Homeಅಂಕಣಗಳುದಲಿತ್ ಪ್ಯಾಂಥರ್ಸ್ ಐವತ್ತರ ನೆನಪು; ಹಲ್ಲೆ-ದೌರ್ಜನ್ಯಕ್ಕೆ ವಿರುದ್ಧವಾಗಿ ಬೆಳೆದ ಶಕ್ತಿಯ ಕನವರಿಕೆ

ದಲಿತ್ ಪ್ಯಾಂಥರ್ಸ್ ಐವತ್ತರ ನೆನಪು; ಹಲ್ಲೆ-ದೌರ್ಜನ್ಯಕ್ಕೆ ವಿರುದ್ಧವಾಗಿ ಬೆಳೆದ ಶಕ್ತಿಯ ಕನವರಿಕೆ

- Advertisement -
- Advertisement -

2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ದಲಿತ ಕುಟುಂಬದ ಇಬ್ಬರು ಹೆಣ್ಣು ಮಕ್ಕಳನ್ನು ಹಾಡಹಗಲೇ ವಿಕೃತವಾಗಿ ಅತ್ಯಾಚಾರಗೈದು ಕೊಂದುಹಾಕಿದಾಗ ಮಹಾರಾಷ್ಟ್ರದ ದಲಿತರ ಮನದಲ್ಲಿ ಸಿಡಿದ ಏಕೈಕ ಹೆಸರು ’ದಲಿತ್ ಪ್ಯಾಂಥರ್‍ಸ್’. ಉತ್ತರಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಂದುಹಾಕಿದರು. ಅಲ್ಲಿನ ಸರ್ಕಾರ ಕುಟುಂಬಕ್ಕೂ ಆ ಯುವತಿಯ ಶವ ಒಪ್ಪಿಸದೆ ಪೊಲೀಸರ ಕೈಯ್ಯಲ್ಲಿಯೇ ಮಧ್ಯರಾತ್ರಿಯಲ್ಲಿ ಸುಟ್ಟು ಹಾಕಿಸಿದಾಗಲೂ ದಲಿತರ ನಾಲಿಗೆಯ ಮೇಲೆ ಹರಿದಾಡಿದ ಹೆಸರು ’ದಲಿತ್ ಪ್ಯಾಂಥರ್‍ಸ್’. ದಲಿತರಿಗೆ ನ್ಯಾಯ, ಭದ್ರತೆ ಒದಗಿಸಲು ಶಾಸಕಾಂಗ, ನ್ಯಾಯಾಂಗ, ಪೊಲೀಸ್ ವ್ಯವಸ್ಥೆಗಳಿಂದ ಸಾಧ್ಯವಾಗದಿದ್ದಾಗ ’ದಲಿತ್ ಪ್ಯಾಂಥರ್‍ಸ್’ನಂತಹ ಕ್ರಾಂತಿಕಾರಿ ಸಂಘಟನೆಯನ್ನು ದುಃಖತಪ್ತ ಹಾಗೂ ಕೆಂಪುಗಂಗಳ ದಲಿತರು ಬಯಸುವುದು ಅನಿವಾರ್ಯವಾಗಿದೆ. ದೌರ್ಜನ್ಯಕೋರರ ವಿರುದ್ಧ ತಿರುಗಿಬಿದ್ದ ಈ ಸಂಘಟನೆಗೆ, ಮೇ 29, 2022ಕ್ಕೆ 50 ವರ್ಷದ ನೆನಪು.

ಸ್ವತಂತ್ರ ಭಾರತದ 1980ರ ದಶಕವು ಐತಿಹಾಸಿಕ ಘಟ್ಟವಾಗಿದೆ. ಹಲವು ಜನಪರ ಚಳವಳಿಗಳು ರೂಪು ತಳೆದದ್ದು ಆಗಲೇ. ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಹುಟ್ಟೂ ಸೇರಿದಂತೆ ಹಲವು ಶೋಷಿತ ಸಮುದಾಯಗಳು ಬಂಡಾಯವೆದ್ದ ದಶಕ ಇದಾಗಿದೆ. ಮಹಾರಾಷ್ಟ್ರದಲ್ಲಿ ದಲಿತರ ವಿರುದ್ಧವಾಗಿ ನಡೆಯುತ್ತಿದ್ದ ದೌರ್ಜನ್ಯಗಳನ್ನು ತಡೆಗಟ್ಟಲು 29 ಮೇ 1972ರಲ್ಲಿ ’ದಲಿತ್ ಪ್ಯಾಂಥರ್‍ಸ್’ ಸಂಘಟನೆಯನ್ನು ಅಲ್ಲಿನ ದಲಿತ ಯುವಜನತೆ ಸ್ಥಾಪಿಸಿತು. ಈ ಸಂಘಟನೆಯ ಆಯಸ್ಸು ಐದೇ ವರ್ಷಗಳಾದರೂ ಅದು ಉಂಟುಮಾಡಿದ ಸಂಚಲನ ಅಗಾಧವಾದದ್ದಾಗಿದೆ. ಆ ಸಂಘಟನೆ ಕಣ್ಮುಚ್ಚಿ 45 ವರ್ಷಗಳಾದ ನಂತರವೂ ನೊಂದ ದಲಿತರು ಅದರ ಹೆಸರನ್ನು ಮೆಲುಕು ಹಾಕುತ್ತಿರುವುದೇ ಅದಕ್ಕೆ ಸಾಕ್ಷಿ.

