮಚಕ್ಕಪವತ್ತನ’ ನೀಡಿದ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತಿತ್ತು. ಈಗ ಈ ಆಚರಣೆ ಇದೆಯಾದರೂ ಬೌದ್ಧ ಪರಂಪರೆಯ ಕೊಡುಗೆಯನ್ನೇ ಮರೆಸುವಷ್ಟು ಪ್ರತ್ಯೇಕಗೊಂಡಿದೆ. ಅದೇನೇ ಇದ್ದರೂ ಬೌದ್ಧರೂ ಸೇರಿದಂತೆ ಮನುಜಪರರೆಲ್ಲರೂ ’ಗುರುವಿನ ಗೆಳೆಯರಾಗುವ ತನಕ ದೊರೆಯದಣ್ಣ ಮುಕ್ತಿ’ ಎನ್ನುತ್ತಾ ಗುರುವಿನ ಗುಲಾಮರಾಗದೇ ಈ ಎರಡು ಆಚರಣೆಗಳನ್ನು ಮುಂದುವರೆಸುವುದು ನಿಜಕ್ಕೂ ಬುದ್ಧಗುರುವಿಗೆ ಸಲ್ಲಿಸಬಹುದಾದ ಗೌರವವಾಗಿದೆ. ಜೊತೆಗೆ ಪ್ರಜ್ಞೆ, ಕರುಣಾ ಮತ್ತು ಮೈತ್ರಿಯನ್ನು ಆಚರಣೆಗೆ ತಂದಂತಾಗುತ್ತದೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಹೀಗೆ ’ಬುದ್ಧಾನುಸಾಸನಂ’ ಹಳೆಯ ಬೇರಿನೊಂದಿಗೆ ಹೊಸ ಚಿಗುರನ್ನೂ ಪರಿಚಯಿಸುತ್ತ ಓದುಗರನ್ನು ವಿಸ್ಮಯಗೊಳಿಸುತ್ತದೆ. ಇಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ಕೊಟ್ಟಿದ್ದಕ್ಕೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರಿಗೆ ಧನ್ಯವಾದಗಳು.

ಕಡೆಯದಾಗಿ, ಧರ್ಮವೆಂಬುದು ಇನ್ನಿತರ ಧರ್ಮಗಳನ್ನು ವಿರೋಧಿಸಿ ಬೆಳೆಯುತ್ತದೆ ಎಂಬ ಕ್ರೌರ್ಯವನ್ನು ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕರೇ ತಿಳಿಸುವ ಜೆನ್ ಕತೆಯೊಂದಿಗೆ ಈ ಬರೆಹವನ್ನು ಮುಗಿಸುತ್ತೇನೆ.

ಪ್ರಾಚೀನ ಜಪಾನ್ ದೇಶದಲ್ಲಿ ಬಿದಿರು ಮತ್ತು ಕಾಗದದಿಂದ ಮಾಡಿದ ಲಾಟೀನುಗಳನ್ನು ಉಪಯೋಗಿಸುತ್ತಿದ್ದರು. ಒಳಗೆ ಉರಿಯುವ ದೀಪವಿದ್ದಿತು. ಕುರುಡನೊಬ್ಬ ಒಂದು ರಾತ್ರಿ ತನ್ನ ಸ್ನೇಹಿತನನ್ನು ನೋಡಲು ಹೊರಡಲನುವಾದಾಗ ಅವನಿಗೆ ಒಂದು ಲಾಟೀನು ತೆಗೆದುಕೊಂಡು ಹೋಗುವಂತೆ ಜೊತೆಯಲಿದ್ದ ಸ್ನೇಹಿತ ಹೇಳಿದ.

’ನನಗೆ ಲಾಟೀನಿನ ಅಗತ್ಯವಿಲ್ಲ; ಬೆಳಕು ಮತ್ತು ಕತ್ತಲೆ ಎರಡೂ ನನಗೆ ಒಂದೆ’ ಎಂದ ಕುರುಡ.

