ಸೋಮವಾರ (ಡಿ.27) ರಂದು ಬಿಡುಗಡೆಯಾದ ನೀತಿ ಆಯೋಗದ ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವು ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿಯೇ ಕಡೆಯ ಸ್ಥಾನವನ್ನು ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಕರ್ನಾಟಕವು ತೀವ್ರ ಕುಸಿತವನ್ನು ಕಂಡಿದೆ.
ಆರೋಗ್ಯ ಮೂಲಸೌಕರ್ಯ ಏರಿಕೆಯ ಸೂಚ್ಯಂಕದಲ್ಲಿ 2018-19 ರಲ್ಲಿ ರಾಜ್ಯವು 16 ನೇ ಸ್ಥಾನದಲ್ಲಿತ್ತು ಈ ವರ್ಷ 19 ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟಾರೆ ಆರೋಗ್ಯ ಸೂಚ್ಯಂಕದಲ್ಲಿ 8 ನೇ ಸ್ಥಾನದಿಂದ 9 ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದ ಒಟ್ಟಾರೆ ಸ್ಕೋರ್ 59.29 ರಿಂದ 57.93 ಕ್ಕೆ ಕುಸಿತ ಕಂಡಿದೆ.
ನೀತಿ ಆಯೋಗವು ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ವಿಂಗಡಿಸಿ ವರದಿ ಸಿದ್ಧಪಡಿಸಿದೆ. ಕರ್ನಾಟಕವನ್ನು 19 ದೊಡ್ಡ ರಾಜ್ಯಗಳಲ್ಲಿ ಬಂದಿದೆ. ನವಜಾತ ಶಿಶುಗಳ ಮರಣ ಪ್ರಮಾಣ (NMR), ಐದು ವರ್ಷದೊಳಗಿನ ಮರಣ ಪ್ರಮಾಣ (U5MR) ಮತ್ತು ಸಂಪೂರ್ಣ ರೋಗನಿರೋಧಕತೆ ಎಂಬ ಹಲವು ವಿಭಾಗಗಳಲ್ಲಿ ವರ್ಗಿಕರಿಸಿ ವರದಿ ನೀಡಲಾಗುತ್ತದೆ.
ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ಕೇರಳ ಅತ್ಯುತ್ತಮ ರಾಜ್ಯ, ಉತ್ತರ ಪ್ರದೇಶಕ್ಕೆ ಕಡೆಯ ಸ್ಥಾನ: ನೀತಿ ಆಯೋಗ
ಉತ್ತಮ ಆರೋಗ್ಯ ವ್ಯವಸ್ಥೆಗಳನ್ನು ಸೂಚಿಸುವ ಒಟ್ಟಾರೆ ಕಾರ್ಯಕ್ಷಮತೆಯ ದೃಷ್ಟಿಯಿಂದ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ದೊಡ್ಡ ರಾಜ್ಯಗಳಲ್ಲಿ ಮೂರನೇ ಒಂದು ಭಾಗವಾಗಿವೆ ಎಂದು ವರದಿ ಹೇಳಿದೆ, ಆದರೆ ಕಳೆದ ವರ್ಷ 2018-19ದಿಂದ 2019- 20 ರವರೆಗೆ ನೆಗೆಟಿವ್ ಕಾರ್ಯಕ್ಷಮತೆಯನ್ನು ಹೊಂದಿದೆ.
ರಾಜ್ಯವನ್ನು ಒಟ್ಟಾರೆ ‘ಸಾಧಕರು’ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ಆದರೆ ಹೆಚ್ಚುತ್ತಿರುವ ಮೂಲ ಸೌಕರ್ಯಗಳ ಕಾರ್ಯಕ್ಷಮತೆಯಲ್ಲಿ ‘ಸುಧಾರಿತವಾಗಿಲ್ಲ’ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಜನನದ ಸಮಯದಲ್ಲಿ ಲಿಂಗ ಅನುಪಾತದಲ್ಲಿ ನಿರಂತರ ಕುಸಿತವಾಗಿದೆ ಎಂದು ವರದಿ ಹೇಳುತ್ತದೆ
“ಕರ್ನಾಟಕವನ್ನು ಹೊರತುಪಡಿಸಿ, ಎಲ್ಲಾ ದಕ್ಷಿಣ ರಾಜ್ಯಗಳು ಕಳೆದ 2018-19 ವರ್ಷ ಮತ್ತು ವರದಿಯ ಉಲ್ಲೇಖಿತ ವರ್ಷ 2019-20 ನಡುವೆ ಸಂಯೋಜಿತ ಸೂಚ್ಯಂಕ ಅಂಶಗಳಲ್ಲಿ ಸುಧಾರಣೆಯನ್ನು ತೋರಿಸಿವೆ” ಎಂದು ನೀತಿ ಆಯೋಗ ತಿಳಿಸಿದೆ.
ದೊಡ್ಡ ರಾಜ್ಯಗಳ ಪೈಕಿ ಒಟ್ಟಾರೆ ಆರೋಗ್ಯ ಕಾರ್ಯಕ್ಷಮತೆಯ ವಿಷಯದಲ್ಲಿ ಕೇರಳ ಮತ್ತೆ ಅಗ್ರಸ್ಥಾನದಲ್ಲಿದೆ. ಆದರೆ ಉತ್ತರ ಪ್ರದೇಶ ರಾಜ್ಯವು ಆರೋಗ್ಯ ಕ್ಷಮತೆಯಲ್ಲಿ ಕಡೆಯ ಸ್ಥಾನದಲ್ಲಿದೆ.