1970ರ ದಶಕದಲ್ಲಿ ಆಧುನಿಕ ಶಿಕ್ಷಣದ ಪ್ರಭಾವದಿಂದಾಗಿ ವಿದ್ಯಾವಂತರಾದ ದಲಿತರು ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಸಹಿಸದಾದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದಲಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ಪ್ರಶ್ನಿಸಲು ಆರಂಭಿಸಿದರು. ದಲಿತರ ಈ ಪ್ರಶ್ನಿಸುವಿಕೆಯೇ ಹಿಂದೂ ಮೇಲ್ಜಾತಿಗಳಲ್ಲಿ ಅಸಹನೆ ಮೂಡಿಸಿತು. ಸತ್ತ ಪ್ರಾಣಿಗಳ ಕಳೇಬರವನ್ನು ಎತ್ತಲು, ಶವ ಹೂಳಲು, ಮೇಲ್ಜಾತಿ ಶವಗಳ ಮುಂದೆ ತಮಟೆ ಬಾರಿಸಲು ದಲಿತ ವಿದ್ಯಾವಂತರು ಖಡಾಖಂಡಿತವಾಗಿ ಒಪ್ಪದಿದ್ದಾಗ ಮೇಲ್ಜಾತಿ ಪಟ್ಟಭದ್ರರು ದಲಿತರ ಮೇಲೆ ದೈಹಿಕ ಹಲ್ಲೆ ಮಾಡಿದರು. ಇಂತಹ ಪರಿಸ್ಥಿತಿಯಲ್ಲಿಯೇ ’ದಲಿತ್ ಪ್ಯಾಂಥರ್‍ಸ್’ ಸ್ಥಾಪನೆಯಾದದ್ದು. ಇದರ ಸ್ಥಾಪನೆಗೆ ಮತ್ತೊಂದು ಕಾರಣವೂ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಬ್ಬಾಣದ ನಂತರ ಅವರು ಕನಸಿದ ’ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಎಂದಿನಂತೆ ನಾಯಕರ ಒಣಪ್ರತಿಷ್ಠೆಗೆ ಬಲಿಯಾಗಿಹೋಯಿತು. ಯಾವ ಶಕ್ತಿಗಳ ವಿರುದ್ಧ ಹೋರಾಡಿ ನಿಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆಂದು ಅಂಬೇಡ್ಕರ್ ಬಯಸಿದ್ದರೋ ಅಂತಹವರೊಂದಿಗೆ ಕೈ ಜೋಡಿಸಿದ ’ಆರ್‌ಪಿಐ’ನ ದಲಿತ ನಾಯಕರು ಅವಕಾಶವಾದಿಗಳಾದರು. ಈ ಎರಡೂ ಕಾರಣಗಳಿಗಾಗಿ ’ದಲಿತ ಪ್ಯಾಂಥರ್ಸ್’ ಜೀವ ತಳೆಯಿತು.

1970ರಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ’ಇಳಯಪೆರುಮಾಳ್ ಸಮಿತಿ’ ಸಮೀಕ್ಷೆ ನಡೆಸಿ ಸಂಸತ್ತಿಗೆ ವರದಿ ನೀಡಿತು. ಆ ವರದಿ ಅಕ್ಷರಶಃ ದಲಿತರನ್ನು ದಂಗುಬಡಿಸಿತ್ತು. ಒಂದೇ ವರ್ಷದಲ್ಲಿ ದಲಿತರ ಮೇಲೆ 11,000 ದೌರ್ಜನ್ಯಗಳು ನಡೆದಿದ್ದವು. ಅದರಲ್ಲಿ 1,177 ದಲಿತರ ಕೊಲೆಗಳೂ ಸೇರಿದ್ದವು. ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ನಗ್ನಗೊಳಿಸಿ ಮೆರವಣಿಗೆ ಮಾಡಿದ್ದು, ಅಪಹರಣ ಮುಂತಾದ ಅಮಾನವೀಯ ಕ್ರೌರ್ಯವನ್ನು ಕಂಡು ದಲಿತ ಯುವಜನರು ಕುದ್ದುಹೋದರು. ಇದನ್ನು ಖಂಡಿಸಲೆಂದೇ ಮಹಾರಾಷ್ಟ್ರದ ಕೆಲವು ದಲಿತ ಯುವಕರು ಸಭೆ ಸೇರಿದರು. ಆ ಸಭೆಯಲ್ಲಿ ಒಂದು ನಿರ್ಣಯವನ್ನೂ ಮಾಡಿದರು. ಅದು ಹೀಗಿತ್ತು:
’ಸರ್ಕಾರವೇನಾದರೂ ದಲಿತರ ಮೇಲಿನ ಅನ್ಯಾಯ ಮತ್ತು ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿಫಲವಾದರೆ, ಸ್ವತಃ ನಾವೇ ಕಾನೂನನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು. ಈ ಸಭೆಯಲ್ಲಿದ್ದ ಪ್ರಮುಖರು ರಾಜಾ ಧಲೆ, ನಾಮದೇವ್ ಡಸಾಳ್, ಅರ್ಜುನ್ ಡಾಂಗ್ಲೆ, ಜೆ.ವಿ.ಪವಾರ್ ಇತರ 12 ದಲಿತ ಯುವ ಲೇಖಕರು.

