Homeದಲಿತ್ ಫೈಲ್ಸ್`ಕಾಶ್ಮೀರ್‌ ಫೈಲ್ಸ್‌‌’ ಎಂದು ಕೂಗುತ್ತಿರುವವರಿಗೆ ‘ದಲಿತ್‌ ಫೈಲ್ಸ್‌‌’ ಕಾಣುವುದಿಲ್ಲವೇ?

`ಕಾಶ್ಮೀರ್‌ ಫೈಲ್ಸ್‌‌’ ಎಂದು ಕೂಗುತ್ತಿರುವವರಿಗೆ ‘ದಲಿತ್‌ ಫೈಲ್ಸ್‌‌’ ಕಾಣುವುದಿಲ್ಲವೇ?

2021ರಲ್ಲಿ ಆರ್‌ಟಿಐ ಮಾಹಿತಿಯ ಪ್ರಕಾರ, "1990ರಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ 1,724 ಜನರನ್ನು ಜಮ್ಮು ಕಾಶ್ಮೀರದಲ್ಲಿ ಕೊಲ್ಲಲಾಗಿದೆ. ಅದರಲ್ಲಿ 89 ಕಾಶ್ಮೀರಿ ಪಂಡಿತರು ಸೇರಿದ್ದಾರೆ. ಅವರನ್ನು ಹೊರತುಪಡಿಸಿ, ಇದೇ ಅವಧಿಯಲ್ಲಿ 1,635 ಇತರ ಧರ್ಮದ ಜನರೂ ಕೊಲೆಯಾಗಿದ್ದಾರೆ..." (ವಿವರಗಳಿಗೆ ಮುಂದೆ ಓದಿ...)

- Advertisement -
- Advertisement -

ಭಾರತಕ್ಕೆ ಒಂದು ರೀತಿಯ ವಿಸ್ಮೃತಿ ಆವರಿಸಿದೆ. ಇಲ್ಲಿ ನಿತ್ಯ ಸಾಯುವ ಬಡಪಾಯಿಗಳನ್ನು ಕಂಡು ಮರುಗದ ಮನಸ್ಸುಗಳು ಯಥಾಸ್ಥಿತಿಯನ್ನು ಒಪ್ಪಿಕೊಂಡು ಬದುಕುತ್ತಿವೆ. ದಲಿತ, ಆದಿವಾಸಿ, ಮುಸ್ಲಿಂ ಬಡಪಾಯಿಗಳು ಬೀದಿ ಹೆಣವಾದರೂ ಅವರ ಕಡತಗಳು ಕಣ್ಮರೆಯಾಗುವುದೇ ಹೆಚ್ಚು.

2006ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಖೈರ್ಲಾಂಜಿ ಹಳ್ಳಿಯಲ್ಲಿ ನಡೆದ ಭೀಕರ ಘಟನೆಯದು. ದಲಿತ ಕುಟುಂಬವೊಂದರ ನಾಲ್ಕು ಮಂದಿಯ ಮೇಲೆ ಅಮಾನುಷವಾಗಿ ಹಲ್ಲೆಯೆಸಗಿ ಅವರನ್ನು ಕೊಲೆ ಮಾಡಲಾಯಿತು. 45 ವರ್ಷದ ಸುರೇಖಾ ಭೋತ್‌ಮಾಂಗೆ, ಮಕ್ಕಳಾದ 21 ವರ್ಷದ ಸುಧೀರ್ ಭಯ್ಯಾಲಾಲ್ ಭೋತ್‌ಮಾಂಗೆ, 19 ವರ್ಷದ ರೋಶನ್ ಭಯ್ಯಾಲಾಲ್ ಭೋತ್‌ಮಾಂಗೆ ಹಾಗೂ ಮಗಳು 17 ವರ್ಷದ ಪ್ರಿಯಾಂಕಾ ಭಯ್ಯಾಲಾಲ್ ಭೋತ್‌ಮಾಂಗೆ ಭೀಕರವಾಗಿ ಕೊಲೆಯಾದರು.

