Homeಚಳವಳಿಕಂಬಾಲಪಲ್ಲಿ ದಲಿತರ ಹತ್ಯಾಕಾಂಡಕ್ಕೆ 22 ವರ್ಷ: ನ್ಯಾಯಕ್ಕಾಗಿ ಕಾಯುತ್ತಲೇ ಮೃತರಾದ ಸಂತ್ರಸ್ತರ ಸಂದರ್ಶನ

ಕಂಬಾಲಪಲ್ಲಿ ದಲಿತರ ಹತ್ಯಾಕಾಂಡಕ್ಕೆ 22 ವರ್ಷ: ನ್ಯಾಯಕ್ಕಾಗಿ ಕಾಯುತ್ತಲೇ ಮೃತರಾದ ಸಂತ್ರಸ್ತರ ಸಂದರ್ಶನ

ನನ್ನ ಮಕ್ಕಳ ಕೊಂದವರ ಮುಖ ನೋಡಿದರೆ ಕಣ್ಣು ಚುಚ್ಚತ್ತೆ, ನೋವಾಗತ್ತೆ, ಶಿಕ್ಷೆ ಕೊಡ್ಸೋಕೆ ಆಗ್ಲಿಲ್ವಲ್ಲ ಅಂತ ನಾಚಿಕೆ ಆಗತ್ತೆ - ವೆಂಕಟರಾಯಪ್ಪ

- Advertisement -
- Advertisement -

ಅಂದಿನ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ 22 ವರ್ಷಗಳ ಹಿಂದೆ ಯಾವುದೇ ತಪ್ಪು ಮಾಡದ, ಆದರೆ ಸ್ವಾಭಿಮಾನದಿಂದ ತಲೆ ಎತ್ತಿ ಬದುಕಲು ಯತ್ನಿಸಿದ 7 ಜನ ದಲಿತರನ್ನು [ಶ್ರೀರಾಮಪ್ಪ(25), ಅಂಜನಪ್ಪ(27), ರಾಮಕ್ಕ(70), ಸುಬ್ಬಕ್ಕ(45) ಪಾಪಮ್ಮ(46), ನರಸಿಂಹಯ್ಯ(25), ಚಿಕ್ಕಪಾಪಣ್ಣ(40)] ಜೀವಂತವಾಗಿ ಸುಟ್ಟುಹಾಕಿದ ದುರಂತದ ದಿನ ಇಂದು… ದಲಿತರ ನರಮೇಧ ನಡೆಸಿ ಜಾತಿ ಕ್ರೌರ್ಯ ಮೆರೆದ ರೆಡ್ಡಿ ಒಕ್ಕಲಿಗ ಜಾತಿಯ 32 ಹಂತಕ ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯ ದೋಷಮುಕ್ತಗೊಳಿಸಿತು… ತದನಂತರ 2014ರ ಆಗಸ್ಟ್ 20 ರಂದು ಹೈಕೋರ್ಟ್ ಸಹ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು!

ಕಂಬಾಲಪಲ್ಲಿ ಹತ್ಯಾಕಾಂಡದ ಆರೋಪಿಗಳೆಲ್ಲ ಖುಲಾಸೆಯಾದ ಸಂದರ್ಭದಲ್ಲಿ ಅಧ್ಯಾಪಕ ವಿಕಾಸ್ ಆರ್ ಮೌರ್ಯ ಮತ್ತು ದಸಂಸ ಹಿರಿಯ ಮುಖಂಡರಾದ ಎನ್. ವೆಂಕಟೇಶ್‌ರವರು ಹತ್ಯಾಕಾಂಡದಲ್ಲಿ ತನ್ನ ಮಕ್ಕಳನ್ನು ಕಳೆದುಕೊಂಡ ಸಂತ್ರಸ್ತ ವೆಂಕಟರಾಯಪ್ಪರವರನ್ನು ಸಂದರ್ಶನ ಮಾಡಿದ್ದರು. 2015ರಲ್ಲಿ ಇದು ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. 2019ರಲ್ಲಿ ವೆಂಕಟರಾಯಪ್ಪನವರು ನಿಧನರಾಗಿದ್ದಾರೆ. ಆ ಸಂದರ್ಶನವನ್ನು ಓದುಗರಿಗಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ.