’ದಲಿತ್ ಪ್ಯಾಂಥರ್‍ಸ್’ ಸ್ಥಾಪನೆಗಿದ್ದ ತಕ್ಷಣದ ಕಾರಣಗಳು 1970ರಿಂದ 1972ರ ನಡುವೆ ನಡೆದ ದಲಿತರ ಮೇಲಿನ ದೌರ್ಜನ್ಯಗಳು. 1972ರಲ್ಲಿ ಬವಡಾ ಹಳ್ಳಿಯ ದಲಿತರನ್ನು ಬಹಿಷ್ಕರಿಸಿದ್ದು ಹಾಗೂ ಬ್ರಾಹ್ಮಣಗಾವ್‌ನಲ್ಲಿ ಇಬ್ಬರು ದಲಿತ ಮಹಿಳೆಯರು ಮೇಲ್ಜಾತಿ ಬಾವಿಯ ನೀರು ಮುಟ್ಟಿದ್ದಕ್ಕೆ ನಗ್ನಗೊಳಿಸಿ ಮೆರವಣಿಗೆ ಮಾಡಿದ್ದು ದಲಿತ ಯುವಜನತೆಯನ್ನು ಬಡಿದೆಬ್ಬಿಸಿದ್ದವು. ’ದಲಿತ್ ಪ್ಯಾಂಥರ್‍ಸ್’ ಸಂಘಟನೆಯ ಹಿಂದಿನ ಪ್ರೇರಣೆ ಅಮೆರಿಕದ ’ಬ್ಲ್ಯಾಕ್ ಪ್ಯಾಂಥರ್‍ಸ್’ ಚಳವಳಿಯೇ ಆಗಿತ್ತು. ಅಮೆರಿಕದ ಬಿಳಿಯರ ದಬ್ಬಾಳಿಕೆಯ ವಿರುದ್ಧ ಕ್ರಾಂತಿಕಾರಿಯಾಗಿ ಸಿಡಿದೆದ್ದ ಆಫ್ರಿಕನ್-ಅಮೆರಿಕನ್ ವಿದ್ಯಾವಂತರು ’ಬ್ಲ್ಯಾಕ್ ಪ್ಯಾಂಥರ್‍ಸ್’ ಚಳವಳಿಯನ್ನು ಆರಂಭಿಸಿ ’ಉಳ್ಳವರು ಕಿತ್ತುಕೊಂಡಿರುವ ನಮ್ಮ ಹಕ್ಕುಗಳನ್ನು ಮತ್ತೆ ಮರಳಿ ಪಡೆಯಬೇಕೆಂದು’ ಜಗತ್ತಿಗೆ ಸಾರಿದ್ದರು. ’ನಮ್ಮದು ಹಿಂಸೆಯಲ್ಲ ಕೇವಲ ಸ್ವರಕ್ಷಣೆ. ಸ್ವರಕ್ಷಣೆ ಹಿಂಸೆಯಲ್ಲ ಎಂದು ವಾದಿಸಿದ್ದರು. ಈ ಸಂಘಟನೆಯ ಪ್ರಭಾವ ಮಹಾರಾಷ್ಟ್ರದ ’ದಲಿತ್ ಪ್ಯಾಂಥರ್‍ಸ್’ ಮೇಲಾಗಿತ್ತು.