ಈ ದಲಿತ ಕುಟುಂಬವನ್ನು ಗುಡಿಸಲಿನಿಂದ ಹೊರಗೆಳೆದು, ಬೆತ್ತಲೆ ಮಾಡಿ ಎತ್ತಿನ ಬಂಡಿಯೊಂದರ ಮೇಲೆ ಕಟ್ಟಿಹಾಕಿ ಊರೆಲ್ಲಾ ಮೆರವಣಿಗೆ ಮಾಡಲಾಯಿತು. ಚಿತ್ರಹಿಂಸೆ ಕೊಟ್ಟು, ಇಬ್ಬರು ಮಹಿಳೆಯರ ಮೇಲೂ ಅತ್ಯಾಚಾರ ಎಸಗಲಾಯಿತು. ನಾಲ್ಕೂ ಜನರ ಕೊಲೆ ಸರಣಿಯಂತೆ ನಡೆಯಿತು. ಮಹಿಳೆಯರನ್ನೂ ಒಳಗೊಂಡಂತೆ ಸುಮಾರು 70 ಮಂದಿಯಿದ್ದ ಬಲಿಷ್ಠ ಜಾತಿಯವರು ಈ ಕಗ್ಗೊಲೆಗಳಲ್ಲಿ ಪಾಲ್ಗೊಂಡರು. ಇಡೀ ಹಳ್ಳಿಯ ಕಣ್ಮುಂದೆ ಹಾಡಹಗಲೇ ನಡೆದ ಈ ಘೋರ ಪಾತಕದ ಬಳಿಕ ಮೃತದೇಹಗಳನ್ನು ಸಮೀಪದ ನಾಲೆಯಲ್ಲಿ ಎಸೆಯಲಾಯಿತು. ನಂತರ ಹಳ್ಳಿಯಲ್ಲಿ ಸಭೆ ನಡೆಸಿ, ಯಾರೂ ಈ ಪ್ರಕರಣದ ಬಗ್ಗೆ ಹೊರಗಿನ ಯಾರೊಂದಿಗೂ ಬಾಯಿ ಬಿಡಬಾರದೆಂದು ತಾಕೀತು ಮಾಡಲಾಯಿತು.

ಇದನ್ನೂ ಓದಿರಿ: ಅರಕಲಗೂಡು: ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಸವರ್ಣಿಯರಿಂದ ಹಲ್ಲೆ

‘ಕಾಶ್ಮೀರ್‌ ಫೈಲ್ಸ್‌’ ಎಂಬ ಸಿನಿಮಾ ಚರ್ಚೆಯ ಈ ಹೊತ್ತಿನಲ್ಲೇ ಮಾಯದ ಮತ್ತೊಂದು ಗಾಯಕ್ಕೆ 22 ವರ್ಷಗಳು ತುಂಬಿವೆ. ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ 22 ವರ್ಷಗಳ ಹಿಂದೆ ಯಾವುದೇ ತಪ್ಪು ಮಾಡದ, ಆದರೆ ಸ್ವಾಭಿಮಾನದಿಂದ ತಲೆ ಎತ್ತಿ ಬದುಕಲು ಯತ್ನಿಸಿದ 7 ಜನ ದಲಿತರನ್ನು ಸುಟ್ಟು ಹಾಕಲಾಗಿತ್ತು. ಶ್ರೀರಾಮಪ್ಪ(25), ಅಂಜನಪ್ಪ(27), ರಾಮಕ್ಕ(70), ಸುಬ್ಬಕ್ಕ(45) ಪಾಪಮ್ಮ(46), ನರಸಿಂಹಯ್ಯ(25), ಚಿಕ್ಕಪಾಪಣ್ಣ(40)] ಅವರನ್ನು ದಹಿಸಲಾಯಿತು. ದಲಿತರ ನರಮೇಧ ನಡೆಸಿ ಜಾತಿ ಕ್ರೌರ್ಯ ಮೆರೆದ ರೆಡ್ಡಿ ಒಕ್ಕಲಿಗ ಜಾತಿಯ 32 ಹಂತಕ ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯ ದೋಷಮುಕ್ತಗೊಳಿಸಿತು… ತದನಂತರ 2014ರ ಆಗಸ್ಟ್ 20ರಂದು ಹೈಕೋರ್ಟ್ ಸಹ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು… ಸುಪ್ರೀಂ ಮೆಟ್ಟಿಲೇರಿದ ಪ್ರಕರಣ ಕಡತಗಳಲ್ಲೇ ಕೊಳೆಯುತ್ತಿದೆ…

