ರೈತರ ಒಂದು ವರ್ಷ ನಿರಂತರ ನಡೆಸಿದ ಹೋರಾಟದ ಫಲವಾಗಿ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ರದ್ದುಗೊಳಿಸಿದ್ದಾರೆ. ವಿಶೇಷವೆಂದರೆ ಒಂದು ವರ್ಷ ಕಾಲ ರೈತರನ್ನು ಚಳವಳಿಗೆ ದೂಡಿದ್ದು, ಚುನಾವಣೆಗಳಲ್ಲಿ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಯನ್ನು ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ಫಲಿತಾಂಶವನ್ನು ಬಹು ಆಯಾಮದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಎಂಬ ಕಾರಣಕ್ಕೂ ಈ ಚುನಾವಣೆ ಗಮನ ಸೆಳೆದಿದ್ದು, ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ. ಮೊದಲ ಭಾರಿಗೆ ಇಲ್ಲಿ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷ 35 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರ ಹೊಮ್ಮಿದೆ.
ಬಿಜೆಪಿ-ವಿರೋಧಿ ಮತಗಳನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತದೆ ಎಂದು ಊಹಿಸಲಾಗಿದ್ದರೂ, ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನ 35 ಸದಸ್ಯ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಗಮನ ಸೆಳೆದಿದೆ.
ಆಡಳಿತಾರೂಢ ಬಿಜೆಪಿ 12 ಸ್ಥಾನಗಳಿಗೆ ಕುಸಿದಿದ್ದರೆ, ಕಾಂಗ್ರೆಸ್ 8 ಸ್ಥಾನಗಳಿಗಿಂತ ಹೆಚ್ಚು ಗೆಲ್ಲಲು ಸಾಧ್ಯವಾಗಲಿಲ್ಲ. ಒಂದು ಸ್ಥಾನವನ್ನು ಶಿರೋಮಣಿ ಅಕಾಲಿದಳ ಗೆದ್ದಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಗೆ ಅಸ್ತ್ರವಾಗುವ ಸಾಧ್ಯತೆ ಇದೆ.
“ಕೃಷಿ ಕಾನೂನುಗಳ ಜಾರಿ ಮತ್ತು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಫಲಿತಾಂಶದಿಂದ ಸ್ಪಷ್ಟವಾಗುತ್ತದೆ” ಎಂದು ಎಎಪಿಯ ಚಂಡೀಗಢ ಸಂಚಾಲಕ ಪ್ರೇಮ್ ಗಾರ್ಗ್ ‘ದಿ ವೈರ್’ಗೆ ತಿಳಿಸಿದ್ದಾರೆ.
“ಬಿಜೆಪಿಯ ದುರಾಡಳಿತಕ್ಕೆ ಚಂಡೀಗಢದಲ್ಲಿ ಜನರು ದೊಡ್ಡ ಪಾಠವನ್ನು ಕಲಿಸಿದ್ದಾರೆ. ಇದರಲ್ಲಿ ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ನಾಗರಿಕರಿಗೆ ಮೂಲಸೌಕರ್ಯಗಳನ್ನು ಬಿಜೆಪಿ ಕಲ್ಪಿಸಿಲ್ಲ” ಎಂದು ದೂರಿದ್ದಾರೆ.
ಕಾಂಗ್ರೆಸ್‌ಗೆ ಮತ ಹಾಕದಿರುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಭಿನ್ನ ರಾಜಕಾರಣ ಬೇಕು ಎಂಬ ಸ್ಪಷ್ಟ ಸಂದೇಶವನ್ನು ಜನರು ರವಾನಿಸಿದ್ದಾರೆ. ಚಂಡೀಗಢ ಕೇವಲ ಟ್ರೇಲರ್. ಪಂಜಾಬ್ ನಮ್ಮ ಮುಂದಿನ ಗುರಿಯಾಗಿದೆ. ಅಲ್ಲಿ ಜನರು ಸಾಂಪ್ರದಾಯಿಕ ಪಕ್ಷಗಳಿಂದ ದೂರವಿದ್ದು, ಬದಲಾವಣೆಗೆ ಮತ ಹಾಕುತ್ತಾರೆ ಎಂದಿದ್ದಾರೆ.
2016ರ ಚುನಾವಣೆಯಲ್ಲಿ 26 ವಾರ್ಡ್‌ಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. (ಈ ಬಾರಿ ಸದಸ್ಯ ಸ್ಥಾನಗಳನ್ನು 35 ಸ್ಥಾನಗಳಿಗೆ ಹೆಚ್ಚಿಸಲಾಯಿತು). ಮೇಯರ್ ಸ್ಥಾನಕ್ಕಾಗಿ ಬಿಜೆಪಿಯೊಳಗೆ ನಿರಂತರವಾದ ಒಳಜಗಳಗಳು ನಡೆಯುತ್ತಿದ್ದವು. ಅಭಿವೃದ್ಧಿಯತ್ತ ಗಮನ ಹರಿಸದೆ ಇದ್ದದ್ದು ಬಿಜೆಪಿಗೆ ಮುಳವಾಯಿತು ಎಂದು ರಾಜಕೀಯ ವಿಶ್ಲೇಷಣೆಗಳು ಮೂಡಿಬಂದಿವೆ.
ಹಲವಾರು ಕಾಂಗ್ರೆಸ್ ಮುಖಂಡರು ಎಎಪಿಗೆ ಪಕ್ಷಾಂತರಗೊಂಡಿದ್ದು ಎಎಪಿ ಗೆಲುವಿಗೆ ಕಾರಣವಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ, ಇಲ್ಲಿ ಎಎಪಿಗೆ ಮತ ಹಂಚಿಕೆ ಕೇವಲ 3.8% ಆಗಿತ್ತು. ಪಾಲಿಕೆ ಚುನಾವಣೆಯಲ್ಲಿ ಮತ ಹಂಚಿಕೆ ಶೇ.27ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿರಿ: ಮದರ್ ತೆರೇಸಾರ ಮಿಷನರೀಸ್ ಬ್ಯಾಂಕ್ ಖಾತೆಗಳ ಸ್ಥಗಿತ: ಮಮತಾ ಬ್ಯಾನರ್ಜಿ ಆರೋಪ