1972ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ದೇಶಾದ್ಯಂತ ಕರೆ ಕೊಟ್ಟಿದ್ದರು. ಇದರ ವಿರುದ್ಧ ಫ್ಯಾಂಥರ್‍ಸ್‌ನ ರಾಜಾ ಧಲೆ ’ಕರಾಳ ಸ್ವಾತಂತ್ರ್ಯ ದಿನಾಚರಣೆ’ ಎಂಬ ಶೀರ್ಷಿಕೆಯಲ್ಲಿ ಮರಾಠಿ ಪತ್ರಿಕೆ ಸಾಧನಾದಲ್ಲಿ ಬರೆದಾಗ ಇಡೀ ಮಹಾರಾಷ್ಟ್ರದ ರಾಜಕೀಯದಲ್ಲಿ ಅದು ಬಹುಚರ್ಚಿತ ವಿಷಯವಾಯಿತು. ರಾಜಾ ಧಲೆ ಆ ಲೇಖನದಲ್ಲಿ, ’ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದರೆ ಹೆಚ್ಚು ಶಿಕ್ಷೆ ನೀಡಲಾಗುತ್ತದೆ ಆದರೆ ದಲಿತ ಮಹಿಳೆಯರ ಬಟ್ಟೆ ಬಿಚ್ಚಿ ನಗ್ನಗೊಳಿಸಿ ಮೆರವಣಿಗೆ ಮಾಡಿದರೆ ಕಡಿಮೆ ಶಿಕ್ಷೆಯಾಗುತ್ತದೆ’ ಎಂದು ಮಾರ್ಮಿಕವಾಗಿ ಸರ್ಕಾರವನ್ನು ಪ್ರಶ್ನಿಸಿದ್ದು ವಿವಾದಕ್ಕೀಡು ಮಾಡಿತ್ತು. ಇದು ವಿಧಾನಸಭೆಯಲ್ಲಿ ಚರ್ಚೆಯಾಯಿತು. ಈ ಲೇಖನವನ್ನು ಪ್ರಕಟಿಸಿದ ಸಾಧನಾ ಪತ್ರಿಕೆಯ ಮುಂದೆ ಅಂದಿನ ಕಾಂಗ್ರೆಸ್ ಸರ್ಕಾರದ ಹಾಗೂ ಶಿವಸೇನೆಯ ಕಾರ್ಯಕರ್ತರು ಪ್ರತಿಭಟಿಸುತ್ತಾ ಆ ಪತ್ರಿಕೆಯನ್ನು ಸುಟ್ಟುಹಾಕಬೇಕೆಂದು ಆಗ್ರಹಿಸುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿ ಜಮಾವಣೆಯಾದ ಪ್ಯಾಂಥರ್‍ಸ್ ಕಾರ್ಯಕರ್ತರು ಪತ್ರಿಕೆಯನ್ನು ಯಾವುದೇ ಕಾರಣಕ್ಕೂ ಸುಡಬಾರದು ಎಂದು ಪ್ರತಿಭಟಿಸುತ್ತಿದ್ದರು. ಈ ಪ್ರತಿಭಟನೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಎರಡೂ ಗುಂಪುಗಳ ನಡುವೆ ಮಾರಾಮಾರಿ ಹೊಡೆದಾಟವಾಯಿತು. ಕಾಂಗ್ರೆಸ್ ಹಾಗೂ ಶಿವಸೇನೆ ಕಾರ್ಯಕರ್ತರು ಹೆದರಿ ಓಡಿಹೋಗಬೇಕಾಯಿತು. ಇಲ್ಲಿಂದ ದಲಿತರ ನಡುವೆ ಧೈರ್ಯ ಸ್ಥಾಪಿತವಾಗಿ ಹಾಗೂ ದಲಿತೇತರರ ನಡುವೆ ಭಯ ನೆಲೆಗೊಂಡು ಪ್ಯಾಂಥರ್‍ಸ್ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿತು.

ಆರಂಭದಲ್ಲಿ ’ದಲಿತ್ ಪ್ಯಾಂಥರ್‍ಸ್’ ಮುಂದೆ ಎರಡು ಸವಾಲಿಗಳಿದ್ದವು. ಒಂದು ದಲಿತರೊಳಗಿನ ಅವಕಾಶವಾದಿಗಳನ್ನು ಎದುರಿಸುವುದು ಹಾಗೂ ದಲಿತೇತರ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧ ಹೋರಾಡುವುದು. ಈ ಸವಾಲನ್ನು ಮೊದಲ ಐದು ವರ್ಷಗಳವರೆಗೆ ಸಮರ್ಥವಾಗಿ ನಿಭಾಯಿಸಿತು. ಆಶ್ಚರ್ಯವೆಂದರೆ ದಲಿತ್ ಪ್ಯಾಂಥರ್‍ಸ್ ನಾಯಕರು ಮೊದಲ ಬಾರಿಗೆ ಜೈಲು ಸೇರಿದ್ದು ಅಂಬೇಡ್ಕರ್ ಕನಸಿದ ಆರ್‌ಪಿಐ ಪಕ್ಷ ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಲು ಮುಂದಾದಾಗ. ಅಲ್ಲಿಂದ ಸತತ ಐದು ವರ್ಷಗಳ ಕಾಲ ಪ್ಯಾಂಥರ್‍ಸ್ ಹಿಂದಿರುಗಿ ನೋಡಲಿಲ್ಲ. ಮನುಸ್ಮೃತಿಯ ಶವ ಮೆರವಣಿಗೆ ಮಾಡಿದರು. ಸರ್ಕಾರ ದಲಿತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಲ್ಲಿ ಸಫಲವಾಗದಿದ್ದರೆ ’ದಲಿತಸ್ತಾನ’ (ದಲಿತರಿಗೆ ಪ್ರತ್ಯೇಕ ದೇಶ ಎಂಬ ಕೂಗು) ನಿಜವಾಗಬಹುದೆಂದು ಎಚ್ಚರಿಸಿದರು. ಜಾತಿವಾದವನ್ನು ಎತ್ತಿ ಹಿಡಿಯುವ
ಗ್ರಂಥಗಳನ್ನು ಸುಟ್ಟುಹಾಕಿದರು. ಮಹಾರ್ ಸೈನಿಕರು ಪೇಶ್ವೆಗಳ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ನೆನಪಿನ ಭೀಮಾ ಕೊರೆಗಾಂವ್ ಸ್ತಂಭ – ಇವೆಲ್ಲವೂ ದೇಶಾದ್ಯಂತ ಮನೆಮಾತಾಗಲು ಮುಖ್ಯ ಕಾರಣವಾದರು. 1973ರಲ್ಲಿ ಚುನಾವಣೆಯನ್ನೇ ಬಹಿಷ್ಕರಿಸಲು ಕರೆ ನೀಡಿದರು. ಪ್ಯಾಂಥರ್‍ಸ್ ಪ್ರಭಾವವನ್ನು ತಿಳಿಯಲು ಒಂದೆರಡು ಹೋರಾಟಗಳನ್ನು ನೋಡಬಹುದು.