ಮೇಲಿನವು ಒಂದೆರಡು ದೃಷ್ಟಾಂತಗಳಷ್ಟೇ. ನಿತ್ಯವೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, 2011 ಮತ್ತು 2020ರ ನಡುವೆ ನಡೆದ ದಲಿತರ ಮೇಲಿನ ದೌರ್ಜನ್ಯಗಳ ಸಂಖ್ಯೆ 4,15,821. ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, 2011ರಲ್ಲಿ ದಲಿತರ ವಿರುದ್ಧ 33,719 ಅಪರಾಧ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ ಈ ಸಂಖ್ಯೆ 50,291ಕ್ಕೆ ಏರಿದೆ. ಅಂದರೆ ಒಂದು ದಶಕದ ಅವಧಿಯಲ್ಲಿ ದಲಿತರ ಮೇಲೆ ಹಲ್ಲೆಗಳು ಗಣನೀಯವಾಗಿ ಹೆಚ್ಚಾದವು. ಮುಖ್ಯವಾಗಿ ಕೇಸರಿ ಪಕ್ಷ ಆಡಳಿತವಿರುವಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ದ್ವಿಗುಣವಾಗುತ್ತಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ (95,751), ಬಿಹಾರ (63,116), ರಾಜಸ್ಥಾನ (58,945), ಮಧ್ಯಪ್ರದೇಶ (44,469) ಮತ್ತು ಆಂಧ್ರಪ್ರದೇಶ (26,881) ರಾಜ್ಯಗಳಲ್ಲಿ ದಾಖಲಾಗಿವೆ.

2008ರಲ್ಲಿ ’ಖೈರ್ಲಾಂಜಿ’ ಕೃತಿಯನ್ನು ಬರೆದ ಡಾ.ಆನಂದ್ ತೇ‌ಲ್‌ತುಂಬ್ಡೆಯವರು ಮುನ್ನಡಿಯಲ್ಲಿ ಹೀಗೆ ಬರೆಯುತ್ತಾರೆ: “ಎನ್‌ಸಿಆರ್‌ಬಿ ನೀಡಿರುವ ಅಂಕಿ-ಅಂಶಗಳ ಪ್ರಕಾರವೇ ಪ್ರತಿ ದಿನ ಮೂರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಇಬ್ಬರು ದಲಿತರನ್ನು ಕೊಲ್ಲಲಾಗುತ್ತದೆ, ದಲಿತರ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಈ ಎಲ್ಲಾ ಅಂಶಗಳು ವಾಸ್ತವಕ್ಕಿಂತ ಕಡಿಮೆ ಎನ್ನುವುದು ನಿರ್ವಿವಾದ. ಏಕೆಂದರೆ ದಲಿತರ ಮೇಲೆ ಸಂಭವಿಸುವ ಪ್ರತಿ ಐವತ್ತು ದೌರ್ಜನ್ಯಗಳಿಗೆ ಒಂದು ಕೂಡ ದಾಖಲಾಗುವುದು ಕಷ್ಟ. ಇದನ್ನೊಂದು ನೈಜ ಮಾನವೀಯ ದುರಂತವೆಂದು ಯಾರೂ ಪರಿಗಣಿಸುವುದಿಲ್ಲ”.