ಸಂದರ್ಶಕ : ಹೈ ಕೋರ್ಟ್ ಸಹ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿದೆ. ಈ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವೆಂಕಟರಾಯಪ್ಪ: ನನಗೇನು ತಿಳಿಯತ್ತೆ? ನಿಮ್ಮಂತೋರು ಯಾರಾದ್ರು ಬಂದು ಹೇಳಬೇಕು ಅಷ್ಟೆ. ನಾನು ಸಾಯೋದೊಳಗೆ ನ್ಯಾಯ ಸಿಕ್ಕರೆ ಸಾಕು.

ಸಂ: ಕಂಬಾಲಪಲ್ಲಿಯ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿದೆ. ಅಲ್ಲಿ ಗೆಲ್ಲಬಹುದಾ?

ವೆಂ: ವಯಸ್ಸಾಯ್ತು, ನ್ಯಾಯ ನಮ್ಮಂತೋರಿಗೆ ಸಿಗತ್ತಾ? ನಿಮ್ಮಂತ ಹೋರಾಟಗಾರರು ನನಗೆ ನ್ಯಾಯ ಸಿಗೋ ತರ ಮಾಡಬೇಕು. ನೀವು ಹೇಳಿದ ಕಡೆ ಹೆಬ್ಬೆಟ್ಟು ಒತ್ತುತ್ತೀನಿ. ಅವರ ಶಿಕ್ಷೆ ಆಗಿರೋದು ನನ್ನ ಕಿವಿಗೆ ಬಿದ್ರೆ ಸಾಕು.

ಸಂ: ಸರ್ಕಾರ ನಿಮ್ಮ ಪರವಾಗಿ ಸುಪ್ರೀಂ ಕೋರ್ಟಿಗೆ ಹೋಗಿದೆ. ಇಲ್ಲಿವರೆಗೆ ನಿಮಗೆ ಏನೇನು ಸೌಕರ್ಯ ಮಾಡಿಕೊಟ್ಟಿದೆ?

ವೆಂ: ಸರ್ಕಾರದವರು ಹಣ ಕೊಟ್ಟು ಎಲ್ಲರಿಗೂ ಮನೆ ಕಟ್ಟಿಸಿಕೊಟ್ಟು, ಸೊಸೆಗೆ ಕೆಲಸ ಕೊಟ್ರು. ಆದ್ರೆ ಅವಳು ಕೊರಗಿ ಸೀಮೆ ಎಣ್ಣೆ ಸುರುವಿಕೊಂಡು ಸತ್ತಳು. ಸೌಕರ್ಯ ಬಂತು ಆದ್ರೆ ಮಕ್ಕಳು ಬರ್ತಾರೇನಪ್ಪಾ? ನ್ಯಾಯ ಸಿಗ್ತಾದೇನಪ್ಪಾ? ಇಲ್ಲಿ ಇರೋ ಜನರೆಲ್ಲ ನನ್ನ ಮಕ್ಕಳನ್ನ ನೆನೆಸ್ಟೇಕು. ಅವರು ಪ್ರಾಣ ಕೊಟ್ಟು ಇಲ್ಲಿನ ಜನರಿಗೆ ಜೀವನ ಕೊಟ್ರು. ಆದ್ರೆ ನಮ್ಮಂತೋರ್ಗೆ ಸೌಕರ್ಯ ಸಿಗಬೇಕಂದ್ರೆ ಯಾರಾದ್ರು ಸಾಯಲೇಬೇಕಾ?

ಸಂ: ಈ ಹದಿನೈದು ವರ್ಷ ಹೇಗೆ ಜೀವನ ಮಾಡಿದಿರಿ? ಆ ಘಟನೆ ಇನ್ನೂ ನೆನಪಿದೆಯಾ?

