Homeಕರ್ನಾಟಕಕರ್ನಾಟಕ ಬಜೆಟ್ 2022-23: ಆತಂಕಕಾರಿ ಹಣಕಾಸು ಭವಿಷ್ಯ

ಕರ್ನಾಟಕ ಬಜೆಟ್ 2022-23: ಆತಂಕಕಾರಿ ಹಣಕಾಸು ಭವಿಷ್ಯ

- Advertisement -
- Advertisement -

ಮಾರ್ಚ್ 04ರಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಅವರು ಕರ್ನಾಟಕದ 2022-23ನೆಯ ಸಾಲಿನ ಬಜೆಟ್ಟನ್ನು ವಿಧಾನಮಂಡಲದಲ್ಲಿ ಮಂಡಿಸಿದ್ದಾರೆ. ಮುಖ್ಯಮಂತ್ರಿಯವರೇನೋ ಅತ್ಯಂತ ಆಶಾದಾಯಕವಾಗಿ ಬಜೆಟ್ಟಿನ ಬಗ್ಗೆ ಮಾತನಾಡಿದ್ದಾರೆ. ’ಆರ್ಥಿಕತೆಯು ಪುನಶ್ಚೇತನದ ದಾರಿಯಲ್ಲಿ ಮುನ್ನಡೆದಿದೆ’ ಎಂದು ಹೇಳಿದ್ದಾರೆ. ರಾಜಸ್ವಕ್ಕೆ ಸಂಬಂಧಿಸಿದಂತೆ ಎಲ್ಲ ಮೂಲಗಳೂ ನಿರೀಕ್ಷಿಸಿದ ಗುರಿಗಳನ್ನು ಸಾಧಿಸಿವೆ ಎಂದೂ ಅವರು ಹೇಳಿದ್ದಾರೆ. ಆದರೆ 2022-23ನೆಯ ಸಾಲಿನ ಬಜೆಟ್ಟಿನ ಒಳಹೊಕ್ಕು ಪರಿಶೀಲಿಸಿದರೆ ಅನೇಕ ತೀವ್ರ ಸಮಸ್ಯೆಗಳು ಕಂಡುಬರುತ್ತವೆ. ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ(2022-2026) ರಾಜ್ಯದ ಹಣಕಾಸು ಭವಿಷ್ಯ ಅತಂಕಕಾರಿಯಾಗಿದೆ ಎಂಬುದನ್ನು ಗುರುತಿಸಲಾಗಿದೆ.