ಇದನ್ನೂ ಓದಿರಿ: ಕಂಬಾಲಪಲ್ಲಿ ದಲಿತರ ಹತ್ಯಾಕಾಂಡಕ್ಕೆ 22 ವರ್ಷ: ನ್ಯಾಯಕ್ಕಾಗಿ ಕಾಯುತ್ತಲೇ ಮೃತರಾದ ಸಂತ್ರಸ್ತರ ಸಂದರ್ಶನ

ಕಾಶ್ಮೀರಿ ಪಂಡಿತರ ವಲಸೆ ಆಧಾರಿಸಿ, 89 ಕಾಶ್ಮೀರಿ ಪಂಡಿತರು ಹತ್ಯೆಯಾಗಿದ್ದಾರೆಂಬ ಸಂಗತಿ ಆಧಾರದಲ್ಲಿ ನಿರ್ಮಾಣವಾಗಿರುವ ‘ಕಾಶ್ಮೀರ್‌ ಫೈಲ್ಸ್‌’ (ಕಾಶ್ಮೀರ್‌ ಕಡತಗಳು) ಸಿನಿಮಾಕ್ಕೆ ಭಾರೀ ಪ್ರಚಾರವನ್ನು ಸಂಘಪರಿವಾರ ನೀಡುತ್ತಿದೆ. ಕೇಸರಿ ಪಡೆಯನ್ನು ಮೆಚ್ಚಿಸಲು ಭಾರೀ ಕಸರತ್ತುಗಳನ್ನು ಮಾಡುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಈ ಸಿನಿಮಾಕ್ಕೆ ತೆರಿಗೆ ರಿಯಾಯಿತಿಯನ್ನೂ ಘೋಷಿಸಿಬಿಟ್ಟಿದ್ದಾರೆ. ಸಿನಿಮಾದಾಚೆಯ ವಾಸ್ತವಗಳನ್ನು ಮುಚ್ಚಿಟ್ಟು ಜನರಿಗೆ ಒಂದು ಮುಖವನ್ನು ತೋರಿಸುತ್ತಿದ್ದಾರೆ.

ಡಿಸೆಂಬರ್‌ 15, 2021ರಲ್ಲಿ ಪ್ರಕಟವಾಗಿರುವ ಸುದ್ದಿ ಇದು. ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಶ್ರೀನಗರ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯ ಡಿಎಸ್‌‌ಪಿ, “1990ರಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ 1,724 ಜನರನ್ನು ಕೊಲ್ಲಲಾಗಿದೆ. ಅದರಲ್ಲಿ 89 ಕಾಶ್ಮೀರಿ ಪಂಡಿತರು ಸೇರಿದ್ದಾರೆ. 89 ಕಾಶ್ಮೀರಿ ಪಂಡಿತರನ್ನು ಹೊರತುಪಡಿಸಿ, ಅದೇ ಅವಧಿಯಲ್ಲಿ 1,635 ಇತರ ಧರ್ಮದ ಜನರೂ ಕೊಲೆಯಾಗಿದ್ದಾರೆ” ಎಂದಿದ್ದರು.

ಹೀಗಾಗಿ ಕಾಶ್ಮೀರ್‌ ಫೈಲ್ಸ್‌‌ ಸಿನಿಮಾಕ್ಕೆ ಈ ಮಟ್ಟದ ಪ್ರಪೊಗಾಂಡ ಮಾಡುತ್ತಿರುವ ಹಿಂದಿನ ಪೊಳ್ಳುತನಗಳನ್ನು ಜನರು ಪ್ರಶ್ನಿಸುತ್ತಿದ್ದಾರೆ. “31 ವರ್ಷಗಳಲ್ಲಿ ಕಾಶ್ಮೀರದಲ್ಲಿ ಸತ್ತ ಕಾಶ್ಮೀರಿ ಪಂಡಿತರ ಸಂಖ್ಯೆ: 89. ಇದೇ 31 ವರ್ಷಗಳಲ್ಲಿ ಹತ್ಯೆಯಾದ ದಲಿತರ ಸಂಖ್ಯೆ 1368. ಇನ್ನು ಹಲ್ಲೆಗೊಳಗಾದ, ಅತ್ಯಾಚಾರ ಮಾಡಲ್ಪಟ್ಟವರ ವಾರ್ಷಿಕ ಸರಾಸರಿ 5646 ಅಂದರೆ, 31 ವರ್ಷಗಳಲ್ಲಿ 1,75,026 ಜನ ಇಲ್ಲಿನ ಜಾತೀವಾದಿಗಳಿಂದ ಹಿಂಸೆ ಅನುಭವಿಸಿದ್ದಾರೆ” ಎಂದು ಬರಹಗಾರ ವಿ.ಆರ್‌.ಕಾರ್ಪೆಂಟರ್‌ ಅವರು ಮಾಡಿರುವ ಪೋಸ್ಟ್‌ ಈಗ ವೈರಲ್‌ ಆಗಿದೆ.