ವೆಂ: ಹೀಗೆ ಮಾಡ್ತಾ ಇದಿವಿ. ಎಲ್ಲಾ ನೆನಪಿದೆ, ಕಂಬಾಲಪಲ್ಲಿಗೆ ಮೊದಲ ಮೂರು ವರ್ಷ ಸಮಾಧಿಗೆ ಪೂಜೆ ಮಾಡೋಕೆ ಹೋದೆ. ಆಮೇಲೆ ಮನಸ್ಸಾಗಲಿಲ್ಲ. ನನ್ನ ಮಕ್ಕಳ ಕೊಂದವರ ಮುಖ ನೋಡಿದರೆ ಕಣ್ಣು ಚುಚ್ಚತ್ತೆ, ನೋವಾಗತ್ತೆ, ಶಿಕ್ಷೆ ಕೊಡ್ಸೋಕೆ ಆಗ್ಲಿಲ್ವಲ್ಲ ಅಂತ ನಾಚಿಕೆ ಆಗತ್ತೆ.

ಸಂ: ಹಾಗಾದ್ರೆ ಕಂಬಾಲಪಲ್ಲಿಯ ಜೊತೆ ಸಂಬಂಧವೇ ಇಲ್ಲವೆ?

ವೆಂ: ನಾನು ಹೋಗಲ್ಲ. ನನ್ನ ಸಂಬಂಧಿಕರು ಪ್ರತಿ ವರ್ಷ ಹೋಗಿ ಸಮಾಧಿಗೆ ಪೂಜೆ ಮಾಡಿಕೊಂಡು ಬರುತ್ತಾರೆ ಅಷ್ಟೆ, ಜಮೀನು ಪಾಳು ಬಿದ್ದಿದೆ.

ಸಂ: ನೀವು ಕೋರ್ಟಿನಲ್ಲಿ ಸಾಕ್ಷಿ ಸರಿಯಾಗಿ ಹೇಳಲಿಲ್ಲವಂತಲ್ಲ. ಯಾಕೆ?

ವೆಂ: ನಾನು ಎಲ್ಲಾ ಹೇಳಿದ್ನಪ್ಪ, ಜಡ್ಜ್ ಮುಂದೆ ನಡೆದಿದ್ದೆಲ್ಲಾ ಹೇಳಿದೆ. ಇಂತಿಂತವ್ರೆ ಮಾಡಿದ್ದು ಅಂತ ಹೇಳಿದೆ. ಕೊನೇಲಿ ವಕೀಲ ನಿನಗೆ ಕಣ್ಣು ಸ್ವಲ್ಪ ಮಂಜಲ್ಲವಾ ಅಂತಂದ ಅದಕ್ಕೆ ಹೌದು ಸ್ವಲ್ಪ ಅಂದೆ ಅಷ್ಟೆ. ಇದನ್ನೇ ಮುಂದು ಮಾಡಿ ನಾನು ಹೇಳಿದ್ದನ್ನೆಲ್ಲ ಬಿಟ್ಟುಬಿಟ್ಟವರೆ.

ಸಂ: ಕೊಂದವರು ಯಾರು ಅಂತ ನೆನಪಿದೆಯಾ? ಮರುವಿಚಾರಣೆ ಬಂದ್ರೆ ಸತ್ಯ ಹೇಳ್ತಿರಾ?

ವೆಂ: ಹೇಳ್ತಿನಿ. ಪ್ರತಿಯೊಬ್ಬ ಕೊಲೆಗಾರರ ಹೆಸರನ್ನೂ ಹೇಳ್ತಿನಿ. ಪತ್ತೆ ಹಚ್ಚುತ್ತೀನಿ. ಯಾರೇ ಆಗ್ಲಿ ಕೊಲೆಗಾರರಿಗೆ ಶಿಕ್ಷೆ ಆಗಬೇಕಲ್ವಾ? ಆವತ್ತು ಸಾಪುಲು ನರಸಪ್ಪ ನನ್ನ ಕಾಪಾಡದೇ ಇದ್ದಿದ್ದರೆ ನಾನು ಇವತ್ತು ಬದುಕ್ತಾ ಇರಲಿಲ್ಲ.

ಸಂ: ನ್ಯಾಯ ಸಿಗದೇ ಇದ್ದದ್ದಕ್ಕೆ ನಿಮಗೆ ಯಾರ ಮೇಲೆ ಬೇಸರವಿದೆ? ಪೊಲೀಸ್, ಸಂಘಟನೆ, ನ್ಯಾಯಾಲಯ, ಸರ್ಕಾರ?