ಮುಂದಿನ 2022-23ನೆಯ ಸಾಲಿಗೆ ಶಿಕ್ಷಣ ಕ್ಷೇತ್ರಕ್ಕೆ ರೂ.39180 ಕೋಟಿ ನೀಡದಿರುವುದನ್ನು ಬಿಟ್ಟರೆ ಕಳೆದ 2 ವರ್ಷ ಪೆಂಡಮಿಕ್‌ನಿಂದಾಗಿ ಶಿಕ್ಷಣದಿಂದ ವಂಚಿತರಾದ ರಾಜ್ಯದ ಗ್ರಾಮೀಣ ಪ್ರದೇಶದ ಸರಿಸುಮಾರು 40-50 ಲಕ್ಷ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಬಜೆಟ್ಟಿನಲ್ಲಿ ಚಕಾರವಿಲ್ಲ. ಈ ಮಕ್ಕಳ ಭವಿಷ್ಯವು ಅಂಧಕಾರಮಯವಾಗುತ್ತದೆ. ಉದ್ಯೋಗವನ್ನು ಮಾರುಕಟ್ಟೆ ನಿರ್ವಹಿಸುತ್ತದೆ ಎಂಬ ನಂಬಿಕೆಯ ಮೇಲೆ ಸರ್ಕಾರ ಹೊರಟಿದೆ. ನೀರಾವರಿಗೆ ಎಂದಿನಂತೆ ಅಪಾರ ಹಣಕಾಸನ್ನು ಒದಗಿಸಲಾಗಿದೆ. ಆದರೆ ಒಣಭೂಮಿ ಬೇಸಾಯದ ಬಗ್ಗೆ ಯಾವುದೇ ಕಾರ್ಯಕ್ರಮವಿಲ್ಲ. ಜಾನುವಾರು ಮತ್ತು ಮೀನುಗಾರಿಕೆ ಆರ್ಥಿಕತೆಯ ಮಹತ್ವವನ್ನು ಸರ್ಕಾರ ಮನಗಂಡಂತೆ ಕಾಣುತ್ತಿಲ್ಲ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಬಗ್ಗೆ ವಾಡಿಕೆಯಂತೆ ಅನುದಾನ ನೀಡಲಾಗಿದೆ. ಆದರೆ ಕಳೆದ 25-30 ವರ್ಷಗಳಿಂದಲೂ ರಾಜ್ಯದ ಹಿಂದುಳಿದ ತಾಲ್ಲೂಕು-ಜಿಲ್ಲೆಗಳ ಆರ್ಥಿಕ-ಸಾಮಾಜಿ-ಶೈಕ್ಷಣಿಕ ಸ್ಥಿತಿಯಲ್ಲಿ ಏನೂ ಬದಲಾವಣೆಯಾಗಿಲ್ಲ. ರಾಜ್ಯದ 2020-23ನೆಯ ಸಾಲಿನ ಬಜೆಟ್ಟಿನ ಮುಖ್ಯ ಸಮಸ್ಯೆಗಳನ್ನು ಚರ್ಚಿಸೋಣ.

1 ರಾಜ್ಯದ ಆತಂಕಕಾರಿ ಹಣಕಾಸು ಭವಿಷ್ಯ

ದೇಶದಲ್ಲಿ ಬಜೆಟ್ ಹಣಕಾಸು ನಿರ್ವಹಣೆಯಲ್ಲಿ ರಾಜ್ಯ ಅತ್ಯಂತ ಶಿಸ್ತುಬದ್ಧ ಸ್ಥಿತಿಯಲ್ಲಿತ್ತು. ನಮ್ಮ ರಾಜ್ಯವು 2004ರಿಂದಲೂ ರಾಜಸ್ವ ಆದಿಕ್ಯವನ್ನು ನಿರಂತರವಾಗಿ ಸಾಧಿಸಿಕೊಂಡು ಬಂದಿದೆ. ಆದರೆ 2020-21ರಲ್ಲಿ ನಮಗೆ ರಾಜಸ್ವದಲ್ಲಿನ ಕೊರತೆಯನ್ನು ತಡೆಯುವುದಾಗಲಿಲ್ಲ. ಇದಕ್ಕೆ ನಮ್ಮ ರಾಜ್ಯದ ರಾಜಸ್ವ ಸಂಗ್ರಹದಲ್ಲಿನ ಕುಸಿತವನ್ನು ಆಕ್ಷೇಪಿಸುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ತೋರಿಸುತ್ತಿರುವ ಮಲತಾಯಿ ಧೋರಣೆಯು ಕಾರಣವಾಗಿದೆ. ಉದಾ: ಒಕ್ಕೂಟ ಸರ್ಕಾರದಿಂದ 2018-19 ಮತ್ತು 2019-20ನೆಯ ಸಾಲುಗಳಲ್ಲಿ ರಾಜ್ಯಕ್ಕೆ ವರ್ಗಾವಣೆಯಾದ ತೆರಿಗೆ ಪಾಲು ಮತ್ತು ಸಹಾಯಾನುದಾನ ರೂ.5000 ಕೋಟಿಗಿಂತ ಅಧಿಕವಿತ್ತು. ಆದರೆ ಇದು 2020-21ರಲ್ಲಿ ಇದು ರೂ. 37981 ಕೋಟಿಗೆ (ಶೇ.25.38 ಕುಸಿತ) ಮತ್ತು 2021-22ರಲ್ಲಿ ರೂ.43814 ಕೋಟಿಗೆ ಇಳಿದಿದೆ. ಇಲ್ಲಿದೆ ನಮ್ಮ ರಾಜಸ್ವ ಕೊರತೆಯ ಮೂಲ ಕಾರಣ. ಇದಲ್ಲದೆ 15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ 2020-21ರಲ್ಲಿ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನ ರೂ.5495 ಕೋಟಿಯನ್ನು ಒಕ್ಕೂಟ ಸರ್ಕಾರ ನೀಡಲಿಲ್ಲ.