ಇದನ್ನೂ ಓದಿರಿ: ಹರ್ಷನ ಜೀವಕ್ಕಿರುವ ಬೆಲೆ ದಲಿತ ವ್ಯಕ್ತಿ ದಿನೇಶನ ಜೀವಕ್ಕಿಲ್ಲವೇ?: ಸುನಿಲ್ ಬಜಿಲಕೇರಿ

ಇಂಡಿಯನ್‌ ಏರ್‌ಫೋರ್ಸ್‌ನ ಫೈಲಟ್ ಆಗಿದ್ದ ರಾಜೀವ್ ತ್ಯಾಗಿಯವರು ‘ಕಾಶ್ಮೀರ್‌ ಫೈಲ್ಸ್‌’ನ ಸುತ್ತ ಎದ್ದಿರುವ ಚರ್ಚೆಯ ಹಿನ್ನೆಲೆಯಲ್ಲಿ ಹೀಗೆ ಬರೆದಿದ್ದಾರೆ: “ದಿ ಕಾಶ್ಮೀರ್ ಫೈಲ್ಸ್ ಸಂಪೂರ್ಣವಾಗಿ ವಸ್ತುಸ್ಥಿತಿಯನ್ನು ತಿರುಚಿದೆ. ಮುಸ್ಲಿಮರ ವಿರುದ್ಧ ದ್ವೇಶ ಹರಡಲು ಸಂಘಪರಿವಾರ ಪ್ರಾಯೋಜಿಸಿರುವ ಹಸಿ ಸುಳ್ಳುಗಳ ಕಟ್ಟುಕತೆ ಇದಾಗಿದೆ. ಕಾಶ್ಮೀರಿ ಪಂಡಿತರ ವಲಸೆಗೆ ಕುಮ್ಮಕ್ಕು ನೀಡಿದ್ದು, ಅಂದಿನ ರಾಜ್ಯಪಾಲರಾದ ಜಗನ್ಮೋಹನ್. ವಾಜಪೇಯಿ ಮತ್ತು ಅಡ್ವಾಣಿ ಸೇರಿ ಅಂದಿನ ಜಮ್ಮು ಕಾಶ್ಮೀರಕ್ಕೆ ಜಗನ್ಮೋಹನ್‌ ಅವರನ್ನು ನೇಮಿಸಿದ್ದರು. ಆಗ ಅಧಿಕಾರದಲ್ಲಿದ್ದುದು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರಕಾರ. ಆರೆಸ್ಸೆಸ್ ಬೆಂಬಲಿಗರಾದ ಜಗನ್ಮೋಹನ್ ಹಿಂದೂಗಳಲ್ಲಿ ಭೀತಿ ಹುಟ್ಟಿಸಿದ್ದು, ದೊಡ್ಡ ಮಟ್ಟದ ಪಂಡಿತರ ವಲಸೆಗೆ ಕಾರಣವಾಯಿತು. ಈ ಕಾಶ್ಮೀರಿ ಪಂಡಿತರ ವಲಸೆಗೆ ಮೊದಲು ಉಗ್ರರು ಸುಮಾರು 15,000 ಕಾಶ್ಮೀರಿ ಮುಸ್ಲಿಮರನ್ನು ಕೊಂದಿದ್ದರು. ಹಾಗೆಯೇ 300ಕ್ಕೂ ಹೆಚ್ಚು ಹಿಂದೂಗಳು ಜಮ್ಮು ಕಾಶ್ಮೀರದಲ್ಲಿ ಕೊಲೆಯಾಗಿದ್ದರು. ಬಿಜೆಪಿ, ಆರ್‌ಎಸ್‌ಎಸ್‌ ಪ್ರಾಯೋಜಿತ ಸಿನಿಮಾವಿದು” ಎಂದಿದ್ದಾರೆ ತ್ಯಾಗಿ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ರಾಜಕೀಯ ವಿಶ್ಲೇಷಕರಾದ ಶಿವಸುಂದರ್‌, “ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕಾಶ್ಮೀರದ ಆಡಳಿತವನ್ನು ದಮನ ಮಾಡಿವೆ. ಆದರೆ ಕಾಶ್ಮೀರದ ಸಮಸ್ಯೆಯನ್ನು ಕೋಮುವಾದೀಕರಿಸಿದ್ದು ಬಿಜೆಪಿ. ಕಾಶ್ಮೀಯತ್‌ (ಕಾಶ್ಮೀರಿ ಅಸ್ಮಿತೆ) ಒಳಗೆ ಶೈವ, ಬೌದ್ಧ, ಇಸ್ಲಾಂ ಎಲ್ಲವೂ ಇವೆ. ದೆಹಲಿ ದಮನದ ವಿರುದ್ಧ ಬಂಡಾಯವೆದ್ದಾಗ ಜಮ್ಮು ಕಾಶ್ಮೀರ್‌ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್‌) ಹುಟ್ಟಿಕೊಂಡಿತು. ಜೆಕೆಎಲ್‌ಎಫ್‌ನ ಕಾರ್ಯದರ್ಶಿಯೊಬ್ಬರು ಪಂಡಿತ್‌ ಸಮುದಾಯಕ್ಕೆ ಸೇರಿದ್ದರು. 1987ರಿಂದ 1990ರವರೆಗೆ ದೆಹಲಿಯ ವಿರುದ್ಧ ಜಾತ್ಯತೀತವಾಗಿ ಹೋರಾಟ ನಡೆಯಿತು. ದಿಲ್ಲಿ ಆಡಳಿತ ಪ್ರಧಾನವಾಗಿ ಟಾರ್ಗೆಟ್ ಮಾಡಿದ್ದು ಮುಸ್ಲಿಮರನ್ನೇ. ಜಗಮೋಹನ್‌ ಅವರು ರಾಜ್ಯಪಾಲರಾಗಿ ಬಂದ ಮೇಲೆ ಇದನ್ನು ಸಂಪೂರ್ಣವಾಗಿ ಹಿಂದೂ ಮುಸ್ಲಿಂ ವಿವಾದವಾಗಿಸಿದರು. ಇದಾದ ಬಳಿಕ ಜೆಕೆಎಲ್‌ಎಫ್‌ ಹಿಂದೆ ಸರಿಯಿತು. ಹಿಜ್ಬುಲ್‌ ಮುಜಾಹಿದ್ದೀನ್‌, ಲಷ್ಕರ್‌-ಎ-ತೋಯ್ಬಾ, ಆಲ್‌ಖೈದಾ ಕೂಡ ಈ ವಿವಾದವನ್ನು ಬಳಸಿಕೊಂಡವು” ಎಂದು ವಿವರಿಸಿದರು.