ವೆಂ: ಅವರನ್ನ ಯಾರು ಪೊಲೀಸ್ ಅಂದಿದ್ದು? ಅವರು ಮಾಡಿದ ಅನ್ಯಾಯ ಅವರೇ ಅನುಭವಿಸುತ್ತಾರೆ. ಸಂಘದವರು ಆರಂಭದಲ್ಲಿ ಜೊತೇಲಿ ಇದ್ರು. ಆಮೇಲೆ ಅವರೂ ಕೈ ಬಿಟ್ಟು, ಈಗ ವೆಂಕಟೇಶಪ್ಪ ಬಂದು ಹೋಗ್ತಾ ಕ್ಷೇಮ ವಿಚಾರಿಸಿಕೊಳ್ತಾರೆ. ಎಲ್ಲ ವಿಚಾರ ಅವರೇ ಹೇಳ್ತಾರೆ. ಇನ್ಯಾರು ಬರೋದಿಲ್ಲ. ನಮ್ಮನ್ನ ಮಾತಾಡ್ಸೋರೆ ಇಲ್ಲ.

ಸಂ: ಕೊನೆಯದಾಗಿ ಏನು ಹೇಳೋಕೆ ಇಷ್ಟ ಪಡ್ತೀರಾ?

ವೆಂ: ಏನು ಹೇಳಲಿ? ಮಿನಿಸ್ಟರ್, ಪೊಲೀಸ್, ತಹಶಿಲ್ದಾರ್, ಡಿ.ಸಿ ಎಲ್ಲಾ ಬಂದ್ರು. ಏನು ಮಾಡಿದ್ರು? ಏನು ಮಾಡ್ಲಿಲ್ಲ. ನನ್ನ ಕಣ್ಣ ಮುಂದೆ ಬಾಗಿಲು ಹಾಕಿ ಬೆಂಕಿ ಇಟ್ರಪ್ಪ ಪೋಲಿಸು ಅಲ್ಲೆ ಇದ್ರು. ಅವರಿಗೆ ಎಲ್ಲಾ ಗೊತ್ತು. ಹಿಂದೆ ನನ್ನ ದೊಡ್ಡ ಮಗ ಸತ್ತಾಗ್ಲು ನ್ಯಾಯ ಸಿಗಲಿಲ್ಲ. ನನ್ನ ಮಗ ಶ್ರೀರಾಮ ಹುಲಿಯಂಗಿದ್ದವನ್ನ ಸಾಯಿಸಿಬಿಟ್ರು. ರಾಜ ಮಹಾರಾಜರೇ ಹೋದ್ರು. ನನ್ನ ಪ್ರಾಣ ಹೋದ್ರು ಸರಿ ಕೋರ್ಟಲ್ಲಿ ಸತ್ಯ ಹೇಳ್ತಿನಿ. ಆದ್ರೆ ನಂಗೆ ಸಪೋರ್ಟ್ ಮಾಡೋರು ಯಾರು? ನಿಮ್ಮಂತೋರು ಆಗಾಗ ಬಂದು ಸಾಯೋ ಮುದುಕನಿಗೆ ಶಕ್ತಿ ಕೊಡ್ಬೇಕು.


ಇದನ್ನೂ ಓದಿ; ಬುದ್ಧ ಗುರು ವಿಷ್ಣುವಿನ ಅವತಾರವಲ್ಲ, ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಕಂಬಾಲಪಲ್ಲಿ ನರಮೇದದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಶಿಕ್ಷೆ ಆಗಬೇಕು.

  2. ಕಂಬಾಲ ಪಲ್ಲಿಯ ಘಟನೆ ನಡೆದು 22ವರ್ಷ ಆದರೂ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದರೆ ನ್ಯಾಯಾಂಗ ವ್ಯವಸ್ಥೆ ಏನು ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಉಳಿದ ಒಬ್ಬ ವ್ಯಕ್ತಿಯು ತೀರಿ ಹೋಗಿದ್ದಾರೆ ನ್ಯಾಯ ಯಾರಿಗೆ ????

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...