ಈ ಸಮಸ್ಯೆಯನ್ನು ಒಕ್ಕೂಟದ ಜೊತೆಯಲ್ಲಿ ಸಮಾಲೋಚಿಸಿ ಅನುದಾನ ಪಡೆಯುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇವೆಲ್ಲವುಗಳಲ್ಲದೆ ಒಕ್ಕೂಟ ರ್ಕಾರವು ಜಿಎಸ್‌ಟಿಗೆ ಸಂಬಂಧಿಸಿದಂತೆ ಪರಿಹಾರ ಮೊತ್ತವನ್ನು ಸರಿಯಾಗಿ ನೀಡುತ್ತಿಲ್ಲ. ರಾಜಸ್ವ ಕೊರತೆಯು 2020-21ರಲ್ಲಿ ರೂ.19337 ಕೋಟಿಯಷ್ಟಿತ್ತು. ಆದರೆ 2021-22ರಲ್ಲಿ ಅದು ಹೇಗೋ ಬಜೆಟ್ ಅಂದಾಜಿನಲ್ಲಿದ್ದ ರೂ. 15133 ಕೋಟಿಯನ್ನು ಪರಿಷ್ಕೃತ ಅಂದಾಜಿನಲ್ಲಿ ರೂ.6235 ಕೋಟಿಗೆ ತಂದಿದ್ದಾರೆ. ಆದರೆ ಮುಂದಿನ 2022-23ರ ಬಜೆಟ್ ಅಂದಾಜಿನಲ್ಲಿ ರೆವಿನ್ಯೂ ಕೊರತೆಯು ರೂ. 14699 ಕೋಟಿಯಾಗುತ್ತದೆ ಎಂದು ಭಾವಿಸಲಾಗಿದೆ. ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆ 2002ರ ಪ್ರಕಾರ ರಾಜಸ್ವ ಖಾತೆಯಲ್ಲಿ ಆದಿಕ್ಯವಿರಬೇಕು ಮತ್ತು ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ಮೀರಬಾರದು ಎಂಬ ನಿಯಮವಿದೆ. ಆದರೆ ಇವೆರಡನ್ನೂ ಇಂದು ಪಾಲಿಸುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದ 2022-23ರ ವಿತ್ತೀಯ ಕೊರತೆಯ ಜಿಎಸ್‌ಡಿಪಿಯ ಶೇ. 3.2 ರಷ್ಟಾಗುತ್ತದೆ (ರೂ.61564 ಕೋಟಿ).