ಡಿಸೆಂಬರ್ ತಿಂಗಳ 1972ರಂದು ಪುಣೆ ಜಿಲ್ಲೆಯಲ್ಲಿ ದಲಿತ ಮಹಿಳೆಯನ್ನು ಮೇಲ್ಜಾತಿ ಯುವಕರು ಅತ್ಯಾಚಾರಗೈದು ಕೊಂದುಹಾಕಿದ್ದರು. ಇದನ್ನು ಖಂಡಿಸಿ ಆ ಹಳ್ಳಿಗೆ ನೂರಕ್ಕೂ ಹೆಚ್ಚು ದಲಿತ್ ಪ್ಯಾಂಥರ್‍ಸ್ ಸಂಘಟನೆಯ ಕಾರ್ಯಕರ್ತರು ಭೇಟಿ ನೀಡಿದಾಗ ಅಲ್ಲಿ ಗ್ರಾಮಪಂಚಾಯಿತಿಯ ಸದಸ್ಯರು ಹಾಗೂ ಮೇಲ್ಜಾತಿ ಮುಖಂಡರು ಅವರ ಬಳಿ ಬಂದು ತಾವೂ ಈ ಕೃತ್ಯವನ್ನು ಖಂಡಿಸುವುದಾಗಿ ಹೇಳಿದರು; ಜೊತೆಗೆ ಆ ಅತ್ಯಾಚಾರಿಗಳು ಎಲ್ಲಿ ಅವಿತುಕೊಂಡಿದ್ದಾರೆ ಎಂದು ತಿಳಿಸುವುದಾಗಿ ಬೇಡಿಕೊಂಡಿದ್ದರು. ಹೀಗೆ ಅದೆಲ್ಲಿಯೇ ದೌರ್ಜನ್ಯಗಳಾದರೂ ಪ್ಯಾಂಥರ್‍ಸ್ ಅಲ್ಲಿಗೆ ಭೇಟಿ ನೀಡಿದರೆ ಸಾಕು ದೌರ್ಜನ್ಯಕೋರರ ಹೃದಯಬಡಿತ ಹೆಚ್ಚಾಗುತ್ತಿತ್ತು.

1973ರಲ್ಲಿ ಜಗನ್ನಾಥ ಪೀಠದ ಶಂಕರಾಚಾರ್ಯ ನಿರಂಜನಾತೀರ್ಥ ’ಚಮ್ಮಾರನೊಬ್ಬ ಶಿಕ್ಷಣ ಪಡೆದರೂ ಸಹ ಅವನು ಅಸ್ಪೃಶ್ಯನಾಗಿಯೇ ಉಳಿಯುತ್ತಾನೆ’ ಎಂಬ ಹೇಳಿಕೆ ನೀಡಿದ್ದನು. ಈ ನಿರಂಜನಾತೀರ್ಥ ಕೊಲ್ಲಾಪುರದ ರಸ್ತೆಯ ಮೂಲಕ ಮೆರವಣಿಗೆ ಹೋಗುತ್ತಿದ್ದಾಗ ಆತನ ಮೇಲೆ ಪ್ಯಾಂಥರ್ಸ್ ಕಾರ್ಯಕರ್ತರು ಚಪ್ಪಲಿಗಳನ್ನು ತೂರಿ ಪ್ರತಿಭಟಿಸಿದ್ದರು. ಸಾಂಗ್ಲಿಯ ದೇವಸ್ತಾನದಲ್ಲಿ ಪ್ರವಚನ ನೀಡಲು ಬಂದಾಗ ಕಪ್ಪು ಬಾವುಟ ಪ್ರದರ್ಶಿಸಿ ’ಶಂಕರಾಚಾರ್ಯ ನೀನು ಶೋಷಕಾಚಾರ್ಯ’ ಎಂದು ಘೋಷಣೆ ಕೂಗಿ ಬೆಚ್ಚಿಬೀಳಿಸಿದ್ದರು.