’ನಿನ್ನ ದಾರಿಯನ್ನು ಕ್ರಮಿಸಲು ಲಾಟೀನಿನ ಅವಶ್ಯಕತೆ ಇಲ್ಲ ಎಂದು ನನಗೆ ಗೊತ್ತು. ಅದಿಲ್ಲದಿದ್ದರೆ ಯಾರಾದರೂ ಎದುರಿನಿಂದ ಬಂದು ನಿನ್ನ ಮೇಲೆ ಬೀಳಬಹುದು. ಅದಕ್ಕಾಗಿ ನೀನು ಲಾಟೀನು ಹಿಡಿದುಕೊಂಡು ಹೋಗುವುದು ಒಳಿತು’ ಎಂದ ಗೆಳೆಯ.

ಕುರುಡ ಲಾಟೀನು ಹಿಡಿದು ಹೊರಟ, ಅನತಿ ದೂರದಲ್ಲಿಯೇ ಅಪರಿಚಿತನೊಬ್ಬ ಇವನ ಮೇಲೆ ಬಂದು ಎಡವಿದ. ನೋಡಿಕೊಂಡು ಹೋಗಬಾರದೆ, ಲಾಟೀನು ಕಾಣಿಸುವುದಿಲ್ಲವೆ ನಿನಗೆ ಎಂದು ಅಪರಿಚಿತನಿಗೆ ಗದರಿದ.

’ನಿನ್ನ ಲಾಟೀನಿನ ದೀಪ ಆರಿಹೋಗಿದೆ ಸೋದರ!’ ಅಪರಿಚಿತನೆಂದ.

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನರೇಗಾ ಹೆಸರು ಬದಲಾವಣೆಯು ರಾಜ್ಯಗಳ ಸ್ವಾಯತ್ತತೆ, ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರ ದಾಳಿ: ರಾಹುಲ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಹೆಸರು ಬದಲಾವಣೆಯು ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ...

‘2025ರಲ್ಲಿ ಗಾಜಾ ಪತ್ರಕರ್ತರಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಯಿತು’: ಪ್ಯಾಲೆಸ್ಟೀನಿಯನ್ ಪತ್ರಕರ್ತರ ಒಕ್ಕೂಟ

ಪ್ಯಾಲೆಸ್ಟೀನಿಯನ್ ಪತ್ರಕರ್ತರ ವಿರುದ್ಧ ಇಸ್ರೇಲ್‌ನ ವ್ಯವಸ್ಥಿತ ಹಿಂಸಾಚಾರ ಅಭಿಯಾನವು ಅಕ್ಟೋಬರ್ 2023 ರಿಂದ ನಡೆಯುತ್ತಿದೆ, ಇದು 2025 ರಲ್ಲಿ ಅತ್ಯಂತ ಮಾರಕ ಸ್ಥಿತಿಗೆ ತಲುಪಿತು. ಡಜನ್‌ಗಟ್ಟಲೆ ಮಾಧ್ಯಮ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ದಾಳಿ...

ಗಡಿ ಘರ್ಷಣೆ ಕೊನೆಗೊಳಿಸಿದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ: ತಕ್ಷಣದ ಕದನ ವಿರಾಮಕ್ಕೆ ಎರಡು ದೇಶಗಳ ಒಪ್ಪಿಗೆ

ಥೈಲ್ಯಾಂಡ್ ಮತ್ತು ಕಾಂಬೋಡಿಯಾಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ, ಇದು ಇತ್ತೀಚಿನ ಗಡಿ ಘರ್ಷಣೆಗಳ ನಂತರದ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.  ಶನಿವಾರ ಎರಡೂ ದೇಶಗಳ ರಕ್ಷಣಾ ಸಚಿವರು ಸಹಿ ಮಾಡಿದ...

‘ಬಡವರ ಹೊಟ್ಟೆಗೆ ಒದ್ದ ನಂತರ, ಮೋದಿ ಸರ್ಕಾರ ಅವರ ಬೆನ್ನಿಗೆ ಚೂರಿ ಹಾಕಿದೆ’: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಯುಪಿಎಯ ದೂರದೃಷ್ಟಿಯ ಕಾರ್ಯಕ್ರಮವಾದ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸುವ ಮೂಲಕ ಅವರು "ಬಡವರ ಹೊಟ್ಟೆಗೆ...