ಮೂರನೆಯದಾಗಿ ರಾಜ್ಯದ ಸಾರ್ವಜನಿಕ ಋಣವು ಜಿಎಸ್‌ಡಿಪಿಯ ಶೇ.25 ಮೀರಬಾರದು ಎಂಬ ನಿಯಮವಿದೆ. ಇಂದು ರಾಜ್ಯವು ತೀವ್ರತರನಾದ ಸಾಲದ ಬಲೆಯಲ್ಲಿ ಸಿಲುಕಿದೆ. ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ 2022-26ರ ಪ್ರಕಾರ ರಾಜ್ಯದ ಒಟ್ಟು ಹೊಣೆಗಾರಿಕೆ(ಸಾಲ)ಯು 2019-20ರಲ್ಲಿ ಜಿಎಸ್‌ಡಿಪಿಯ ಶೇ. 19.87ರಷ್ಟಿದ್ದುದು ನಂತರದ ವರ್ಷಗಳಲ್ಲಿ ಇದು ಜಿಎಸ್‌ಡಿಪಿಯ ಶೇ.25 ಮೀರುತ್ತಿದೆ. ರಾಜ್ಯದ ಹೊಣೆಗಾರಿಕೆಯು 2019-20ರಲ್ಲಿ ರೂ.3.38 ಲಕ್ಷ ಕೋಟಿಯಿದ್ದುದು 2022-23ರಲ್ಲಿ ರೂ.5.18 ಲಕ್ಷ ಕೋಟಿಗೇರಿದೆ. ಇದು 2025-26ರಲ್ಲಿ ರೂ.7.38 ಲಕ್ಷ ಕೋಟಿಯಾಗಬಹುದು ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಈ ವರ್ಷ ಒಟ್ಟು ರಾಜಸ್ವ ರಾಶಿಯಲ್ಲಿ ಬಡ್ಡಿ ಪಾವತಿಯ ಪ್ರಮಾಣ 2020-21ರಲ್ಲಿ ಶೇ.13.98ರಷ್ಟಿದ್ದುದು 2022-23ರಲ್ಲಿ ಇದು ಶೇ.15.48 ಕ್ಕೇರಿದೆ. ಈ ಬಜೆಟ್ಟಿನಲ್ಲಿ ಆಹಾರ ಭದ್ರತೆಗೆ (ಅನ್ನಭಾಗ್ಯ) ನೀಡಿರುವ ಅನುದಾನ ರೂ.2810 ಕೋಟಿ. ಇದು ಬಜೆಟ್ ವೆಚ್ಚದ ಶೇ.1.06ರಷ್ಟಾಗುತ್ತದೆ. ಇದರ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡಲಾಗುತ್ತದೆ. ಜನರು ಸೋಮಾರಿಗಳಾಗುತ್ತಾರೆ, ತೆರಿಗೆ ಹಣದ ಲೂಟಿ, ಪುಗಸಟ್ಟೆ ನೀಡುವುದು ಇತ್ಯಾದಿ. ಆದರೆ ಇದೇ ಬಜೆಟ್ಟಿನಲ್ಲಿ ಇಂಧನಕ್ಕೆ ನೀಡಿರುವ ಸಬ್ಸಿಡಿ ರೂ.12000 ಕೋಟಿ. ಇದು ಬಜೆಟ್ ವೆಚ್ಚದ ಶೇ.4.52ರಷ್ಟಾಗುತ್ತದೆ. ಇದರ ಬಗ್ಗೆ ಯಾರೂ ಟೀಕಿಸುವುದಿಲ್ಲ.