1972ರಿಂದ 1977ರವರೆಗೆ ಮುಂಬೈ ನಗರದಾದ್ಯಂತ ’ಪ್ಯಾಂಥರ್‍ಸ್ ವರ್ಸಸ್ ಶಿವಸೇನೆ’ ಎಂದಾಗಿತ್ತು. ಇದೇ ಶಿವಸೇನೆಯ ನೇತಾರನಾಗಿದ್ದ ಬಾಳಾ ಠಾಕ್ರೆ ಹಿಂದೊಮ್ಮೆ ಮರಾಠರು, ಮುಸ್ಲಿಮರು ಮತ್ತು ಮಹಾರರು ಈ ಮೂರು ’ಎಂ’ಗಳ ಪ್ರಾಬಲ್ಯವನ್ನು ಸೇನೆ ವಿರೋಧಿಸುತ್ತದೆ ಎಂದು ಹೇಳಿದ್ದ. ಅದಷ್ಟೇ ಅಲ್ಲದೆ ಈ ಶಿವಸೇನೆಯೆಂಬ ಫ್ಯಾಸಿಸ್ಟ್ ಸಂಘಟನೆ ದಲಿತ ಪ್ಯಾಂಥರ್ಸ್ ಜೊತೆಗೆ ಹಲವಾರು ಬಾರಿ ಗಲಾಟೆ ಮಾಡಿಕೊಂಡಿದೆ. ಬಾಳಾ ಠಾಕ್ರೆ ಶಿವಸೇನೆಯನ್ನು ಹುಟ್ಟುಹಾಕಿದ್ದೇ ದಲಿತ್ ಪ್ಯಾಂಥರ್ಸ್ ವಿರುದ್ಧವಾಗಿ ದಲಿತರನ್ನು ಹಿಂಸಿಸಲೆಂದೆ! ಅದಕ್ಕೆ ಸಾಂಕೇತಿಕವಾಗಿ ಅದರ ಚಿಹ್ನೆ ’ಹುಲಿ’ಯನ್ನು ಪ್ಯಾಂಥರ್ಸ್ ಚಿಹ್ನೆ ’ಚಿರತೆ’ಗೆ ವಿರುದ್ಧವಾಗಿ ಇಟ್ಟುಕೊಂಡದ್ದು. ಶಿವಸೇನೆ ಬಲಪಂಥವನ್ನು ಪ್ರತಿನಿಧಿಸಿದರೆ ಪ್ಯಾಂಥರ್‍ಸ್ ಅಂಬೇಡ್ಕರ್ ಸಿದ್ಧಾಂತವನ್ನು ಅನುಸರಿಸುತ್ತಿತ್ತು. ಶಿವಸೇನೆಯಂತಹ ಸಂಘಟನೆ ಪ್ಯಾಂಥರ್‍ಸ್ ವಿರುದ್ಧ ಹುಟ್ಟಿಕೊಳ್ಳುತ್ತದೆ ಎಂದರೆ ಪ್ಯಾಂಥರ್‍ಸ್ ಹಿಂದೂ ಮೇಲ್ಜಾತಿಗಳಲ್ಲಿ ಹುಟ್ಟುಹಾಕಿದ್ದ ಆತಂಕವನ್ನು ಅರ್ಥಮಾಡಿಕೊಳ್ಳಿ.

