ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇಂದು ಪ್ರಧಾನಿ ಮೋದಿ, ಮೆಟ್ರೋ ರೈಲು ಯೋಜನೆಯ ಉದ್ಘಾಟನೆ ನಡೆಸಿದ್ದಾರೆ. ಇದಾದ ನಂತರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ರ್‍ಯಾಲಿಗೆ ಸುಮಾರು 75,000 ಜನರನ್ನು ಕರೆತರುವಂತೆ ಸಕಾರಿ ಇಲಾಖೆಗಳಿಗೆ ಜಿಲ್ಲಾಡಳಿತ ಅಧಿಕೃತ ಸೂಚನೆ ನೀಡಿರುವುದಾಗಿ ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ರ್‍ಯಾಲಿಯಲ್ಲಿ ಭಾಗವಹಿಸಲು ಕೇಂದ್ರ ಯೋಜನೆಗಳ ಸುಮಾರು 75,000 ಫಲಾನುಭವಿಗಳನ್ನು ಕರೆತರುವಂತೆ ಸರ್ಕಾರಿ ಇಲಾಖೆಗಳಿಗೆ ಕಾನ್ಪುರ ಜಿಲ್ಲಾಡಳಿತ ಸೂಚನೆ ನೀಡಿದೆ.
ವೈದ್ಯಕೀಯ ಮತ್ತು ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು, ತೋಟಗಾರಿಕೆ, ಸಮಾಜ ಕಲ್ಯಾಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
ಇದನ್ನೂ ಓದಿ: ಚಂಡೀಗಢ ಚುನಾವಣೆ: ವಿವಾದಿತ ಕೃಷಿ ಕಾಯ್ದೆಗಳ ರದ್ದುಗೊಳಿಸಿದ ಬಳಿಕ ಬಿಜೆಪಿಗೆ ಮೊದಲ ಮುಖಭಂಗ
ಅಂಗನವಾಡಿ, ಆಶಾ ಹಾಗೂ ಪಂಚಾಯತ್ ಕಾರ್ಯಕರ್ತೆಯರು ಕಡ್ಡಾಯವಾಗಿ ಹಾಜರಿರುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ರ್‍ಯಾಲಿಗೆ ಬರಲಿರುವ 75,000 ಜನರಿಗೂ ಸಾರಿಗೆ, ಆಹಾರ ಮತ್ತು ವಸತಿಗೆ ವ್ಯವಸ್ಥೆ ಮಾಡುವಂತೆಯೂ ಹೇಳಲಾಗಿದೆ. ಈ ಜನರನ್ನು ರ್‍ಯಾಲಿ ಸ್ಥಳಕ್ಕೆ ಕರೆದೊಯ್ಯಲು 2,000 ಕ್ಕೂ ಹೆಚ್ಚು ಯುಪಿಯ ಸರ್ಕಾರಿ ರಸ್ತೆಗಳು ಮತ್ತು ಖಾಸಗಿ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಪ್ರಯಾಗ್‌ರಾಜ್‌ನಲ್ಲಿ ಜಿಲ್ಲಾಡಳಿತವು ‘ಶಿಕ್ಷಾ ಮಿತ್ರರು’ (ತಾತ್ಕಾಲಿಕ ಪ್ರಾಥಮಿಕ ಶಿಕ್ಷಕರು) ಮತ್ತು ವಿವಿಧ ಸರ್ಕಾರಿ ಇಲಾಖೆಗಳ ನೌಕರರಿಗೆ ಭಾನುವಾರ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಭೆಗೆ ಹಾಜರಾಗುವಂತೆ ಸೂಚಿಸಿತ್ತು.
ಈ ಹಿಂದೆಯೂ ಸಹ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಪ್ರಧಾನಿ ಮೋದಿ ಅವರ ರ್‍ಯಾಲಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಜನರನ್ನು ಕರೆದೊಯ್ಯುಲಾಗಿತ್ತು ಎಂಬ ವರದಿಗಳಿವೆ. ಪಕ್ಷದ ಪ್ರಾಯೋಜಿತ ರ್‍ಯಾಲಿಗಳಿಗೆ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಬಿಜೆಪಿಯನ್ನು ಕಟುವಾಗಿ ಟೀಕಿಸಿವೆ.