ನೀರಾವರಿ-ಒಣಭೂಮಿ ಬೇಸಾಯ

ವಾಡಿಕೆಯಂತೆ ನೀರಾವರಿಗೆ ರೂ.20000 ಕೋಟಿಗಿಂತಲೂ ಅಧಿಕ ಅನುದಾನ ನೀಡಲಾಗಿದೆ. ನೀರಾವರಿಯೊಂದೆ ನಮ್ಮ ಜನರ ಆಹಾರ ಸಮಸ್ಯೆಗೆ ಪರಿಹಾರ ಎಂಬ ಕುರುಡು ನಂಬಿಕೆಯಿಂದ ಕಳೆದ 50-60 ವರ್ಷಗಳಿಂದಲೂ ಲಕ್ಷಾಂತರ ಕೋಟಿ ಹಣವನ್ನು ನೀರಾವರಿಗೆ ಸುರಿಯಲಾಗುತ್ತಿದೆ. ನೀರಾವರಿಯು ಅನೇಕ ಸಮಸ್ಯೆಗಳನ್ನು ನಿವಾರಿಸಿದೆ, ನಿಜ. ಆದರೆ ಅದು ಅನೇಕ ಸಮಸ್ಯೆಗಳನ್ನೂ ಹುಟ್ಟು ಹಾಕಿದೆ. ದೇಶದಲ್ಲಿ ರಾಜಸ್ಥಾನವನ್ನು ಬಿಟ್ಟರೆ ಒಣಭೂಮಿ ಬೇಸಾಯ ಅತ್ಯಧಿಕವಿರುವ ರಾಜ್ಯ ಕರ್ನಾಟಕ. ನೀರಾವರಿ ವ್ಯಸನದಲ್ಲಿ ಬಿದ್ದಿರುವ ಸರ್ಕಾರಗಳು ಒಣಭೂಮಿ ಕೃಷಿಯನ್ನು ನಿರ್ಲಕ್ಷಿಸಿಕೊಂಡು ಬಂದಿವೆ. ನಮ್ಮ ರಾಜ್ಯದ ಒಟ್ಟಾರೆ ಭೂಹಿಡುವಳಿಗಳಲ್ಲಿ ಅತಿಸಣ್ಣ ಮತ್ತು ಸಣ್ಣ ಭೂಹಿಡುವಳಿಗಳ ಪ್ರಮಾಣ ಶೇ.85. ಈ ಹಿಡುವಳಿ ರೈತರಿಗೆ ಭಾರಿ ನೀರಾವರಿ ಯೋಜನೆಗಳಿಂದ ಅನುಕೂಲವಾಗಿರುವುದು ಅಷ್ಟಕ್ಕಷ್ಟೆ. ಕೆಲವು ದಶಕಗಳ ಹಿಂದೆ ಜಲಾನಯನ ಪ್ರದೇಶದ ಅಭಿವೃದ್ಧಿ ಬಗ್ಗೆ ಮಾತನಾಡಲಾಗುತ್ತಿತ್ತು. ಇಂದು ಅದರ ಬಗ್ಗೆ ಮಾತಿಲ್ಲ ಮತ್ತು ಬಜೆಟ್ಟಿನಲ್ಲಿ ಅನುದಾನ ನೀಡುತ್ತಿಲ್ಲ. ಮಳೆಯಾಶ್ರಿತ ಕೃಷಿಯು ಪರಿಸರ ಸ್ನೇಹಿ, ಅತಿಸಣ್ಣ-ಸಣ್ಣ ರೈತರಿಗೆ ಹೆಚ್ಚು ಅನುಕೂಲಕರ. ಹೆಚ್ಚು ಪೌಷ್ಟಿಕ ಸಾರವುಳ್ಳ ದ್ವಿದಳ ಧಾನ್ಯಗಳ ಉತ್ಪಾದನೆಯು ಮಳೆಯಾಶ್ರಿತ ಕೃಷಿಯಿಂದ ಬರುತ್ತದೆ. ಸಿರಿಧಾನ್ಯ ಕೃಷಿಗೂ ಇದು ಹೆಚ್ಚು ಸಹಕಾರಿ. ಆದರೆ ಇದರ ಬಗ್ಗೆ ನಾವು ಹೆಚ್ಚು ಗಮನ ನೀಡುತ್ತಿಲ್ಲ.