ಕರ್ನಾಟಕದ ವಿಚಾರದಲ್ಲಿ ಪಿಣರಾಯಿ ವಿಜಯನ್ ಹಸ್ತಕ್ಷೇಪ ಮಾಡಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

"ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದಲ್ಲಿ ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು...

ಮಧ್ಯಪ್ರದೇಶ| ಬಿಜೆಪಿ ನಾಯಕಿ ಮಗನ ಮೇಲೆ ಅತ್ಯಾಚಾರ ಆರೋಪ; ವಿಷ ಸೇವಿಸಿದ ಸಂತ್ರಸ್ತೆ ಸ್ಥಿತಿ ಗಂಭೀರ

ಮಧ್ಯಪ್ರದೇಶದ ಶಿವಪುರಿ ನಗರ ಸಭೆಯ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಗಾಯತ್ರಿ ಶರ್ಮಾ ಅವರ ಪುತ್ರ ರಜತ್ ಶರ್ಮಾ ವಿರುದ್ಧ ಏಪ್ರಿಲ್ 30 ರಂದು ಎಫ್‌ಐಆರ್ ದಾಖಲಿಸಿದ್ದ ಮಹಿಳೆಯ ಆರೋಗ್ಯ ಹದಗೆಟ್ಟ ನಂತರ...

ದೆಹಲಿಯಲ್ಲಿ ಹೊಸ ವರ್ಷಕ್ಕೂ ಮುನ್ನ ಬೃಹತ್ ಕಾರ್ಯಾಚರಣೆ: 285 ಜನರ ಬಂಧನ, ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳ ವಶ

ದೆಹಲಿ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದ್ದಂತೆ, ಹಬ್ಬದ ದಟ್ಟಣೆಯಲ್ಲಿ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ, ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ರಾತ್ರಿಯಿಡೀ ವಿಸ್ತೃತ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೂರಾರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ...

ಅತ್ಯಾಚಾರಿ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತು; ದೆಹಲಿ ಹೈಕೋರ್ಟ್ ಮುಂದೆ ಸಂತ್ರಸ್ತೆ ತಾಯಿ ಪ್ರತಿಭಟನೆ

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಹೊರಗೆ ಶುಕ್ರವಾರ (ಡಿ.26) ಪ್ರತಿಭಟನೆ ನಡೆಸಲಾಯಿತು. ಸೆಂಗಾರ್‌ಗೆ ನಿಡುರವ ಜಾಮೀನು ತಿರಸ್ಕರಿಸಬೇಕೆಂದು...

‘ಉತ್ತರ ಪ್ರದೇಶದ ಗಾಳಿ ಕರ್ನಾಟಕಕ್ಕೂ ಬೀಸಿದೆ, ಬುಲ್ಡೋಜರ್ ನೀತಿ ಇಲ್ಲೂ ಜಾರಿ ಮಾಡುವ ಕೆಲಸ ನಡೆಯುತ್ತಿದೆ: ಪಿಣರಾಯಿ ವಿಜಯನ್ ಟೀಕೆ

ಬೆಂಗಳೂರು: ಕರ್ನಾಟಕ ಸರ್ಕಾರಕ್ಕೂ ಉತ್ತರ ಪ್ರದೇಶ ಸರ್ಕಾರದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದ ಕಾಂಗ್ರೆಸ್​​​ ಸರ್ಕಾರದ ವಿರುದ್ಧ...

ಡೆಹ್ರಾಡೂನ್‌ನಲ್ಲಿ ಜನಾಂಗೀಯ ದಾಳಿ; ಚಾಕು ಇರಿತಕ್ಕೆ ಒಳಗಾಗಿದ್ದ ತ್ರಿಪುರ ವಿದ್ಯಾರ್ಥಿ ಸಾವು

ಜನಾಂಗೀಯ ನಿಂದನೆಯಿಂದ ಪ್ರಾರಂಭವಾಯಿತು ಎನ್ನಲಾದ ಜಗಳವು ಹಿಂಸಾತ್ಮಕ ಪ್ರತಿಭಟನೆಗೆ ತಿರುಗಿದ್ದು, ಚಾಕು ಇರಿತದ ನಂತರ ತ್ರಿಪುರದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಾಖಂಡ್ ಆಸ್ಪತ್ರೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದ...