ಒಕ್ಕೂಟ ಸರ್ಕಾರವು ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಭಾನುವಾರ ನಿರ್ಧಾರ ತೆಗೆದುಕೊಂಡಿದೆ. ಆದರೆ AIIMS ನಲ್ಲಿ ವಯಸ್ಕ ಮತ್ತು ಮಕ್ಕಳ ಕೋವಾಕ್ಸಿನ್ ಪ್ರಯೋಗಗಳ ಪ್ರಧಾನ ತನಿಖಾಧಿಕಾರಿಯಾಗಿರುವ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸರ್ಕಾರದ ಈ ನಿರ್ಧಾರವನ್ನು “ಅವೈಜ್ಞಾನಿಕ” ಎಂದು ಬಣ್ಣಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ. ಮಕ್ಕಳಿಗೆ ನೀಡುವ ಕೊರೊನಾ ಲಸಿಕೆಯ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಡಾ.ಸಂಜಯ್ ಕೆ.ರೈ ಮಾತನಾಡಿ, “ಈ ನಿರ್ಧಾರವನ್ನು ಜಾರಿಗೆ ತರುವ ಮುನ್ನ ಈಗಾಗಲೇ ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಿರುವ ದೇಶಗಳ ದತ್ತಾಂಶವನ್ನು ವಿಶ್ಲೇಷಿಸಬೇಕು” ಒಕ್ಕೂಟ ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದನ್ನೂ ಓದಿ:ಹದಿಹರೆಯದವರು ವಿದ್ಯಾರ್ಥಿ ID ಬಳಸಿಕೊಂಡು ಕೊರೊನಾ ಲಸಿಕೆಗೆ ನೋಂದಾಯಿಸಬಹುದು: ಸರ್ಕಾರ
ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ಜನವರಿ 3 ರಿಂದ ಪ್ರಾರಂಭಿಸಲಾಗುವುದು” ಎಂದು ಘೋಷಿಸಿದ್ದರು.
ಲಸಿಕೆಯಿಂದಾಗಿ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳ ಬಗ್ಗೆ ಅವರ ಪೋಷಕರ ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಅವರು ಹೇಳಿದ್ದರು.
“ದೇಶಕ್ಕಾಗಿ ನಿಸ್ವಾರ್ಥ ಸೇವೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. ಆದರೆ ಮಕ್ಕಳಿಗೆ ಲಸಿಕೆ ನೀಡುವುದರ ಕುರಿತು ಅವರ ಅವೈಜ್ಞಾನಿಕ ನಿರ್ಧಾರದ ಬಗ್ಗೆ ನಾನು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ” ಎಂದು ಡಾ. ಸಂಜಯ್ ರೈ ಅವರು ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಲಸಿಕೆ ಪಡೆದ ಮೂರು ತಿಂಗಳ ನಂತರ ಕೋವಿಶೀಲ್ಡ್ ರಕ್ಷಣೆ ಕ್ಷೀಣಿಸುತ್ತದೆ- ದಿ ಲ್ಯಾನ್ಸೆಟ್ ಅಧ್ಯಯನದ ವರದಿ
“ಲಸಿಕೆಯನ್ನು ನೀಡುವುದರ ಉದ್ದೇಶ ಕೊರೊನಾ ಸೋಂಕು ಅಥವಾ ಅದರ ತೀವ್ರತೆ ಅಥವಾ ಮರಣವನ್ನು ತಡೆಗಟ್ಟುವುದಾಗಿದೆ. ಆದರೆ ಲಸಿಕೆಗಳ ಬಗ್ಗೆ ನಾವು ಹೊಂದಿರುವ ಯಾವುದೇ ಅಧ್ಯಯನದ ಪ್ರಕಾರ, ಲಸಿಕೆಯು ಸೋಂಕನ್ನು ಗಮನಾರ್ಹವಾಗಿ ಹೊಡೆದೋಡಿಸಿಲ್ಲ. ಕೆಲವು ದೇಶಗಳಲ್ಲಿ, ಬೂಸ್ಟರ್ ಶಾಟ್(ಮೂರನೇ)ಗಳನ್ನು ತೆಗೆದುಕೊಂಡ ನಂತರವೂ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ” ಎಂದು ಸಂಜಯ್ ರೈ ಹೇಳಿದ್ದಾರೆ.
“ಅಲ್ಲದೆ, ಯುಕೆಯಲ್ಲಿ ದಿನಕ್ಕೆ 50,000 ಸೋಂಕುಗಳು ವರದಿಯಾಗುತ್ತಿವೆ. ಆದ್ದರಿಂದ ಲಸಿಕೆಯು ಕೊರೊನಾ ವೈರಸ್ ಅನ್ನು ತಡೆಯುವುದಿಲ್ಲ ಎಂದು ಇದು ಸಾಬೀತುಪಡಿಸುತ್ತದೆ. ಆದರೆ ಲಸಿಕೆಗಳು ಸೋಂಕಿನ ತೀವ್ರತೆ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.
“ಅಪಾಯ ಮತ್ತು ಲಾಭದ ವಿಶ್ಲೇಷಣೆಯನ್ನು ಮಾಡಿದರೆ, ಲಸಿಕೆಯು ವಯಸ್ಕರಿಗೆ ದೊಡ್ಡ ಪ್ರಯೋಜನವಾಗಿದೆ. ಮಕ್ಕಳ ವಿಷಯದಲ್ಲಿ, ಸೋಂಕಿನ ತೀವ್ರತೆಯು ತುಂಬಾ ಕಡಿಮೆಯಾಗಿದೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮಕ್ಕಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ ಎರಡು ಸಾವುಗಳು ವರದಿಯಾಗಿವೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಲಾಭ ನಷ್ಟಗಳನ್ನು ಲೆಕ್ಕಾಚಾರ ಹಾಕಿದರೆ, ಅಪಾಯವೇ ಹೆಚ್ಚು” ಎಂದು ಅವರು ಹೇಳಿದ್ದಾರೆ.
ಅಮೆರಿಕಾ ಸೇರಿದಂತೆ ಕೆಲವು ದೇಶಗಳು ನಾಲ್ಕೈದು ತಿಂಗಳ ಹಿಂದೆ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿದವು. ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಪ್ರಾರಂಭಿಸುವ ಮೊದಲು ಈ ದೇಶಗಳ ಡೇಟಾವನ್ನು ವಿಶ್ಲೇಷಿಸಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:3 ಡೋಸ್ ಲಸಿಕೆ ಪಡೆದ ಯುವಕನಲ್ಲಿಯೂ ಓಮಿಕ್ರಾನ್ ಸೋಂಕು: ಮುಂಬೈ ಪಾಲಿಕೆ