“ಪಂಡಿತರ ಪ್ರಶ್ನೆಗೆ ಬರುವುದಾದರೆ, ಜಗನ್ಮೋಹನ್‌ ಅವರು ಒತ್ತಾಯಪೂರ್ವಕವಾಗಿ ಪಂಡಿತರನ್ನು ಹೊರಗಡೆ ಕಳುಹಿಸಿದರು. ಶೇ. 90ರಷ್ಟು ಪಂಡಿತರಿಗೆ ಹೊರಗಡೆ ಹೋಗಲು ಇಷ್ಟವಿರಲಿಲ್ಲ. ಆದರೆ ಅವರಲ್ಲಿ ಆತಂಕವನ್ನು ಹುಟ್ಟಿಹಾಕಲಾಯಿತು. ವಾಸ್ತವವಾಗಿ ನೋಡಿದರೆ ಒಂದು ಲಕ್ಷ ಜನ ಪಂಡಿತರಲ್ಲಿ ಹತ್ತರಿಂದ ಹದಿನೈದು ಜನರು ಕೊಲೆಯಾದರು. ಅದಕ್ಕಿಂತ ಹೆಚ್ಚು ಜನರು ಸತ್ತಿದ್ದು ಮುಸ್ಲಿಮರು. ಕೊಲೆ ಖಂಡನೀಯ. ಅದು ಬೇರೆ ಪ್ರಶ್ನೆ. ವಾಸ್ತವವಾಗಿ ಇಲ್ಲಿ ನಡೆದ ಕೊಲೆಗಳಲ್ಲಿ ದೆಹಲಿ ಪ್ರತಿನಿಧಿಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಜಾತಿ, ಧರ್ಮ ಕೇಂದ್ರಿತ ಕೊಲೆಗಳು ಇವಾಗಿರಲಿಲ್ಲ. ಇದೆಲ್ಲ ವಾಸ್ತವ. ಆದರೆ ಉನ್ಮಾದಲ್ಲಿರುವ ಜನರಿಗೆ ಸತ್ಯಗಳು ತಲೆಗೆ ಹೋಗುವುದಿಲ್ಲ” ಎಂದು ಶಿವಸುಂದರ್‌ ವಿಷಾದಿಸಿದರು.

“ಹಾಗೆ ನೋಡಿದರೆ ನೆಲ್ಲಿ ಫೈಲ್ಸ್‌ ಕೂಡ ಸಿನಿಮಾವಾಗಬೇಕು. 1983ರಲ್ಲಿ ಅಸ್ಸಾಂನ ನೆಲ್ಲಿ ಎಂಬ ಗ್ರಾಮದಲ್ಲಿ ರಾತ್ರೋ ರಾತ್ರಿ ಮೂರು ಸಾವಿರ ಬಂಗಾಲಿ ಭಾಷಿಗ ಮುಸ್ಲಿಮರನ್ನು ಕೊಂದು ಹಾಕಲಾಯಿತು. ಸಿಖ್‌ ಫೈಲ್ಸ್‌, ದೆಲ್ಲಿ ಫೈಲ್ಸ್‌ ಸಿನಿಮಾ ಆಗಬೇಕು. ಪತ್ರಕರ್ತೆ ರಾಣಾ ಅಯೂಬ್‌ ಗುಜರಾತ್‌ ಫೈಲ್ಸ್‌ ಎಂದು ಕೃತಿ ಬರೆದರು. ಅದಕ್ಕೆ ತದ್ವಿರುದ್ಧವಾಗಿ ಕಾಶ್ಮೀರ್‌ ಫೈಲ್ಸ್‌ ಮಾಡಿದ್ದಾರೆ. ಕಾಶ್ಮೀರಿ ಫೈಲ್ಸ್‌ ಒಂದು ಕಾಲ್ಪನಿಕ ಕಥೆಯೆಂದು ಸರ್ಕಾರ ಹೇಳುತ್ತಿಲ್ಲ. ಇದೊಂದು ಡಾಕ್ಯೂಮೆಂಟರಿಯೋ, ಕಾಲ್ಪನಿಕವೋ ಎಂಬುದನ್ನು ಮೊದಲು ಸರ್ಕಾರ ಸ್ಪಷ್ಟಪಡಿಸಬೇಕು. ಈ ಸಿನಿಮಾ ಕಾಲ್ಪನಿಕ ಎಂದು ಸರ್ಟಿಫಿಕೇಟ್‌ ಕೊಟ್ಟು, ನಿಜವಾದ ಘಟನೆ ಎಂದು ಹೊರಗಡೆ ಸರ್ಕಾರ ಪ್ರಚಾರ ಮಾಡುತ್ತಿದೆ” ಎಂದು ಟೀಕಿಸಿದರು.

ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಕೊಡುತ್ತಿರುವುದನ್ನು ಜನರು ಕಟುವಾಗಿ ಟೀಕಿಸುತ್ತಿದ್ದಾರೆ. “ನಾಗಪುರದ ತಲೆಗಳಿಗೆ ತಮ್ಮ ಅಜೆಂಡಾಗಳನ್ನು ಜಾರಿಮಾಡಲು ಬೊಮ್ಮಾಯಿಗಿಂತ ಒಳ್ಳೆಯ ಕ್ಯಾಂಡಿಡೇಟು ಸಿಗ್ತಾ ಇರಲಿಲ್ಲವೇನೋ? ಸ್ವತಃ ಆರ್ ಎಸ್ ಎಸ್ ಹಿನ್ನೆಲೆಯವರು ಇದ್ದಿದ್ದರೂ ಇಷ್ಟು ನಿರ್ಲಜ್ಜ ಕೋಮುವಾದಿ ಆಡಳಿತ ನೀಡುತ್ತಿರಲಿಲ್ಲವೇನೋ? ಬೊಮ್ಮಾಯಿ ಕರ್ನಾಟಕದ ಯೋಗಿ ಆಗಿ ಬದಲಾಗುತ್ತಿದ್ದಾರೆ” ಎಂದು ಚಿಂತಕ ಎಸ್‌.ಸಿ.ದಿನೇಶ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ ಪ್ರತಿಕ್ರಿಯಿಸಿ, “ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡಬಾರದು. ತೆರಿಗೆ ವಿನಾಯಿತಿ ಘೋಷಿಸಲು ಇದು ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿಯಲ್ಲ. ಸುಳ್ಳು ಮತ್ತು ಅತಿರಂಜಿತ ಕತೆಯನ್ನು ಭೀಭತ್ಸವಾಗಿ ತೋರಿಸಿ ಜನರ ಮಧ್ಯೆ ಅಪನಂಬಿಕೆ ಹುಟ್ಟು ಹಾಕುವ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಎಂದರೆ ಕನ್ನಡಿಗರ ತೆರಿಗೆ ಹಣಕ್ಕೆ ದೋಖಾ ಬಗೆಯುವುದು ಎಂದರ್ಥ” ಎಂದು ಎಚ್ಚರಿಸಿದ್ದಾರೆ.

ಲೇಖನದ ಆರಂಭದಲ್ಲಿ ಕೇಳಿದ ಪ್ರಶ್ನೆಗೆ ಮತ್ತೆ ಮರಳುವುದಾದರೆ, ನಿತ್ಯ ಆಗುವ ದಲಿತರ, ಆದಿವಾಸಿಗಳ, ಮುಸ್ಲಿಮರ ಹತ್ಯೆಗಳ ಕಡತಗಳು ನಾಗರಿಕ ಸಮಾಜವನ್ನು ಕಾಡಬಹುದೆ? ಭಾರತ ಕಂಡಿರುವ ಭೀಕರ ನರಮೇಧಗಳ ‘ಕಡತಗಳು’ ನಮ್ಮನ್ನು ಎ‌ಚ್ಚರಿಸಬಹುದೇ?


ಇವುಗಳನ್ನು ಓದಿರಿ: ದಲಿತರ ಮೇಲಾಗಿರುವ ಸಾಲು ಸಾಲು ದೌರ್ಜನ್ಯಗಳ ವರದಿಗಳನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಏನಪ್ಪಾ ನಾನು ಗೌರಿಯಲ್ಲಿ ಇನ್ನೂ ಏನು ಬಂದಿಲ್ಲವಲ್ಲ ಎಂದು ಕಾಯುತ್ತಿದ್ದೆ,ಈಗ ಬಂದಿತು,ಇದೆ ರೀತಿಯ ಲೇಖನ ಬರಬಹುದು ಎಂಬ ಊಹೆ ನಿಜವಾಯಿತು,

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...