ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್, ಓಮಿಕ್ರಾನ್ ರೂಪಾಂತರಿ ತಡೆಗಟ್ಟಲು ನೈಟ್ ಕರ್ಫ್ಯೂ ವಿಧಿಸಿ, ಚುನಾವಣಾ ರ್‍ಯಾಲಿಗಳಲ್ಲಿ ಸಾವಿರಾರು ಜನರನ್ನ ಸೇರಿಸುತ್ತಿರುವ ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ನಿರ್ಧಾರವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಟೀಕಿಸಿದ್ದಾರೆ.
ಹರಡುತ್ತಿರುವ ಸೋಂಕನ್ನು ತಡೆಗಟ್ಟುವುದು ನಮ್ಮ ಆದ್ಯತೆಯೇ ಅಥವಾ ದೊಡ್ಡ ದೊಡ್ಡ ಚುನಾವಣಾ ರ್‍ಯಾಲಿಗಳಲ್ಲಿ ತೊಡಗಿ ಶಕ್ತಿ ಪ್ರದರ್ಶಿಸುವುದು ಮುಖ್ಯವೇ ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಉತ್ತರಾಖಂಡ, ಉತ್ತರ ಪ್ರದೇಶ ಚುನಾವಣೆಯಲ್ಲಿ ತೊಡಗಿಕೊಂಡಿರುವ ನಾಯಕರು ದೊಡ್ಡ ದೊಡ್ಡ ರ್‍ಯಾಲಿಗಳನ್ನು ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಿದ್ದು, ಹಗಲು ಹೊತ್ತಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧರಮ್ ಸಂಸದ್‌ನಲ್ಲಿ ಗಾಂಧಿಜಿಗೆ ಅವಹೇಳನ; ಬಲಪಂಥೀಯ ಸ್ವಾಮಿ ವಿರುದ್ದ FIR
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, “ಹಗಲು ರ್‍ಯಾಲಿಗಳಿಗೆ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ ನಂತರ ರಾತ್ರಿಯಲ್ಲಿ ಕರ್ಫ್ಯೂ ಹೇರುವುದು, ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶದ ಸೀಮಿತ ಆರೋಗ್ಯ ಮೂಲಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಆದ್ಯತೆಯು ಕೊರೊನಾ ವೈರಸ್‌ನ ಅಪಾಯಕಾರಿ ಓಮಿಕ್ರಾನ್ ರೂಪಾಂತರವನ್ನು ತಡೆಯುವುದೋ ಅಥವಾ ಚುನಾವಣೆಯ ಸಮಯದಲ್ಲಿ ಶಕ್ತಿ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುವುದೋ ಎಂಬುದು ಪ್ರಾಮಾಣಿಕವಾಗಿ ನಿರ್ಧರಿಸಬೇಕು” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೇ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ದಂಡು ಯುಪಿಯಲ್ಲಿದೆ. ಎಲ್ಲಾ ನಾಯಕರು ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿನ ಲಿಂಗ ಸಮಾನತೆಯ ಕುರಿತು ತನ್ನ ಪ್ರಚಾರವನ್ನು ಕೇಂದ್ರೀಕರಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸಬೇಕೆಂದು ಆಗ್ರಹಿಸುತ್ತಿದೆ. ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಲಕ್ನೋದಲ್ಲಿ “ನಾನು ಹುಡುಗಿ ಮತ್ತು ನಾನು ಹೋರಾಡಬಲ್ಲೆ” ಎಂಬ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.