ಪ್ರಾದೇಶಿಕ ಅಸಮಾನತೆ ನಿವಾರಣಾ ಯೋಜನೆ

ಪ್ರಾದೇಶಿಕ ಅಸಮಾನತೆಯ ಬಗ್ಗೆ ಸರಿಯಾದ ತಿಳಿವಳಿಕೆ 1999ರ ಕರ್ನಾಟಕ ಮಾನವ ಅಭಿವೃದ್ಧಿ ವರದಿ ಮತ್ತು 2002ದಲ್ಲಿ ಡಾ.ಡಿ.ಎಂ ನಂಜುಂಡಪ್ಪ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ವರದಿಯಿಂದ ವ್ಯಾಪಕ ಚರ್ಚೆಗೆ ಒಳಗಾಯಿತು. ಈ ಸಮಿತಿಯ ಶಿಫಾರಸ್ಸಾದ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು 2007-08ರಲ್ಲಿ ಆರಂಭಿಸಲಾಯಿತು. ಮತ್ತೆ 2013-14ರಲ್ಲಿ ಒಕ್ಕೂಟ ಸರ್ಕಾರದಲ್ಲಿ ನಡೆದ ಸಂವಿಧಾನ ತಿದ್ದುಪಡಿಯ ಮೂಲಕ ಹೈದರಾಬಾದ್ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ಪ್ರದೇಶದ 6 ಜಿಲ್ಲೆಗಳಿಗೆ 371(ಜೆ) ಮೂಲಕ ವಿಶೇಷ ಸ್ಥಾನಮಾನ ನೀಡಲಾಯಿತು. ಇದರ ಒಂದು ಭಾಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತು.

ಇದುವರೆವಿಗೂ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗಾಗಿ ಸಾವಿರಾರು ಕೊಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅಲ್ಲಿನ ಆರ್ಥಿಕ-ಸಾಮಾಜಿಕ, ಶೈಕ್ಷಣಿಕ ಸ್ಥಿತಿಯಲ್ಲಿ ಕಣ್ಣಿಗೆ ಕಾಣುವಂತಹ ಬದಲಾವಣೆಯಾಗಿಲ್ಲ. ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ 2007-08ರಿಂದ 2021-22ರವರೆಗೆ ರೂ.28987.18 ಕೋಟಿ ವೆಚ್ಚ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಯ ಮೂಲಕ 2013-14ರಿಂದ 2020-21ರವರೆಗೆ ರೂ.6240 ಕೋಟಿ ವೆಚ್ಚ ಮಾಡಲಾಗಿದೆ. ಆದರೂ ಈ ಪ್ರದೇಶದ ದುಸ್ಥಿತಿಯನ್ನು ನಿವಾರಿಸುವುದಕ್ಕೆ ಸಾಧ್ಯವಾಗಿಲ್ಲ. ಉದಾ: 2021ರಲ್ಲಿನ ನೀತಿ ಆಯೋಗ ಪ್ರಕಟಿಸಿರುವ ಬಹುಮುಖಿ ಬಡತನ ಸೂಚ್ಯಂಕ ವರದಿಯ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿನ ಬಹುಮುಖಿ ಬಡವರ ಪ್ರಮಾಣ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.41ರಷ್ಟಾಗಿದೆ. ಇದು ದೇಶದಲ್ಲಿನ ಅತಿಹಿಂದುಳಿದ ರಾಜ್ಯವಾದ ಬಿಹಾರದ ಬಹುಮುಖಿ ಬಡತನಕ್ಕೆ ಸಮನಾಗಿದೆ.

