ಪಂಜಾಬ್‌ನಲ್ಲಿ ರೈಲ್ ರೋಕೋ ಚಳವಳಿ ಆರಂಭಿಸಿದ್ದ ರೈತರು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಜೊತೆಗೆ ನಡೆದ ಸಭೆ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ಹೋರಾಟದ ನೇತೃತ್ವ ವಹಿಸಿದ್ದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಪ್ರತಿನಿಧಿಗಳು ಚಂಡಿಗಢದಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರೊಂದಿಗೆ ಸಭೆ ನಡೆಸಿದ ಬಳಿಕ ಪಂಜಾಬ್‌ನ ಹಲವು ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಬ್ಯಾನರ್‌ನಡಿಯಲ್ಲಿ ರೈತರು ಡಿಸೆಂಬರ್ 20 ರಂದು ರಾಜ್ಯದ ವಿವಿಧೆಡೆ ‘ರೈಲ್ ರೋಕೋ’ ಧರಣಿ ಆರಂಭಿಸಲಾಗಿತ್ತು. ಇದರಿಂದ ಹಲವಾರು ರೈಲುಗಳ ಸಂಚಾರಕ್ಕೆ ಅಡ್ಡಿ ಮತ್ತು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟಾಗಿತ್ತು.
ಇದನ್ನೂ ಓದಿ: ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ರೈತ ಸಂಘಟನೆಗಳ ನಿರ್ಧಾರ: ಅಂತರ ಕಾಯ್ದುಕೊಂಡ SKM
ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ, ವರ್ಷವಿಡೀ ರೈತ ವಿರೋಧಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ರೈತರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಕಳೆದ ಖಾರಿಫ್ ಹಂಗಾಮಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ಬೆಳೆಗಳು ಗಣನೀಯವಾಗಿ ಹಾನಿಗೊಳಗಾದ ಬಾಸುಮತಿ ಅಕ್ಕಿ ಬೆಳೆಗಾರರಿಗೆ ಪ್ರತಿ ಎಕರೆಗೆ 17,000 ರೂ.ಗಳ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಚನ್ನಿ ತಿಳಿಸಿದ್ದರು. ಮುಖ್ಯಮಂತ್ರಿಯವರೊಂದಿಗಿನ ಸಭೆಯ ನಂತರ ತಮ್ಮ ‘ರೈಲ್ ರೋಕೋ’ ಆಂದೋಲನವನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಕೆಎಂಎಸ್‌ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಂದಿನ ಸುತ್ತಿನ ಸಭೆಯನ್ನು ಜನವರಿ 4 ರಂದು ನಡೆಸಲಾಗುವುದು ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.