1973ರಲ್ಲಿ ಘೋಷಣೆಯಾದ ’ದಲಿತ್ ಪ್ಯಾಂಥರ್ಸ್’ ಪ್ರಣಾಳಿಕೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅದರಲ್ಲಿ ’ದಲಿತರೆಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು, ನವ ಬೌದ್ಧರು, ದುಡಿಯುವ ಜನರು, ಭೂರಹಿತ ಹಾಗೂ ಕೂಲಿ ಕಾರ್ಮಿಕರು, ಮಹಿಳೆಯರು ಹಾಗೂ ರಾಜಕೀಯವಾಗಿ, ಆರ್ಥಿಕವಾಗಿ ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾಗಿರುವ ಸಮಸ್ತ ಜನತೆ’ ಎಂದು ವ್ಯಾಖ್ಯಾನಿಸಿತ್ತು. ಈ ಮೂಲಕ ದಲಿತ್ ಪ್ಯಾಂಥರ್‍ಸ್ ದೇಶದ ಸಮಸ್ತ ಶೋಷಿತರ ಪ್ರತಿನಿಧಿಯೆಂದು ಸಾರಿತ್ತು. ಅಂಬೇಡ್ಕರ್ ಮತ್ತು ಜ್ಯೋತಿಬಾಫುಲೆಯವರೇ ನಮ್ಮ ಅಗ್ರಗಣ್ಯ ನಾಯಕರೆಂದು ಹೇಳಿತ್ತು. ನಮ್ಮ ಸ್ನೇಹಿತರು ಯಾರು ಎಂದು ಗುರುತಿಸಿಕೊಂಡಿದ್ದ ಪ್ಯಾಂಥರ್‍ಸ್ ’ಜಾತಿ ಪದ್ಧತಿ ಮತ್ತು ವರ್ಗ ವ್ಯವಸ್ಥೆಯ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆ. ನಿಜಾರ್ಥದಲ್ಲಿ ಎಡಪಂಥೀಯರಾಗಿರುವವರು. ರಾಜಕೀಯ ಹಾಗೂ ಆರ್ಥಿಕವಾಗಿ ಶೋಷಣೆಗೊಳಗಾಗಿರುವ ಸಮಾಜದ ಎಲ್ಲಾ ಜನವಿಭಾಗಗಳನ್ನು ಸ್ನೇಹಿತರೆಂದು’ ಗುರುತಿಸಿಕೊಂಡಿತ್ತು. ಹಾಗೆಯೇ ಶತ್ರುಗಳನ್ನಾಗಿ ’ಅಧಿಕಾರ, ಸಂಪತ್ತು, ದೌಲತ್ತು, ಭೂಮಾಲೀಕರು, ಬಂಡವಾಳಶಾಹಿಗಳು, ಲೇವಾದೇವಿಗಾರರು ಹಾಗೂ ಅವರ ಗುಲಾಮರು. ಧರ್ಮ ಮತ್ತು ಜಾತಿರಾಜಕಾರಣ ಮಾಡುವವರು ಹಾಗೂ ಇವರ ಮೇಲೆ ಅವಲಂಬಿತವಾಗಿರುವ ಸರ್ಕಾರ ನಮ್ಮ ಶತ್ರುಗಳು’ ಎಂದು ಘೋಷಿಸಿಕೊಂಡಿತ್ತು. ತನ್ನ ಕಾರ್ಯಸೂಚಿಯಲ್ಲಿ ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶವನ್ನು ಕೇಳಿತ್ತಾದರೂ ದೇಗುಲ ಪ್ರವೇಶದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಪ್ಯಾಂಥರ್‍ಸ್
ಪ್ರಮುಖ ಹೋರಾಟ ಭೂಹೋರಾಟ ಹಾಗೂ ದಲಿತರ ಮೇಲಿನ ದೌರ್ಜನ್ಯದ ವಿರುದ್ಧವಾಗಿತ್ತು.
ಜೊತೆಗೆ ಜಾತಿಯನ್ನು ಎತ್ತಿಹಿಡಿಯುವ ಎಲ್ಲಾ ಸಾಹಿತ್ಯವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿತ್ತು. ಸಮಾಜವಾದವನ್ನು ಬಯಸುತ್ತಿದ್ದ ಪ್ಯಾಂಥರ್‍ಸ್ ಖಾಸಗೀಕರಣ ಹಾಗೂ ಬಂಡವಾಳಶಾಹಿಯನ್ನು ಬುಡಮೇಲು ಕಿತ್ತುಹಾಕಬೇಕೆಂದು, ಬ್ರಾಹ್ಮಣ್ಯವನ್ನು ಧಿಕ್ಕರಿಸಬೇಕೆಂದು ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