ಈ ಪ್ರದೇಶದಲ್ಲಿ 6ರಿಂದ 59 ತಿಂಗಳಿ ವಯೋಮಾನದ ಒಟ್ಟು ಮಕ್ಕಳಲ್ಲಿ 2019-20ರಲ್ಲಿ ಶೇ.70ರಷ್ಟು ಮಕ್ಕಳು ಅನಿಮಿಯಾವನ್ನು ಎದುರಿಸುತ್ತಿದ್ದಾರೆ. ರಾಜ್ಯದ 2019-2020ರ ತಲಾ ವರಮಾನ ರೂ.155869. ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳ ತಲಾ ವರಮಾನವು ರಾಜ್ಯ ತಲಾ ವರಮಾನ ಶೇ.51 ರಷ್ಟಿದೆ. ಇವೆಲ್ಲವೂ ಸ್ಪಷ್ಟವಾಗಿ ತೋರಿಸುವುದೇನೆಂದರೆ, ರಾಜ್ಯದಲ್ಲಿನ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು. ರಾಜ್ಯದ 2022-23ರ ಬಜೆಟ್ಟಿನ ಕಥೆಯೂ ಇದೇ ಆಗಿದೆ. ಏಕೆಂದರೆ ಅಭಿವೃದ್ಧಿಯನ್ನು ಇಲ್ಲಿ ಕಾಮಗಾರಿ-ಕಾಂಟ್ರಾಕ್ಟ್‌ಗಿರಿಗಳಲ್ಲಿ ಕಾಣಲಾಗುತ್ತಿದೆಯೇ ವಿನಾ ಜನರ ಬದುಕಿನ ನೆಲೆಯಲ್ಲಿ ಕಾಣುತ್ತಿಲ್ಲ. ಇಲ್ಲಿದೆ ನಿಜವಾದ ಸಮಸ್ಯೆ. ಉದಾ: ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ 2007-08ರಿಂದ 2020-21ರವರೆಗೆ ವೆಚ್ಚ ಮಾಡಿದ ರೂ.28987 ಕೋಟಿಯಲ್ಲಿ ಶಿಕ್ಷಣಕ್ಕೆ ನೀಡಿದ ಪ್ರಮಾಣ ಶೇ.5.56. ಆರೋಗ್ಯಕ್ಕೆ ಶೇ.4.49 ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಶೇ.1.65ರಷ್ಟು ನೀಡಲಾಗಿದೆ. ಆದರೆ ಲೋಕೋಪಯೋಗಿಗೆ ಶೇ.7.92, ಗ್ರಾಮೀಣಾಭಿವೃದ್ಧಿಗೆ ಶೇ.17.75 ನೀಡಲಾಗಿದೆ. ಹಿಂದುಳಿದ ಪ್ರದೇಶದಲ್ಲಿನ ಜನರ ದುಸ್ಥಿತಿಗೆ ಮುಖ್ಯ ಕಾರಣ ಶಿಕ್ಷಣ ಮತ್ತು ಆರೋಗ್ಯಗಳಲ್ಲಿನ ಕೊರತೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಆದರೆ ’ಕಾಮಗಾರಿ-ಕಾಂಟ್ರಾಕ್ಟ್‌ಗಿರಿ’ಯೇ ಅಭಿವೃದ್ಧಿ ಎಂದು ನಂಬಿರುವ ಸರ್ಕಾರದಿಂದ ಈ ಪ್ರದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಗೆಯ ಅಭಿವೃದ್ಧಿ ವ್ಯಸನದಿಂದ 2022-23ರ ಬಜೆಟ್ಟೂ ಭಿನ್ನವಾಗಿಲ್ಲ.

ರಾಜ್ಯದ 2022-23ರ ಬಜೆಟ್ಟು ಎಲ್ಲರನ್ನು ಒಳಗೊಳ್ಳುವ ನಿಯಮವನ್ನು ಪಾಲಿಸಿಲ್ಲ (ಅಲ್ಪಸಂಖ್ಯಾತರಲ್ಲಿ ಮುಸ್ಲಿಮರಿಗೆ ಅನುದಾನ ಶೂನ್ಯ). ಪ.ಜಾ. ಮತ್ತು ಪ.ಪಂ. ಉಪಯೋಜನೆಗೆ ನೀಡಿರುವ ಅನುದಾನವು 2017-18ರಲ್ಲಿ ಬಜೆಟ್ಟಿನ ಒಟ್ಟು ವೆಚ್ಚದ ಶೇ.14.84ರಷ್ಟಿದ್ದುದು 2022-23ರಲ್ಲಿ ಇದು ಶೇ.10.61ಕ್ಕಿಳಿದಿದೆ. ಈ ಅವಧಿಯಲ್ಲಿ ಬಜೆಟ್ ವೆಚ್ಚವು ಶೇ.42.43ರಷ್ಟು ಏರಿಕೆಯಾಗಿದ್ದರೆ ಉಪಯೋಜನೆಗಳ ಅನುದಾನದ ಏರಿಕೆ ಪ್ರಮಾಣ ಶೇ.1.93. ’ಕರ್ನಾಟಕ ಪೌಷ್ಠಿಕ’ ಎಂಬ ಕಾರ್ಯಕ್ರಮವನ್ನೇನೋ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ರಾಜ್ಯದಲ್ಲಿ 2015-16ರಿಂದ 2019-20ರಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿನ ಅನಿಮಿಯಾ (ರಕ್ತಹೀನತೆ) ಅಧಿಕವಾಗಿದೆ.