1977ರ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯಿಂದಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎದ್ದಿತ್ತು. ಜನತಾ ಪಕ್ಷದೊಂದಿಗೆ ಇತರೆ ಪಕ್ಷಗಳೂ ಕೈಜೋಡಿಸಿ ಚುನಾವಣೆ ಎದುರಿಸುವುದಾಗಿ ನಿರ್ಣಯಿಸಿದವು. ಆ ಭಾಗವಾಗಿಯೇ, ಸದಾ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಹಿಂದೂ ಮೇಲ್ಜಾತಿ ರಾಜಕಾರಣವನ್ನು ಪ್ರಶ್ನಿಸುತ್ತಲೇ ಬಂದಿದ್ದ ಪ್ಯಾಂಥರ್ಸ್‌ನ ರಾಜಾ ಧಲೆಯವರಿಗೂ ನಾಂದೇಡ್ ಜಿಲ್ಲೆಯಿಂದ ಟಿಕೆಟ್ ನೀಡುವುದಾಗಿ ಜನತಾ ಪಕ್ಷ ಹೇಳಿತು. ಜೆ.ವಿ.ಪವಾರ್ ಅವರನ್ನು ಮಂತ್ರಿ ಮಾಡುವುದಾಗಿಯೂ ಆಶ್ವಾಸನೆ ನೀಡಿತು. ಆದರೆ ಇಬ್ಬರೂ ಜನತಾ ಪಕ್ಷದ ಆಹ್ವಾನವನ್ನು ನಿರಾಕರಿಸಿ ಅಂಬೇಡ್ಕರ್ ಅವರ ಮಗ ಬಯ್ಯಾಸಾಹೇಬ್ ಅಂಬೇಡ್ಕರ್ (ಯಶವಂತ ಭೀಮ್ ರಾವ್ ಅಂಬೇಡ್ಕರ್) ಅವರ ಬೆಂಬಲಕ್ಕೆ ನಿಂತರು. ಆದರೆ ನಾಮದೇವ ಡಸಾಳ ಕಾಂಗ್ರೆಸ್ ಜೊತೆ ಗುರುತಿಸಿಕೊಂಡರು. (ಮುಂದೆ ಶಿವಸೇನೆಯೊಂದಿಗೂ ಗುರುತಿಸಿಕೊಂಡರು). ಭಾಯಿ ಸಂಗಾರೆ ಮತ್ತು ಅವಿನಾಶ್ ಮಹತೇಕರ್ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡರು. ಕಳೆದ ಐದು ವರ್ಷಗಳ ಕಾಲ ಸತತವಾಗಿ ಮಹಾರಾಷ್ಟ್ರದ ಶೋಷಕ ಹಿಂದೂ ಮೇಲ್ಜಾತಿಗಳ ಬೆವರಿಳಿಸಿದ್ದ ದಲಿತ ಪ್ಯಾಂಥರ್ಸ್‌ನ ಮುಂಚೂಣಿ ನಾಯಕರೇ ಅದೇ ಮೇಲ್ಜಾತಿಗಳ ರಾಜಕೀಯದ ಆಟಕ್ಕೆ ಬಲಿಯಾಗಿಹೋದರು. ಈ ಬೆಳವಣಿಗೆಯಿಂದ ಯಶವಂತರಾವ್ ಅಂಬೇಡ್ಕರರನ್ನು ಬೆಂಬಲಿಸುತ್ತಿದ್ದ ರಾಜಾ ಧಲೆ, ಉಮಾಕಾಂತ್ ರಣಧೀರ್ ಮತ್ತು ಜೆ.ವಿ.ಪವಾರ್ ಮಾರ್ಚ್ 7, 1977ರಂದು ಪತ್ರಿಕೆಗಳಿಗೆ ’ದಲಿತ್ ಪ್ಯಾಂಥರ್ಸ್’ ಸಂಘಟನೆಯನ್ನು ವಿಸರ್ಜಿಸಲಾಗಿದೆ ಎಂದು ಹೇಳಿಕೆ ನೀಡಿ ಐದು ವರ್ಷಗಳ ಹೋರಾಟಕ್ಕೆ ತೆರೆ ಎಳೆದರು.

ಹೀಗೆ ಇಂದಿಗೂ ದಲಿತ್ ಪ್ಯಾಂಥರ್‍ಸ್ ಸೃಷ್ಟಿಸಿದ ಪ್ರತಿರೋಧದ ದನಿಗಳು ನೆಲದ ಮೇಲೆ ಬೀಜವಾಗಿ ಬಿದ್ದಿವೆ. ಅದಕ್ಕೆ ನೀರುಣಿಸುವವರಿಗಾಗಿ ಕಾಯುತ್ತಿದೆ. ಭಾರತದ ದಲಿತರ ಪರಿಸ್ಥಿತಿ 70ರ ದಶಕಕ್ಕಿಂತಲೂ ಭೀಕರವಾಗಿದೆ. ದಲಿತರೊಳಗಿನ ಅವಕಾಶವಾದಿಗಳು ಹಾಗೂ ದಲಿತೇತರರ ನಡುವಿನ ಬೇಟೆಗಾರರ ನಡುವೆ ಅಸಹಾಯಕ ಜೀವಗಳ ಕನವರಿಕೆ ಗುಟುಕು ಜೀವ ಹಿಡಿದು ಕಾಯಬಲ್ಲದೆ ಅಥವಾ ನಾಯಕ/ನಾಯಕಿಯರಿಗಾಗಿ ಕಾಯದೇ ತನ್ನೊಡಲೊಳಗಿಂದಲೇ ಶೋಷಣೆಯ ವಿರುದ್ಧದ ದನಿ ಆಸ್ಪೋಟಿಸಬಹುದೇ?

ವಿಕಾಸ್ ಆರ್ ಮೌರ್‍ಯ

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ.


ಇದನ್ನೂ ಓದಿ: `ಕಾಶ್ಮೀರ್‌ ಫೈಲ್ಸ್‌‌’ ಎಂದು ಕೂಗುತ್ತಿರುವವರಿಗೆ ‘ದಲಿತ್‌ ಫೈಲ್ಸ್‌‌’ ಕಾಣುವುದಿಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...