ಒಟ್ಟಾರೆ ಈ ಬಜೆಟ್ಟಿಗೆ ನಿರ್ದಿಷ್ಟ ದಿಕ್ಕು-ದಿಶೆಯಿಲ್ಲ. ಎಲ್ಲದಕ್ಕೂ ಹಣವನ್ನು ಹಂಚಲಾಗಿದೆ. ಆದ್ದರಿಂದ ಇದರ ಒಟ್ಟು ಪರಿಣಾಮ ಕಣ್ಣಿಗೆ ಕಾಣುವ ರೀತಿಯಲ್ಲಿರಲು ಸಾಧ್ಯವಿಲ್ಲ. ಈ ಸರ್ಕಾರದ ಮತ್ತು ಈ ಬಜೆಟ್ಟಿನ ಮುಖ್ಯ ಧೋರಣೆ ಏನು ಎಂಬುದನ್ನು ಬಜೆಟ್ಟಿನ ಪರಿಭಾಷೆಯಲ್ಲಿ ಒಂದು ವಾಕ್ಯದಲ್ಲಿ ಹೀಗೆ ಹೇಳಬಹುದು: ’ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರೂ.100 ಕೋಟಿ ಅನುದಾನ: ರಾಯಚೂರು ವಿಶ್ವವಿದ್ಯಾಲಯಕ್ಕೆ ರೂ.15 ಕೋಟಿ ಅನುದಾನ’. ಇದು ನಮ್ಮ ಬಜೆಟ್ಟಿನ, ಅಭಿವೃದ್ಧಿಯ ಇಂದಿನ ಸರ್ಕಾರದ ಆದ್ಯತೆ. ಇಂತಹ ಬಜೆಟ್ಟಿನಿಂದ ಬಡವರ, ದುಡಿಮೆಗಾರರ, ಮಹಿಳೆಯರ, ಅಲ್ಪಸಂಖ್ಯಾತರ, ರೈತರ ಅಭಿವೃದ್ಧಿ ಅಸಾಧ್ಯ. ಕರ್ನಾಟಕಸ್ಥರ ತಲಾ ಸಾಲ 2019-20ರಲ್ಲಿ ರೂ.48190ರಷ್ಟಿದ್ದುದು 2022-23ರಲ್ಲಿ ರೂ.74000 ಆಗಿದೆ. ’ಸಾಲ ತಂದು ಮನೆ ಕಟ್ಟಿದರೆ ಅದು ಅಭಿವೃದ್ಧಿ. ಆದರೆ ಮನೆಯ ಬಾಡಿಗೆ ಕಟ್ಟಲು ಸಾಲ ತಂದರೆ ಅದು ಮನೆಹಾಳುತನ’. ಈ ದಾರಿಯಲ್ಲಿ ನಮ್ಮ ಬಜೆಟ್ಟು ನಡೆದಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಒಕ್ಕೂಟ ತತ್ವದ ಹಿನ್ನೆಲೆಯಲ್ಲಿ 2022-23 ಬಜೆಟ್ ಪೂರ್ವ ಚರ್ಚೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...